Friday, October 18, 2024

ಪ್ರಾಯೋಗಿಕ ಆವೃತ್ತಿ

ಅಲ್ಲಮ – ಅಕ್ಕಮಹಾದೇವಿಯವರ ಜೀವನೋತ್ಸಾಹ ತುಂಬುವ ವಚನದ ಸಾಲುಗಳು……

ವಿವೇಕಾನಂದ ಎಚ್.ಕೆ

( ಇದು
ಪ್ರೀತಿಯ ಮಾಯೆಯೊಳಗೆ ಸಿಲುಕಿ,
ಕಾಮದ ಬಲೆಯೊಳಗೆ ಬಂಧಿಯಾಗಿ,
ಅಜ್ಞಾನದ ಮೋಹ ಪಾಶದಲ್ಲಿ ಒದ್ದಾಡಿ,
ಹಣದ ದಾಹದಲ್ಲಿ ಮೈಮರೆತು ಅದರಿಂದ ಹೊರಬಂದ ವ್ಯಕ್ತಿಯೊಬ್ಬನ ಸ್ವಗತ…..)

ಶಬ್ದವೆಂಬನೆ ಶೋತ್ರದೆಂಜಲು, ಸ್ಪರ್ಶವೆಂಬೆನೆ ತೊಕ್ಕಿ ನೆಂಜಲು,
ರೂಪವೆಂಬನೆ ನೇತ್ರದೆಂಜಲು, ಪರಿಮಳವೆಂಬನೆ ಘ್ರಾಣದೆಂಜಲು, ರುಚಿಯೆಂಬೆನೆ
ಜಿಹ್ವೆ ಎಂಜಲು,
ನಾನೆಂಬೆನೆ ಅರಿವಿನೆಂಜಲು, ಎಂಜಲೆಂಬ ಬಿನ್ನವಳಿದ ಬೆಳಗಿನೊಳಗಣ ಬೆಳಗು, ಗುಹೇಶ್ವರ ಲಿಂಗವು…….
ಅಲ್ಲಮಪ್ರಭು,

ಸತ್ಯವೂ ಇಲ್ಲ ಅಸತ್ಯವೂ ಇಲ್ಲ,
ಸಹಜವೂ ಇಲ್ಲ ಅಸಹಜವೂ
ಇಲ್ಲ.
ನಾನು ಇಲ್ಲ ನೀನು ಇಲ್ಲ,
ಇಲ್ಲ ಇಲ್ಲ ಎಂಬುದು ತಾನಿಲ್ಲ,
ಗುಹೇಶ್ವರ ಲಿಂಗ
ತಾ ಬಯಲು….
ಅಲ್ಲಮಪ್ರಭು,

ಹಸಿವಾದೊಡೆ ಭಿಕ್ಷಾನ್ನಗಳುಂಟು, ತೃಷೆಯಾದರೆ ಕೆರೆ ಹಳ್ಳ ಭಾವಿಗಳುಂಟು,
ಶಯನಕ್ಕೆ ಹಾಳು ದೇಗುಲಗಳುಂಟು, ಚೆನ್ನಮಲ್ಲಿಕಾರ್ಜುನಯ್ಯ ಆತ್ಮ ಸಂಗಾತಕ್ಕೆ ನೀನೆನಗುಂಟು… –
ಅಕ್ಕ ಮಹಾದೇವಿ,

ಆಳ ಪ್ರೀತಿಯಲ್ಲಿ ಸಿಲುಕಿ ಅದರಿಂದ ವಂಚನೆಗೊಳಗಾಗಿ ವಿರಹಿಯಾದ ವ್ಯಕ್ತಿಗಳು ಹುಚ್ಚರಾಗುತ್ತಾರೆ ಅಥವಾ ವ್ಯಸನಿಗಳಾಗುತ್ತಾರೆ ಅಥವಾ ತತ್ವಜ್ಞಾನಿಗಳಾಗುತ್ತಾರೆ ಎಂಬ ಮಾತಿದೆ…..

ಇಲ್ಲಿನ ವ್ಯಕ್ತಿಯು ತತ್ವಜ್ಞಾನಿಯಾಗುವ ಹಾದಿಯಲ್ಲಿದ್ದಾನೆ ಎನಿಸುತ್ತದೆ……

ಪ್ರೀತಿಯ ಆಳದಲ್ಲಿ ಅರಳುವ ಬದುಕು ತದನಂತರ ಬದುಕಿನ ಸುನಾಮಿಗೆ ಸಿಲುಕಿ ವಿವಿಧ ರೂಪಗಳನ್ನು ಪಡೆಯುತ್ತಾ, ಪಡೆಯುತ್ತಾ ತತ್ವಜ್ಞಾನಕ್ಕೆ ಸಾಗಿ ಬಯಲಾಗುವ ಪ್ರಕ್ರಿಯೆ ಬಹುಶಃ ಕೆಲವರಿಗೆ ಮಾತ್ರ ಸಿಗುವಂತದ್ದು…..

ಸಹಜ ಸ್ಥಿತಿಯಲ್ಲಿ ಇದು ಸಾಧ್ಯವಿಲ್ಲ. ಹಾಗೆಯೇ ಇದನ್ನು ಒಂದು ಯೋಜನೆಯಂತೆ, ಕಲಿಕೆಯಂತೆ, ಸಾಧನೆಯಂತೆ ಪಡೆಯಲು ಸಾಧ್ಯವಿಲ್ಲ. ಇದು ಘಟಿಸಬೇಕು ಮತ್ತು ಘಟಿಸುತ್ತದೆ. ಘಟಿಸಿದಾಗ ಮಾತ್ರ ಹೊಮ್ಮುವ ಬಾ
ಭಾವವಿದು…….

ಅಲ್ಲಮ ನಾನೆಂಬುದು ಅರಿವಿನ ಎಂಜಲು ಎಂಬಂತ ಅತ್ಯಮೋಘ,
ಸೃಷ್ಟಿಯ ವಾಸ್ತವ ಸತ್ಯವನ್ನು ಹೇಳುತ್ತಾರೆ. ಹಾಗೆಯೇ ಬದುಕಿನ ನಶ್ವರತೆಯ ಬಗ್ಗೆ ಅಕ್ಕಮಹಾದೇವಿಯು ಬರೆಯುತ್ತಾರೆ,
ಇವೆರಡರ ಒಳ ಅರ್ಥವೇ
ತತ್ವಜ್ಞಾನದ ಸಾರಗಳು……

ಅಲ್ಲಮ, ಅಕ್ಕಮಹಾದೇವಿಯಂತ ಅದ್ಭುತ ಚಿಂತನೆಗಳ ವಚನಕಾರರನ್ನು ಒಬ್ಬ ನೊಂದ ಜೀವಿಯು ಉದಾಹರಣೆಗಳ ಸಮೇತ ನೆನಪಿಸಿಕೊಳ್ಳಲು ಕಾರಣ, ಈ ಬದುಕಿನ ವಾಸ್ತವತೆಗೆ ಆತ/ಆಕೆ ತೆರೆದುಕೊಳ್ಳುವ ಅಥವಾ ಬಯಲಾಗುವ ಅಥವಾ ಬೆತ್ತಲಾಗುವ ಅಥವಾ ಮುಕ್ತವಾಗುವ ಪ್ರಕ್ರಿಯೆಯ ಭಾಗ…..

ನಿನ್ನ ನೋಟ ನಿನ್ನದೇ ಕಣ್ಣಿನ ಎಂಜಲು,
ನಿನ್ನ ಸ್ಪರ್ಶ ಚರ್ಮದ ಎಂಜಲು, ನಿನ್ನ ರುಚಿ ನಾಲಿಗೆಯ ಎಂಜಲು,
ನಿನ್ನ ವಾಸನೆ ಮೂಗಿನ ಎಂಜಲು,
ನೀನೆಂಬುದೇ ನಿನ್ನ ಅರಿವಿನ ಎಂಜಲು,
ಎಂಬಂತ ನಿನ್ನನ್ನೇ ನೀನು ಅರಿತುಕೊಳ್ಳಲು,
ನಿನ್ನ ಅಸ್ತಿತ್ವವನ್ನೇ ಪ್ರಶ್ನೆ ಮಾಡಿಕೊಳ್ಳಲು,
ನಿನ್ನ ಇರುವನ್ನೇ ಪ್ರಶ್ನಿಸಲು, ಅಲ್ಲಮ ಉಪಯೋಗಿಸುವ ಅರ್ಥಗರ್ಭಿತ ಪರಿಕಲ್ಪನೆ ಅಷ್ಟು ಸುಲಭವಾಗಿ ಸಾಮಾನ್ಯ ಜನರ ಜ್ಞಾನಕ್ಕೆ ನಿಲುಕುವುದಿಲ್ಲ….

ಹಾಗೆಯೇ ಎಲ್ಲೋ ಕೆರೆ ಬಾವಿಯ ನೀರು ಕುಡಿಯುತ್ತಾ, ಯಾರೋ ಭಿಕ್ಷೆಯಾಗಿ ನೀಡಿದ ಆಹಾರ ಸೇವಿಸುತ್ತಾ,
ಇನ್ನೆಲ್ಲೋ ಸಿಕ್ಕಸಿಕ್ಕ ಜಾಗಗಳಲ್ಲಿ ಮಲಗುತ್ತಾ,
ಬದುಕನ್ನು ಅತ್ಯಂತ ಸುಂದರವಾಗಿ, ಸರಳವಾಗಿ, ಸಹಜವಾಗಿ ಕಳೆಯುವ ಆ ಸರಳತೆ, ಆ ಸ್ಥಿತಪ್ರಜ್ಞತೆ, ಅಕ್ಕಮಹಾದೇವಿಯ ವಚನದ ಈ ಸಾಲುಗಳು ನಮ್ಮಂತ ಸಾಮಾನ್ಯ ಜನರ ಅರಿವಿಗೆ ನಿಲುಕಿದ್ದೇ ಆದರೆ ಯಾವ ಕಷ್ಟಗಳು ಕಷ್ಟಗಳಲ್ಲ,
ಯಾವ ವಿರಹಗಳು ವೇದನೆಯಲ್ಲ,
ಯಾವ ನೋವುಗಳು ನೋವುಗಳೇ ಅಲ್ಲ….

ಅದರ ಅರ್ಥ ನಮಗೆ ಕಷ್ಟಗಳು ನೋವುಗಳು, ಸಾವುಗಳು ಇರುವುದಿಲ್ಲ ಎಂಬುದಲ್ಲ. ಅವು ಇದ್ದರೂ ಅದನ್ನು ಸಹಿಸುವ, ಸ್ವೀಕರಿಸುವ, ಅದಕ್ಕೆ ಪ್ರತಿಕ್ರಿಯಿಸುವ ನಮ್ಮ ಮನಸ್ಥಿತಿ ನಮ್ಮನ್ನು ಸದಾ ನೆಮ್ಮದಿಯಾಗಿರುವಂತೆ ಸಂತೋಷದಿಂದಿರುವಂತೆ, ಅವು ನಮ್ಮನ್ನು ಅತಿಯಾಗಿ ಕಾಡದಂತೆ, ಎಲ್ಲವನ್ನು ಕಳೆದುಕೊಂಡರು ನಮ್ಮನ್ನು ನಾವು ಪಡೆಯುವಂತೆ, ತತ್ವಜ್ಞಾನಿಯ ಮನಸ್ಥಿತಿಯಲ್ಲಿ ನಾವು ಬದುಕಬಹುದು ಎಂಬುದನ್ನು ಅರ್ಥ ಮಾಡಿಸುತ್ತದೆ……..

ಅದಕ್ಕಾಗಿಯೇ ನೊಂದ ವಿರಹಿಯೊಬ್ಬ ಈ ರೀತಿಯ ಸಾಲುಗಳನ್ನು ಆಯ್ಕೆ ಮಾಡಿಕೊಂಡು ತನ್ನೆಲ್ಲಾ ನೋವುಗಳನ್ನು ನಲಿವಾಗಿ ಪರಿವರ್ತಿಸಿಕೊಳ್ಳುವ ಪ್ರಕ್ರಿಯೆ ನಮ್ಮ ಕಣ್ಣ ಮುಂದೆಯೇ ಇದೆ. ಇದನ್ನು ಇಲ್ಲಿ ಪ್ರಸ್ತಾಪಿಸಲು ಕಾರಣ ಅನೇಕ ವಿರಹಿಗಳು, ಕಷ್ಟಕ್ಕೆ ಸಿಲುಕಿದವರು, ಅಸಹಾಯಕರು, ವ್ಯಸನಿಗಳಾಗಲು, ಹುಚ್ಚರಾಗಲು, ಆತ್ಮಹತ್ಯೆಗೆ ಶರಣಾಗಲು ಕಾರಣವೇ ಇಲ್ಲ. ಏಕೆಂದರೆ ಬದುಕು ಅಷ್ಟೊಂದು ಹೀನವಲ್ಲ, ನಾವು ಹೋರಾಡಬೇಕಿರುವುದು ಬದುಕಲೇ ಹೊರತು ಸಾಯಲು ಅಲ್ಲ. ಕಷ್ಟಗಳು ಬದುಕಿನ ಭಾಗಗಳು. ನಾವು ಸಹಜವಾಗಿ ಅದನ್ನು ಮೀರಲು ಅದಕ್ಕಿಂತ ಅತ್ಯುತ್ತಮ ಅವಕಾಶಗಳು, ಕಾರಣಗಳು ನಮ್ಮ ನಡುವೆ ಇದೆ. ಅದನ್ನು ದಯವಿಟ್ಟು ಅರ್ಥ ಮಾಡಿಕೊಳ್ಳಿ. ನಮ್ಮಲ್ಲಿನ ಇಷ್ಟೊಂದು ಅದ್ಭುತ ಚಿಂತನೆಗಳು ಇರುವಾಗ ಸಾವಿಗೆ ನೋವಿಗೆ ವಿರಹಕ್ಕೆ ಅಂಜಬೇಕಿಲ್ಲ. ದಯವಿಟ್ಟು ಅದನ್ನು ಹುಡುಕುವ ಪ್ರಯತ್ನ ಮಾಡಿ…………

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!