ರಾಷ್ಟ್ರಕವಿ ಕುವೆಂಪು ಅವರ ಕೃತಿಯನ್ನು ಮೆಚ್ಚಿ ಮೊದಲು ಗೌರವ ಸಲ್ಲಿಸಿದ್ದು ಮಂಡ್ಯದ ಜನತೆ ಎಂದು ಜಿಲ್ಲಾ ಕಾರ್‍ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಪಿ.ಜೆ.ಚೈತನ್ಯಕುಮಾರ್ ಹೆಮ್ಮೆಯಿಂದ ನುಡಿದರು.
ಮಂಡ್ಯ ನಗರದ ಪತ್ರಕರ್ತರ ಭವನದಲ್ಲಿ ಆಯೋಜಿಸಲಾಗಿದ್ದ ವಿಶ್ವಮಾನವ ದಿನಾಚರಣೆಯಲ್ಲಿ ಕುವೆಂಪು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು.
೧೯೫೪ರಲ್ಲಿ ಕುವೆಂಪು ಅವರ ಕೃತಿಯನ್ನು ಮೆಚ್ಚಿದ ಮಂಡ್ಯ ಜಿಲ್ಲೆಯ ಜನತೆ ಮೆರವಣಿಗೆ ಮಾಡಿ ಗೌರವ ಸಲ್ಲಿಸಿದ್ದರು. ಜಿಲ್ಲೆಯ ಅವರ ಸಮಕಾಲೀನ ಟಿ.ಮಲ್ಲಯ್ಯ, ಎಂ.ತಮ್ಮಯ್ಯ, ಆದಿಚುಂಚನಗಿರಿ ಪೀಠಾಧ್ಯಕ್ಷರಾಗಿದ್ದ ಚಂದ್ರಶೇಖರಾನಂದನಾಥ ಸ್ವಾಮೀಜಿ ಕುವೆಂಪು ಅವರ ಸಹಪಾಠಿಗಳಾಗಿದ್ದರು. ಕುವೆಂಪು ಅವರಿಗೆ ಮಂಡ್ಯ ಜಿಲ್ಲೆಯ ಒಡನಾಟ ಹೆಚ್ಚಿತ್ತು ಎಂದು ಹೇಳಿದರು.

ಅಧ್ಯಕ್ಷ ಕೆ.ಎನ್.ರಾಘವೇಂದ್ರ ಮಾತನಾಡಿ, ದೇಶಕ್ಕೆ ಕೊಡುಗೆ ನೀಡಿದ ಮಹನೀಯರನ್ನು ಸ್ಮರಿಸುವ ಕೆಲಸಕ್ಕೆ ನೂತನ ಆಡಳಿತ ಮಂಡಳಿ ಮುಂದಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಜತೆ ನಿರಂತರ ಸಂವಾದ ಕಾರ್‍ಯಕ್ರಮ ಏರ್ಪಡಿಸಲಾಗುವುದು ಎಂದು ಹೇಳಿದರು.
ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್ ಮಾತನಾಡಿ, ಕುವೆಂಪು ಅವರು ಮನುಜಮತ ವಿಶ್ವಪಥ ಸಂದೇಶವನ್ನು ಇಡೀ ವಿಶ್ವಕ್ಕೆ ಸಾರಿದರು. ಅವರ ಆಚಾರ ವಿಚಾರಗಳನ್ನು ನಾವೆಲ್ಲ ಪಾಲಿಸಬೇಕು ಎಂದು ಕರೆ ನೀಡಿದರು.
ಉಪಾಧ್ಯಕ್ಷ ಕೆ.ಸಿ.ಮಂಜುನಾಥ್ ಮಾತನಾಡಿ, ಕುವೆಂಪು ಅವರು ಕನ್ನಡ ಸಾಹಿತ್ಯದಲ್ಲಿ ಅಗ್ರಗಣ್ಯ ಕವಿಯಾಗಿದ್ದಾರೆ. ಸಾಹಿತ್ಯದ ವಿವಿಧ ಮಜಲುಗಳ ಮೂಲಕ ಭಾಷೆ ಸಮೃದ್ಧವಾಗಿ ಬೆಳೆಯಲು ಶ್ರಮಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಆಡು ಮುಟ್ಟದ ಸೊಪ್ಪಿಲ್ಲ ಎಂಬ ನಾಣ್ನುಡಿಯಂತೆ ಕುವೆಂಪು ಅವರು ಮೈಸೂರು ವಿವಿ ಸೇರಿದಂತೆ ಕೈಯಾಡಿಸದ ಕ್ಷೇತ್ರವಿಲ್ಲ ಎಂದು ಸ್ಮರಿಸಿದರು.
ರಾಷ್ಟ್ರೀಯ ಸಮಿತಿ ಸದಸ್ಯ ಬಸವರಾಜ ಹೆಗ್ಗಡೆ, ಎಂ.ಎಸ್.ಶಿವಪ್ರಕಾಶ್, ಪ್ರಧಾನ ಕಾರ್ಯದರ್ಶಿ ಡಿ.ಶಶಿಧರ ಕಾಡುಕೊತ್ತನಹಳ್ಳಿ, ಉಪಾಧ್ಯಕ್ಷರಾದ ರವಿ ಸಾವಂದಿಪುರ, ಲೋಕೇಶ್ ಚಿನಕುರಳಿ, ವೇದಿಕೆಯಲ್ಲಿ ನಿಕಟ ಪೂರ್ವ ಅಧ್ಯಕ್ಷ ಕೆ.ಎನ್.ನವೀನ್‌ಕುಮಾರ್,
ಕಾರ್ಯದರ್ಶಿ ಎಚ್.ಶಿವರಾಜು, ಖಜಾಂಚಿ ನಂಜುಂಡಸ್ವಾಮಿ ಇತರರಿದ್ದರು.




