ಪಾಂಡವಪುರ ತಾಲೂಕಿನ ಚಿನಕುರಳಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ನೂತನ ಕಟ್ಟಡದ ಕಾಮಗಾರಿ ಕಳಪೆ ಹಿನ್ನೆಲೆಯಲ್ಲಿ ಶಾಲಾ ಕಟ್ಟಡ ಶಿಥಿಲಾವಸ್ಥೆ ತಲುಪಿದೆ.
ಚಿನಕುರಳಿ ಸರ್ಕಾರಿ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜನ್ನು ಸರ್ಕಾರ ಕರ್ನಾಟಕ ಪಬ್ಲಿಕ್ ಶಾಲೆಯಾಗಿ ಪರಿವರ್ತಿಸಿದ ಬಳಿಕ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳವಾಗಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆಕ್ಕನು ಗುಣವಾಗಿ ತರಗತಿ ಕೊಠಡಿಗಳು ಹಾಗೂ ಪ್ರಯೋಗ ಶಾಲಾ ಕೊಠಡಿಗಳ ಅಗತ್ಯತೆ ಇತ್ತು. ಹೀಗಾಗಿ ರೂರಲ್ ಡೆವಲಪ್ಮೆಂಟ್ ಪಂಚಾಯತ್ ರಾಜ್ ಇಲಾಖೆ (ಆರ್ ಡಿಪಿಆರ್) ವತಿಯಿಂದ ರಾಜ್ಯ ಬಂಡವಾಳ ವೆಚ್ಚ ಯೊಜನೆಯಡಿ 1ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿರುವ ತರಗತಿ ಹಾಗೂ ಪ್ರಯೋಗ ಶಾಲಾ ಕೊಠಡಿಗಳ ಕಾಮಗಾರಿ ಗುಣಮಟ್ಟದಿಂದ ಕೂಡಿಲ್ಲ.
ಪಾಂಡವಪುರ ತಾಲೂಕಿನ ಚಿನಕುರಳಿಯಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯ ತರಗತಿ ಹಾಗೂ ಪ್ರಯೋಗ ಶಾಲಾ ಕೊಠಡಿಗಳ ಕಾಮಗಾರಿ ಕಳಪೆಯಿಂದ ಕೂಡಿದೆ. ಕಳಪೆಯಿಂದಾಗಿ ಆರ್ ಸಿಸಿ ಸೋರಿಕೆಯಾಗುತ್ತಿದೆ. ಹೀಗಾಗಿ ಸಂಬಂಧಪಟ್ಟ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ ಸೂಕ್ತ ಕ್ರಮ ಕೈಗೊಳ್ಳಲು ಶಿಕ್ಷಣ ಸಚಿವ ಮಧು ಬಂಗಾರಪ್ಪರನ್ನ ಒತ್ತಾಯಿಸಲಾಗುವುದು.’
-ಸಿ.ಆರ್.ರಮೇಶ್.
ಅಧ್ಯಕ್ಷರು, ಕಿಸಾನ್ ಕಾಂಗ್ರೆಸ್ ಪಾಂಡವಪುರ
ಕರ್ನಾಟಕ ಪಬ್ಲಿಕ್ ಶಾಲೆಯ ನೂತನ ಕೊಠಡಿಗಳು ಸಂಪೂರ್ಣ ಕಳಪೆಯಿಂದ ಕೂಡಿವೆ. ಮಳೆ ಬಂದ ಸಂದರ್ಭದಲ್ಲಿ ಇಡೀ ಕಟ್ಟಡವೇ ಸೋರುತ್ತದೆ. ನೂತನ ಕೊಠಡಿಗಳ ಆರ್ ಸಿಸಿ ಗೆ (ಮೇಲ್ಚಾವಣಿಯಲ್ಲಿ) ಚುರುಕಿ ಕೂಡ ಹಾಕಿಲ್ಲ. ಕೊಠಡಿಗಳು ಬಿರುಕು ಬಿಡುತ್ತಿವೆ. ಅಲ್ಲಲ್ಲಿ ತೇಪೆ ಹಾಕಲಾಗಿದೆ. ಕೊಠಡಿಗಳು ಶಿಥಿಲಾವಸ್ಥೆ ತಲುಪಿರುವ ಕಾರಣದಿಂದಾಗಿ ಅಲ್ಲಲ್ಲಿ ಸೋರುತ್ತಿದೆ. ಮಕ್ಕಳ ಪಾಠ-ಪ್ರವಚನಕ್ಕೆ ಬಹಳ ತೊಂದರೆ ಉಂಟಾಗಿದೆ.
ನೂತನ ಕೊಠಡಿಗಳನ್ನು 2020ರ ಜನವರಿ 23ರಲ್ಲಿ ಸಂಬಂಧಿಸಿದ ಶಾಲೆಗೆ ಹಸ್ತಾಂತರ ಮಾಡಲಾಗಿದೆ. ಆದರೆ ಕೇವಲ ಮೂರೇ ಮೂರು ವರ್ಷಗಳಲ್ಲಿ ಈ ನೂತನ ಕಟ್ಟಡ ದುಸ್ಥಿತಿಗೆ ಬಂದಿದೆ. ಮಳೆ ಬಂದಾಗ ಕೊಠಡಿಗಳಲ್ಲಿ ನೀರು ಸೋರಿಕೆಯಾಗುವುದರಿಂದ ವಿದ್ಯಾರ್ಥಿಗಳು ಜೀವಭಯದಲ್ಲೇ ಪಾಠ ಕೇಳುವಂತಾಗಿದೆ.
‘ಚಿನಕುರಳಿ ಗ್ರಾಮದಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆ ಕಟ್ಟಡದ ಕಳಪೆ ಕಾಮಗಾರಿ ಕುರಿತು ಅಲ್ಲಿನ ಪ್ರಾಂಶುಪಾಲರು ಸಮಗ್ರ ವರದಿ ಸಲ್ಲಿಸಿದರೆ ಸೂಕ್ತ ಕ್ರಮಕ್ಕೆ ಜಿ.ಪಂ ಸಿಇಒ ಅವರಿಗೆ ಪತ್ರ ಬರೆಯಲಾಗುವುದು.’
-ಉಮೇಶ್, ಉಪ ನಿರ್ದೇಶಕರು
ಪದವಿ ಪೂರ್ವ ಶಿಕ್ಷಣ ಇಲಾಖೆ, ಮಂಡ್ಯ.
ಇದು ಪಾಂಡವಪುರ ತಾಲೂಕಿನ ಏಕೈಕ ಕರ್ನಾಟಕ ಪಬ್ಲಿಕ್ ಶಾಲೆಯಾಗಿದ್ದು, ಈ ಶಾಲೆ ಇತರೆ ಶಾಲೆಗಳಿಗಿಂತಲೂ ಮಾದರಿಯಾಗಿರಬೇಕು. ಆದರೆ ನೂತನ ಕೊಠಡಿಗಳ ಕಳಪೆ ಕಾಮಗಾರಿಯಿಂದಾಗಿ ಶಾಲಾ ಕಟ್ಟಡ ಯಾವಾಗ ಕಳಚಿ ಬೀಳುತ್ತದೆ ಎಂಬ ಭಯ ವಿದ್ಯಾರ್ಥಿಗಳನ್ನು ಆವರಿಸಿದೆ. ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ 8, 9, 10, 11, 12ನೇ ತರಗತಿವರೆಗೆ ಇದ್ದು, ಗುಣಮಟ್ಟದ ಶಿಕ್ಷಣ ದೊರಕುವ ಹಿನ್ನೆಲೆಯಲ್ಲಿ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳವಾಗಿದೆ. ಆದರೆ ಇಂಜನಿಯರ್ ಗಳ ನಿರ್ಲಕ್ಷ್ಯತೆಯಿಂದಾಗಿ ಶಾಲೆಯ ಕೊಠಡಿಗಳ ಕಳಪೆ ಕಾಮಗಾರಿಯಿಂದಾಗಿ ಶಾಲಾಭಿವೃದ್ಧಿಗೆ ತೊಡಕಾಗಿದೆ.




