ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ನಾಮಫಲಕ, ಫ್ಲೆಕ್ಸ್ ಪ್ರತಿಮೆಗಳನ್ನು ಸ್ಥಾಪನೆ ಮಾಡುವುದಕ್ಕಿಂತ ಉನ್ನತ ವ್ಯಾಸಂಗ ಮಾಡಿ ಐಎಎಸ್, ಐಪಿಎಸ್ ನಂತಹ ಉನ್ನತ ಹುದ್ದೆಗಳಿಗೆ ಶೋಷಿತರು ಆಯ್ಕೆಯಾಗುವ ಮೂಲಕ ಬಾಬಾ ಸಾಹೇಬರ ಕನಸನ್ನು ನನಸು ಮಾಡಬೇಕೆಂದು ಉರಿಲಿಂಗಿ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಕರೆ ನೀಡಿದರು.
ಮಂಡ್ಯ ತಾಲ್ಲೂಕಿನ ಬಿ ಗೌಡಗೆರೆ ಅಭಿನಂದನಾ ಸಮಿತಿ ಮತ್ತು ಸಿದ್ದಾರ್ಥ ಯುವಕ ಸಂಘ ವತಿಯಿಂದ ಯುಪಿಎಸ್ಸಿ ಪರೀಕ್ಷೆಯಲ್ಲಿ 906 ರ್ಯಾಂಕ್ ಪಡೆದು ಉತ್ತೀರ್ಣರಾದ ಜಿ.ಆರ್.ವಿನುತಾ ಮತ್ತು ನಿವೃತ್ತ ಸೈನಿಕ ಶಿವಶಂಕರ್ ಅವರನ್ನು ಅಭಿನಂದಿಸಿ ಅವರು ಮಾತನಾಡಿದರು.
ಅಂಬೇಡ್ಕರ್ ಅವರನ್ನು ಪ್ರತಿಮೆಗಳನ್ನಾಗಿ ಮಾಡುವುದಕ್ಕಿಂತ ಅವರು ಕಂಡ ಕನಸನ್ನು ಮನಸು ಮಾಡುವುದು ಬಹಳ ಮುಖ್ಯವಾಗಿದೆ. ಅದರಂತೆ ಡಿ ಗೌಡಗೆರೆ ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾವಂತರು ಇರುವುದರಿಂದ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂಬುದು ಬಹಳ ಖುಷಿಯ ವಿಚಾರ. ಬಿ ಗೌಡಗೆರೆ ಗ್ರಾಮದಲ್ಲಿ ಎಲ್ಲಾ ಸಮುದಾಯದ ಮುಖಂಡರು ಜಿ ಆರ್ ವಿನುತಾ ಅವರಿಗೆ ಅಭಿನಂದನಾ ಸಮಾರಂಭ ಏರ್ಪಡಿಸಿರುವುದು ಬಾಳ ಸಂತೋಷದ ವಿಚಾರ. ಬಿ ಗೌಡಗೆರೆ ಗ್ರಾಮದಲ್ಲಿ ಇನ್ನು ಐದರಿಂದ ಆರು ಜನ ಮುಂದಿನ ದಿನಗಳಲ್ಲಿ ಐಪಿಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು ಎಂದು ಆಶಿಸಿದರು.
‘ನಾನು ತಮಿಳುನಾಡಿನಲ್ಲಿ ಒಂದು ಸಭೆಗೆ ಹೋದಾಗ ಒಬ್ಬರು ಜಿಲ್ಲಾಧಿಕಾರಿಗಳು ಬಹಳ ಸರಳವಾಗಿ ಆ ಸಭೆಗೆ ಬಂದಿದ್ದರು, ಅಂದರೆ ಒಂದು ವಾಚು ಕೂಡ ಅವರ ಕೈಯಲ್ಲಿ ಇರಲಿಲ್ಲ, ನಾನು ಅದನ್ನು ನೋಡಿ ಪ್ರಶ್ನೆ ಮಾಡಿದೆ ಮೇಡಂ ನೀವು ಜಿಲ್ಲಾಧಿಕಾರಿಗಳು ನಿಮ್ಮ ಕೈಯಲ್ಲಿ ಒಂದು ವಾಚು ಇಲ್ಲ ಅಂತ ಹೇಳಿ ಪ್ರಶ್ನೆ ಮಾಡಿದಾಗ’ ಅವರು ಉತ್ತರ ಕೊಟ್ಟರು ನನ್ನ ತಂದೆ ಗಾರೆ ಕೆಲಸಗಾರರು ನನ್ನ ತಾಯಿ ಅವರದು ಕೂಡ ಕೂಲಿ ಕೆಲಸ ನಾನು ಕಷ್ಟಪಟ್ಟು ಯುಪಿಎಸ್ಸಿ ಪಾಸ್ ಮಾಡಿ ಜಿಲ್ಲಾಧಿಕಾರಿಗಳು ಆದರೆ ನಂತರ ನನ್ನ ತಂದೆ ತಾಯಿಯರನ್ನ ನನ್ನ ಮನೆಗೆ ಕರೆದುಕೊಂಡು ಬರುವುದಕ್ಕೆ ಹೋದಾಗ, ನನ್ನ ತಂದೆ ತಾಯಿ ಹೇಳಿದರೂ ನಾವು ಮನೆಗೆ ಬರುವುದಿಲ್ಲ, ನಾವು ಬರೋದೇ ಆದರೆ ನಿನ್ನ ರೀತಿಯ ಐದು ಮಂದಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವಂತೆ ಮಾರ್ಗದರ್ಶನ ಮಾಡುವವರೆಗೂ ನಿನ್ನ ಮನೆಗೆ ಬರುವುದಿಲ್ಲ, ನೀನು ವಾಚು ಚಿನ್ನ ಮತ್ತು ಯಾವುದೇ ಆಡಂಬರ ವಸ್ತುಗಳನ್ನ ಧರಿಸುವಂತಿಲ್ಲ ಎಂದು ಮಾತು ಕೊಟ್ಟರು, ಅದರಂತೆ ಸ್ವಾಮೀಜಿ ನಾನು ಮೂರು ಮಂದಿ ಅಭ್ಯರ್ಥಿಗಳನ್ನು ಯುಪಿಎಸ್ಸಿ ಪರೀಕ್ಷೆಯಲ್ಲಿ ಮಾರ್ಗದರ್ಶನ ನೀಡಿ ಉತ್ತೀರ್ಣನಾಗಿ ಮಾಡಿದ್ದೇನೆ, ಇನ್ನೂ ಎರಡು ಇಬ್ಬರನ್ನು ಯಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವಂತೆ ಮಾಡುವವರೆಗೂ ನನ್ನ ತಂದೆ ತಾಯಿಗೆ ಮಾತು ಕೊಟ್ಟಂತೆ ಯಾವುದೇ ಆಡಂಬರ ಆಭರಣಗಳನ್ನಾಗಲಿ ಮತ್ತು ವಸ್ತುಗಳನ್ನು ಧರಿಸುವುದಿಲ್ಲ ಎಂದರು ಎಂದು ಸ್ಮರಿಸಿದರು.
ಅದರಂತೆ ಬಿ ಗೌಡಗೆರೆ ಗ್ರಾಮದಲ್ಲಿ ಜಿ.ಆರ್.ವಿನುತ ಅವರು ಐದು ಮಂದಿ ಏನಾದ್ರೂ ಯುಪಿಎಸ್ಸಿ ಪರೀಕ್ಷೆಯಲ್ಲಿ ತೇರ್ಗಡೆ ಮಾಡಲು ಮಾರ್ಗದರ್ಶನ ಕೊಟ್ಟಿದ್ದೆ ಆದರೆ ಅಭಿನಂದನಾ ಸಮಾರಂಭ ಸಾರ್ಥಕತೆಯಾಗುತ್ತದೆ ಎಂದರು.
ಮಂಡ್ಯ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಂದಿನಿ ಮಾತನಾಡಿ ‘ಉನ್ನತ ಹುದ್ದೆಗೆ ಹೋದಾಗ ನಾವು ನಮ್ಮ ಜನಾಂಗ ಅಥವಾ ನಮ್ಮ ಕುಟುಂಬಕ್ಕೆ ಹೆಚ್ಚು ಕೆಲಸ ಮಾಡುವ ಬದಲು ಸಮಾಜದ ಕಟ್ಟ ಕಡೆಯ ಜನಸಾಮಾನ್ಯರಿಗೆ ಕಾನೂನಿ ಅಡಿಯಲ್ಲಿ ನ್ಯಾಯ ದೊರಕಿಸುವಂತೆ ಮಾಡಿಕೊಡಬೇಕು ಎಂದರು. ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರು ಜಿ ಆರ್ ವಿನುತಾ ಅವರನ್ನು ಪ್ರಶಂಸಿಸಿದರು.
ವೇದಿಕೆಯಲ್ಲಿ ಬಿಎಸ್ಪಿ ರಾಜ್ಯಾಧ್ಯಕ್ಷ ಕೃಷ್ಣಮೂರ್ತಿ, ತಹಸೀಲ್ದಾರ್ ಶಿವಕುಮಾರ್ ಬಿರಾದರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.




