Sunday, October 20, 2024

ಪ್ರಾಯೋಗಿಕ ಆವೃತ್ತಿ

ತನ್ನ ಮಗಳಿಗೆ ಮದುವೆ ಮಾಡಿರುವ ಜಗ್ಗಿ ವಾಸುದೇವ್, ಬೇರೆಯವರ ಹೆಣ್ಣು ಮಕ್ಕಳನ್ನು ಸನ್ಯಾಸಿನಿಯರಾಗಲು ಹುರಿದುಂಬಿಸುವುದು ಏಕೆ? ಮದ್ರಾಸ್ ಹೈಕೋರ್ಟ್

“ತಮ್ಮ ಮಗಳಿಗೆ ಮದುವೆ ಮಾಡಿಸಿ ಸುಂದರವಾದ ಬದುಕು ಕಟ್ಟಿಕೊಟ್ಟಿರುವ ಜಗ್ಗಿ ವಾಸುದೇವ್ ಅಲಿಯಾಸ್ ಸದ್ಗುರು, ಬೇರೆಯವರ ಹೆಣ್ಣು ಮಕ್ಕಳು ಸನ್ಯಾಸಿನಿಯಂತೆ ಬದುಕಲು ಹುರಿದುಂಬಿಸುವುದು ಏಕೆ?” ಎಂದು ಮದ್ರಾಸ್ ಹೈಕೋರ್ಟ್ ಪ್ರಶ್ನಿಸಿರುವುದಾಗಿ ವರದಿಯಾಗಿದೆ.

ಜಗ್ಗಿ ವಾಸುದೇವ್ ನಡೆಸುತ್ತಿರುವ ಇಶಾ ಫೌಂಡೇಶನ್‌ನಲ್ಲಿ ತನ್ನ ಇಬ್ಬರು ಪುತ್ರಿಯರನ್ನು ಬಂಧಿಯಾಗಿಸಿ, ಅಲ್ಲಿ ಬ್ರೈನ್‌ವಾಶ್ ಮಾಡಲಾಗಿದೆ ಎಂದು ವ್ಯಕ್ತಿಯೊಬ್ಬರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಸ್‌ಎಂ ಸುಬ್ರಮಣ್ಯಂ ಮತ್ತು ವಿ ಶಿವಜ್ಞಾನಂ ಅವರ ಪೀಠ ಮೇಲಿನಂತೆ ಪ್ರಶ್ನಿಸಿದೆ ಎಂದು ಲೈವ್ ಲಾ ವರದಿ ಮಾಡಿದೆ.

ಇಶಾ ಫೌಂಡೇಶನ್ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮೊಕದ್ದಮೆಗಳ ವಿವರಗಳನ್ನು ನೀಡುವಂತೆ ಹೆಚ್ಚುವರಿ ಅಡ್ವೊಕೇಟ್ ಜನರಲ್ ಅವರಿಗೆ ನ್ಯಾಯಾಲಯ ಆದೇಶಿಸಿದೆ.

ತಮ್ಮ ಇಬ್ಬರು ಪುತ್ರಿಯರಾದ ಗೀತಾ ಕಾಮರಾಜ್ ಅಲಿಯಾಸ್ ಮಾ ಮತಿ (42) ಮತ್ತು ಲತಾ ಕಾಮರಾಜ್ ಅಲಿಯಾಸ್ ಮಾ ಮಾಯು(39) ಅವರು ಇಶಾ ಸಂಸ್ಥೆಯೊಳಗೆ ಬಂಧಿಯಾಗಿದ್ದಾರೆ ಎಂದು ನಿವೃತ್ತ ಪ್ರಾಧ್ಯಾಪಕ ಎಸ್ ಕಾಮರಾಜ್ ಎಂಬವರು ಹೈಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು.

ಇಶಾ ಯೋಗ ಕೇಂದ್ರದಲ್ಲಿನ ಬೋಧನೆಗಳಿಂದ ಪ್ರಭಾವಿತರಾದ ನನ್ನ ಹೆಣ್ಣುಮಕ್ಕಳು ಬ್ರೈನ್ ವಾಶ್ ಆಗಿದ್ದು, ಸನ್ಯಾಸಿ ಮಾರ್ಗವನ್ನು ಅನುಸರಿಸಿದ್ದಾರೆ. ಅವರ ಹೆಸರನ್ನು ಬದಲಾಯಿಸಲಾಗಿದೆ. ಈಗ ಪೋಷಕರನ್ನೂ ಭೇಟಿ ಮಾಡಲು ಅವರು ನಿರಾಕರಿಸುತ್ತಿದ್ದಾರೆ ಎಂದು ಅರ್ಜಿದಾರ ಕಾಮರಾಜ್ ಆರೋಪಿಸಿದ್ದರು.

ಕಾಮರಾಜ್ ಅವರು 2016ರಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಆಗ ನ್ಯಾಯಾಲಯವು ಯೋಗ ಕೇಂದ್ರಕ್ಕೆ ತೆರಳಿ, ಬಂಧಿತರನ್ನು ಭೇಟಿಯಾಗಿ, ಅವರ ಹೇಳಿಕೆಗಳನ್ನು ದಾಖಲಿಸಿ ವಿವರವಾದ ವರದಿ ನೀಡುವಂತೆ ಪ್ರಧಾನ ಜಿಲ್ಲಾ ನ್ಯಾಯಾಧೀಶರಿಗೆ ಸೂಚಿಸಿತ್ತು

ಸೋಮವಾರ ಅರ್ಜಿ ವಿಚಾರಣೆ ವೇಳೆ ನ್ಯಾಯಾಧೀಶರ ಅವಲೋಕನವು ಇನ್ನಷ್ಟು ಆತಂಕವನ್ನು ಉಂಟು ಮಾಡಿದೆ ಎಂದಿರುವ ಅರ್ಜಿದಾರ ಕಾಮರಾಜ್, ಹೆಣ್ಣು ಮಕ್ಕಳು 5 ವರ್ಷಕ್ಕಿಂತಲೂ ಹೆಚ್ಚು ಕಾಲ ಯೋಗ ಕೇಂದ್ರದಲ್ಲಿ ಇರುವುದರಿಂದ ಅವರ ಮೇಲೆ ಆ ಕೇಂದ್ರದ ಉಪದೇಶ ಪ್ರಭಾವ ಬೀರಿದೆ ಎಂಬುವುದನ್ನು ತಳ್ಳಿ ಹಾಕಲು ಸಾಧ್ಯವಿಲ್ಲ ಎಂದು ನ್ಯಾಯಾಧೀಶರ ವರದಿ ಹೇಳಿದೆ ಎಂದು ಹೈಕೋರ್ಟ್ ಮುಂದೆ ಹೇಳಿದ್ದಾರೆ.

“ನ್ಯಾಯಾಲಯದ ನಿರ್ದೇಶನದ ಮೂಲಕ ನಾನು ನನ್ನ ಮಕ್ಕಳನ್ನು ಭೇಟಿ ಮಾಡಲು ಯೋಗ ಕೇಂದ್ರಕ್ಕೆ ತೆರಳಿದ್ದೆ. ಆಗ ನಿಗದಿತ ಸ್ಥಳದಲ್ಲಿ ಯೋಗ ಕೇಂದ್ರದ ಪುರುಷರ ಸಮಕ್ಷಮದಲ್ಲಿ ನನಗೆ ಮಗಳೊಬ್ಬಳ ಜೊತೆ ಮಾತನಾಡಲು ಅವಕಾಶ ನೀಡಲಾಯಿತು. ಸ್ವಲ್ಪ ಸಮಯದ ನಂತರ ನನ್ನ ಹಿರಿಯ ಮಗಳು ನನಗೆ ಕರೆ ಮಾಡಿ, ನಾನು ಯೋಗ ಕೇಂದ್ರದ ವಿರುದ್ದ ದಾಖಲಿಸಿರುವ ದೂರನ್ನು ಹಿಂಪಡೆಯಬೇಕೆಂದು ಕಿರಿಯ ಮಗಳು ಅಮರಣಾಂತ ಉಪವಾಸ ಕೈಗೊಂಡಿದ್ದಾಳೆ ಎಂದು ತಿಳಿಸಿದಳು. ನನಗೆ ಕರೆ ಮಾಡಲು ಯೋಗ ಕೇಂದ್ರದವರೇ ಸೂಚಿಸಿದ್ದಾಗಿ ಹೇಳಿದಳು” ಎಂದು ಕಾಮರಾಜ್ ಹೈಕೋರ್ಟ್‌ಗೆ ತಿಳಿಸಿದ್ದಾರೆ.

“ಯೋಗ ಕೇಂದ್ರದ ಆಡಳಿತ ಮಂಡಳಿಯ ಪ್ರಭಾವ ಮತ್ತು ಅಕ್ರಮ ಬಂಧನದಿಂದ ನನ್ನ ಮಕ್ಕಳ ಜೀವಕ್ಕೆ ಅಪಾಯವಿದೆ ಎಂದಿರುವ ಕಾಮರಾಜ್, ಸ್ಥಳೀಯ ಪೊಲೀಸರು ವಾರಕೊಮ್ಮೆ ಅಥವಾ ಎರಡು ವಾರಕ್ಕೊಮ್ಮೆ ಯೋಗ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿ ಬಂಧಿತರಾಗಿರುವ ಎಲ್ಲರ ಯೋಗ ಕ್ಷೇಮ ವಿಚಾರಿಸಲು ಆದೇಶಿಸಬೇಕು ಮತ್ತು ಯಾವುದೇ ಬೆದರಿಕೆಗೆ ಒಳಗಾದ ಸಂದರ್ಭದಲ್ಲಿ ಹೊರಜಗತ್ತನ್ನು ಸಂಪರ್ಕಿಸಲು ಅವರಿಗೆ ಅವಕಾಶ ಕಲ್ಪಿಸಬೇಕು” ಎಂದು ನ್ಯಾಯಾಲಯವನ್ನು ಕೋರಿದ್ದಾರೆ.

ಕಾಮರಾಜ್ ಅವರ ಇಬ್ಬರು ಪುತ್ರಿಯರು ಹೈಕೋರ್ಟ್ ಮುಂದೆ ಹಾಜರಾಗಿ, ನಮ್ಮನ್ನು ಬಂಧಿಸಿಟ್ಟಿಲ್ಲ, ಸ್ವಇಚ್ಚೆಯಿಂದ ಯೋಗ ಕೇಂದ್ರದಲ್ಲಿ ಇದ್ದೇವೆ ಎಂದು ಹೇಳಿದ್ದಾರೆ. ಆದರೂ, ಸತ್ಯ ತಿಳಿಯಲು ಈ ವಿಷಯದಲ್ಲಿ ಕೆಲ ಪರಿಶೀಲನೆಯ, ಚರ್ಚೆಯ ಅಗತ್ಯವಿದೆ ಎಂದಿರುವ ನ್ಯಾಯಾಲಯ, ಇಶಾ ಯೋಗ ಕೇಂದ್ರದ ವಿರುದ್ಧ ದಾಖಲಾಗಿರುವ ಪ್ರಕರಣಗಳ ವಿವರಗಳನ್ನು ಸಲ್ಲಿಸುವಂತೆ ಅರ್ಜಿದಾರರಿಗೆ ಮತ್ತು ಹೆಚ್ಚುವರಿ ಅಡ್ವೊಕೇಟ್ ಜನರಲ್‌ಗೆ ಸೂಚಿಸಿದೆ.

ಕೃಪೆ: ಲೈವ್ ಲಾ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!