ಮೈಷುಗರ್ ಸಕ್ಕರೆ ಕಾರ್ಖಾನೆಯಲ್ಲಿ ಆರ್.ಬಿ.ಟೆಕ್ ಕಂಪನಿಯಿಂದಲೇ ೨೦೨೫-೨೬ನೇ ಸಾಲಿನ ಕಬ್ಬು ನುರಿಸುವ ಪ್ರಕ್ರಿಯೆಯು ಜೂನ್ ತಿಂಗಳ ಅಂತ್ಯದಿಂದ ಪ್ರಾರಂಭ ಮಾಡಲಾಗುವುದು ಎಂದು ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್ ತಿಳಿಸಿದರು.
ಮಂಡ್ಯ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಆರ್.ಬಿ.ಟೆಕ್ ಕಂಪನಿಯೊಂದಿಗಿನ ಎಲ್ಲಾ ಬಾಕಿಯನ್ನು ಚುಕ್ತಾ ಮಾಡಿ, ಒಳ ಒಪ್ಪಂದದ ಮೇರೆಗೆ ಕಾರ್ಖಾನೆಯ ಕೆಲಸಗಳು ಮುಂದುವರೆಯಲಿದೆ ಎಂಬುದು ತಪ್ಪು ಮಾಹಿತಿಯಾಗಿದೆ ಎಂದರು.
ಆರ್.ಬಿ.ಟೆಕ್ ಕಂಪನಿಯೊಂದಿಗೆ ೨೦೨೪-೨೫ ಹಾಗೂ ೨೦೨೫-೨೬ನ ಎರಡು ವರ್ಷಗಳ ಅವಧಿಗೆ ಟೆಂಡರ್ ಕರಾರು ಮಾಡಿಕೊಂಡಿದ್ದು, ಆರ್.ಬಿ.ಟೆಕ್ ಕಂಪನಿಗೆ ಆಗಿರುವ ನಷ್ಟ ಸಂಬಂಧ ಸರ್ಕಾರದ ಗಮನಕ್ಕೆ ತಂದಿದ್ದು, ಕಳೆದ ಸಾಲಿನಲ್ಲಿ ನುರಿಸಲಾಗದ ೫೦ ಸಾವಿರ ಟನ್ ಕಬ್ಬಿಗೆ ನಷ್ಟವನ್ನು ಸರಿದೂಗಿಸುವ ಹಾಗೂ ಪ್ರಸಕ್ತ ಸಾಲಿನಲ್ಲಿ ತಮ್ಮ ಕೆಲಸ ಮುಂದುವರೆಸುವಂತೆ ಆರ್.ಬಿ.ಟೆಕ್ ಕಂಪನಿಗೆ ಮನವರಿಕೆ ಮಾಡಲಾಗಿದೆ ಎಂದು ಹೇಳಿದರು.
ಸದರಿ ವಿಚಾರ ಸಂಬಂಧ ಇದೇ ಏಪ್ರಿಲ್ ತಿಂಗಳ ೧೨ರಂದು ರೈತ ಸಭೆ ನಡೆಸಲಾಗಿದ್ದು, ಆರ್.ಬಿ.ಟೆಕ್ ಕಂಪನಿಯೊಂದಿಗೆ ಆಗಿರುವ ಕರಾರಿನಂತೆ ಪ್ರಸಕ್ತ ಸಾಲಿನಲ್ಲಿ ೪.೫೦ ಲಕ್ಷ ಟನ್ಕಬ್ಬನ್ನು ನುರಿಸಲಾಗುವುದು ಹಾಗೂ ಜೂನ್ ತಿಂಗಳ ಅಂತ್ಯದಲ್ಲಿ ಕಾರ್ಖಾನೆಯಲ್ಲಿ ಕಬ್ಬು ನುರಿಸುವ ಪ್ರಕ್ರಿಯೆ ಪ್ರಾರಂಭಿಸಲಾಗುವುದು ಎಂದು ರೈತರಿಗೆ ತಿಳಿಸಲಾಗಿದೆ ಎಂದರು.
ಮೈಷುಗರ್ ಸಕ್ಕರೆ ಕಾರ್ಖಾನೆಯು ಲಾಭದಲ್ಲಿ ನಡೆಯುತ್ತಿರುವುದಾಗಿ ಕಳೆದ ಸಾಲಿನ ಕಬ್ಬು ನುರಿಯುವ ಕೆಲಸ ಮುಗಿಸಿ ತಿಳಿಸಲಾಗಿದ್ದು, ೨೦೨೪-೨೫ನೇ ಸಾಲಿನಲ್ಲಿ ಕಾರ್ಖಾನೆಯ ಆಸ್ತಿ ತೆರಿಗೆ ೬ ಕೋಟಿ ಪೈಕಿ ೩ ಕೋಟಿ ಪಾವತಿ ಮಾಡಲಾಗಿದೆ. ಕೋಜನ್ ಸಂಬಂಧ ಹೊಸ ರೋಟರಿ ಅಳವಡಿಸಲು ೪ ಕೋಟಿ, ಹಾಲಿ ಹಂಗಾಮಿಗೆ ಕಾರ್ಮಿಕರಿಗೆ ಮತ್ತು ಉಪಕರಣಗಳಿಗಾಗಿ ೬.೫೦ ಕೋಟಿ ಸೇರಿ ಒಟ್ಟು ೧೮ ಕೋಟಿ ರೂ ಹಣವನ್ನು ಸರ್ಕಾರದ ನೆರವಿಲ್ಲದೇ ರೈತರಿಗೆ ಕೊಡಬೇಕಾದ ಬಾಕಿ ಹಣವನ್ನು ನೀಡಿದ್ದೇವೆ ಎಂದು ಹೇಳಿಕೊಂಡರು.
ಮೈಷುಗರ್ ಕಾರ್ಖಾನೆಯ ಎಲ್ಲಾ ಮಾರಾಟದ ಮೂಲಗಳಿಂದ ದೊರೆತ ಆದಾಯದಿಂದಾಗಿ ಪಾರದರ್ಶಕವಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಕಾರ್ಖಾನೆಯಲ್ಲಿನ ಹಳೆಯ ಯಂತ್ರಗಳನ್ನು ಬದಲಾಯಿಸದರೆ ನಾವು ಸಹ ನೆರೆ ಹೊರೆಯ ಕಾರ್ಖಾನೆಗಳಂತೆ ಶೇ ೭.೫೦ ರಿಂದ ಶೇ ೮ರಷ್ಟು ಉತ್ಪಾದನೆ ಪಡೆಯಲು ಸಾಧ್ಯವಾಗುತ್ತದೆ. ಇದಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಇದೇ ವೇಳೆ ತಿಳಿಸಿದರು.
ಗೋಷ್ಠಿಯಲ್ಲಿ ಕಾಂಗ್ರೆಸ್ ನಗರ ಅಧ್ಯಕ್ಷ ರುದ್ರಪ್ಪ, ಎಸ್ಸಿ ಎಸ್ಟಿ ವಿಭಾಗದ ವಿಜಿ ಕುಮಾರ್, ವಕೀಲ ಮಂಜುನಾಥ್ ಸುಂಡಹಳ್ಳಿ, ಅಪ್ಪಾಜಿ, ಸಾತನೂರು ಕೃಷ್ಣ ಹಾಗೂ ಗೌರೀಶ್ ಇದ್ದರು.




