ಕೈ ಕುಳಿ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಕಲ್ಲು ಕುಟಿಗ ಕೂಲಿ ಕಾರ್ಮಿಕರಿಗೆ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದು,ಅವರಿಂದ ರಕ್ಷಣೆ ನೀಡುವಂತೆ ಆಗ್ರಹಿಸಿ ಸಹಸ್ರಾರು ಕಲ್ಲುಕುಟಿಗರು ಬೃಹತ್ ಪ್ರತಿಭಟನೆ ನಡೆಸಿದರು.
ಮಂಡ್ಯದ ಜಿಲ್ಲಾಧಿಕಾರಿ ಕಚೇರಿ ಬಳಿ ಪಾಂಡವಪುರ ತಾಲ್ಲೂಕಿನ ಚಿನಕುರಳಿ ಹೋಬಳಿಯ ಹೊನಗಾನಹಳ್ಳಿ,ಗುಮ್ಮನಹಳ್ಳಿ, ಬನ್ನಂಗಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು ನಮಗೆ ಅಧಿಕಾರಿಗಳಿಂದ ರಕ್ಷಣೆ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದರು.

ನಮ್ಮ ಪೂರ್ವಜರು ಕನ್ನಂಬಾಡಿ ಅಣೆಕಟ್ಟು ಕಟ್ಟಲು ತಮಿಳುನಾಡಿನಿಂದ ಬಂದು ಕಡೆಗೆ ಇಲ್ಲೇ ನೆಲೆಸಿದ್ದಾರೆ.ಅದರಲ್ಲೂ ವಿಶೇಷವಾಗಿ ಕಾವೇರಿಪುರದಲ್ಲಿ ವಾಸವಾಗಿರುವ ಸಾವಿರಾರು ಕುಟಂಬಗಳು ಅಂದಿನ ತಮಿಳುನಾಡಿನಿಂದ ಬಂದು ಕನ್ನಂಬಾಡಿ ಕಟ್ಟೆ ನಿರ್ಮಿಸಿ,ಹಲವು ದಶಕಗಳಿಂದಲೂ ಇದೇ ಕೈ ಕುಳಿಯ ಕಲ್ಲು ಕೆಲಸ ಮಾಡಿಕೊಂಡು, ಜೀವನ ಸಾಗಿಸುತ್ತಿದ್ದೇವೆ ಎಂದು ಅಳಲು ತೋಡಿಕೊಂಡರು.
ಕಲ್ಲುಕುಟಿಗರಿಗೂ ಸರ್ಕಾರವು ಯಾವುದೇ ರೀತಿ ತೊಂದರೆ ಕೊಟ್ಟಿರುವುದಿಲ್ಲ.ಆದರೆ ಇತ್ತೀಚಿಗೆ ಬದಲಾವಣೆಯಾದ ಸರ್ಕಾರ ಮತ್ತು ಸರ್ಕಾರಿ ಅಧಿಕಾರಿಗಳು ಕಲ್ಲು ಕುಟಿಗರಿಗೆ ತೊಂದರೆ ಕೊಡುತ್ತಿದ್ದಾರೆ.
ಇಲ್ಲಿನ ಗ್ರಾಮಗಳ ಜನರು ಕೈಯಿಂದ ಕಲ್ಲು ಬಂಡೆ ಒಡೆದು,ಸೈಜುಕಲ್ಲು, ಚಪ್ಪಡಿ,ಕೈ ಜೆಲ್ಲಿ ಒಡೆದು ಜೀವನ ಸಾಗಿಸುತ್ತಿದ್ದಾರೆ. ಈ ಕೆಲಸಕ್ಕೆ ಬೇಕಾಗುವ ವಾಹನಗಳಾದ ಟಿಪ್ಪರ್, ಲಾರಿ, ಟ್ರ್ಯಾಕ್ಟರ್‌ಗಳನ್ನು ಸಾಗಾಣಿಕೆಗಾಗಿ ಬಳಸಲು ಬ್ಯಾಂಕ್ ಮತ್ತು ಖಾಸಗಿ ಹಣಕಾಸು ಸಂಸ್ಥೆಗಳಿಂದ ಪ್ರತಿಯೊಬ್ಬರು ಲಕ್ಷಾಂತರ ರೂ.ಗಳನ್ನು ಸಾಲವಾಗಿ ಪಡೆದಿರುತ್ತೇವೆ.ಆದರೆ ನಮ್ಮ ಸಂಕಷ್ಟ ಈಗ ಹೇಳ ತೀರದ್ದಾಗಿದೆ ಎಂದರು.
ಕಲ್ಲು ಕುಟಿಗ ಕೂಲಿಗಾರರ ಸಮಸ್ಯೆಗಳನ್ನು ಅರಿತು ಸರ್ಕಾರವು ಈ ಪ್ರಾಂತ್ಯದ ಕೂಲಿ-ಕಾರ್ಮಿಕರ ಅನುಕೂಲಕ್ಕಾಗಿ ಸ್ಥಳೀಯ ಕಲ್ಲುಕ್ವಾರೆಗಳನ್ನು ಹಿಂದಿನ ಸರ್ಕಾರದ ಆದೇಶದ ರೀತಿ ಪಂಚಾಯಿತಿ ವ್ಯಾಪ್ತಿಗೆ ವಹಿಸಿಕೊಟ್ಟು ಕೂಲಿಕಾರ್ಮಿಕರಿಗೆ ಅನುಕೂಲ ಮಾಡಿಕೊಡಬೇಕು. ಅಧಿಕಾರಿಗಳು ಕಲ್ಲು ಸಾಗಿಸುವ ವಾಹನಗಳನ್ನು ತಡೆದು ಅಡ್ಡಿಪಡಿಸುವುದನ್ನು ತಪ್ಪಿಸಿ,ನಮ್ಮ ಕಸುಬನ್ನು ನಡೆಸಿಕೊಂಡು ಹೋಗಲು ಅವಕಾಶ ಮಾಡಿಕೊಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯ ಮಾಡಿದರು.
ರಕ್ಷಣೆಗೆ ಸರ್ಕಾರ ಬದ್ಧ
ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ,ಸಚಿವ ನಾರಾಯಣ ಗೌಡ ಅವರು ಆಗಮಿಸಿ ಕಲ್ಲುಕುಟಿಗರ ಕೂಲಿಕಾರ್ಮಿಕರಿಂದ ಮನವಿ ಪತ್ರ ಸ್ವೀಕರಿಸಿದರು.
ಸಚಿವ ಕೆ.ಗೋಪಾಲಯ್ಯ ಮಾತನಾಡಿ, ನಮ್ಮ ಸರ್ಕಾರ ಕಲ್ಲುಕುಟಿಗ ಕಾರ್ಮಿಕರ ರಕ್ಷಣೆಗೆ ಬದ್ಧವಾಗಿದೆ. ಕಲ್ಲುಕುಟಿಗ ಕಾರ್ಮಿಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವುದರಿಂದ ತಿಳಿದಿದ್ದು,ಎಲ್ಲಾ ಸಂಕಷ್ಟಗಳಿಗೆ ಸಾವು ಪರಿಹಾರ ಆಗಲಾರದು. ಸತ್ತಿರುವ ವ್ಯಕ್ತಿಯ ಬಗ್ಗೆ ತಹಶೀಲ್ದಾರರಿಂದ ವರದಿ ಪಡೆದು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಸಹಾಯಧನ ಕೊಡಿಸುವುದಾಗಿ ತಿಳಿಸಿದರು.
ಆಗಸ್ಟ್ ನಾಲ್ಕರಂದು ಬೆಂಗಳೂರಿನಲ್ಲಿ ಗಣಿಗಾರಿಕೆ ಸಂಬಂಧಪಟ್ಟ ಸಭೆ ನಡೆಯಲಿದ್ದು, ಅಲ್ಲಿ ನಿಮಗೆ ಅನುಕೂಲವಾಗುವ ಹಾಗೆ ಕ್ರಮ ತೆಗೆದುಕೊಳ್ಳಲು ಪ್ರಯತ್ನಿಸುವುದಾಗಿ ತಿಳಿಸಿದರು.
ತಾ.ಪಂ.ಮಾಜಿ ಸದಸ್ಯ ಗೋವಿಂದಯ್ಯ, ಮಂಜು,ಕಣಿವೆ ನಾಗೇಶ್,ಬೊಮ್ಮರಾಜು ಸೇರಿದಂತೆ ಇತರ ಕಾರ್ಮಿಕರು ಹಾಜರಿದ್ದರು




