ಹನಿಯಂಬಾಡಿ ಜಗದೀಶ್
ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಕೃಷ್ಣರಾಜಸಾಗರದ ಜಲಾಶಯ ವರ್ಷದಲ್ಲಿ ಮೂರನೇ ಬಾರಿಗೆ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿ ಇತಿಹಾಸ ನಿರ್ಮಿಸಿದೆ.
ಕಳೆದ ಜೂನ್ ಅಂತ್ಯದ ವೇಳೆಗೆ ಜಲಾಶಯವು ಭರ್ತಿಯಾಗುವ ಮೂಲಕ ಇತಿಹಾಸ ನಿರ್ಮಿಸಿತ್ತು. ಕೆ.ಆರ್.ಎಸ್ ನಿರ್ಮಾಣವಾದ ನಂತರ ಮೊದಲ ಬಾರಿಗೆ ಜೂನ್ ತಿಂಗಳಲ್ಲೇ ಭರ್ತಿಯಾದ ಜಲಾಶಯಕ್ಕೆ ಜೂನ್ 30 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಾಗಿನ ಅರ್ಪಿಸಿ, ಹರ್ಷ ವ್ಯಕ್ತಪಡಿಸಿದ್ಧರು.

ಕಾವೇರಿ ಅಚ್ಚುಕಟ್ಟು ಪ್ರದೇಶಕ್ಕೆ ಕಟ್ಟುಪದ್ದತಿಯಲ್ಲಿ ನೀರು ಹಾಗೂ ಬೆಂಗಳೂರು ಮಹಾನಗರಕ್ಕೆ ಕುಡಿಯುವ ನೀರನ್ನು ನಿರಂತರವಾಗಿ ಒದಗಿಸುತ್ತಿದ್ದರೂ, ಅಣೆಕಟ್ಟೆಯೂ ತನ್ನ ಗರಿಷ್ಟ ಮಟ್ಟವನ್ನು ಕಾಯ್ದುಗೊಂಡಿರುವುದು ಗಮನಾರ್ಹ ಬೆಳವಣಿಗೆಯಾಗಿದೆ.
ಜೂನ್ ನಂತರ ಅಕ್ಟೋಬರ್ ಎರಡನೇ ವಾರದಲ್ಲಿ ಮತ್ತೊಮ್ಮೆ ಅಣೆಕಟ್ಟೆಯೂ ಭರ್ತಿಯಾಗಿತ್ತು, ಪ್ರಸ್ತುತ ಅಕ್ಟೋಬರ್ 18 ರಿಂದ ಅ.23ರವರೆಗೆ ಅಣೆಕಟ್ಟೆಯೂ 124.80 ಅಡಿಗಳಷ್ಟು ಗರಿಷ್ಟ ನೀರು ಸಂಗ್ರಹವನ್ನು ಕಾಯ್ದುಗೊಳ್ಳುವ ಮೂಲಕ ನಿರಂತರವಾಗಿ ಭರ್ತಿಯಾಗಿ ದಾಖಲೆ ನಿರ್ಮಿಸಿದೆ.

- ಇಂದಿನ ನೀರಿನ ಮಟ್ಟ
- ಗರಿಷ್ಟ ಮಟ್ಟ : 124.80 ಅಡಿ
- ಇಂದಿನ ಮಟ್ಟ : 124.80 ಅಡಿ
- ಗರಿಷ್ಟ ಸಂಗ್ರಹ : 49.452 ಟಿ.ಎಂ.ಸಿ
- ಇಂದಿನ ಸಂಗ್ರಹ : 49.452 ಟಿ.ಎಂ.ಸಿ.
- ಒಳಹರಿವು ; 20,797 ಕ್ಯೂಸೆಕ್ಸ್
- ಹೊರ ಹರಿವು ; 20,540 ಕ್ಯೂಸೆಕ್ಸ್ ( ನಾಲೆಗಳಿಗೆ ನೀರು ಬಿಡುಗಡೆ ಮತ್ತು ಕುಡಿಯುವ ನೀರು ಸರಬರಾಜು ಸೇರಿ)
ಪ್ರವಾಹ ಮುನ್ಸೂಚನೆ
ಕಾವೇರಿ ನದಿ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಕೃಷ್ಣರಾಜಸಾಗರ ಜಲಾಶಯಕ್ಕೆ ಹೆಚ್ಚಿನ ನೀರು ಬರುತ್ತಿದ್ದು, ಕೃಷ್ಣರಾಜಸಾಗರ ಜಲಾಶಯದಿಂದ ಸುಮಾರು 25,000 ರಿಂದ 40,000 ಕ್ಯೂಸೆಕ್ಸ್ ಗೂ ಅಧಿಕ ನೀರನ್ನು ಕಾವೇರಿ ನದಿಗೆ ಬಿಡಲಾಗುವುದು ಎಂದು ಕೆ.ಆರ್.ಎಸ್ ವಿಭಾಗದ ಅಧೀಕ್ಷಕ ಇಂಜಿನಿಯರ್ ರಘುರಾಂ ತಿಳಿಸಿದ್ದರು.
ಹೊರಕ್ಕೆಎಎ ನೀರು ಪ್ರಮಾಣವು ಹೆಚ್ಚಾಗುವ ಸಂಭವವಿರುತ್ತದೆ. ಆದ್ದರಿಂದ ಕಾವೇರಿ ನದಿಯ ತಗ್ಗು ಪ್ರದೇಶದಲ್ಲಿರುವ ಮತ್ತು ನದಿಯ ಎರಡೂ ದಂಡೆಗಳಲ್ಲಿರುವ ಸಾರ್ವಜನಿಕರು ತಮ್ಮ ಆಸ್ತಿ ಪಾಸ್ತಿ ಹಾಗೂ ಜಾನುವಾರು ರಕ್ಷಣೆಗೆ ಎಚ್ಚರಿಕೆ ವಹಿಸಿ, ಸೂಕ್ತ ಮುಂಜಾಗ್ರತೆ ಕೈಗೊಂಡು ಸುರಕ್ಷಿತ ಸ್ಥಳಗಳಿಗೆ ಹೋಗಲು ಈ ಮೂಲಕ ತಿಳಿಸಲಾಗಿದೆ.




