Saturday, October 19, 2024

ಪ್ರಾಯೋಗಿಕ ಆವೃತ್ತಿ

ಕೆ.ವಿ.ಶಂಕರಗೌಡ ಮಂಡ್ಯ ನೆಲದ ಮಾಣಿಕ್ಯ- ಡಾ.ಕುಮಾರ

ಶಿಕ್ಷಣ, ಕೃಷಿ, ಸಾಹಿತ್ಯ, ಸಂಸ್ಕೃತಿ ಹಾಗೂ ಕಲಾಪ್ರೇಮಿಯಾಗಿದ್ದ ಕೆ.ವಿ.ಶಂಕರಗೌಡರು ಮಂಡ್ಯ ನೆಲದ ಮಾಣಿಕ್ಯ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಬಣ್ಣಿಸಿದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ, ಜಿಲ್ಲಾಡಳಿತ, ಕೆ.ವಿ.ಶಂಕರಗೌಡ ಅಧ್ಯಯನ ಪೀಠ, ಕರ್ನಾಟಕ ಸಂಘ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಯುಕ್ತಾಶ್ರಯದಲ್ಲಿ ಮಂಡ್ಯದ ಜಿಲ್ಲಾ ಪಂಚಾಯಿತಿಯ ಕಾವೇರಿ ಸಭಾಂಗಣದಲ್ಲಿ ನಡೆದ ಕೆ.ವಿ.ಶಂಕರಗೌಡ -109 ಒಂದು ನೆನಪು ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕೆ.ವಿ.ಶಂಕರಗೌಡರು ಮಂಡ್ಯ ಜಿಲ್ಲೆಯ ಅಭಿವೃದ್ದಿಗೆ ಶ್ರಮಿಸಿರುವ ಮೇರು ವ್ಯಕ್ತಿಯಾಗಿದ್ದು, ಅವರ ಸಾಮಾಜಿಕ ಸೇವೆ ಮತ್ತು ಚಿಂತನೆಗಳ ಮೂಲಕ ಇಂದಿಗೂ ಜನ ಮಾನಸರಾಗಿದ್ದಾರೆ. ಆ ಜೀವಿಯ ಜೀವನದ ಮೆಲುಕು ಅರ್ಥಪೂರ್ಣವಾಗಿದ್ದು, ಇಂದಿನ ಸಮಾಜದ ಪ್ರತಿಯೊಬ್ಬರು ಕೆವಿಎಸ್ ಅವರನ್ನು ಗೌರವಿಸಬೇಕು. ಅವರ ಜೀವನ ಸಾಧನೆ ಮತ್ತು ಮೌಲ್ಯಗಳನ್ನು ಮಕ್ಕಳಿಗೆ ತಿಳಿಸುವ ಜೊತೆಗೆ ನಮ್ಮ ಜೀವನದಲ್ಲೂ ಅಳವಡಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.

ನಾನು ಕೆಎಎಸ್ ಪದವಿ ವ್ಯಾಸಂಗದಲ್ಲಿ ನಿರತನಾಗಿದ್ದಾಗ ಕೆವಿಎಸ್ ಅವರ ಬಗ್ಗೆ ತಿಳಿದುಕೊಂಡೆ ಅಂದಿನಿಂದ ಅವರ ಬಗ್ಗೆ ಅಪಾರ ಗೌರವ ಮತ್ತು ಪ್ರೀತಿ ವ್ಯಕ್ತವಾಯಿತು. ಅವರು ಆಧುನಿಕ ಮಂಡ್ಯದ ಶಿಲ್ಪಿಯಾಗಿದ್ದು, ಅವರಲ್ಲಿನ ಸಾಮಾಜಿಕ ಬದ್ದತೆಯಿಂದ ಜಿಲ್ಲೆಯು ಅಭಿವೃದ್ದಿ ಕಂಡಿದೆ ಎಂದರು.

ಸಚಿವರಾಗಿದ್ದಾಗ ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ಉತ್ತಮ ರೀತಿಯಲ್ಲಿ ಕೆಲಸ ಮಾಡಿ ನಿತ್ಯ ಸಚಿವರಾಗಿ ಹೊರ ಹೊಮ್ಮಿದ ಶಂಕರಗೌಡರ ಕೃಷಿ ಪರವಾದ ಕಾರ್ಯಕ್ರಮಗಳು ವಿಸ್ತೃತವಾಗಿವೆ. ಇಂತಹವರ ಹೆಸರಿನಲ್ಲಿ ವಿಚಾರ ಸಂಕಿರಣ  ಆಯೋಜಿಸಿರುವುದು ಶ್ಲಾಘನೀಯವೆಂದರು.

ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಖ್ ತನ್ವೀರ್ ಆಸೀಪ್ ಮಾತನಾಡಿ, ಜಿಲ್ಲೆಯ ಶಿಕ್ಷಣ, ಸಾಹಿತ್ಯ, ಸಂಸ್ಕೃತಿ ಮತ್ತು ಸಂಘಟನೆಗಳಲ್ಲಿ ಶಂಕರಗೌಡರ ಹೆಸರು ಪರಂಪರೆಯಂತೆ ರಾರಾಜಿಸುತ್ತಿದೆ. ಹಿಂದಿನ ಆದರ್ಶ ವ್ಯಕ್ತಿಗಳ ಪರಂಪರೆಯನ್ನು ಭವಿಷ್ಯದ ಪ್ರಜೆಗಳಿಗೆ ತಿಳಿಸುವ ಹೊಣೆಗಾರಿಕೆ ಇಂದಿನ ಪೋಷಕರದ್ದಾಗಬೇಕು ಎಂದು ತಿಳಿಸಿದರು.

ಮಂಡ್ಯ ಜಿಲ್ಲೆಯ ಜನತೆ ಸಾಹಿತ್ಯ, ಸಂಸ್ಕೃತಿ ಮತ್ತು ಪರಂಪರೆಯ ಪೋಷಕರಾಗಿದ್ದು, ಅದೇ ರೀತಿ ಶಂಕರಗೌಡರು ಶಿಕ್ಷಣ, ರಂಗಭೂಮಿ, ಕಲೆ, ಸಂಸ್ಕೃತಿ ಮತ್ತು ಸಾಹಿತ್ಯ ಸೇವೆಯ ಅನುಕರಣಿಯ ವ್ಯಕ್ತಿ ಎಂದ ಗುಣಗಾನ ಮಾಡಿದರು.

ಡಾ.ರಾಗೌ ಕಾರ್ಯಕ್ರಮ ಉದ್ಘಾಟಿಸಿದರು. ಸಾಹಿತ್ಯ ಅಕಾಡೆಮಿಯ ಕಾರ್ಯದರ್ಶಿ ಕರಿಯಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎಲ್.ಎನ್.ಮುಕುಂದರಾಜ್ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಕೆ.ಟಿ.ಶ್ರೀಕಂಠೇಗೌಡ, ಕಸಾಪ ಜಿಲ್ಲಾ ಸಂಚಾಲಕಿ ಡಾ.ಮೀರಾ ಶಿವಲಿಂಗಯ್ಯ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯ ಸಂಚಾಲಕಿ ಎಚ್.ಆರ್.ಸುಜಾತ ಉಪಸ್ಥಿತರಿದ್ದರು. ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶ್‌ಗೌಡ ಸ್ವಾಗತಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!