Wednesday, November 18, 2026

ಪ್ರಾಯೋಗಿಕ ಆವೃತ್ತಿ

” ಯುದ್ಧ ಆಗಲಿ ಅನ್ನೋರ್ ಮನೇಲ್ಯಾರೂ ಸೈನಿಕ್ರಿರಲ್ಲ!? “

ಬಿ.ಟಿ.ವಿಶ್ವನಾಥ್

ಶತ್ರುದೇಶ ನಮ್ಮ ದೇಶದ ಮೇಲೆ ಉಗ್ರಗಾಮಿಗಳ ಮೂಲಕ ಪರೋಕ್ಷ ಯುದ್ಧ ಸಾರಿದೆ ಅಂದ್ರೆ ಅದನ್ನು ನಾವು ಒಕ್ಕೊರಲಿನಿಂದ ಖಂಡಿಸಲೇಬೇಕು. ಸರಕಾರಗಳು ಅದನ್ನು ಮಟ್ಟ ಹಾಕಲು ಕೈಗೊಳ್ಳುವ ಕ್ರಮಗಳಿಗೆ ಒತ್ತಾಸೆಯಾಗಿಯೂ ನಿಲ್ಲಬೇಕು ನಿಜ. ಆದರೆ ಯುದ್ಧ ಬಿಜೆಪಿಯದೋ ಕಾಂಗ್ರೆಸ್ಸಿನದೋ ಅಥವಾ ಇನ್ನಾವಪ ಪಕ್ಷದ್ದೋ ರಾಜಕೀಯ ಪ್ರಚಾರದ ಉರುವಲಾಗಬಾರದು ಅಷ್ಟೇ ಅಲ್ಲ ಗಡಿಯಲ್ಲಿನ ಅಂತಹ ಕ್ರಮಗಳು ದೇಶದೊಳಗೆ ಒಗ್ಗಟ್ಟನ್ನು ಬಹುತ್ವವನ್ನು ಒಗ್ಗೂಡಿಸುವಂತಿರಬೇಕು.

ನನ್ನ ಕಿರಿಯ ಸಹೋದ್ಯೋಗಿ ಮೊನ್ನೆ ಕೇಳ್ತಿದ್ದ ಸರ್ ವಕೀಲರು ಅವರ ಶ್ರಮ ಜಾಣ್ಮೆ ಖರ್ಚು ಮಾಡಿ ಕೇಸು ಗೆದ್ದರೆ ಅವರಿಗೆ ಹೆಸರು ಬರುತ್ತೆ ಆದರೆ ಯುದ್ಧ ಗೆಲ್ಲಿಸೋ ಸೈನಿಕರ ಹೆಸರನ್ನು ಡ್ಯಾಮು ಕಟ್ಟುವ ಕಾರ್ಮಿಕರ ಹೆಸರನ್ನು ಯಾರು ಇತಿಹಾಸದ ಪುಟಗಳಿಗೆ ಇದುವರೆಗೆ ಸೇರಿಸಿಯೇ ಇಲ್ಲ ಅಲ್ವಾ ಸರ್ ಅಂದ. ಯುದ್ಧ ನಮ್ಮ ನಾಯಕರು ಕೊಮೆದರು ನಮ್ಮ ನಾಯಕರು ಬಹಳ ಹಿಂದೆಯೇ ಕೊಮೆದಿದ್ದರು ಅಂತ ಕಿತ್ತಾಡುವ ರಾಜಕೀಯ ಕಾರ್ಯಕರ್ತರ ಟಿವಿ ಆಂಕರುಗಳ ಅಸಹ್ಯ ಕಿತ್ತಾಟದ ಬಗ್ಗೆ ಮಾತನಾಡುತ್ತಾ ಅವನು ಹಾಗೆಂದಿದ್ದ.

ಯಾರೋ ರಾಜಕೀಯ ನಾಯಕರ ಯಾವುದೋ ಪಕ್ಷದ ಹಿಂಬಾಲಕರಾಗಿ ಹಲ್ ಗಿಂಜಿ ಕಾಸು ಕಿತ್ತು ಪಟಾಕಿ ಹಚ್ಚಿದಂಗ್ ಅಲ್ಲ ಯುದ್ಧ. ನಮ್ಮಪ್ಪನ ಬಾಯಲ್ಲಿ ಯುದ್ಧದ ಕಥೆಗಳನ್ನು ಕೇಳುತ್ತಾ ಬೆಳೆದವನು ನಾನು. ನನ್ನ ತಂದೆಯ ಚಿಕ್ಕಪ್ಪ ದಾಸೇಗೌಡರು ಯುದ್ಧ ಮಾಡುತ್ತಲೇ ಯುದ್ಧಭೂಮಿಯಲ್ಲಿ ಬರ್ಮ ಗಡಿಯಲ್ಲಿ ಸತ್ತರಂತೆ.

ನಮ್ಮಪ್ಪನ ದೊಡ್ಡಪ್ಪ ಚಿನ್ನೆಗೌಡರು ಯುದ್ಧದಲ್ಲಿ ಭಾಗವಹಿಸಿ ಅಂಗವಿಕಲರಾಗಿ ಶಾಶ್ವತವಾಗಿ ಕಾಲುಕುಂಟು ಮಾಡಿಕೊಂಡು ವಾಪಸ್ ಆಗಿದ್ದರಂತೆ. ಚಿನ್ನೇಗೌಡರು ಊರಿಗೆ ಮರಳಲು ಬಹಳ ಕಾಲ ಹಿಡಿದಿತ್ತಂತೆ, ಅವರು ಸತ್ತೇ ಹೋಗಿರಬೇಕು ಅಂತ ನಮ್ಮಪ್ಪನ ಕುಟುಂಬದವರು ಊರಿನ ಜನ ಅವರ ತಿಥಿ ಮಾಡಿ ಮುಗಿಸಿದ್ದರಂತೆ..

ಯುದ್ಧಕ್ಕೆ ಮಕ್ಕಳನ್ನು ಕಳುಹಿಸಿದ ತಾಯಂದಿರು, ಗಂಡಂದಿರನ್ನು ಕಳುಹಿಸಿದ ಹೆಂಡತಿಯರು ಇತ್ಯಾದಿ ಜನರು ಅವರು ಯುದ್ಧ ಮುಗಿದು ಮನೆಗೆ ಮರಳುವರೋ ಇಲ್ಲವೋ ಅಂತ ಉಸಿರು ಬಿಗಿಹಿಡಿದು ತಹತಹದಿಂದ ದಿನಗಳೆಣಿಸುತ್ತ ಕಾಯುವ ಹೃದಯಗಳ ಕಥೆಯನ್ನು ನನ್ನ ತಂದೆ ನನಗೆ ಹೇಳುತ್ತಿದ್ದರು.

ಜಿರಲೆಗೂ ಹೆದರುವವರು ಟಿವಿಯ ಮುಂದೆ ಕುಳಿತು ಯುದ್ಧದ ದೃಶ್ಯಗಳನ್ನು ಸಾವು ನೋವುಗಳನ್ನು ಕ್ರಿಕೆಟ್ನಂತೆ ಆನಂದಿಸುತ್ತಾ ಆಸ್ವಾದಿಸುತ್ತಾ ಸಾಧ್ಯವಾದರೆ ಮೃತ್ಯುಂಜಯ ಹೋಮ ಮಾಡಿಸಿ ಪೇಪರ್ಗಳಲ್ಲಿ ಪ್ರಚಾರ ಗಿಟ್ಟಿಸುತ್ತ ವಿಶ್ವಶಾಂತಿಗಾಗಿ ಒತ್ತಾಯಿಸಿ ಹೇಳಿಕೆಯಿತ್ತವರನ್ನು ದೇಶದ್ರೋಹಿಗಳಂತೆ ಚಿತ್ರಿಸುತ್ತ ಸಂಭ್ರಮಿಸುವ ಮೂರ್ಖರನ್ನು ನೋಡಿ ಅವರ ರಾಜಕೀಯ ಅನಕ್ಷರತೆಯನ್ನು ನೋಡಿ ದೇಶದ ಭವಿಷ್ಯದ ಬಗ್ಗೆ ಪ್ರಜಾಪ್ರಭುತ್ವದ ಉಳಿವಿನ ಬಗ್ಗೆ ವ್ಯಾಕುಲಗೊಳ್ಳುತ್ತೇನೆ .

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ