ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರದ ಸಂಸದ ಹೆಚ್.ಡಿ.ಕುಮಾರಸ್ವಾಮಿ ಅವರು ಸಕ್ಕರೆ ನಗರದಲ್ಲಿ ನಡೆಸಿದ ಪ್ರಥಮ ಜನತಾ ದರ್ಶನದಲ್ಲಿ ಸಾವಿರಾರು ಮಂದಿ ನಾಗರೀಕರು ಪಾಲ್ಗೊಂಡು ತಮ್ಮ ಸಮಸ್ಯೆಗಳ ನಿವಾರಣೆಗೆ ಮನವಿ ಮಾಡಿದರು.
ಮಂಡ್ಯ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಜನತಾ ದರ್ಶನಕ್ಕೆ ಬೆಳಿಗ್ಗೆ 8 ಗಂಟೆಯಿಂದಲೇ ಮಂಡ್ಯ, ಮೈಸೂರು, ರಾಮನಗರ ಜಿಲ್ಲೆಗಳ ಸಾವಿರಾರು ನಾಗರೀಕರು, ಅಂಗವಿಕಲರು ಆಗಮಿಸಿ ಕೇಂದ್ರ ಸಚಿವರ ಆಗಮನಕ್ಕೆ ಕಾದು ಕುಳಿತ್ತಿದ್ದರು. ತಮ್ಮ ಅಹವಾಲನ್ನು ಸಲ್ಲಿಸಲು ಆಗಮಿಸಿದ್ದ ಜನ ಸಾಮಾನ್ಯರಿಗೆ ಜರ್ಮನ್ ಟೆಂಟ್ ಶಾಮಿಯಾನ, ಆಸನ ವ್ಯವಸ್ಥೆ, ಕುಡಿಯುವ ನೀರು ಹಾಗೂ ಉಪಹಾರದ ವ್ಯವಸ್ಥೆ ಕಲ್ಪಿಸಲಾಗಿತ್ತು. ಅಂಬೇಡ್ಕರ್ ಭವನದ ಒಳಾಂಗಣ ಹಾಗೂ ಹೊರ ವಲಯದಲ್ಲಿ ಸುಮಾರು 10 ಕೌಂಟರ್ಗಳನ್ನು ತೆರೆದು ಅಹವಾಲು ಅರ್ಜಿ ಸ್ವೀಕರಿಸಲಾಗಿತ್ತು.
ಮಂಡ್ಯಕ್ಕೆ ಬರುವ ಮುನ್ನ ಮೈಸೂರಿನಲ್ಲಿ ನಾಡದೇವತೆ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿದರು. ಬಳಿಕ ಮಂಡ್ಯಕ್ಕೆ ಆಗಮಿಸಿದ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ನಗರದ ಶಕ್ತಿದೇವತೆ ಕಾಳಿಕಾಂಬ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಬಳಿಕ ಬೇಬಿ ಬೆಟ್ಟ ಗಣಿಗಾರಿಕೆ ಪ್ರದೇಶದ ಟ್ರಯಲ್ ಬ್ಲಾಸ್ಟ್ ವಿರೋಧಿ ಚಳವಳಿಗಾರರನ್ನು ಭೇಟಿ ಮಾಡಿ ಅಂಬೇಡ್ಕರ್ ಭವನಕ್ಕೆ ಆಗಮಿಸುವ ವೇಳೆಗೆ ಸರಿ ಸುಮಾರು 12 ಗಂಟೆ ಸಮೀಪಿಸಿತ್ತು.

ಭವನದ ವೇದಿಕೆ ಏರಿದ ಕೇಂದ್ರ ಸಚಿವ ಕುಮಾರಸ್ವಾಮಿ ಅವರು, ಜಿಲ್ಲೆಯ ಮಾಜಿ ಸಚಿವರು ಹಾಗೂ ಜೆಡಿಎಸ್ ಶಾಸಕರನ್ನು ವೇದಿಕೆಗೆ ಬರುವಂತೆ ಆಹ್ವಾನಿಸಿದರು. ಈ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರ ಗುಂಪು ವೇದಿಕೆ ಏರಿ ಜನಸಾಗರವಾಯಿತು. ಸಂಕಷ್ಟ ಹೇಳಿಕೊಳ್ಳಲು ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಆಗಮಿಸಿದ್ದ ನೂರಾರು ಮಂದಿ ಸಾರ್ವಜನಿಕರಿಗೆ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರ ವರ್ತನೆ ಬೇಸರ ತರಿಸಿತು. ಇದನ್ನು ಅರಿತ ಕುಮಾರಸ್ವಾಮಿ ಅವರು ಒಂದು ಹಂತದಲ್ಲಿ ಪ್ರೀತಿಯಿಂದ ಗದರಿ, ವೇದಿಕೆಯಿಂದ ನಿರ್ಗಮಿಸಿ ಜನರ ಅಹವಾಲು ಆಲಿಸಲು ಮಾಡಿಕೊಂಡ ಮನವಿಗೆ ಕಾರ್ಯಕರ್ತರು ಕ್ಯಾರೇ ಎನ್ನಲಿಲ್ಲ. ಜನಜಂಗುಳಿಯಿಂದ ಕೂಡಿದ್ದ ಜನತಾ ದರ್ಶನದಲ್ಲಿ ಸಾವಿರಾರು ಮಂದಿ ಅರ್ಜಿ ನೀಡಿ ಮನವಿ ಮಾಡಿಕೊಂಡರು. ಕಂದಾಯ, ಪೊಲೀಸ್, ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಅರ್ಜಿಗಳೊಂದಿಗೆ ಆರೋಗ್ಯ ಸಮಸ್ಯೆಯನ್ನು ಹಲವರು ತೋಡಿಕೊಂಡರು.
ಜನತಾದರ್ಶನದಲ್ಲಿ ಕೇಂದ್ರ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಬಿ.ಎನ್.ಕೃಷ್ಣಯ್ಯ, ಮಾಜಿ ಸಚಿವರಾದ ಸಿ.ಎಸ್.ಪುಟ್ಟರಾಜು, ಡಿ.ಸಿ.ತಮ್ಮಣ್ಣ, ಸಾ.ರಾ.ಮಹೇಶ್, ಶಾಸಕರಾದ ಎಚ್.ಟಿ.ಮಂಜು, ವಿವೇಕಾನಂದ, ಮಾಜಿ ಶಾಸಕರಾದ ರವೀಂದ್ರ ಶ್ರೀಕಂಠಯ್ಯ, ಕೆ.ಸುರೇಶ್ಗೌಡ, ಕೆ.ಅನ್ನದಾನಿ, ಕೆ.ಟಿ.ಶ್ರೀಕಂಠೇಗೌಡ, ಜೆಡಿಎಸ್ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಪಕ್ಷದ ಜಿಲ್ಲಾಧ್ಯಕ್ಷ ಡಿ.ರಮೇಶ್, ಮುಖಂಡರಾದ ಬಿ.ಆರ್.ರಾಮಚಂದ್ರು, ಕೆ.ಎಸ್.ವಿಜಯಾನಂದ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ನೆಲ್ಲಿಗೆರೆ ಬಾಲು, ಯುವ ಮುಖಂಡ ಬಿ.ಆರ್.ಸುರೇಶ್ ಇತರರಿದ್ದರು.




