Friday, November 20, 2026

ಪ್ರಾಯೋಗಿಕ ಆವೃತ್ತಿ

ಸಂವಿಧಾನ ಉಳಿಸಿಕೊಳ್ಳುವ ಜವಾಬ್ದಾರಿ ಯುವಜನರ ಮೇಲಿದೆ : ನ್ಯಾ. ನಾಗಮೋಹನ ದಾಸ್

ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಹಿರಿಯರು ದೇಶದ ಬೆಳವಣಿಗೆಗೆ ನೀಡಿದ ಸಂವಿಧಾನವನ್ನು ಅನುಸರಿಸಿ ಉಳಿಸಿಕೊಳ್ಳುವ ಜವಾಬ್ದಾರಿ ಯುವಜನರ ಮೇಲಿದೆ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನದಾಸ್ ತಿಳಿಸಿದರು.

ಮಂಡ್ಯ ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ‘ಸಂವಿಧಾನ ಓದು ಅಧ್ಯಯನ ಶಿಬಿರ’ವನ್ನು ಉದ್ಘಾಟಿಸಿ ಮಾತನಾಡಿದರು.

ಭಾರತದ ಸಂವಿಧಾನವು ಜಗತ್ತಿನ ಅತಿ ದೊಡ್ಡ ಸಂವಿಧಾನವಾಗಿದ್ದು, ಸಂವಿಧಾನ ರಚನೆಯಾಗಿ ಹಲವಾರು ವರ್ಷಗಳಾದರೂ ಅನೇಕರಿಗೆ ಸಂವಿಧಾನದ ರಚನೆ ಮತ್ತು ಅದರ ಮೂಲ ತತ್ವಗಳು ಬಗ್ಗೆ ತಿಳಿದೇ ಇಲ್ಲ ಎಂಬುದು ಯೋಚಿಸುವ ವಿಷಯವಾಗಿದೆ ಎಂದರು.

ಸಾರ್ವಜನಿಕರಿಗೆ ಉಪಯುಕ್ತವಾಗಲೆಂದು 2018 ರಲ್ಲಿ ನಾನು ‘ಸಂವಿಧಾನ ಓದು’ ಎಂಬ ಪುಸ್ತಕ ರಚಿಸಿದ್ದೇನೆ, ಕಳೆದ 6 ವರ್ಷದಲ್ಲಿ 2000 ಕ್ಕೂ ಹೆಚ್ಚು ಉಪನ್ಯಾಸವನ್ನು ಸಂವಿಧಾನದ ಬಗ್ಗೆ ನೀಡಿದ್ದೇನೆ. ಇಷ್ಟಾದರೂ ರಾಜ್ಯದ ಒಂದಿಷ್ಟು ಜನರನ್ನು ತಲುಪಲು ವಿಫಲರಾಗಿದ್ದೇವೆ, ಜಿಲ್ಲೆಯ ಯುವ ಜನರಿಗೆ ಸಂವಿಧಾನದ ಮಹತ್ವ ಮೂಲ ತತ್ವಗಳನ್ನು ತಿಳಿಸುವುದೇ ಈ ಶಿಬಿರದಲ್ಲಿ ಮೂಲ ಉದ್ದೇಶ ಜೊತೆಗೆ ನಾವು ಅಭಿವೃದ್ಧಿಯತ್ತ ಸಾಗಲು ಇರುವ ಒಂದೇ ದಾರಿ ಎಂದರೆ ಅದು ಹಿರಿಯರು ಕೊಟ್ಟ ನಮ್ಮ ಸಂವಿಧಾನ ಎಂದು ಹೇಳಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್ ಮಾತನಾಡಿ, ನಾನು ಯು.ಪಿ.ಎಸ್.ಸಿ. ಪರೀಕ್ಷೆ ಬರೆಯುವ ಸಮಯದಲ್ಲಿ ಮೊಟ್ಟ ಮೊದಲು ನಾನು ಓದಿದ್ದು ಸಂವಿಧಾನದ ಪುಸ್ತಕ, ಮೊದಲು ಓದುವಾಗ ಕಾನೂನಿನ ಭಾಷೆ ಅರ್ಥ ಮಾಡಿಕೊಳ್ಳಲು ಕಷ್ಟವಾಯಿತು, ಆದರೆ ಅದನ್ನು ಅರ್ಥ ಮಾಡಿಕೊಂಡಾಗ ಸಮಾಜದಲ್ಲಿ ಏನು ಮಾಡಬೇಕು ಏನು ಮಾಡಬಾರದು ಎಂಬ ಸಂಗತಿಯನ್ನು ಅರಿತುಕೊಂಡೆ ಎಂದರು.

ನಮಗೆ ಕಷ್ಟ ಬಂದಾಗ ಯಾರೂ ನಮ್ಮ ಜೊತೆ ನಿಲ್ಲುವುದಿಲ್ಲ, ನಮ್ಮ ಬದುಕಿನ ಹೋರಾಟವನ್ನು ನಾವೇ ಮಾಡಬೇಕು, ಅದು ಜೀವನದ ತತ್ವ, ನಮ್ಮನ್ನು ಹೊರತು ಪಡಿಸಿ ನಮ್ಮನ್ನು ಕಾಪಾಡುವ ಶಕ್ತಿ ಯಾರಿಗಾದರೂ ಇದೆ ಎಂದರೆ ಅದು ಕೇವಲ ಭಾರತೀಯ ಸಂವಿಧಾನಕ್ಕೆ ಮಾತ್ರ ಎಂದು ಹೇಳಿದರು.

ಸಭೆಯಲ್ಲಿ ಕೃಷಿ ಕೂಲಿಕಾರರ ಸಂಘದ ರಾಜ್ಯಾಧ್ಯಕ್ಷ ಪುಟ್ಟಮಾದು, ನಗರಸಭೆ ಮಾಜಿ ಅಧ್ಯಕ್ಷ ಸಿದ್ಧರಾಜು, ಮಹಿಳಾ ರೈತ ಮುಖಂಡರಾದ ಸುನಂದ ಜಯರಾಂ, ದಲಿತ ಹಕ್ಕುಗಳ ಸಮಿತಿ ಮುಖಂಡ ಕೃಷ್ಣ.ಆರ್, ಕಾರ್ಮಿಕ ಮುಖಂಡ ಸಿ.ಕುಮಾರಿ ಮತ್ತು ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ