ಮಂಡ್ಯ ನಗರದ ಕಾಳಿಕಾಂಭ ಶ್ರಮಿಕ ನಗರದಲ್ಲಿ ಮನೆಗಳನ್ನು ಕಟ್ಟದೇ ವಿಳಂಬ ಧೋರಣೆ ತೋರುತ್ತಿರುವ ಸ್ಲಂ ಬೋರ್ಡ್, ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸರ್ಕಾರದ ನಡೆ ಖಂಡನೀಯವಾಗಿದ್ದು, ಇದರ ವಿರುದ್ದ ನ.24ರಿಂದ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಕರ್ನಾಟಕ ಜನಶಕ್ತಿ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಎಂ.ಸಿದ್ದರಾಜು ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದರಿ ಸ್ಥಳದಲ್ಲಿ ಸರ್ಕಾರದ ವತಿಯಿಂದ ಮನೆ ನಿರ್ಮಿಸಿಕೊಡುವಂತೆ ನ್ಯಾಯಾಲಯದಿಂದ ಎರಡು ಬಾರಿ ಆದೇಶ ನೀಡಿದರೂ, ಅದನ್ನು ಪಾಲಿಸದೇ ಅಕ್ರಮ ಭೂ ಕಬಳಿಕೆದಾರರೊಂದಿಗೆ ಅಧಿಕಾರದಲ್ಲಿರುವ ನಾಯಕರು ಹಾಗೂ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ದೂರಿದರು.
ಕಾಳಿಕಾಂಭ ಶ್ರಮಿಕ ನಗರದಲ್ಲಿ ಮೈಷುಗರ್, ಕಾಳಿಕಾಂಭ ದೇವಾಲಯ ಹಾಗೂ ಶ್ರಮಿಕರ ವಾಸಸ್ಥಳಗಳಿಗೆ ಸಂಬಂಧಿಸಿದಂತೆ ಜಾಗವಿದ್ದು, ಭೂಗಳ್ಳರು ಅಲ್ಲಿನ ಭೂಮಿ ಕಬಳಿಸಿ ವಾಣಿಜ್ಯ ಚಟುವಟಿಕೆ ನಡೆಸಲು ಮುಂದಾಗಿದ್ದಾರೆ, ಇದು ಶ್ರಮಿಕ ನಿವಾಸಿಗಳಿಗೆ ಮಾಡುವ ಅನ್ಯಾಯವಾಗಿದೆ ಎಂದು ಖಂಡಿಸಿದರು.
ಚುನಾವಣೆಯಗಳು ಬಂದಾಗ ಮಾತ್ರ ರಾಜಕಾರಣಿಗಳಿಗೆ ಮತಗಳಂತೆ ಕಾಣುತ್ತೇವೆ. ೨೦ ವರ್ಷಗಳಿಂದ ಶ್ರಮಿಕ ನಿವಾಸಿಗಳ ಕಷ್ಟ ರಾಜಕಾರಣಿಗಳಿಗೆ ಕಾಣುತ್ತಿಲ್ಲವೇಕೆ ? ಜಿಲ್ಲಾಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರು ಸೂಕ್ತ ಕ್ರಮ ಕೈಗೊಳ್ಳದೇ ಹೋದಲ್ಲಿ ನ.24ರಿಂದ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲಾಗುವುದು. ಮೂರು ದಿನಗಳಲ್ಲಿ ಯಾವುದೇ ಕ್ರಮ ಕೈಗೊಳ್ಳದಿದ್ದರೆ ನ.26ರಿಂದ ಅಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಎಚ್ಚರಿಕೆ ನೀಡಿದರು.
ಗೋಷ್ಠಿಯಲ್ಲಿ ಮಹಿಳಾ ಮುನ್ನಡೆ ಜಿಲ್ಲಾ ಕಾರ್ಯದರ್ಶಿ ಬಿ.ಎಸ್.ಶಿಲ್ಪ, ಮಂಡ್ಯ ಜಿಲ್ಲಾ ಶ್ರಮಿಕ ನಗರ ನಿವಾಸಿಗಳ ಒಕ್ಕೂಟದ ಶಿವಲಿಂಗಯ್ಯ ಇತರರಿದ್ದರು.




