Tuesday, November 24, 2026

ಪ್ರಾಯೋಗಿಕ ಆವೃತ್ತಿ

ಸಮಾಜಕ್ಕಾಗಿ ಜೀವನವನ್ನೇ ಮುಡುಪಾಗಿಟ್ಟ ಕೆ.ವಿ.ಶಂಕರಗೌಡ : ನಿಶ್ಚಲಾನಂದನಾಥಶ್ರೀ

ಕಲೆ, ಸಾಹಿತ್ಯ, ಸಂಸ್ಕೃತಿ ವಿಚಾರದಲ್ಲಿ ಕೆ.ವಿ.ಶಂಕರಗೌಡ ಅವರು ಮಾದರಿಯಾಗಿ ನಿಲ್ಲುತ್ತಾರೆ, ಸಮಾಜಕ್ಕೋಸ್ಕರವಾಗಿಯೇ ಜೀವನವನ್ನೇ ಮುಡುಪಾಗಿಟ್ಟರು. ಜಿ.ಮಾದೇಗೌಡ, ಸಿಂಗಾರಿಗೌಡರು ಸೇರಿದಂತೆ ಎಸ್‌.ಎಂ.ಕೃಷ್ಣವರೆಗೂ ನೋಡಿದರೆ ಕೆವಿಎಸ್‌ ಕೂಡ ದೊಡ್ಡ ನಾಯಕರಾಗಿ ಕಾಣುತ್ತಾರೆ ಎಂದು ಕೆಂಗೇರಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಿಶ್ಚಲಾನಂದನಾಥ ಸ್ವಾಮೀಜಿ ಶ್ಲಾಘಿಸಿದರು.

ಮಂಡ್ಯ ನಗರದ ಪಿಇಎಸ್‌ ಎಂಜಿನಿಯರಿಂಗ್ ಕಾಲೇಜಿನ ನಿತ್ಯ ಸಚಿವ ಶಂಕರಗೌಡ ತರಬೇತಿ ಮತ್ತು ಉದ್ಯೋಗ ಕೇಂದ್ರ ಸಭಾಂಗಣದಲ್ಲಿ ಜನತಾ ಶಿಕ್ಷಣ ಟ್ರಸ್ಟ್‌ ವತಿಯಿಂದ ಮಂಗಳವಾರ ನಡೆದ ನಿತ್ಯಸಚಿವ ಕೆ.ವಿ.ಶಂಕರಗೌಡ 110ನೇ ಜನ್ಮದಿನಾಚರಣೆ, 2025ನೇ ಸಾಲಿನ ರಾಜ್ಯ ಮಟ್ಟದ ಕೆ.ವಿ.ಶಂಕರಗೌಡ ಮತ್ತು ಕೆ.ಎಸ್.ಸಚ್ಚಿದಾನಂದ ರಂಗಭೂಮಿ ಮತ್ತು ಸಮಾಜ ಸೇವಾ ಪ್ರಶಸ್ತಿಗಳ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿದರು.

ನಿಮ್ಮೆಲ್ಲರ ಸಹಕಾರ ಬೇಕು ; ವಿಜಯ್ ಆನಂದ್

ಪಿಇಟಿ ಅಧ್ಯಕ್ಷ ಕೆ.ಎಸ್‌.ವಿಜಯ್‌ ಆನಂದ್‌ ಮಾತನಾಡಿ, ನಮ್ಮ ತಂದೆ ಸಚ್ಚಿದಾನಂದ ಅವರು ರಂಗಭೂಮಿ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ, ಜನತಾ ಶಿಕ್ಷಣ ಟ್ರಸ್ಟ್ ಕಟ್ಟಲು ಶ್ರಮ ಪಟ್ಟಿರುವುದನ್ನು ಉಳಿಸಿಕೊಂಡು ಹೋಗಬೇಕಿದೆ, ಅದನ್ನು ಮಾಡಲು ನಿಮ್ಮೆಲ್ಲರ ಸಹಕಾರ ಬೇಕು. ಅಜಯ್‌ ನೀನಾಸಂ ಮತ್ತು ಮಹೇಶ್‌ಚಂದ್ರಗುರು ಅವರಿಗೆ ಪ್ರಶಸ್ತಿ ನೀಡುತ್ತಿರುವುದು ಹೆಮ್ಮೆ ಎನಿಸಿದೆ. ಇವರೆಲ್ಲರೂ ಒಂದೊಂದು ಕ್ಷೇತ್ರದಲ್ಲಿ ಸಾಧನೆ ಮಾಡಿಕೊಂಡು ಬಂದಿದ್ದಾರೆ ಅವರ ಸಾಧನೆ ಮುಂದುವರಿಯಲಿ ಎಂದು ಆರೈಸಿದರು.

ರಾಜಕೀಯ ಮುತ್ಸದ್ದಿಯಾಗಿ ಗುಣಧರ್ಮದ ರಾಜಕೀಯ ನಡೆಸಿದವರು ಕೆ.ವಿ.ಶಂಕರಗೌಡ ಅವರು, ಜನರಿಗೆ ಸಾಂಸ್ಕೃತಿಕ ಚಿಂತನೆಗಳನ್ನು ಮೂಡಿಸಿ ಜನಮಾನಸದಲ್ಲಿ ನಿತ್ಯ ಸಚಿವರಾಗಿ ಉಳಿದರು. ಪ್ರಸ್ತುತದಲ್ಲಿ ರಾಜಕೀಯ ಹಾಳಾಗಿದೆ, ರಾಜಕಾರಿಣಿಗಳು ರಾಜಕೀಯ ಮುತ್ಸದ್ದಿಗಳನ್ನ ಅನುಸರಿಸುವಲ್ಲಿ ವಿಫಲರಾಗಿದ್ದಾರೆ ಎಂದು ವಿಷಾದಿಸಿದರು.

ಜನರಿಗೆ ದುಡಿಯುವ ಶಕ್ತಿ ಇದೆ. ವ್ಯವಸಾಯಕ್ಕೆ ಅಷ್ಟೋ ಇಷ್ಟು ನೀರು ಸಹ ಇದ್ದರೂ ಜ್ಞಾನವಿಲ್ಲ. ಶಿಕ್ಷಣವೇ ಮೂಲ ಎನ್ನುವುದನ್ನು ಎಲ್ಲರೂ ತಿಳಿದುಕೊಳ್ಳಬೇಕು. ನಮ್ಮ ಜನರು ಬುದ್ದಿವಂತರಾಗಲೆಂದು ಜನತಾ ಶಿಕ್ಷಣ ಟ್ರಸ್ಟ್‌ ತೆರೆದು ಉಪಕಾರ ಮಾಡಿದ ಏಕೈಕ ವ್ಯಕ್ತಿ ಕೆ.ವಿ.ಶಂಕರಗೌಡ ಅವರು, ಅವರ ಮೊಮ್ಮಗ ಕೆ.ಎಸ್‌.ವಿಜಯ್‌ಆನಂದ್‌ ಅವರು ಕಪ್ಪು ಚುಕ್ಕೆ ತರದ ಹಾಗೆ ನೋಡಿಕೊಂಡು ಬರುತ್ತಿದ್ದಾರೆ ಎಂದು ತಿಳಿಸಿದರು.

ರಾಜ್ಯ ಮಟ್ಟದ ಕೆ.ಎಸ್.ಸಚ್ಚಿದಾನಂದ ರಂಗಭೂಮಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅಜಯ್‌ ನೀನಾಸಂ, ಕೆ.ವಿ.ಶಂಕರಗೌಡ ಅವರನ್ನು ನೋಡಿಲ್ಲ, ಅವರ ಬಗ್ಗೆ ಪುಸ್ತಕಗಳಲ್ಲಿ ಓದಿ ತಿಳಿದುಕೊಂಡಿದ್ದೇನೆ, ಇವರನ್ನು ನಾನು ಶೇ.100ರಲ್ಲಿ ಕೇವಲ ಶೇ.1 ರಷ್ಟು ಮಾತ್ರ ತಿಳಿದುಕೊಂಡಿದ್ದೇನೆ ಎಂಬುವ ಭಾವನೆ ಮೂಡಿದೆ, ಏಕೆಂದರೆ ಕೆವಿಎಸ್‌ ಅವರ ಸಾಧನೆಗಳನ್ನು ನೋಡಿದರೆ ನಾವು ಅವರ ಹಾದಿಯಲ್ಲಿಯೇ ಸಾಗಬೇಕೆನ್ನುತ್ತದೆ. ಆರೇಳು ಕ್ಷೇತ್ರದಲ್ಲಿ ಕೆಲಸ ಮಾಡಿ ಸಾಧಿಸಿದ ಕೆವಿಎಸ್‌ ಅವರ ಹೆಸರಿನ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡುತ್ತಿರುವುದು ಸಂತಸ ತಂದಿದೆ ಎಂದರು.

ರಾಜ್ಯ ಮಟ್ಟದ ಕೆ.ಎಸ್.ಸಚ್ಚಿದಾನಂದ ರಂಗಭೂಮಿ ಪ್ರಶಸ್ತಿ ಅಜಯ್‌ ನೀನಾಸಂ ಮತ್ತು ಸಮಾಜ ಸೇವಾ ಪ್ರಶಸ್ತಿಯನ್ನು ವಿಕಸನ ಜೋಗುಳ ದತ್ತು ಸೇವಾ ಕೇಂದ್ರದ ಮಹೇಶ್‌ಚಂದ್ರಗುರು ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಟ್ರಸ್ಟ್‌ನ ಉಪಾಧ್ಯಕ್ಷ ಬಸವಯ್ಯ, ಕಾರ್ಯದರ್ಶಿ ಎಸ್‌.ಎಲ್‌.ಶಿವಪ್ರಸಾದ್‌, ನಿರ್ದೇಶಕ ರಾಮಲಿಂಗಯ್ಯ ಭಾಗವಹಿಸಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ