Friday, October 18, 2024

ಪ್ರಾಯೋಗಿಕ ಆವೃತ್ತಿ

ಸಾಹಿತ್ಯ ಸಮ್ಮೇಳನದ ಘನತೆ ಹಾಳು ಮಾಡುವ ನಿರ್ಧಾರ ಬೇಡ

ಸೂನಗಹಳ್ಳಿ ರಾಜು
ಬರಹಗಾರರು

ಸಮಸ್ತ ಕುಲಕೋಟಿ ಕನ್ನಡಾಭಿಮಾನಿಗಳಿಗೆ ಸಾಷ್ಟಾಂಗ ನಮಸ್ಕಾರಗಳು… ಕನ್ನಡಾಭಿಮಾನಿಗಳಲ್ಲಿ ನನ್ನದೊಂದು ವಿನಮ್ರ ವಿನಂತಿ….

ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆಗೆ ಸೂಕ್ತ ಹಾಗೂ ಅರ್ಹ ಕನ್ನಡ ಸಾಹಿತಿಗಳೇ ಆಯ್ಕೆಯಾಗಬೇಕು ಹೊರತು ಸಾಹಿತಿಯೇತರ ವ್ಯಕ್ತಿ ಆಗಬಾರದು. ಸಾಹಿತ್ಯದ ಕೆಲಸವನ್ನ ವ್ರತವಾಗಿ ತೆಗೆದುಕೊಂಡು ತನು ಮನವನ್ನ ನಾಡುನುಡಿಗೆ ಅರ್ಪಿಸಿದ ಅನೇಕ ಸಾಹಿತಿಗಳು ನಮ್ಮ‌ ನಡುವೆ ಈಗಲೂ ಇದ್ದಾರೆ.

ಅಂತಹವರು ಯಾರು ಇಲ್ಲ ಅಂದ್ರೆ ಸಾಹಿತಿಯೇತರ ಆಯ್ಕೆಗಳ ಬಗ್ಗೆ ಯೋಚಿಸಲಿ ಅದು ಹಿರಿಯ ಚಿಂತಕರ ಸಲಹೆ ಮೇರೆಗೆ, ಅದನ್ನ ಬಿಟ್ಟು ಸಮ್ಮೇಳನದ ಘನತೆಯನ್ನ ಹಾಳು ಮಾಡುವ ನಿರ್ಧಾರಗಳನ್ನ ತೆಗೆದುಕೊಳ್ಳಬಾರದು. ಇದು ಎಂದಿಗೂ‌ ಹೊಸ ಆಲೋಚನೆ ಅಥವಾ ಹೊಸ ಮಾರ್ಗವಲ್ಲ, ಬದಲಿಗೆ ಕನ್ನಡ ಕನ್ನಡಿಗ ಕರ್ನಾಟಕ ಅನ್ನುವ ಒಳ್ಳೆಯ ಆಶಯಗಳನ್ನ ಇಟ್ಟು ಸಾಹಿತ್ಯ ರಚಿಸಿದ ಸಾಹಿತಿಗಳಿಗೆ ಹಾಗೂ ಬೇರೆ ಬೇರೆ ವಸ್ತು ವಿಷಯಗಳನ್ನ ಕುರಿತು ಸಾಹಿತ್ಯದ ಮೂಲಕ ದರ್ಶನ ಮಾಡಿಸಿದ ಸಾಹಿತಿಗಳನ್ನ ಬದಿಗೆ ಸರಿಸುವ ತಂತ್ರ- ಕುತಂತ್ರದ ಕೆಲಸವಾಗುತ್ತದೆ ಅಷ್ಟೇ.

ಸಾಹಿತಿಗಳನ್ನ ಬಿಟ್ಟು ಅನ್ಯ ವ್ಯಕ್ತಿಗಳನ್ನ ಆಯ್ಕೆ ಮಾಡಲೇಬಾರದು, ಒಂದು ವೇಳೆ ಮಾಡಿ‍ದರೆ ತಪ್ಪಾಗುತ್ತದೆ ಮುಂದೆ ಇದು ಅಪರಾಧವೂ ಸಹ ಆಗುತ್ತದೆ. ಪ್ರಾಮಾಣಿಕವಾಗಿ ನಾಡು-ನುಡಿ ಸೇವೆ ಮಾಡುತ್ತಿರುವವರಿಗೆ ಅನ್ಯಾಯ ಮಾಡಿದಂತಾಗುತ್ತದೆ. ಈ ತಪ್ಪು ಕೆಲಸಕ್ಕೆ‌ ನಾವೂ ಮೂಕ ಸಾಕ್ಷಿಯಾಗಬಾರದು.

ಸಾಹಿತಿಯೇತರ ವ್ಯಕ್ತಿಗಳನ್ನ ಆಯ್ಕೆ ಮಾಡಿದರೆ ಮುಂದೆ ಇದೆ ಪರಂಪರೆ ಮುಂದುವರೆದು ಸಾಹಿತ್ಯ ಕ್ಷೇತ್ರ ರಾಜಕೀಯ ಕ್ಷೇತ್ರವಾಗಿ ಮಾರ್ಪಾಡಾಗುತ್ತದೆ. ಈಗಲೇ ಕನ್ನಡ ಸಾಹಿತ್ಯ ಪರಿಷತ್ತು ಚುನಾವಣೆಯಲ್ಲಿ ವಿಪರೀತ ಹಾಗೂ ವಾಕರಿಕೆ ಅನ್ನುವಷ್ಟು ರಾಜಕಾರಣ ನಡೆಯುತ್ತಿದೆ. ಮತಗಳಿಗಾಗಿ ಹಣ ಹಾಗೂ ಹೆಂಡವನ್ನ ಹಂಚಿತ್ತಿದ್ದಾರೆ. ಭಾಗಶಃ ರಾಜಕಾರಣ ಈಗಲೂ ನಡೆಯುತ್ತಿದೆ ಚುನಾವಣೆ ಸಂದರ್ಭದಲ್ಲಿ ಸಾಹಿತ್ಯ ಕ್ಷೇತ್ರವಾ ಅಥವಾ ರಾಜಕೀಯ ಕ್ಷೇತ್ರವಾ ಅನ್ನುವಂತ ವಾತಾವರಣ ಇರುತ್ತದೆ. ಇನ್ನೂ ಸಾಹಿತಿ ಅಲ್ಲದ ವ್ಯಕ್ತಿಗಳು ಬಂದರೆ ಸಾಹಿತ್ಯಯೇತರ ಚಟುವಟಿಕೆಗಳಿಗೆ ದಾರಿ ಮಾಡಿಕೊಟ್ಟಂತಾಗುತ್ತದೆ. ಅಲ್ಲಿಗೆ ಸಮ್ಮೇಳನದ ಆಶಯವನ್ನ ಗಾಳಿಗೆ ತೂರಿದಂತೆ ಆಗುತ್ತದೆ. ಇದು ಸರಿಯಲ್ಲ ಹಾಗೂ ಸೂಕ್ತವೂ ಅಲ್ಲ,ಬಹುತೇಕ ಸಾಹಿತಿ ಅಲ್ಲದ ವ್ಯಕ್ತಿಗೆ ಸಮಷ್ಟಿ ಪ್ರಜ್ಞೆ, ಜೀವಪರ ನಿಲುವು, ನಾಡು-ನುಡಿ ಬಗ್ಗೆ ಅಭಿಮಾನ ಇರುವುದಕ್ಕೆ ಸಾಧ್ಯವಿಲ್ಲ ಮಿಗಿಲು ವ್ಯಾಪರಾಸಹಿತ ನಡವಳಿಗಳೆ ಜಾಸ್ತಿ.

ಇನ್ನೂ ಅವರ ಭಾಷಣಗಳನ್ನ ಸಹ ಕೇಳಲು ಆಗದು, ಒಂದಿಲ್ಲೊಂದು ಎಡವಟ್ಟು ಮಾಡುತ್ತಾರೆ ಅಥವಾ ಮಾಡಿರುತ್ತಾರೆ. ಅಧ್ಯಕ್ಷಗಾದಿಗೆ ನೈತಿಕ ಮೌಲ್ಯ ಸಹ ತೆಗೆದುಕೊಂಡು ಉತ್ತಮ ಸಾಹಿತ್ಯ ರಚನೆಯ ಜೊತೆಯಲ್ಲಿ ನಾಡು-ನುಡಿಯ ಸೇವೆ ಮಾಡಿರುವ ಸಾಹಿತ್ಯದ ಕ್ಷೇತ್ರದಲ್ಲಿ ಕುಸುರಿ ಕಸುವು ಕಸುಬುದಾರಿಕೆ ಮಾಡಿರುವ ವ್ಯಕ್ತಿಯನ್ನ ಮಾತ್ರವೇ ಆಯ್ಕೆ ಮಾಡುವುದು ಅತ್ಯಂತ ಸೂಕ್ತ ವಿಧಾನ ಹಾಗೂ ಮೌಲ್ಯ ನಿರ್ಣಯ ಆಗುತ್ತದೆ.

ಅರ್ಹ ಹಾಗೂ ಸೂಕ್ತ ಸಾಹಿತಿಯೇ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗುವುದು ಉತ್ತಮ ವಿಧಾನವಾದ್ದರಿಂದ ಇದಕ್ಕಾಗಿ ನಿಮ್ಮ ಗಟ್ಟಿ ಧ್ವನಿ ಇರಲಿ, ಹಾಗೇ ನಿಮಗೆ ತಿಳಿದ ಮಾಧ್ಯಮಗಳಲ್ಲಿ ನಿಮ್ಮ ಅಭಿಪ್ರಾಯಗಳನ್ನ ದಯವಿಟ್ಟು ಹಂಚಿಕೊಳ್ಳಿ ಅನ್ನುವ ವಿನಂತಿ ನಮ್ಮದು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!