Thursday, November 19, 2026

ಪ್ರಾಯೋಗಿಕ ಆವೃತ್ತಿ

ಕೆ.ಶಿವರಾಂ ಸಮಾಜ ಸುಧಾರಕರಂತೆ ದುಡಿದರು : ಜ್ಞಾನಪ್ರಕಾಶ ಸ್ವಾಮೀಜಿ

ನಿವೃತ್ತ ಐಎಎಸ್ ಅಧಿಕಾರಿ ಕೆ.ಶಿವರಾಮ್ ಅವರು ಅಸ್ಪೃಶ್ಯರು ಹಾಗು ತುಳಿತಕ್ಕೊಳಗಾದ ಜನರಿಗೆ ಸಮಾಜ ಸುಧಾರಕರಂತೆ ಸೇವೆ ಮಾಡಿ, ಸ್ವಾಭಿಮಾನ ತುಂಬುವ ಕೆಲಸ ಮಾಡಿದರು. ಅವರು ಬಿಟ್ಟು ಹೋಗಿರುವ ಹೋರಾಟದ ರಥವನ್ನು ನಾವೆಲ್ಲರೂ ಸೇರಿ ಮುಂದೆ ಎಳೆದುಕೊಂಡು ಹೋಗಬೇಕಿದೆ ಎಂದು ಮೈಸೂರಿನ ಉರಿಲಿಂಗಿ ಪೆದ್ದಿಮಠದ ಪೀಠಾಧಿಪತಿ ಶ್ರೀಜ್ಞಾನಪ್ರಕಾಶ ಮಹಾಸ್ವಾಮಿಜಿ ಹೇಳಿದರು.

ಕೆ.ಆರ್.ಪೇಟೆ ಪಟ್ಟಣದ ಖಾಸಗಿ ಪಾರ್ಟಿಹಾಲ್ ನಲ್ಲಿ ಛಲವಾದಿ ಮಹಾಸಭಾ ಮತ್ತು ದಲಿತಪರ, ಪ್ರಗತಿಪರ ಸಂಘಟನೆಗಳು, ವಿಶ್ರಾಂತ ಐಎಎಸ್ ಅಧಿಕಾರಿ ಕೆ ಶಿವರಾಮು ಅಭಿಮಾನಿಗಳು ಆಯೋಜಿಸಿದ್ದ ಕೆ.ಶಿವರಾಂ ಅವರಿಗೆ ನುಡಿನಮನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸ್ವಾರ್ಥ ಚಿಂತನೆ ಮಾಡಿದವರಲ್ಲ

ಕೆ. ಶಿವರಾಮ್ ಬದುಕಿನುದ್ದಕ್ಕೂ ಸ್ವಾರ್ಥ ಚಿಂತನೆ ಮಾಡಿದವರಲ್ಲ, ಅವರು ಸಮಾಜದ ಅಭಿವೃದ್ಧಿಗಾಗಿ ಶ್ರಮವಹಿಸಿದ ಅಭಿನವ ಅಂಬೇಡ್ಕರ್‌ ಆಗಿದ್ದರು. ಅಂಬೇಡ್ಕರ್ ಅವರಿಗೆ ಅಸ್ಪೃಶ್ಯರ ನಾಯಕರು ಎಂದು ಹಣೆಪಟ್ಟಿ ಕಟ್ಟುವ ಮೂಲಕ ಆಧುನಿಕ ಭಾರತದ ಇತಿಹಾಸವು ಅವರನ್ನು ಒಬ್ಬಂಟಿಯನ್ನಾಗಿ ನಿಲ್ಲಿಸಿದೆ. ಅಂಬೇಡ್ಕರ್‌ ಅವರು ಹುಟ್ಟುವುದಕ್ಕಿಂತಲೂ ಮುನ್ನವೇ ಹಿಂದುಳಿದ ವರ್ಗಗಳ ಪರವಾಗಿ ಹೋರಾಟ ಆರಂಭವಾಗಿತ್ತು ಎಂದರು.

ಅಂಬೇಡ್ಕರ್‌ ಅವರು ಹಿಂದುಳಿದ ವರ್ಗಗಳ ಹೋರಾಟದ ಕೂಸಾಗಿದ್ದು, ಆ ಚಳವಳಿಯ ಮುಂದುವರಿದ ಹೋರಾಟದ ಭಾಗವಾಗಿ ಶಿವರಾಮ್ ಅವರು ಹೋರಾಡಿದರು. ಅವರ ಅಶೋತ್ತರಗಳನ್ನು ಛಲವಾಧಿ ಬಂಧುಗಳು ಮೈಗುಡಿಸಿಕೊಳ್ಳಬೇಕು. ತುಳಿತಕ್ಕೊಳಗಾದ ಸಮಾಜದ ಬಂಧುಗಳು ಈಗಲಾದರೂ ಎಚ್ಚೆತ್ತುಕೊಳ್ಳಬೇಕು ಇಲ್ಲದಿದ್ದರೆ ನಮ್ಮ ಸಮಾಜ ಮತ್ತಷ್ಟು ಶೋಷಣೆಗೆ ಬಲಿಯಾಗುವುದು ನಿಶ್ಚಿತವಾಗಿದೆ ಎಂದರು.

ಸಲ್ಲಬೇಕಾದ ಗೌರವ ಸ್ಥಾನಮಾನ ಸಿಗಲಿಲ್ಲ

ಶಿವರಾಮ್ ಅವರ ಧರ್ಮಪತ್ನಿ ವಾಣಿ ಶಿವರಾಮ್ ಮಾತನಾಡಿ, ಸದಾ ಸಮಾಜ ಮುಖಿಯಾಗಿ ಚಿಂತಿಸುತ್ತಿದ್ದ ಕೆ.ಶಿವರಾಂ ಅವರು ರಾಜಕೀಯ ಸ್ಥಾನಮಾನ ಸಿಕ್ಕಿದ್ರೆ ಜನಸಾಮಾನ್ಯರಿಗೆ ಹೆಚ್ಚು ಅನುಕೂಲ‌ ಮಾಡುತ್ತಿದ್ದರು.  ಯಾವುದೇ ರಾಜಕೀಯ ಪಕ್ಷದಿಂದ ಕೆ.ಶಿವರಾಂ ಅವರಿಗೆ ಸಲ್ಲಬೇಕಾದ ಗೌರವ ಸ್ಥಾನಮಾನ ಸಿಗಲಿಲ್ಲ ಎಂಬುದು ನೋವಿನ ಸಂಗತಿಯಾಗಿದೆ ಎಂದರು.

ಕೆ.ಶಿವರಾಂ ಅವರ ಕನಸುಗಳು, ಆಸೆಗಳನ್ನು ಮುಂದುವರೆಸಿ ಕೊಂಡು ಹೋಗಬೇಕು ಎಂಬ ಹಂಬಲ ಇದೆ. ಕೆ.ಶಿವರಾಂ ಅವರಿಗೆ ರಾಜಕೀಯದಲ್ಲಿ ಅನ್ಯಾಯವಾಗಿದೆ. ಅದಕ್ಕೆ ತಕ್ಕ ಉತ್ತರವನ್ನು ಅಭಿಮಾನಿಗಳು ನೀಡಬೇಕಿದೆ. ನನ್ನ ಕೊನೆಯ ಉಸಿರು ಇರುವವರೆವಿಗೂ ಜನರ ಮಧ್ಯೆ ಇದ್ದು ನಾನು ಕೆಲಸ ಮಾಡುತ್ತೇನೆ. ಶಿವರಾಮ್ ಎಲ್ಲರ ಹೃದಯದಲ್ಲಿ ಇರುತ್ತಾರೆ, ಛಲವಾದಿ ಬಂಧುಗಳು ಸಂಘಟಿತರಾಗಿ ಸಾಧನೆ ಮಾಡಬೇಕು ಎಂದರು.

ಕಾರ್ಯಕ್ರಮ ಛಲವಾದಿ ಮಹಾಸಭಾ ರಾಜ್ಯ ಉಪಾಧ್ಯಕ್ಷ ಬಸವರಾಜು, ಖಜಾಂಚಿ ಮೈಕೋ ನಾಗರಾಜು, ಸಂಘಟನಾ ಕಾರ್ಯದರ್ಶಿ ಮೈಸೂರು ಹಂಸರಾಜು, ಮಂಡ್ಯದ ಮೀನಾಕೃಷ್ಣ, ಹೇಮಾವತಿ, ಜಯಕಾಂತ, ಕೆ. ಆರ್.ಪೇಟೆ ತಾಲೂಕು ಅಧ್ಯಕ್ಷ ಅಧ್ಯಕ್ಷ ಊಚನಹಳ್ಳಿ ನಟರಾಜು, ಹರಿಹರಪುರ ನರಸಿಂಹ, ಸಿಂಧಘಟ್ಟ ಸೋಮಶೇಖರ್, ಪುರಸಭಾ ಸದಸ್ಯರಾದ ಡಿ.ಪ್ರೇಮ್ ಕುಮಾರ್, ಗಿರೀಶ್, ಸೌಭಾಗ್ಯಉಮೇಶ್, ಹಿರಿಯ ಮುಖಂಡ ಬಸ್ತಿರಂಗಪ್ಪ, ಮಾಂಬಳ್ಳಿ ಜಯರಾಂ, ಮುದುಗೆರೆ ಮಹೇಂದ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ