ಕಳೆದ 40 ವರ್ಷಗಳಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತ ನಾಗಿ ಹಲವಾರು ಜವಾಬ್ದಾರಿಗಳನ್ನು ನಿರ್ವಹಿಸಿದ್ದು, ಸಂಘ ಪರಿವಾದ ಎಲ್ಲಾ ಕಾರ್ಯಕ್ರಮಗಳು ಮತ್ತು ಹೋರಾಟ ಮತ್ತು ಶಿಬಿರಗಳಲ್ಲಿ ಭಾಗವಹಿಸಿ, ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತನಾಗಿ ವಿವಿಧ ಹಂತಗಳಲ್ಲಿ ಜವಾಬ್ದಾರಿಯಿಂದ ಕಾರ್ಯನಿರ್ವಹಿದ್ದರೂ ಸಂಘ ಪರಿವಾರ ಹಾಗೂ ಬಿಜೆಪಿ ಮುಖಂಡರು ನನಗೆ ಅವಕಾಶ ನೀಡದಿರುವುದರಿಂದ ಬೇಸತ್ತು ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದೇನೆಂದು ಕೆ.ಎಸ್.ಮಲ್ಲಿಕಾರ್ಜುನ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1992 ರಂದು ನಡೆದ ರಾಮ ಜನ್ಮಭೂಮಿ ಆ೦ದೋಲನದ ಕರಸೇವೆಯಲ್ಲಿ ಕಾರ್ಯಕರ್ತರೊಂದಿಗೆ ಭಾಗವಹಿಸಿದ್ದೇನೆ, ಆ ನಂತರ ಹಿಂದುತ್ವ ವಿಚಾರಧಾರೆಯಲ್ಲಿ ಸಂಘಟನೆ ಮತ್ತು ಹೋರಾಟಗಳನ್ನು ಮಾಡಿದ್ದು, ನನ್ನ ಮತ್ತು ಜೊತೆಯಲ್ಲಿದ್ದ ಇತರೆ ಕಾರ್ಯಕರ್ತರ ಮೇಲೆ ಹಲವಾರು ಪೋಲೀಸ್ ಕೇಸ್ಗಳು ದಾಖಲಾಗಿದ್ದು, ಈಗಲೂ ಕೋರ್ಟಿಗೆ ಅಲೆದಾಡುತ್ತಿರುತ್ತೇವೆ. ನನ್ನ ಜೊತೆ ಈಗಲೂ ಹಲವಾರು ಕಾರ್ಯಕರ್ತರು ತಮ್ಮ ವೈಯಕ್ತಿಕ ಸಮಸ್ಯೆಗಳ ನಡುವೆ ಈಗಲೂ ಕೋರ್ಟಿಗೆ ಅಲೆಯುತ್ತಿದ್ದಾರೆ ಎಂದು ದೂರಿದರು.
ರಾಜ್ಯ ಹಾಗೂ ಕೇಂದ್ರದಲ್ಲಿ ಮೂರು ಬಾರಿ ಬಿ.ಜೆ.ಪಿ. ಸರ್ಕಾರ ಬಂದರೂ ಸಹ ನನಗೆ ಯಾವುದೇ ನಾಮ ನಿರ್ದೆಶನವಾಗಲೀ, ನಿಗಮ ಮತ್ತು ಮಂಡಲಿಗಳಲ್ಲಿ ಅಧ್ಯಕ್ಷ ಹಾಗೂ ಯಾವುದೇ ನಿರ್ದೇಶಕರಾಗಿ ನೇಮಕಾತಿ ಮಾಡಲಿಲ್ಲ, ಆದ್ದರಿಂದ ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಅಟಲ್ ಜಿ ಸ್ವಾಭಿಮಾನಿ ಸೇವಾ ಸಮಿತಿ ಹೆಸರಿನಲ್ಲಿ ಕಣಕ್ಕೆ ಇಳಿಯುತ್ತಿದ್ದೇನೆ ಎಂದರು.
ನಾಳೆ ನಾಮಪತ್ರ ಸಲ್ಲಿಕೆ
ಏ.20ರಂದು ಬೆಳಿಗ್ಗೆ 11 ಗಂಟೆಗೆ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರವನ್ನು ಮಂಡ್ಯ ಚುನಾವಣಾಧಿಕಾರಿಗಳಿಗೆ ಸಲ್ಲಿಸುತ್ತಿದ್ದೇನೆ. ಮುಖಂಡರು, ಸ್ನೇಹಿತರು, ಹಿತೈಷಿಗಳು, ಕಾರ್ಯಕರ್ತರು ಹಾಗೂ ಮಂಡ್ಯ ವಿಧಾನಸಭಾ ಕ್ಷೇತ್ರದ ಮತದಾರ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಮನವಿ ಮಾಡಿದರು.
ಗೋಷ್ಠಿಯಲ್ಲಿ ಎಂ ಬಿ ಬಸವರಾಜು, ಬಿ ಲಿಂಗೇಗೌಡ, ಚಂದ್ರು, ಶಿವಶಂಕರ್ ಹಾಗೂ ಚಂದ್ರು ಉಪಸ್ಥಿತರಿದ್ದರು




