Saturday, November 21, 2026

ಪ್ರಾಯೋಗಿಕ ಆವೃತ್ತಿ

ಜೆಡಿಎಸ್ ಪಕ್ಷಕ್ಕೆ 25 ವರ್ಷ ; ನ.21,22 ರಂದು ಬೆಳ್ಳಿಹಬ್ಬ ಆಚರಣೆ – ರವೀಂದ್ರ ಶ್ರೀಕಂಠಯ್ಯ 

ರಾಜ್ಯದ ಅಭಿವೃದ್ದಿಯ ಮುನ್ನೋಟದ ಗುರಿ ಹಾಗೂ ಜನ ಸಾಮಾನ್ಯರ ದನಿಯಾಗಿ ಕಾರ್ಯನಿರ್ವಹಿಸುವ ಪ್ರಾದೇಶಿಕ ಪಕ್ಷದ ಅವಶ್ಯಕತೆಯನ್ನು ಮನಗೊಂಡು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಸ್ಥಾಪಿಸಿರುವ ಜೆಡಿಎಸ್ ಪಕ್ಷದ 25 ನೇ ವರ್ಷದ ಸಂಸ್ಥಾಪನಾ ದಿನವನ್ನು ಬೆಳ್ಳಿ ಹಬ್ಬವಾಗಿ ನ.21, 22 ರಂದು ರಾಜದಾನಿ ಬೆಂಗಳೂರಿನ ಜೆ.ಪಿ.ಭವನದಲ್ಲಿ ಆಚರಿಸಲಾಗುತ್ತಿದೆ ಎಂದು ಮಾಜಿ ಶಾಸಕ ಎ.ಎಸ್ ರವೀಂದ್ರ ಶ್ರೀಕಂಠಯ್ಯ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೆಲ, ಜಲದ ರಕ್ಷಣೆ ಜತೆಗೆ ನಾಡಿನ ರೈತಾಪಿ ವರ್ಗದ ದನಿಯಾಗಿರುವ ಜೆಡಿಎಸ್ ಪ್ರಾದೇಶಿಕ ಪಕ್ಷ 25 ವರ್ಷ ಪೂರೈಸಿರುವ ಸಂಭ್ರಮಾಚರಣೆಯಲ್ಲಿ ಪಕ್ಷದ ಹೋರಾಟ, ಅಧಿಕಾರಾವಧಿಯ ಜನಹಿತ ಹಾಗೂ ಕೃಷಿ ಮತ್ತು ನೀರಾವರಿ ಕ್ಷೇತ್ರದ ಸಾಧನೆಗಳನ್ನು ಮೆಲಕು ಹಾಕಲಾಗುವುದೆಂದು ವಿವರಿಸಿದರು.

ಕಾವೇರಿ ಕೊಳ್ಳದ ರೈತರಿಗೆ ಆಸರೆ : ಹೆಚ್.ಟಿ.ಮಂಜು

1999ರಲ್ಲಿ ಸ್ಥಾಪನೆಗೊಂಡ ಜೆಡಿಎಸ್ ಪಕ್ಷವು ರಾಜ್ಯ ಹಾಗೂ ರಾಷ್ಟ್ರದ ಅಭಿವೃದ್ದಿಯಲ್ಲಿ ಹಲವು ಮೈಲುಗಲ್ಲು ಸ್ಥಾಪಿಸಿದೆ. ಶೇ.16 ರಷ್ಟು ಮತಗಳಿಕೆ ಪಕ್ಷಕ್ಕೆ ದೊರೆತಿದ್ದು ಮಾಜಿ ಪ್ರಧಾನಿ ದೇವೇಗೌಡರ ಇಚ್ಚಾಶಕ್ತಿಯಿಂದ 7 ಟಿಎಂಸಿ ಹೆಚ್ಚುವರಿ ನೀರು ಕಾವೇರಿ ಕೊಳ್ಳದ ರೈತರಿಗೆ ದೊರಕಿದೆ ಎಂದು ಶಾಸಕ ಹೆಚ್.ಟಿ.ಮಂಜು ತಿಳಿಸಿದರು.

ದೇವೇಗೌಡರು ಪ್ರಧಾನಿಯಾಗಿದ್ದ ಅಲ್ಪ ಅವಧಿಯಲ್ಲಿ ರೈಲ್ವೇ ಕ್ಷೇತ್ರದ ಉನ್ನತಿಗೆ ಸಕ್ಕರೆ ಕಾರ್ಖಾನೆ ಆರಂಭಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಹೇಮಾವತಿ ಅಣೆಕಟ್ಟೆ ನಿರ್ಮಾಣ ಮಾಡಿ ಕಾವೇರಿ ಕೊಳ್ಳದ ರೈತರಿಗೆ ಆಸರೆಯಾಗಿದ್ದರು ಎಂದು ತಿಳಿಸಿದರು.

ಬೆಂಗಳೂರು ಅಭಿವೃದ್ದಿಗೆ ಒತ್ತು

ಹೆಚ್.ಡಿ.ದೇವೇಗೌಡರು ಮುಖ್ಯಮಂತ್ರಿ ಹಾಗೂ ಪ್ರಧಾನ ಮಂತ್ರಿ ಹುದ್ದೆಯಲ್ಲಿ ಅಲ್ಪ ಕಾಲ ಕಾರ್ಯ ನಿರ್ವಹಿಸಿದ್ದರೂ ತಮ್ಮ ಅಧಿಕಾರಾವಧಿಯಲ್ಲಿ ಬೆಂಗಳೂರು ನಗರದ ಅಭಿವೃದ್ದಿಗೆ ವಿಶೇಷ ಒತ್ತು ನೀಡಿದ್ದಾರೆ. ಮೇಲ್ಸೇತುವೆ ನಿರ್ಮಾಣ, ಮೆಟ್ರೋ ಅವಶ್ಯಕತೆ, ನೀರಾವರಿ ಕ್ಷೇತ್ರದ ಅಭ್ಯುದಯಕ್ಕೆ ಕೇಂದ್ರದ ನೆರವು ಕೊಡಿಸುವಲ್ಲಿ ಅಹರ್ನಿಷಿ ದುಡಿದಿದ್ದಾರೆ ಎಂದು ತಿಳಿಸಿದರು.

ಸಾಲ ಮನ್ನಾ ರೂವಾರಿ

ಕುಮಾರಸ್ವಾಮಿ ಅವರು ರಾಜ್ಯದಲ್ಲಿ 2 ಬಾರಿ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಗ್ರಾಮ ವಾಸ್ತವ್ಯ ಮಾಡಿ ಸ್ಥಳೀಯ ಸಮಸ್ಯೆಗಳ ನಿವಾರಣೆಗೆ ಶ್ರಮಿಸಿದ್ದಾರೆ. ರೈತರು ಸಂಕಷ್ಟಕ್ಕೆ ಸಿಲುಕಿ ನೇಣಿಗೆ ಶರಣಾದಾಗ ರಾಜ್ಯ ವ್ಯಾಪ್ತಿ ಪ್ರವಾಸ ನಡೆಸಿ ಅವರಲ್ಲಿ ಆತ್ಮ ಸ್ಥೈರ್ಯ ತುಂಬಿ ಅಧಿಕಾರಕ್ಕೆ ಬಂದಾಗ ಸಾಲ ಮನ್ನಾ ಮಾಡಿ ನೆರವಾಗಿದ್ದಾರೆ ಎಂದು ವಿವರಿಸಿದರು.

ಬಿಹಾರ ಫಲಿತಾಂಶ ಮರುಕಳಿಸಲಿದೆ : ಶ್ರೀಕಂಠೇಗೌಡ

ನಾಡಿನ ನೆಲ, ಜಲದ ರಕ್ಷಣೆ ಜೊತೆ ಪ್ರಾದೇಶಿಕ ಅಸ್ಮಿತೆಯ ಬಲವರ್ಧನೆಗಾಗಿ ಜೆಡಿಎಸ್ ಪಕ್ಷವನ್ನು ರಾಜ್ಯದ ಮತದಾರರು ಬೆಂಬಲಿಸಬೇಕು. ಸಾರಾಯಿ, ಲಾಟರಿ ನಿಷೇಧ ನಮ್ಮ ಆಡಳಿತ ವೈಖರಿಗೆ ಸಾಕ್ಷಿ. ದೇವರಾಜ ಅರಸು, ಬಿ.ಎಸ್.ಯಡಿಯೂರಪ್ಪ, ಕೆಂಗಲ್ ಹನುಮಂತಯ್ಯ ಅವರಂತಹ ಪ್ರಭಾವಿ ನಾಯಕರಿಂದಲೂ ಮುನ್ನೆಡೆಸಲಾಗದ ಪ್ರಾದೇಶಿಕ ಪಕ್ಷವನ್ನು ಹೆಚ್.ಡಿ.ದೇವೇಗೌಡರು ಬಲಗೊಳಿಸಲು ಮುಂದಾಗಿರುವುದು ನಮ್ಮೆಲ್ಲರ ಸೌಭಾಗ್ಯವೆಂದು ಮಾಜಿ ಶಾಸಕ ಶ್ರೀಕಂಠೇಗೌಡ ಅಭಿಪ್ರಾಯಿಸಿದರು.

ಜೆಡಿಎಸ್ ಬಲವರ್ಧನೆಗೆ ಪ್ರವಾಸ

ನೆರೆ ರಾಜ್ಯಗಳಾದ ಆಂಧ್ರ, ತಮಿಳುನಾಡು, ತೆಲಂಗಾಣ ರಾಜ್ಯಗಳ ಅಭಿವೃದ್ದಿಯನ್ನು ಮನಗಂಡು ರಾಜ್ಯದ ಜನತೆ ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್ ಅನ್ನು ಬೆಂಬಲಿಸಬೇಕೆಂದು ರಾಜ್ಯ ವ್ಯಾಪಿ ಪಕ್ಷದ ವರಿಷ್ಟರು ಪ್ರವಾಸ ಮಾಡಿ ಪಕ್ಷದ ಬಲವರ್ಧನೆಗೆ ಶ್ರಮಿಸಲಿದ್ದಾರೆಂದು ತಿಳಿಸಿದರು.

ಪಕ್ಷಕ್ಕೆ ಉತ್ತಮ ಭವಿಷ್ಯ

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಪ್ರಣಾಳಿಕೆಯಲ್ಲಿ ಶಿಕ್ಷಣ, ಆರೋಗ್ಯ ಮತ್ತು ಸ್ವಯಂ ಉದ್ಯೋಗ ಭರಿಸುವ ಆಶಯದೊಂದಿಗೆ ಚುನಾವಣೆ ಎದುರಿಸಲಾಯಿತು. ಆದರೆ ಶತಮಾನ ಪೂರೈಸಿರುವ ರಾಷ್ಟ್ರೀಯ ಪಕ್ಷವೊಂದು ತೋರಿದ ತಾತ್ಕಾಲಿಕ ಆಮಿಷಕ್ಕೆ ಮತದಾರ ಮನಸೋತ ಪರಿಣಾಮ ಜೆಡಿಎಸ್ ಅಧಿಕಾರ ಕಳೆದುಕೊಂಡಿದೆ. ಭವಿಷ್ಯದಲ್ಲಿ ಪಕ್ಷಕ್ಕೆ ಉತ್ತಮ ಬುನಾದಿ ದೊರೆಯಲಿದೆ ಎಂದರು.

ಹಣವಂತರ ಕಪಿಮುಷ್ಟಿಯಲ್ಲಿ ಸಿಲುಕಿರುವ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಂದ ಜನತೆ ಬಸವಳಿದಿದ್ದು, ಪ್ರಾದೇಶಿಕ ಪಕ್ಷದ ಬಲವರ್ದನೆಗೆ ಬೆಂಬಲಿಸುವ ನಿರೀಕ್ಷೆಯೊಂದಿಗೆ ನಿಖಿಲ್ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಪಕ್ಷ ಬಲವರ್ದನೆಗೆ ಮುಂದಾಗುತ್ತೇವೆಂದು ತಿಳಿಸಿದರು.

ಅವಹೇಳನ ಸ್ಥಗಿತ

ಜೆಡಿಎಸ್ ಪಕ್ಷದ ಬಗ್ಗೆ ಲಘುವಾಗಿ ಮಾತನಾಡುತ್ತಿದ್ದ ರಾಷ್ಟ್ರೀಯ ಪಕ್ಷದ ಮುಖಂಡರ ಅವಹೇಳನ ಬಿಹಾರ ಚುನಾವಣಾ ಫಲಿತಾಂಶದ ನಂತರ ಸ್ಥಗಿತವಾಗಿದೆ. ಆ ರಾಜ್ಯದ ಫಲಿತಾಂಶ ಶತಮಾನ ಪೂರೈಸಿರುವ ಪಕ್ಷದ ಭವಿಷ್ಯವನ್ನು ಬಿಂಬಿಸಿದೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ವಿರುದ್ದ ಕಿಡಿಕಾರಿದರು.

ಗೋಷ್ಠಿಯಯಲ್ಲಿ ಶಾಸಕ ಹೆಚ್.ಡಿ.ಮಂಜು, ಮಾಜಿ ಶಾಸಕರಾದ ಕೆ.ಸುರೇಶ್ ಗೌಡ, ಡಾ.ಅನ್ನದಾನಿ, ಕೆ.ಟಿ.ಶ್ರೀಕಂಠೇಗೌಡ, ಮುಖಂಡ ಬಿ.ಆರ್.ರಾಮಚಂದ್ರು, ಪಕ್ಷದ ಜಿಲ್ಲಾಧ್ಯಕ್ಷ ಡಿ.ರಮೇಶ್, ಶ್ರೀರಂಗಪಟ್ಟಣ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ದಶರಥ ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ