Sunday, November 22, 2026

ಪ್ರಾಯೋಗಿಕ ಆವೃತ್ತಿ

ಜ.10 ವಿಶ್ವ ಕನ್ನಡ ದಿನ ; ‘ನಾವು ದ್ರಾವಿಡ ಕನ್ನಡಿಗರು’ ಸಂಘಟನೆಯಿಂದ ಘೋಷಣೆ

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಪಟ್ಟಣದ ಸರ್ ಎಂ ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ‘ನಾವು ದ್ರಾವಿಡ ಕನ್ನಡಿಗರು ಚಳುವಳಿ’ ವತಿಯಿಂದ ಜಗತ್ತಿನಲ್ಲಿಯೆ ಮೊಟ್ಟ ಮೊದಲ ಬಾರಿಗೆ ‘ವಿಶ್ವ ಕನ್ನಡ ದಿನ-ಜನವರಿ 10’ ಎಂದು ಘೋಷಿಸಲಾಯಿತು.

ಪ್ರಾದೇಶಿಕ ಭಾಷೆಯಾಗಿರುವ ಕನ್ನಡವನ್ನು ವಿಶ್ವ ಭಾಷೆಗಳ ಮಟ್ಟಕ್ಕೆ ಮೇಲ್ದರ್ಜೆಗೇರಿಸಲು ವಿಶ್ವ ಸಂಸ್ಥೆಯ ಮಾನ್ಯತೆ ಪಡೆಯಬೇಕಿದೆ, ಆದ ಕಾರಣ ಕರ್ನಾಟಕ ಸರ್ಕಾರವು ವಿಶ್ವಸಂಸ್ಥೆಗೆ ಮನವಿ ಪತ್ರ ಬರೆಯಬೇಕು ಎಂದು ಈ ಕಾರ್ಯಕ್ರಮದ ಮೂಲಕ ಚಳುವಳಿಯ ಮುಂದಾಳು ಅಬಿ ಒಕ್ಕಲಿಗ ಒತ್ತಾಯಿಸಿದರು. ಇದನ್ನು ಕಾಲೇಜಿನ ಪ್ರಾಂಶುಪಾಲರು, ಬೋಧಕ, ಬೋಧಕೇತರ ಸಿಬ್ಬಂದಿ ಮತ್ತು ಎಲ್ಲಾ ವಿದ್ಯಾರ್ಥಿಗಳು ಅನುಮೋದಿಸಿದರು.

ವಿವಿಧ ರಾಜ್ಯ ಹಾಗೂ ದೇಶಗಳಲ್ಲಿ ಕನ್ನಡ ಬಿತ್ತಿಪತ್ರ ಪ್ರದರ್ಶನ

ವಿಶ್ವ ಕನ್ನಡ ದಿನ ಘೋಷಣೆಯ ಅಂಗವಾಗಿ ಭಾರತ ವಿವಿಧ ರಾಜ್ಯ ಹಾಗೂ ವಿದೇಶಗಳಲ್ಲಿರುವ ಕನ್ನಡಿಗರು ಆಯಾ ರಾಜ್ಯ ಹಾಗೂ ದೇಶಗಳಲ್ಲಿ ವಿಶ್ವ ಕನ್ನಡ ದಿನದ ಭಿತ್ತಿಪತ್ರ ಪ್ರದರ್ಶನ ಮಾಡಿ, ‘ನಾವು ದ್ರಾವಿಡ ಕನ್ನಡಿಗರು’ ಸಂಘಟನೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ದುಬೈ, ನೆದರ್ ಲ್ಯಾಂಡ್, ತೆಲಂಗಾಣ, ಕೇರಳಗಳಿಂದ ಕನ್ನಡಿಗರ ಭಿತ್ತಿಪತ್ರ ಪ್ರದರ್ಶನ ಮಾಡಿ, ಅಲ್ಲಿಂದಲೇ ವಿಶ್ವ ಕನ್ನಡ ದಿನದ ಶುಭಾಶಯಗಳನ್ನು ಕೋರಿ ಗಮನ ಸೆಳೆದಿದ್ದಾರೆ.

ನಂತರ ನಡೆದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ದ್ರಾವಿಡ ನುಡಿ ಕುಟುಂಬಕ್ಕೆ ಸೇರಿದ ಪ್ರಶ್ನೆಗಳನ್ನು ಕೇಳಲಾಯಿತು ವಿದ್ಯಾರ್ಥಿಗಳು ಉತ್ಸಾಹ ಉತ್ತರ ನೀಡಿ,, ಬಹುಮಾನವಾಗಿ ಕನ್ನಡನಾಡಿನ ನಕಾಶೆಯಂತಿರುವ ಬಿಲ್ಲೆಯನ್ನು ತಮ್ಮ ಎದೆ ಮೇಲೆ ತೊಡಿಸಿಕೊಂಡರು.

ಪ್ರಾಂಶುಪಾಲರು ಮಾತನಾಡಿ, ಕನ್ನಡ ವಿಶ್ವ ಲಿಪಿಗಳ ರಾಣಿ ಎಂಬ ಬಿರುದು ಪಡೆದಿರುವ ಸಿರಿವಂತ ಭಾಷೆ ಎಂದರು. ಕನ್ನಡ ವಿಭಾಗದ ಮುಖ್ಯಸ್ಥರಾದ ರವಿ ಅವರು ಸ್ವಾಗತ ಭಾಷಣ ಮಾಡಿ, ಕುವೆಂಪು, ಲಂಕೇಶ್ ಮೇರು ಪ್ರತಿಭೆಯ ಜಿಲ್ಲೆಯಾದ ಶಿವಮೊಗ್ಗದಿಂದ ‘ವಿಶ್ವ ಕನ್ನಡ ದಿನ’ ಘೋಷಿಸಿದ್ದು ಮುಂದೊಂದು ದಿನ ಚರಿತ್ರೆಯಾಗಲಿದೆ ಎಂದರು.

ಕನ್ನಡ ಉಪನ್ಯಾಸಕರಾದ ಪರುಸಪ್ಪ ಕಾರ್ಯಕ್ರಮ ನಿರೂಪಿಸಿದರು, ದೈಹಿಕ ಶಿಕ್ಷಣ ಶಿಕ್ಷಕರಾದ ಶಫಿ ಮತ್ತು ದ್ರಾವಿಡ ಕನ್ನಡಿಗರು ಚಳುವಳಿಯ ಗಿರೀಶ್ ಎಂ ಸಿ ಹಳ್ಳಿ, ಮನು ವಿಶ್ವಕರ್ಮ ಕಾರ್ಯಕ್ರಮ ಆಯೋಜನೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ