ದುನಿಯಾ ವಿಜಯ್ ನಾಯಕ ನಟನಾಗಿ ಅಭಿನಯಿಸಿರುವ “ಲ್ಯಾಂಡ್ ಲಾರ್ಡ್” ಸಿನಿಮಾ ಶತದಿನೋತ್ಸವವನ್ನು ಪೂರೈಸಲಿ, ಇಂತಹ ಇನ್ನಷ್ಟು ಚಿತ್ರಗಳು ಮೂಡಿಬರಲು ಈ ಸಿನಿಮಾ ಸ್ಪೂರ್ತಿಯಾಗಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾರೈಸಿದ್ದಾರೆ.
“ಲ್ಯಾಂಡ್ ಲಾರ್ಡ್” ಚಿತ್ರತಂಡದವರು ಶನಿವಾರ ತಮ್ಮನ್ನು ಭೇಟಿಯಾಗಿ, ತಮ್ಮ ಚಿತ್ರ ವೀಕ್ಷಣೆಗೆ ಆಗಮಿಸುವಂತೆ ಪ್ರೀತಿಯಿಂದ ಆಹ್ವಾನಿಸಿದರು. ಈ ಚಿತ್ರದ ಮೂಲಕ ಸಮಾಜದಲ್ಲಿನ ಜಾತಿ ಅಸಮಾನತೆ ಮತ್ತು ಸಾಂವಿಧಾನಿಕ ಮೌಲ್ಯಗಳ ಮೇಲೆ ಬೆಳಕು ಚೆಲ್ಲುವಂತಹ ಪ್ರಯತ್ನವನ್ನು ಚಿತ್ರತಂಡ ಮಾಡಿದೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಕಳಕಳಿಯ ಕಥಾಹಂದರದ ಸಿನಿಮಾಗಳು ಮೂಡಿಬರುತ್ತಿರುವುದು ಅಪರೂಪ. ನಿಜಕ್ಕೂ ಇದೊಂದು ದಿಟ್ಟ ಪ್ರಯತ್ನ, ಇದಕ್ಕಾಗಿ ಇಡೀ ಚಿತ್ರತಂಡಕ್ಕೆ ಅಭಿನಂದನೆಗಳು ಎಂದು ಟ್ವೀಟ್ ಮಾಡಿದ್ದಾರೆ.
ಎಲ್ಲರೂ ನೋಡಲೇಬೇಕಾದ ಚಿತ್ರವಿದು. ನಾನೂ ಖಂಡಿತವಾಗಿ ಚಿತ್ರಮಂದಿರಕ್ಕೆ ತೆರಳಿ ಈ ಸಿನಿಮಾ ವೀಕ್ಷಿಸುತ್ತೇನೆ, ನೀವೂ ನೋಡಿ ಎಂದು ಜನತೆಗೆ ಕರೆ ನೀಡಿದ್ದಾರೆ.




