ಜ್ಞಾನವಾಪಿ ವಿವಾದ ಕುರಿತು ಆರ್.ಎಸ್.ಎಸ್ ಮುಖ್ಯಸ್ಥ ಮೋಹನ್ ಭಾಗವತ್ ನೀಡಿರುವ ಬೆಂಕಿ ಹಚ್ಚುವ ಹೇಳಿಕೆಯನ್ನು ನಿರ್ಲಕ್ಷಿಸಬಾರದು ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.
ರಾಷ್ಟ್ರೀಯ ಸ್ವಯಂಸೇವಕ ಸಂಘವು ಬಾಬರಿ ಮಸೀದಿ ಧ್ವಂಸದಲ್ಲಿ ಸುಪ್ರೀಂ ಕೋರ್ಟ್‌ಗೆ ಅಗೌರವ ತೋರಿತು ಎಂದು ಆರೋಪಿಸಿದ ಅವರು, ಐತಿಹಾಸಿಕ ಕಾರಣಗಳಿಗಾಗಿ ಬಾಬರಿ ಮಸೀದಿ ಧ್ವಂಸ ಪ್ರಕರಣವನ್ನು ಈ ಹಿಂದೆ ಆರ್ ಎಸ್ ಎಸ್ ಸಮರ್ಥಿಸಿಕೊಂಡಿತ್ತು. ಅದೇ ರೀತಿ ಜ್ಞಾನವಾಪಿ ಮಸೀದಿ ವಿಚಾರದಲ್ಲೂ ಸಮರ್ಥಿಸಿಕೊಳ್ಳಲು ಭಾಗವತ್ ಮುಂದಾಗಿದ್ದಾರೆ ಎಂದು ದೂರಿದರು.
ಜ್ಞಾನವಾಪಿ ವಿವಾದವು ಕೆಲವು ನಂಬಿಕೆಯ ವಿಚಾರಗಳನ್ನು ಒಳಗೊಂಡಿದ್ದು, ನ್ಯಾಯಾಲಯದ ತೀರ್ಪನ್ನು ಎಲ್ಲರೂ ಒಪ್ಪಿಕೊಳ್ಳಬೇಕು ಎಂಬ ಭಾಗವತ್ ಮಾಡಿದ ಭಾಷಣಕ್ಕೆ ಪ್ರತಿಕ್ರಿಯಿಸಿದರು.
ಇಂದಿನ ಮುಸ್ಲಿಮರು, ಅವರ ಪೂರ್ವಜರು ಹಿಂದೂಗಳಾಗಿದ್ದರು, ಸಂವಿಧಾನದ ಕಾರಣದಿಂದ ಭಾರತದ ಪ್ರಜೆಗಳೆನಿಸಿಕೊಂಡಿದ್ದಾರೆ ಎಂದು ಭಾಗವತ್ ಹೇಳುತ್ತಾರೆ. ಆದರೆ ಭಾಗವತ್ ಅವರ ಪೂರ್ವಜರನ್ನು ಬಲವಂತವಾಗಿ ಬೌದ್ಧ ಧರ್ಮದಿಂದ ಮತಾಂತರಗೊಳಿಸಲಾಗಿದೆ ಎಂದು ನಾವು ಹೇಳಲು ಪ್ರಾರಂಭಿಸಿದರೆ ಏನಾಗುತ್ತದೆ ಎಂದು ಒವೈಸಿ ಪ್ರಶ್ನಿಸಿದ್ದಾರೆ.
ನ್ಯಾಯಾಲಯಗಳು ಧರ್ಮಗಳ ಆಧಾರದ ಮೇಲೆ ನಡೆಯುವ ವಿವಾದಗಳನ್ನು ಆರಂಭದಲ್ಲಿ ಚಿವುಟಿ ಹಾಕಬೇಕು, ಈ ವಿಷಯಗಳು ಉಲ್ಬಣಗೊಳ್ಳಲು ಅವಕಾಶ ನೀಡಿದರೆ, ಮುಂದೆ ವಿವಾದಗಳಾಗಿ ಮಾರ್ಪಾಡಾಗುತ್ತವೆ ಎಂದು ಅಭಿಪ್ರಾಯಪಟ್ಟರು.
ಇಸ್ಲಾಂ ಆಕ್ರಮಣಕಾರರೊಂದಿಗೆ ಭಾರತಕ್ಕೆ ಬಂದಿತು ಎಂದು ಭಾಗವತ್ ಹೇಳುತ್ತಲೇ ಇರುತ್ತಾರೆ, ವಾಸ್ತವವಾಗಿ ಇಸ್ಲಾಂ ವ್ಯಾಪಾರಿಗಳು, ವಿದ್ವಾಂಸರು ಮತ್ತು ಸಂತರ ಮೂಲಕ ಇಸ್ಲಾಂ ಬಂದಿದೆ ಎಂದು ಟ್ವೀಟ್ ಮಾಡಿದ್ದಾರೆ.
ವಿಚಾರಣೆಗೆ ನ್ಯಾಯಾಲಯ ಅಸ್ತು
ಉತ್ತರ ಪ್ರದೇಶದ ವಾರಣಾಸಿಯ ನ್ಯಾಯಾಲಯಕ್ಕೆ ಜ್ಞಾನವಾಪಿ ಮಸೀದಿಯ ಹೊರಗೋಡೆಯ ಮೇಲೆ ಪ್ರತಿಷ್ಠಾಪಿಸಲಾಗಿರುವ ಹಿಂದೂ ದೇವತೆಗಳನ್ನು ಪೂಜಿಸಲು ಅವಕಾಶ ನೀಡಬೇಕೆಂದು ಐದು ಹಿಂದೂ ಮಹಿಳೆಯರ ಮನವಿ ಮಾಡಿದ್ದರು, ಈ ಅರ್ಜಿಯ ವಿಚಾರಣೆಗೆ ವಾರಣಾಸಿಯ ಸ್ಥಳೀಯ ನ್ಯಾಯಾಲಯ ಸಮ್ಮತಿ ಸೂಚಿಸಿದೆ.
ನ್ಯಾಯಾಲಯದ ಆದೇಶದ ಮೇರೆಗೆ ಈಗಾಗಲೆ ಜ್ಞಾನವಾಪಿ ಸಂಕೀರ್ಣದ ವೀಡಿಯೊಗ್ರಾಫಿಕ್ ಸಮೀಕ್ಷೆ ನಡೆಸಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. .
ಸಮೀಕ್ಷೆಯ ಸಮಯದಲ್ಲಿ ಸಂಕೀರ್ಣದಲ್ಲಿ ‘ಶಿವಲಿಂಗ’ ಕಂಡುಬಂದಿದೆ ಎಂದು ಹಿಂದೂ ದಾವೆದಾರರು ಪ್ರತಿಪಾದಿಸಿದ್ದಾರೆ. ಆದಾಗ್ಯೂ, ಈ ವಸ್ತುವು ‘ವಾಝೂ ಖಾನಾ’ದಲ್ಲಿ ನೀರಿನ ಕಾರಂಜಿ ಕಾರ್ಯ ವಿಧಾನದ ಭಾಗವಾಗಿದೆ ಎಂದು ಮುಸ್ಲಿಂರು ಸಮರ್ಥಿಸಿಕೊಂಡಿದ್ದಾರೆ.




