ಪಾಂಡವಪುರ ಪಟ್ಟಣದಲ್ಲಿ ಜ.26ರಂದು ರೈತ ನಾಯಕ ದಿವಂಗತ ಕೆ.ಎಸ್. ಪುಟ್ಟಣ್ಣಯ್ಯ ಅವರ 75ನೇ ವರ್ಷದ ಹುಟ್ಟುಹಬ್ಬ, ಸಂಸ್ಮರಣೆ ಹಾಗೂ ಕಾಟೇರ ಚಿತ್ರತಂಡದ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನವರಿ 23 ಕೆ.ಎಸ್.ಪುಟ್ಟಣ್ಣಯ್ಯ ಅವರ ಜನ್ಮದಿನವಾಗಿದ್ದು, ಅಂದು ರಾಯಚೂರಿನಲ್ಲಿ ವಿಶೇಷ ಕಾರ್ಯಕ್ರಮ ನಡೆಸಲಾಗುತ್ತಿದೆ. ಆದ್ದರಿಂದ ಪುಟ್ಟಣ್ಣಯ್ಯ ಅವರ ಕರ್ಮಭೂಮಿ ಪಾಂಡವಪುರದಲ್ಲಿ ಜ.26ರಂದು ಕಾರ್ಯಕ್ರಮ ಆಯೋಜಿಸುತ್ತಿದ್ದೇವೆ ಎಂದರು.
ಕಾಟೇರ ಚಿತ್ರತಂಡಕ್ಕೆ ಅಭಿನಂದನೆ
ಭೂ ಸುಧಾರಣಾ ಕಾಯಿದೆ ಹಾಗೂ ಉಳುವವನೇ ಭೂಮಿಯ ಒಡೆಯ ಕಾನೂನು ಬಗ್ಗೆ ‘ಕಾಟೇರ’ ಸಿನಿಮಾ ಬೆಳಕು ಚೆಲ್ಲುವ ಕೆಲಸ ಮಾಡಿದ್ದು, ರೈತರಿಗೆ ಮತ್ತು ಜನರಿಗೆ ಮಾಹಿತಿ ನೀಡಿದೆ. ಈ ಮೂಲಕ ಕಾಯ್ದೆ ಬಗ್ಗೆ ಜನರಿಗೆ ಅರಿವು ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ನಾಯಕ ನಟ ದರ್ಶನ್ ತೂಗುದೀಪ್ ಸೇರಿದಂತೆ ಚಿತ್ರತಂಡದ ಸದಸ್ಯರನ್ನು ಅಂದು ಸಮಾರಂಭದಲ್ಲಿ ಅಭಿನಂದಿಸಲಾಗುವುದು. ಪಾಂಡವಪುರದ ಪಾಂಡವ ಕ್ರೀಡಾಂಗಣದಲ್ಲಿ ಅಂದು ಮಧ್ಯಾಹ್ನ 3 ಗಂಟೆಗೆ ಆರಂಭಗೊಳ್ಳುವ ಕಾರ್ಯಕ್ರಮ ರಾತ್ರಿ 10 ಗಂಟೆವರೆಗೆ ನಡೆಯಲಿದೆ ಎಂದು ವಿವರಿಸಿದರು.

ಅಂದು ಪಾಂಡವಪುರದ ಬನ್ನಾರಿ ಅಮ್ಮನ್ ದೇವಾಲಯದಿಂದ ಎತ್ತಿನ ಗಾಡಿಗಳಲ್ಲಿ ಚಿತ್ರತಂಡದ ಕಲಾವಿದರು, ನಿರ್ದೇಶಕರು ಹಾಗೂ ತಂತ್ರಜ್ಞರನ್ನು ಮೆರವಣಿಗೆ ಮೂಲಕ ಸಮಾರಂಭದ ಸ್ಥಳಕ್ಕೆ ಕರೆತರಲಾಗುವುದು. ಈ ಸಂದರ್ಭದಲ್ಲಿ 10 ಜೊತೆ ಎತ್ತುಗಳು, ಡೊಳ್ಳು ನಗಾರಿ, ಮರಗಾಲು ಕುಣಿತ, ಪೂಜಾ ಕುಣಿತ ಸೇರಿದಂತೆ ಹಲವು ಜಾನಪದ ಕಲಾತಂಡಗಳ ಕಲಾವಿದರು ಪಾಲ್ಗೊಂಡು ಮೆರವಣಿಗೆಗೆ ರಂಗು ತುಂಬಲಿದ್ದಾರೆ ಎಂದು ಹೇಳಿದರು.
ದೊಡ್ಡ ಮಟ್ಟದ ಕಾನೂನುಗಳು ಜಾರಿಯಾದಾಗ ಮಾತ್ರ ರೈತರ ಬದುಕಿನಲ್ಲಿ ಸುಧಾರಣೆ ಸಾಧ್ಯ ಎಂಬುದು ಉಳುವವನೇ ಭೂಮಿಯ ಒಡೆಯ ಕಾನೂನಿನಿಂದ ಸಾಬೀತಾಗಿದೆ. ಹೀಗಾಗಿ ಇಂತಹ ಕಾನೂನುಗಳ ಜಾರಿ ಅಗತ್ಯವಾಗಿದೆ ಎಂದರು.
ರೈತಸಂಘದ ಮಂಡ್ಯ ಜಿಲ್ಲಾಧ್ಯಕ್ಷ ಎ.ಎಲ್. ಕೆಂಪೂಗೌಡ, ಮುಖಂಡರಾದ ಲಿಂಗಪ್ಪಾಜಿ, ವಿಜಯ್ ಕುಮಾರ್, ಶಿವಳ್ಳಿ ಚಂದ್ರು, ಹರವು ಪ್ರಕಾಶ್, ಜಿ.ಎ. ಶಂಕರ್ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.




