ಮಂಡ್ಯ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗುವುದು ಹೆಮ್ಮೆಯ ವಿಚಾರ ಎಂದು ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಜಿ.ಧನಂಜಯ ದರಸಗುಪ್ಪೆ ಅಭಿಪ್ರಾಯಪಟ್ಟರು.
ಮಂಡ್ಯ ನಾಲ್ವಡಿ ಲಯನ್ಸ್ ಕ್ಲಬ್ಬಿನ ವತಿಯಿಂದ, ಮಂಡ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ನೇಮಕಗೊಂಡ ಉಪನ್ಯಾಸಕ ಚಂದ್ರುಲಿಂಗು ಅವರನ್ನು,ಮಂಡ್ಯದ ವಿದ್ಯಾನಗರದಲ್ಲಿರುವ “ಕರುನಾಡು ಕೇಬಲ್ ಲಿಂಕ್” ಕಚೇರಿ ಆವರಣದಲ್ಲಿ ಕ್ಲಬ್ಬಿನ ವತಿಯಿಂದ ಅಭಿನಂದಿಸಿ ಅವರು ಮಾತನಾಡಿದರು.
1915ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಂದ ಸ್ಥಾಪಿಸಲ್ಪಟ್ಟ ಕನ್ನಡ ಸಾಹಿತ್ಯ ಪರಿಷತ್ತಿಗೆ ಒಂದು ಶತಮಾನದ ಇತಿಹಾಸ ಇದೆ. ರಾಜ್ಯದಾದ್ಯಂತ ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ಹೆಮ್ಮೆಯ ಏಕೈಕ ಕನ್ನಡದ ಪ್ರಾತಿನಿಧಿಕ ಸಂಸ್ಥೆ, ಕನ್ನಡ ಸಾಹಿತ್ಯ ಪರಿಷತ್ತು. ಈಗಿನ ವ್ಯವಸ್ಥೆಯಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸಾಹಿತ್ಯದ ಬಗ್ಗೆ ಅರಿವು-ಮತ್ತು ಒಲವು ಮೂಡಿಸುವುದು ಅತ್ಯಂತ ಅವಶ್ಯಕತೆ ಇದೆ. ಹಾಗಾಗಿ ಶಾಲಾ -ಕಾಲೇಜುಗಳ ಹಂತದಲ್ಲಿ ಸಾಹಿತ್ಯದ ಪೂರಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಅನಿವಾರ್ಯವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಗುರುಸ್ವಾಮಿ, ಚಂದ್ರುಲಿಂಗು ಅವರಿಗೆ ಮತ್ತಷ್ಟು ಅವಕಾಶಗಳು ದೊರೆಯಲಿ, ಎಲ್ಲಾ ರಂಗದಲ್ಲಿ ಅವರು ಉತ್ತಮ ಸೇವೆಯನ್ನು ಸಲ್ಲಿಸಲಿ ಎಂದು ಅಭಿನಂದನಾ ನುಡಿಗಳನ್ನು ನುಡಿದರು. ಅಭಿನಂದನೆ ಸ್ವೀಕರಿಸಿದ ಚಂದ್ರಲಿಂಗು, ನಿಮ್ಮಗಳ ಮಾರ್ಗದರ್ಶನ ಪಡೆದು ಸಾಹಿತ್ಯ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇನೆ, ಎಂದು ಸರ್ವರಿಗೂ ಧನ್ಯವಾದಗಳನ್ನು ಅರ್ಪಿಸಿದರು.
ಈ ಸಂದರ್ಭದಲ್ಲಿ ಮಂಡ್ಯ ನಾಲ್ವಡಿ ಲಯನ್ಸ್ ಕ್ಲಬ್ಬಿನ ಅಧ್ಯಕ್ಷರಾದ ಹನುಮಂತಯ್ಯ, ಪದಾಧಿಕಾರಿಗಳಾದ ಲಿಂಗೇಗೌಡ, ಶಿವಲಿಂಗೇಗೌಡ, ಜೆ.ಶಿವಣ್ಣ, ಕೃಷ್ಣೆಗೌಡ, ಲಂಕೇಶ್, ಜಯಕುಮಾರ್, ಸುಭಾಷ್, ಮಹದೇವೇಗೌಡ ಮುರುಳಿ ಹಾಗೂ ಇತರರು ಉಪಸ್ಥಿತರಿದ್ದರು.




