ಅಂಗಡಿ-ಮುಂಗಟ್ಟುಗಳು ಕನ್ನಡದಲ್ಲಿ ನಾಮಫಲಕ ಹಾಕದ ಹಿನ್ನೆಲೆಯಲ್ಲಿ ನಗರಸಭೆ ಆಯುಕ್ತ ಮಂಜುನಾಥ್ ಅವರು ಅಂಗಡಿ ಮಾಲೀಕರಿಗೆ ದಂಡ ವಿಧಿಸಿ ಇನ್ನು 15 ದಿನಗಳಲ್ಲಿ ಕನ್ನಡ ನಾಮಫಲಕ ಹಾಕದಿದ್ದರೆ ವ್ಯಾಪಾರ ಪರವಾನಗಿ ರದ್ದು ಮಾಡುವುದಾಗಿ ಎಚ್ಚರಿಕೆ ನೀಡಿದರು.
ಮಂಡ್ಯ ನಗರದ ವಿವಿ ರಸ್ತೆಯಲ್ಲಿ ಕನ್ನಡ ಸೇನೆ ಕಾರ್ಯಕರ್ತರ ಜೊತೆ ಬಂದ ಆಯುಕ್ತ ಮಂಜುನಾಥ್ ಅವರು ಕನ್ನಡ ನಾಮಫಲಕ ಅಳವಡಿಸದ ವರ್ತಕರಿಗೆ ಸ್ಥಳದಲ್ಲಿಯೇ ದಂಡ ವಿಧಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು,ಕನ್ನಡ ನಾಮಫಲಕ ಅಳವಡಿಸದ ಹಿನ್ನೆಲೆಯಲ್ಲಿ ಸಾಂಕೇತಿಕವಾಗಿ 6-7
ಅಂಗಡಿಗಳಿಗೆ ದಂಡ ಹಾಕಿದ್ದೇವೆ.ಇನ್ನು 15 ದಿನಗಳಲ್ಲಿ ಸರ್ಕಾರದ ಆದೇಶದಂತೆ ಶೇ.60 ರಷ್ಟು ಕನ್ನಡ ಭಾಷೆಯಲ್ಲಿ ನಾಮಫಲಕ ಅಳವಡಿಸ ಬೇಕು.ಇಲ್ಲದಿದ್ದರೆ ವ್ಯಾಪಾರ ಪರವಾನಗಿ ರದ್ದು ಮಾಡುವುದಾಗಿ ಎಚ್ಚರಿಕೆ ನೀಡಿದರು.
ಕನ್ನಡ ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ್ ಮಾತನಾಡಿ,ಕನ್ನಡ ನಾಮಫಲಕ ಹಾಕುವಂತೆ ಸರ್ಕಾರ ಆದೇಶ ಮಾಡಿದರೂ ವರ್ತಕರು ಕನ್ನಡ ನಾಮಫಲಕ ಹಾಕದೆ ಇರುವ ಬಗ್ಗೆ ಕನ್ನಡ ಸೇನೆ ವತಿಯಿಂದ ಮಂಡ್ಯ ನಗರಸಭೆ ಆಯುಕ್ತರ ಗಮನಕ್ಕೆ ತಂದ ತಕ್ಷಣವೇ ನಗರ ಸಭೆಯ ಆಯುಕ್ತರು ನಮ್ಮ ಜೊತೆ ಬಂದು ಕನ್ನಡ ನಾಮಫಲಕ ಹಾಕದೆ ಇರುವ ವರ್ತಕರಿಗೆ ದಂಡ ವಿಧಿಸಿದ್ದಾರೆ. ಬಹುತೇಕ ವರ್ತಕರು ಇನ್ನೂ ಕನ್ನಡ ಭಾಷೆಯಲ್ಲಿ ನಾಮಫಲಕ ಹಾಕದಿರುವುದು ಅವರ ಕನ್ನಡ ವಿರೋಧಿತನ ತೋರಿಸುತ್ತದೆ. ನಗರಸಭೆ ಆಯುಕ್ತರು ಎಚ್ಚರಿಕೆ ನೀಡಿದಂತೆ ಇನ್ನೊಂದು ವಾರದೊಳಗೆ ಕನ್ನಡ ನಾಮಫಲಕ ಹಾಕದಿದ್ದರೆ ಲೈಸೆನ್ಸ್ ರದ್ದು ಮಾಡಲೇಬೇಕು ಎಂದು ಒತ್ತಾಯಿಸಿ ಕನ್ನಡ ಸೇನೆ ತೀವ್ರ ಹೋರಾಟ ರೂಪಿಸಲಿದೆ ಎಂದರು.




