Sunday, November 22, 2026

ಪ್ರಾಯೋಗಿಕ ಆವೃತ್ತಿ

ಕಸಾಪ ಅಧ್ಯಕ್ಷ ಜೋಶಿ ನಡೆಗೆ ಕಿಡಿ | ಮೇ 17ಕ್ಕೆ ಕಸಾಪ ಆಜೀವ ಸದಸ್ಯರ ಸಮಾವೇಶ

ಕನ್ನಡ ಸಾಹಿತ್ಯ ಪರಿಷತ್‌ ರಾಜ್ಯಾಧ್ಯಕ್ಷ ಮಹೇಶ್ ಜೋಶಿ ಸರ್ವಾಧಿಕಾರಿ ನಡೆಯನ್ನು ಪ್ರಶ್ನಿಸಿದವರ ವಿರುದ್ದ ನೋಟಿಸ್, ಮೊಕದ್ದಮೆ ಕಿರುಕುಳ ನೀಡುತ್ತಿದ್ದು, ಈ ಸಂಬಂಧ ಮೇ 17ರಂದು ಕನ್ನಡಪರ, ಪ್ರಗತಿಪರ ಹೋರಾಟಗಾರರು, ಸಾಹಿತಿಗಳು, ವಿಚಾರವಂತರು ಹಾಗೂ ಕಸಾಪ ಆಜೀವ ಸದಸ್ಯರ ಸಮಾವೇಶವನ್ನು ಮಂಡ್ಯದಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ಕರ್ನಾಟಕ ಸಂಘದ ಅಧ್ಯಕ್ಷ, ಸಾಹಿತಿ ಪ್ರೊ.ಜಯಪ್ರಕಾಶ್‌ಗೌಡ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದವರು, ಮಹೇಶ್ ಜೋಶಿ ತನಗೆ ಅನುಕೂಲಕರವಾದ ರೀತಿಯಲ್ಲಿ ಬೈಲಾ ತಿದ್ದುಪಡಿ ಮಾಡಿಸಿಕೊಳ್ಳುತ್ತಿದ್ದು, ಈ ಸಂಬಂಧ ಏಪ್ರಿಲ್ ೧೭ರಂದು ಸಮಾನ ಮನಸ್ಕರ ಒಕ್ಕೂಟದ ವತಿಯಿಂದ ನಡೆಸಿ ಆತನನ್ನು ಅಮಾನತಿನಲ್ಲಿಟ್ಟು ಕಸಾಪಗೆ ಕೂಡಲೇ ಆಡಳಿತಾಧಿಕಾರಿ ನೇಮಕ ಮಾಡುವಂತೆ ಏಪ್ರಿಲ್ ೨೭ರಂದು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದರು.

ಒಕ್ಕೂಟದ ತೀರ್ಮಾನದಂತೆ ರಾಜ್ಯದ ನಾಲ್ಕು ವಿಭಾಗಗಳಲ್ಲಿ ಸಮಾವೇಶ ನಡೆಸಲು ತೀರ್ಮಾನಿಸಲಾಗಿದ್ದು, ಮಂಡ್ಯ ಜಿಲ್ಲೆಯಲ್ಲಿ ಪ್ರಥಮ ಸಭೆಯನ್ನು ಮೇ ೧೭ಕ್ಕೆ ಹಮ್ಮಿಕೊಳ್ಳಲಾಗಿದೆ. ನಾಡಿನ ಹಿರಿಯ ಸಾಹಿತಿಗಳು, ಚಿಂತಕರು, ಹೋರಾಟಗಾರರು ಭಾಗವಹಿಸಲಿದ್ದು, ಮುಖ್ಯಮಂತ್ರಿ ಚಂದ್ರು, ಡಾ.ಮುದ್ದುಕೃಷ್ಣ, ಹಂಪಾ ನಾಗರಾಜಯ್ಯ ಸೇರಿದಂತೆ ಹಲವು ಹಿರಿಯ ಸಾಹಿತಿಗಳು, ಕನ್ನಡಪರ, ಪ್ರಗತಿಪರ ಹೋರಾಟಗಾರರು, ವಿಚಾರವಂತರು ಪಾಲ್ಗೊಳ್ಳುವರು ಎಂದರು.

ಸಂಪುಟ ದರ್ಜೆಯ ಸ್ಥಾನಮಾನ ಹಿಂಪಡೆಯಲು ಒತ್ತಾಯ

ಸಮ್ಮೇಳನದ ಮೂಲಕ ಮಹೇಶ್ ಜೋಶಿ ಅಶಿಸ್ತು, ಹಣ ದುರುಪಯೋಗ, ಸವಾಧಿಕಾರ ಧೋರಣೆಯ ಅಧ್ಯಕ್ಷಗಿರಿ ಅಮಾನತ್ತಿನಲ್ಲಿಡುವುದು, ಸರ್ಕಾರದ ಸಂಪುಟ ದರ್ಜೆಯ ಸ್ಥಾನಮಾನ ಹಿಂಪಡೆಯುವುದು, ೨೦೨೨, ೨೩ರಲ್ಲಿನ ಬೈಲಾ ತಿದ್ದು ಪಡಿ ಹಿಂಪಡೆಯುವುದು, ಅಜೀವ ಸದಸ್ಯರ ಸದಸ್ಯತ್ವವನ್ನು ಅಮಾನತಿನಲ್ಲಿಟ್ಟಿರುವುದು, ಮತ್ತೇ ತಿದ್ದುಪಡಿ ತರುವ ತೀರ್ಮಾನ ಹಿಂಪಡೆಯುವುದರ ಸಂಬಂಧ ಸಮಾನ ಮನಸ್ಕರ ಒಕ್ಕೂಟದ ಸಭೆಯು ತೀರ್ಮಾನಿಸಿದೆ ಎಂದು ಹೇಳಿದರು.

ಕಸಾಪ ಅಧ್ಯಕ್ಷ ಸರ್ಕಾರಕ್ಕಿಂತಲೂ ದೊಡ್ಡವನಲ್ಲ, ತಾನೇ ಸರ್ಕಾರಕ್ಕಿಂತ ದೊಡ್ಡವನು ಎಂಬ ಅಹಂನಿಂದ ವರ್ತಿಸುತ್ತಿದ್ದು, ಸಮ್ಮೇಳನದ ಖರ್ಚಿನ ಲೆಕ್ಕ ನೀಡುತ್ತಿಲ್ಲ, ಜಿಲ್ಲಾಧಿಕಾರಿಗಳಿಗೂ ಹೆದರದೇ ಸರ್ವಾಧಿಕಾರಿತನ ತೋರುತ್ತಿದ್ದಾನೆ. ಸಾಹಿತ್ಯ ಸಮ್ಮೇಳನಗಳಿಗೆ ಕೋಟಿ ಕೋಟಿ ಹಣ ಬಿಡುಗಡೆ ಮಾಡಿಸಿಕೊಳ್ಳುವ ಬದಲು ಜನರಿಂದ ದೇಣಿಗೆ ಸಂಗ್ರಹಿಸಲಿ, ಸರ್ಕಾರವೂ ಇತಿ ಮಿತಿಯಲ್ಲಿ ಹಣ ನೀಡಲಿ ಎಂದು ಸಲಹೆ ನೀಡಿದರು.

ಸಾಹಿತಿಗಳಲ್ಲಿ ಭಯದ ವಾತಾವರಣ ಸೃಷ್ಠಿಸಿ, ಬೈಲಾ ತಿದ್ದುಪಡಿ ಮಾಡುವ ಹುನ್ನಾರು ಹೊಂದಿರುವ ಈತ ತೊಲಗಿ ಕನ್ನಡ ಸಾಹಿತ್ಯ ಪರಿಷತ್ತು ಉಳಿಯಲಿ ಎಂದು ಆಶಿಸಿದರು.

ರೈತ ಹೋರಾಟಗಾರ್ತಿ ಸುನಂದ ಜಯರಾಮ್ ಮಾತನಾಡಿ, ಕಸಾಪ ಬೈಲ ತಿದ್ದುಪಡಿ ರದ್ದು ಮಾಡಲು ಸರ್ಕಾರ ಮಧ್ಯಸ್ಥಿಕೆ ವಹಿಸಿ, ೮೭ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಲೆಕ್ಕ ನೀಡಲು ತಾಕೀತು ಮಾಡಬೇಕು ಎಂದು ಆಗ್ರಹಿಸಿದ ಅವರು, ಕಸಾಪ ಇಂದಿಗೂ ಚೆನ್ನಾಗಿದೆ. ಕನ್ನಡಿಗರದ್ದು, ಸಾಹಿತಿಗಳದ್ದು, ಜೋಶಿಯದ್ದಲ್ಲ. ಅದನ್ನು ಉಳಿಸಿಕೊಳ್ಳುವ ಕೆಲಸ ನಮ್ಮದಾಗಬೇಕಿದೆ ಎಂದು ಕರೆ ನೀಡಿದರು.

ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಡಿ.ಪಿ.ಸ್ವಾಮಿ ಮಾತನಾಡಿ, ಜೋಶಿ ತನ್ನ ಅಧಿಕಾರಾವಧಿಯ ೪ ವರ್ಷಗಳಲ್ಲಿ ೩ ಬಾರಿ ಬೈಲ ತಿದ್ದುಪಡಿ ಮಾಡಿದ್ದಾನೆ, ತನ್ನ ವಿರುದ್ಧ ೨೫ ಲಕ್ಷ ರೂ ದಂಡ ಕಟ್ಟುವ ಅಪರಾಧವಿದ್ದು, ಇದರ ಹಿನ್ನಲೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಕಸಾಪ ಜಿಲ್ಲಾ ಸಂಚಾಲಕಿ ಡಾ.ಮೀರಾಶಿವಲಿಂಗಯ್ಯ ಮಾತನಾಡಿ, ಮಹೇಶ್ ಜೋಶಿ ವಿರುದ್ಧ ಮಾತನಾಡಿದರೆ ಪ್ರಕರಣ ದಾಖಲು ಮಾಡಿ, ಅವರನ್ನು ನ್ಯಾಯಾಲಯಕ್ಕೆ ಅಲೆದಾಡುವಂತೆ ಮಾಡುತ್ತಾ, ಸಾಹಿತಿಗಳನ್ನು ಭಯದಲ್ಲಿ ಇಡುವ ಕೆಲಸ ಮಾಡಲಾಗುತ್ತಿದೆ. ಮೇ.೧೭ರ ಸಮ್ಮೇಳನಕ್ಕೂ ಮುನ್ನ ಮೇ.೦೪ರಂದು ಜಿಲ್ಲೆಯ ಹಿರಿಯ ಸಾಹಿತಿಗಳು ಕನ್ನಡಪರ, ಪ್ರಗತಿಪರ, ರೈತಪರ ಹೋರಾಟಗಾರರು, ಮುಖ್ಯಸ್ಥರು, ಮತ್ತು ಸದಸ್ಯರ ಸಭೆಯನ್ನು ಕರೆಯಲಾಗಿದ್ದು, ಎಲ್ಲರೂ ಸಭೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.

ಗೋಷ್ಠಿಯಲ್ಲಿ ಸುನಂದ ಜಯರಾಂ, ಧರಣೀಂದ್ರಯ್ಯ, ಕಾರಸವಾಡಿ ಮಹದೇವು, ಎಂ.ವಿ.ಕೃಷ್ಣ ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ