ಚಿತ್ರನಟಿ ರಶ್ಮಿಕಾ ಮಂದಣ ಅವರ ಕನ್ನಡ ವಿರೋಧಿ ನಿಲುವನ್ನು ಪ್ರಶ್ನಿಸಿದ ಮಂಡ್ಯ ಶಾಸಕ ರವಿಕುಮಾರ್ ಗಣಿಗ ಅವರ ವಿರುದ್ದ ಹೇಳಿಕೆ ನೀಡಿರುವ ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು ನಾಚಪ್ಪ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ವಿವಿಧ ಸಂಘಟನೆಗಳ ಮುಖಂಡರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸಿದರು.
ಮಂಡ್ಯನಗರದಲ್ಲಿ ಪ್ರತಿಭಟನೆ ನಡೆಸಿದ ವಿವಿಧ ಸಂಘಟನೆಗಳ ಮುಖಂಡರು, ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರಿಗೆ ದೂರು ಸಲ್ಲಿಸಿದರು.
ಕನ್ನಡ ನಾಡು,ನುಡಿ,ಜಲ ಹಾಗೂ ಚಿತ್ರರಂಗದ ಉಳಿವಿನ ಹಿತದೃಷ್ಟಿಯಿಂದ ಹೇಳಿಕೆ ನೀಡಿದ್ದ ಶಾಸಕ ರವಿಕುಮಾರ್ ಗಣಿಗ ವಿರುದ್ಧ ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ನಾಚಪ್ಪ, ಕನ್ನಡ ವಿರೋಧಿ ಸಂಘಟನೆಗಳನ್ನು ಎತ್ತಿಕಟ್ಟಿ ತೇಜೋವಧೆಗೆ ಮುಂದಾಗಿ ಕಾನೂನು ಸುವ್ಯವಸ್ಥೆ ಹದಗೆಡಿಸಿ ಶಾಂತಿ ಭಂಗಕ್ಕೆ ಮುಂದಾಗಿದ್ದಾರೆ ಎಂದು ದೂದಿದರ.
ಕರ್ನಾಟಕ ರಾಜ್ಯದ ಏಕೀಕರಣ ವ್ಯವಸ್ಥೆಗೆ ಮಾರಕವಾದಂತಹ ಕೊಡಗು ಪ್ರತ್ಯೇಕ ರಾಜ್ಯ ಹೋರಾಟದ ನೇತೃತ್ವ ವಹಿಸಿರುವ ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷರು ಶಾಸಕರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದು ಆ ಹಿನ್ನೆಲೆಯಲ್ಲಿ ಎನ್ ಯು ನ್ಯಾಚಪ್ಪ ಹಾಗೂ ಚಿತ್ರನಟಿ ರಶ್ಮಿಕಾ ಮಂದಣ್ಣ ವಿರುದ್ಧ ದೂರು ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಬೇಲೂರು ಸೋಮಶೇಖರ್, ಕೆ.ಸಿ.ರವೀಂದ್ರ, ಕಾಗೆಹಳ್ಳದದೊಡ್ಡಿ ರಾಮಕೃಷ್ಣ, ಎಚ್.ಡಿ.ಜಯರಾಮ್, ಉಮ್ಮಡಹಳ್ಳಿ ನಾಗೇಶ್, ಮಹೇಶ್ ಸೇರಿದಂತೆ ಮತ್ತಿತರರಿದ್ದರು.




