Sunday, November 22, 2026

ಪ್ರಾಯೋಗಿಕ ಆವೃತ್ತಿ

ನುಡಿ ಹಬ್ಬ | ವಸ್ತು ಪ್ರದರ್ಶನ ಮಳಿಗೆಗಳು ವಿನೂತನವಾಗಿರಲಿ ; ಮಧು ಮಾದೇಗೌಡ

ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಸ್ತು ಪ್ರದರ್ಶನ ಮಳಿಗೆಗಳು ವಿನೂತನ ರೀತಿಯಲ್ಲಿ ಜನರನ್ನು ಆಕರ್ಷಿಸುವಂತಹ ವೈವಿಧ್ಯಮಯ ಮಳಿಗೆಗಳನ್ನು ಏರ್ಪಡಿಸಬೇಕು ಎಂದು ವಿಧಾನಪರಿಷತ್ ಶಾಸಕ ಮಧು ಜಿ. ಮಾದೇಗೌಡ ತಿಳಿಸಿದರು.

ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ವಸ್ತು ಪ್ರದರ್ಶನ ಸಮಿತಿ ಸಭೆ ನಡೆಸಿ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬರುವ ಜನರಿಗೆ ಆಹಾರ ಮಳಿಗೆ ಜೊತೆಗೆ ಸರ್ಕಾರಿ ಕಾರ್ಯಕ್ರಮದ ಯೋಜನೆಗಳು, ಸೌಲಭ್ಯಗಳು ಹಾಗೂ ಆಯಾ ಇಲಾಖೆಗೆ ಸಂಬಂಧಿಸಿದ ಇನ್ನಿತರೆ ವಿಷಯಗಳ ಬಗ್ಗೆ ಅರಿವು ಮೂಡಿಸಿ ಎಂದು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ತಿಳಿಸಿದರು.

ವಸ್ತು ಪ್ರದರ್ಶನ ಸಮಿತಿಗೆ ಸಂಬಂಧಿಸಿದಂತೆ ಮಳಿಗೆಗಳನ್ನು ಸ್ಥಾಪಿಸಲು ಯಾವ ಇಲಾಖೆಗೆ ಎಷ್ಟು ವಿಸ್ತೀರ್ಣವುಳ್ಳ ಜಾಗಬೇಕು ಎಂಬುದರ ಬಗ್ಗೆ ಚರ್ಚಿಸಿದರು.

ಸಮ್ಮೇಳನದಲ್ಲಿ ವಸ್ತು ಪ್ರದರ್ಶನದಲ್ಲಿ ಎಷ್ಟು ಮಳಿಗೆಗಳನ್ನು ಹಾಕಬಹುದು ಎಂದು ತಾತ್ಕಾಲಿಕವಾಗಿ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ನಿಖರ ಹಾಗೂ ಸ್ಪಷ್ಟವಾಗಿ ಯೋಜನೆ ರೂಪಿಸಿ ಅದರಂತೆ ಕಾರ್ಯ ನಿರ್ವಹಿಸಲಾಗುವುದು ಎಂದು ತಿಳಿಸಿದರು.

ಕನ್ನಡ ಸಾಹಿತ್ಯ, ಕಲೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಸಿಕ್ಕಿರುವ ಶಾಸನ, ಜಿಲ್ಲೆಯ ಸಾಹಿತಿಗಳ ಪರಿಚಯ, ಅವರ ಕೃತಿ ಹಾಗೂ ಪ್ರಶಸ್ತಿ, ರೈತ ಚಳುವಳಿ, ಕನ್ನಡ ಬಾವುಟ, ಕನ್ನಡ ಸಾಹಿತ್ಯಕ್ಕೆ ಮುದ್ರಣ ಸಂಸ್ಥೆಗಳು ಹಾಗೂ ಪ್ರಕಾಶಕರುಗಳು ಸಾಹಿತ್ಯಕ್ಕೆ ನೀಡಿರುವ ಕೊಡುಗೆಗಳ ಬಗ್ಗೆ ಪ್ರದರ್ಶನವನ್ನು ಏರ್ಪಡಿಸುವುದು ಅವಶ್ಯ ಎಂದು ಸಭೆಯಲ್ಲಿದ್ದವರು ಅಭಿಪ್ರಾಯ ವ್ಯಕ್ತಪಡಿಸಿದರು.

ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಂಚಾಲಕಿ ಡಾ. ಮೀರಾಶಿವಲಿಂಗಯ್ಯ, ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಅಶೋಕ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮೋಹನ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಚ್. ಶಿವರಾಮೇಗೌಡ, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ರಾಘವೇಂದ್ರ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಡಾ. ಸಿದ್ದಲಿಂಗೇಶ್, ನಬಾರ್ಡ್ ನ ಜಿಲ್ಲಾ ವ್ಯವಸ್ಥಾಪಕಿ ಹರ್ಷಿತಾ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಅರುಣ್ ಕುಮಾರ್, ಮುಖಂಡರುಗಳಾದ ಕೆಂಪರಾಜು ಮಹೇಶ್ ಚಂದ್ರಗುರು, ಸತೀಶ್ ಜವರೇಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

25 ಇಲಾಖೆಗಳ ಮಳಿಗಳಿಗೆ ಅವಕಾಶ

ವಸ್ತು ಪ್ರದರ್ಶನದಲ್ಲಿ ಒಟ್ಟು 25 ಸರ್ಕಾರಿ ಇಲಾಖೆಗಳು ಮಳಿಗೆಗಳನ್ನು ತೆರೆಯಲಿವೆ. ಕೃಷಿ ಇಲಾಖೆಯಿಂದ ಬೆಲ್ಲ ತಯಾರಿಕ ಘಟಕದ ಮಾದರಿ, ತೋಟಗಾರಿಕೆ ಇಲಾಖೆಯಿಂದ ಕಲಾಕೃತಿ, ಎಕ್ಸೆಟಿಕ್ ಸಸಿ, ಬೋನ್ಸಾಯಿ, ಕನ್ನಡ ಭಾಷೆ ಬಿಂಬಿಸುವ ಪ್ರದರ್ಶನ, ಮೀನುಗಾರಿಕೆ ಇಲಾಖೆ ವತಿಯಿಂದ ಸರ್ಕಾರದ ಯೋಜನೆ, ವಿವಿಧ ಜಾತಿಯ ಮೀನುಗಳು, ಗದ್ದೆಯಲ್ಲಿ ಮೀನು ಸಾಕಾಣಿಕೆ ಪ್ರದರ್ಶನ, ರೇಷ್ಮೆ ಇಲಾಖೆಯಿಂದ ಇಲಾಖೆಯ ಯೋಜನೆಗಳ ಬಗ್ಗೆ ಅರಿವು, ರೇಷ್ಮೆ ಚಟುವಟಿಕೆ, ತಾಂತ್ರಿಕತೆಗಳು, ಉಪ ಉತ್ಪನ್ನದ ಪ್ರದರ್ಶನ, ಪಶು ಪಾಲನ ಇಲಾಖೆಯಿಂದ ಯೋಜನೆಗಳು, ಕುರಿ/ಮೇಕೆ ಸ್ಟಾಲ್ ಫೀಡಿಂಗ್, ಅರಣ್ಯ ವಿಭಾಗದಿಂದ ರಂಗನತಿಟ್ಟು ಮತ್ತು ಕೊಕ್ಕರೆ ಬೆಳ್ಳೂರು ಮಾದರಿ, ಕಾಡು ಪ್ರಾಣಿಗಳು, ಪಕ್ಷಿಗಳ ಹಾವಳಿ ತಪ್ಪಿಸುವ ಮಾರ್ಗೋಪಾಯಗಳ ಪ್ರದರ್ಶನ ಮತ್ತು ಮಾಹಿತಿ ಭಿತ್ತಿ ಪತ್ರಗಳ ಪ್ರದರ್ಶನ ನಡೆಯಲಿದೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ