Thursday, April 18, 2024

ಪ್ರಾಯೋಗಿಕ ಆವೃತ್ತಿ

ಅಪಾಯಕಾರಿ ಡಿಸ್ಪಿಲರಿ ಘಟಕ| ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಮುತ್ತಿಗೆ ಹಾಕಿದ ಕೆ.ಆರ್.ಪೇಟೆ ರೈತರು

ವರದಿ: ಮಾಕವಳ್ಳಿ ಮನು

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ ಭವನಕ್ಕೆ ಮಾಕವಳ್ಳಿ ಕೋರಮಂಡಲ ಸಕ್ಕರೆ ಕಾರ್ಖಾನೆ ವ್ಯಾಪ್ತಿಯ ಮಾಕವಳ್ಳಿ, ಕರೋಟಿ,ಕಾರಿಗನಹಳ್ಳಿ, ಹೆಗ್ಗಡಹಳ್ಳಿ, ವಡ್ಡರಹಳ್ಳಿ,ಲಿಂಗಾಪುರ, ಮಾಣಿಕನಹಳ್ಳಿ, ರಾಮನಹಳ್ಳಿ, ಕುಂದನಹಳ್ಳಿ, ಬೀಚೇನಹಳ್ಳಿ, ಚೌಡೇನಹಳ್ಳಿ, ಸೇರಿದಂತೆ ಅನೇಕ ಗ್ರಾಮಗಳ ನೂರಾರು ರೈತರು ಮತ್ತು ಮಹಿಳೆಯರು ಮುತ್ತಿಗೆ ಹಾಕಿ ಪರಿಸರ ಮಾಲಿನ್ಯ ಮಹಾಮಂಡಳಿಯ ಅಧ್ಯಕ್ಷ ಶಾಂತ ತಿಮ್ಮಯ್ಯ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡು ಅನಿರ್ದಿಷ್ಟಾವಧಿಯ ಹೋರಾಟದ ಎಚ್ಚರಿಕೆ ನೀಡಿದರು.

ಕೆ.ಆರ್.ಪೇಟೆ ತಾಲೂಕಿನ ಕಸಬಾ ಹೋಬಳಿಯ ಮಾಕವಳ್ಳಿ ಕೋರಮಂಡಲ ಸಕ್ಕರೆ ಕಾರ್ಖಾನೆಯಲ್ಲಿ ಎಥನಾಲ್ ಡಿಸ್ಟಿಲರಿ ಘಟಕವನ್ನು ಸ್ಥಾಪಿಸುವ ಏಕೈಕ ಉದ್ದೇಶದಿಂದ ದಿನಾಂಕ: 06.03.2024ರಂದು ಕರೆದಿರುವ ಸಾರ್ವಜನಿಕ ಸಭೆಯನ್ನು ರದ್ದು ಮಾಡಿ, ಕೋರಮಂಡಲ್ ಸಕ್ಕರೆ ಕಾರ್ಖಾನೆಯ ಆವರಣದಲ್ಲಿ ಕೇವಲ ಹಾಲಿ ನಡೆಯುತ್ತಿರುವ ಕಬ್ಬು ಅರೆಯುವಿಕೆಯನ್ನು ಹೊರತುಪಡಿಸಿ, ಎಥೆನಾಲ್ ಡಿಸ್ಪಿಲರಿ ಘಟಕವನ್ನು ಸ್ಥಾಪನೆ ಮಾಡದಂತೆ ಮತ್ತು ಈ ಎಥನಾಲ್ ಡಿಸ್ಟಿಲರಿ ಘಟಕ ಸ್ಥಾಪನೆಯ ಪ್ರಸ್ತಾವನೆಯನ್ನು ಶಾಶ್ವತವಾಗಿ ಕೈಬಿಡುವಂತೆ ಒತ್ತಾಯಿಸಿದರು.

ಬೆಂಗಳೂರು ನಗರದಲ್ಲಿರುವ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ ಭವನಕ್ಕೆ 350ಕ್ಕೂ ಹೆಚ್ಚು ರೈತ ಮುಖಂಡರು ತೆರಳಿ ಕೋರಮಂಡಲ ಸಕ್ಕರೆ ಕಾರ್ಖಾನೆ ವಿರುದ್ಧ ವಿರುದ್ಧ ಘೋಷಣೆ ಕೂಗಿದರು.

ರೈತ ಸಂಘದ ಹಿರಿಯ ಮುಖಂಡ ಮದುಗೆರೆ ರಾಜೇಗೌಡ ಮಾತನಾಡಿ,  2011ನೇ ಸಾಲಿನಲ್ಲಿ ಎಥನಾಲ್ ಡಿಸ್ಟಿಲರಿ ಮತ್ತು ವಿದ್ಯುತ್ ಕೋಜನರೇಶನ್ ಘಟಕಗಳಿಗೆ ಹೊಸ ವಿನೂತನ ತಂತ್ರಜ್ಞಾನವನ್ನು ಅಳವಡಿಸುತ್ತೇವೆಂದು ಒಪ್ಪಿಕೊಂಡಿರುವ ಕಾರ್ಖಾನೆಯು ಹಳೆಯ ತಂತ್ರಜ್ಞಾನವನ್ನೇ ಮುಂದುವರಿಸುತ್ತಾ ಅದನ್ನು ಸೂಕ್ತ ನಿರ್ವಹಣೆ ಮಾಡದೇ, ವಿಷಕಾರಿ ಹಾರುವ ಬೂದಿ ಭಾಗ್ಯ ನೀಡುವುದರ ಮೂಲಕ ಕಾರ್ಖಾನೆಯ ಅಕ್ಕ ಪಕ್ಕದ ಜನರ ಬದುಕಿನ ಜೊತೆ ಕಲ್ಲಾಟವಾಡುತ್ತಿದೆ ಎಂದು ಕಿಡಿಕಾರಿದರು.

ಕಾರ್ಖಾನೆ ಆಡಳಿತ ಮಂಡಳಿಯ ಆವರಣದಲ್ಲಿ ಅಪಾಯಕಾರಿ ಘಟಕಗಳಂತಹ ಎಥನಾಲ್ ಮತ್ತು ಡಿಸ್ಪೀಲರಿ ನಿರ್ಮಾಣವಾದರೆ ಕಾರ್ಖಾನೆ ವ್ಯಾಪ್ತಿಯ ಗ್ರಾಮಗಳ ರೈತರ ಬದುಕು ನರಕವಾಗುವುದು ಕಟ್ಟಿಟ್ಟ ಬುತ್ತಿ ಅಲ್ಲವೇ..? ಆಡಳಿತ ಮಂಡಳಿಯ ವಿರುದ್ಧ ಸೂಕ್ತ ಕ್ರಮ ವಹಿಸಬೇಕು ಎಂದು ನಿಮ್ಮ ಕೇಂದ್ರ ಕಚೇರಿಗೆ ಬಂದು ಪ್ರತಿಭಟನೆ ನಡೆಸಿದ ಪರಿಣಾಮವಾಗಿ ನೀವು ಕಾರ್ಖಾನೆಗೆ ಕಾಟಾಚಾರಕ್ಕೆ ಆಗಮಿಸಿ ಕಳ್ಳರಂತೆ ಕಾರ್ಖಾನೆಯ ಹಿಂಬಾಗಿಲಿನಿಂದ ಹೋಗಿದ್ದೀರಿ ಎಂದು ಪರಿಸರ ಮಾಲಿನ್ಯ ಮಂಡಳಿಯ ಅಧ್ಯಕ್ಷ ಶಾಂತ ತಿಮ್ಮಯ್ಯ ರವರಿಗೆ ತರಾಟೆಗೆ ತೆಗೆದುಕೊಂಡರು.

ಹೇಮಾವತಿ ನದಿ ಸಮೀಪವಿರುವ ಕೋರಮಂಡಲ ಸಕ್ಕರೆ ಕಾರ್ಖಾನೆ ಸ್ಥಾಪನೆಗೊಂಡದಿನದಿಂದ ಈ ದಿನದವರೆಗೂ ಸುತ್ತಮುತ್ತಲಿನಲ್ಲಿರುವ ರೈತ ಬೆಳೆಯುವ ಫಸಲುಗಳ ಮೇಲೆ ಪರಿಣಾಮಕಾರಿಯಾಗಿ ಮಾಲಿನ್ಯ ಎದುರಾಗುತ್ತಿದೆ. ಇದರ ಬಗ್ಗೆ ಕೇಂದ್ರ ಕಚೇರಿಯಿಂದ ಹಿಡಿದು ತಾಲೂಕು ಕಚೇರಿಯವರೆಗೂ ಹಲವು ಚಳುವಳಿ ಮತ್ತು ಹೋರಾಟ ನಡೆಸಿದರು, ನೀವು ಒಳಗೊಂಡಂತೆ ಇಲಾಖೆ ಅಧಿಕಾರಿಗಳು ತಮಗೆ ಸಂಬಂಧವಿಲ್ಲದ ರೀತಿ ಕಾರ್ಖಾನೆಯ ತಾಳಕ್ಕೆ ತಕ್ಕಂತೆ ಕುಣಿಯುತ್ತ ಕಣ್ಮುಚ್ಚಿ ಕುಳಿತಿದ್ದೀರಿ, ಇಂಥವರ ಮುಂದೆ ಹತ್ತಾರು ಚಳುವಳಿ ನಡೆಸಿದರು, ಕೋಣನ ಮುಂದೆ ಕಿಂದರಿ ಬಾರಿಸಿದಂತಾಗಿದೆ, ಹಾಗಾಗಿ ಈ ದಿನವೇ ನಿಶ್ಚಯವಾಗಬೇಕು. ಶಾಶ್ವತವಾಗಿ ಇಂತಹ ಅಪಾಯಕಾರಿ ಘಟಕ ನಿರ್ಮಾಣವಿರಲಿ ಇದರ ಬಗ್ಗೆ ಚಿಂತನೆಯೂ ಕೂಡ ಮಾಡಬಾರದು ಎಂದು ಲಿಖಿತವಾಗಿ ನಮಗೆ ನೀಡಿದರೆ ಮಾತ್ರ ಈ ಶಾಂತಿಯುತ ಹೋರಾಟವನ್ನು ಹಿಂಪಡೆಯುತ್ತೇವೆ, ಇಲ್ಲದಿದ್ದರೆ ಅನಿರ್ದಿಷ್ಟಾವಧಿ ಹೋರಾಟ ನಡೆಸಲು ಸಿದ್ಧರಿದ್ದೇವೆ ಎಂದು ಎಚ್ಚರಿಸಿ ಕಚೇರಿಯಲ್ಲಿ ಹೋರಾಟ ಮುಂದುವರಿಸಿದರು.

ಈ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರ ಡಾ.ಹೆಚ್.ವಿ.ವಾಸು ರೈತರನ್ನುದ್ದೇಶಿಸಿ ಮಾತನಾಡಿದರು.  ಡಾ. ರೈತಸಂಘದ ತಾಲ್ಲೂಕು ಅಧ್ಯಕ್ಷ ರಾಜೇಗೌಡ, ಮಾಕವಳ್ಳಿ ಯೋಗೇಶ್, ಮುದ್ದಪ್ಪ, ರವಿಕುಮಾರ್, ಕರೋಟಿ ತಮ್ಮಣ್ಣ ಸೇರಿದಂತೆ ನೂರಾರು ರೈತಸಂಘದ ಕಾರ್ಯಕರ್ತರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!