Friday, November 20, 2026

ಪ್ರಾಯೋಗಿಕ ಆವೃತ್ತಿ

ಪಹಲ್ಗಾಮ್‌ | ಭದ್ರತಾ ಲೋಪದ ಬಗ್ಗೆ ಪ್ರಶ್ನಿಸಿದ ಪತ್ರಕರ್ತನ ಮೇಲೆ ಬಿಜೆಪಿ ದುಷ್ಕರ್ಮಿಗಳಿಂದ ಹಲ್ಲೆ

ಜಮ್ಮು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಬುಧವಾರ ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಕುರಿತು ಬಿಜೆಪಿ ಪ್ರತಿಭಟನೆಯನ್ನು ವರದಿ ಮಾಡುವಾಗ ಹಿರಿಯ ಪತ್ರಕರ್ತರೊಬ್ಬರ ಮೇಲೆ ಹಲ್ಲೆ ನಡೆಸಲಾಗಿದ್ದು, ಪಹಲ್ಗಾಮ್‌ ಭದ್ರತಾ ಲೋಪದ ಬಗ್ಗೆ ಪ್ರಶ್ನೆ ಕೇಳಿದ್ದಕ್ಕಾಗಿ ಅವರ ಮೇಲೆ ಬಿಜೆಪಿ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ ಎಂದು ವರದಿಗಳು ಹೇಳಿವೆ.

ಕಾಲಿಬರಿ ಚೌಕ್‌ನಲ್ಲಿ ದೈನಿಕ್ ಜಾಗರಣ್ ವರದಿಗಾರ ರಾಕೇಶ್ ಶರ್ಮಾ ಅವರ ಮೇಲೆ ಬಿಜೆಪಿಯ ದುಷ್ಕರ್ಮಿಗಳು ದಾಳಿ ಮಾಡಿದ್ದಾರೆ ಎಂದು ವರದಿಯಾಗಿದೆ. ಈ ದಾಳಿಯನ್ನು ಪತ್ರಿಕೋದ್ಯಮ ವಲಯಗಳು ತೀವ್ರವಾಗಿ ಖಂಡಿಸಿದ್ದು, ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಬೇಕೆಂದು ಒತ್ತಾಯಿಸಿವೆ.

ಶಾಸಕರಾದ ದೇವಿಂದರ್ ಮಾನ್ಯಲ್, ರಾಜೀವ್ ಜಸ್ರೋಟಿಯಾ ಮತ್ತು ಭರತ್ ಭೂಷಣ್ ನೇತೃತ್ವದಲ್ಲಿ ನಡೆಯುತ್ತಿರುವ ಬಿಜೆಪಿಯ ಪ್ರತಿಭಟನೆಯನ್ನು ವರದಿ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ವರಿದಯಾಗಿದೆ. ಪತ್ರಕರ್ತ ರಾಕೇಶ್ ಅವರು, ಘಟನೆಯ ಭದ್ರತಾ ಲೋಪಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಎತ್ತುತ್ತಿದ್ದಾಗ, ಬಿಜೆಪಿ ಕಾರ್ಯಕರ್ತ ಹಿಮಾಂಶು ಶರ್ಮಾ ಆಕ್ರೋಶಗೊಂಡಿದ್ದು, ರಾಕೇಶ್ ಅವರು “ಪ್ರತ್ಯೇಕತಾವಾದಿ ಭಾಷೆ”ಯಲ್ಲಿ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದ್ದಾಗಿ ವರದಿಯಾಗಿದೆ.

ಈ ವೇಳೆ ಪ್ರತಿಭಟನೆಯನ್ನು ಬಹಿಷ್ಕರಿಸಲು ನಿರ್ಧರಿಸಿದ ಪತ್ರಕರ್ತರು ನಂತರ ಸ್ಥಳದಿಂದ ಹೊರಬಂದರು, ಈ ವೇಳೆ ಬಿಜೆಪಿ ಕಾರ್ಯಕರ್ತ ಹಿಮಾಂಶು ಪತ್ರಕರ್ತರನ್ನು ಪುನರಾವರ್ತಿತವಾಗಿ ಆಕ್ಷೇಪಿಸಿದರು ಎಂದು ವರದಿಯಾಗಿದೆ. ಈ ಮಧ್ಯೆ, ಹಿಮಾಂಶು ಅವರೊಂದಿಗೆ ರವೀಂದರ್ ಸಿಂಗ್, ಅಶ್ವನಿ ಶರ್ಮಾ, ಮಂಜಿತ್ ಸಿಂಗ್, ಟೋನಿ ಮತ್ತು ಪರ್ವೀನ್ ಚುನಾ ಸೇರಿದಂತೆ ಅನೇಕರು ಸೇರಿಕೊಂಡರು ಅವರನ್ನು ಸಾರ್ವಜನಿಕವಾಗಿ ಥಳಿಸಿದ್ದಾರೆ ಎಂದು ರಾಕೇಶ್ ಹೇಳಿದ್ದಾರೆ.

ಈ ವೇಳೆ ಉಪ ಪೊಲೀಸ್ ವರಿಷ್ಠಾಧಿಕಾರಿ ರವೀಂದರ್ ಸಿಂಗ್ ತನ್ನನ್ನು ರಕ್ಷಿಸಿದ್ದು, ನಂತರ ಅವರು ಚಿಕಿತ್ಸೆಗಾಗಿ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿದರು ಎಂದು ರಾಕೇಶ್ ಹೇಳಿದ್ದಾರೆ. ಈ ನಡುವೆ, ಹಿರಿಯ ಪತ್ರಕರ್ತರ ಗುಂಪೊಂದು ಕಥುವಾ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಶೋಭಿತ್ ಸಕ್ಸೇನಾ ಅವರನ್ನು ಭೇಟಿ ಮಾಡಿ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸುವುದು ಮತ್ತು ಅವರ ಬಂಧನ ಸೇರಿದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ.

ಕಥುವಾದ ಶಹೀದಿ ಚೌಕ್‌ನಲ್ಲಿ ನಡೆದ ಈ ಘಟನೆಯನ್ನು ಖಂಡಿಸಿ, ತೋಳುಗಳಿಗೆ ಕಪ್ಪು ಪಟ್ಟಿ ಧರಿಸಿದ ಪತ್ರಕರ್ತರು ಇಂದು ಸಂಜೆ ಪ್ರತಿಭಟನಾ ಪ್ರದರ್ಶನ ನಡೆಸಿದರು ಮತ್ತು ಆರೋಪಿಗಳ ವಿರುದ್ಧ ಪಕ್ಷ ಕ್ರಮ ಕೈಗೊಳ್ಳುವವರೆಗೆ ಬಿಜೆಪಿಯ ಎಲ್ಲಾ ಕಾರ್ಯಕ್ರಮಗಳನ್ನು ಬಹಿಷ್ಕರಿಸುವುದಾಗಿ ಘೋಷಿಸಿದ್ದಾರೆ. ಕಥುವಾದ ಪ್ರತಿಭಟನಾ ನಿರತ ಸಹೋದ್ಯೋಗಿಗಳಿಗೆ ಬೆಂಬಲಿಸಿ ಜಮ್ಮುವಿನ ಪ್ರೆಸ್ ಕ್ಲಬ್ ಹೊರಗೆ ಕೂಡಾ ಕೆಲವು ಪತ್ರಕರ್ತರು ಪ್ರತಿಭಟನೆ ನಡೆಸಿದ್ದಾರೆ.

ಪ್ರದೇಶ ಕಾಂಗ್ರೆಸ್ ಸಮಿತಿಯು ರಾಕೇಶ್ ಅವರ ಮೇಲಿನ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದು, ಹೆಚ್ಚುತ್ತಿರುವ ಭಯೋತ್ಪಾದಕ ದಾಳಿಗಳ ಹಿನ್ನೆಲೆಯಲ್ಲಿ ಭದ್ರತಾ ಪರಿಸ್ಥಿತಿಯ ಕುರಿತು ಅವರು ಕೆಲವು “ಅನಪೇಕ್ಷಿತ ಪ್ರಶ್ನೆಗಳನ್ನು” ಕೇಳಿದ್ದೆ ಅವರು ಮಾಡಿದ ಏಕೈಕ ಅಪರಾಧ ಎಂದು ಕಾಂಗ್ರೆಸ್ ಹೇಳಿದೆ.

“ಈಗ ಪತ್ರಕರ್ತರು ಪ್ರಶ್ನೆಗಳನ್ನು ಕೇಳುವುದು ದೊಡ್ಡ ಪಾಪವಾಗಿದೆ. ರಾಷ್ಟ್ರೀಯ ದಿನಪತ್ರಿಕೆಯ ಪ್ರಸಿದ್ಧ ಪತ್ರಕರ್ತ ಕೂಡ ಸುರಕ್ಷಿತವಾಗಿಲ್ಲ. ಇದಕ್ಕಿಂತ ದುರದೃಷ್ಟಕರ ಮತ್ತು ಖಂಡನೀಯವಾದದ್ದು ಇನ್ನೊಂದಿಲ್ಲ” ಎಂದು ಜಮ್ಮು ಕಾಶ್ಮೀರದ ಕಾಂಗ್ರೆಸ್ ಮುಖ್ಯ ವಕ್ತಾರ ರವೀಂದರ್ ಶರ್ಮಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ಘಟನೆಗೆ ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ ಅವರು ಕ್ಷಮೆಯಾಚಿಸಬೇಕು ಮತ್ತು ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.

ಕೃಪೆ : ನಾನು ಗೌರಿ.ಕಾಂ

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ