ಸರ್ಕಾರ ಭತ್ತದ ಖರೀದಿಯನ್ನು ಆರಂಭಿಸದೇ ಭತ್ತ ಬೆಳೆದ ರೈತರಿಗೆ ದ್ರೋಹ ಬಗೆಯುತ್ತಿದ್ದು, ಕೂಡಲೇ ಭತ್ತ ಖರೀದಿ ಕೇಂದ್ರವನ್ನು ಆರಂಭಿಸಬೇಕೆಂದು ಟಿಎಪಿಸಿಎಂಎಸ್ ನಿರ್ದೇಶಕ ಮೋಳೆದೊಡ್ಡಿ ಎಂ ಲಿಂಗರಾಜು ಒತ್ತಾಯಿಸಿದರು.
ಮಳವಳ್ಳಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಷ್ಟಪಟ್ಟು ಬೆಳೆದ ಭತ್ತವನ್ನು ರೈತರು ಒಕ್ಕಣೆ ಮಾಡಲು ಆರಂಭಿಸಿ ಸುಮಾರು ಒಂದು ತಿಂಗಳು ಕಳೆಯುತ್ತಿದೆ, ರೈತರು ಮೂಗಿಗೆ ತುಪ್ಪ ಸವರಿದಂತೆ ಭತ್ತ ರಾಗಿ ಖರೀದಿಸಲು ಕೇವಲ ನೊಂದಾಣಿಯನ್ನು ಮಾತ್ರ ಮಾಡಿಕೊಳ್ಳಲಾಗುತ್ತಿದೆ, ಮಳವಳ್ಳಿ ತಾಲ್ಲೂಕಿನಾ ದ್ಯಂತ ಸಾವಿರಾರು ಕ್ವಿಂಟಲ್ ಭತ್ತವನ್ನು ರೈತರು ಬೆಳೆದಿದ್ದಾರೆ, ನೋಂದಾಣಿ ಪ್ರಕ್ರಿಯೆಯಲ್ಲಿ ಇಲ್ಲಿಯವರೆ ಸುಮಾರು 933 ರೈತರು 11,500 ರಾಗಿ ಹಾಗೂ 857 ರೈತರು 30 ಸಾವಿರ ಕ್ವಿಂಟಲ್ ಭತ್ತ ಮಾರಾಟ ಮಾಡಲು ನೊಂದಾಯಿಸಿಕೊಂಡಿದ್ದಾರೆ, ಆದರೇ ಭತ್ತ ಖರೀದಿಸಲು ಮಾತ್ರ ಮುಂದಾಗಿಲ್ಲ ಎಂದು ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈತರು ಸಾಲ ಮಾಡಿ ವ್ಯವಸಾಯ ಮಾಡಿಕೊಂಡಿರುತ್ತಾರೆ, ಸಾಲ ತೀರಿಸಲು ದಲ್ಲಾಳಿಗಳಿಗೆ ಕಡಿಮೆ ದರದಲ್ಲಿ ಭತ್ತವನ್ನು ಮಾರಾಟ ಮಾಡಲು ಮುಂದಾಗುತ್ತಿದ್ದಾರೆ, ಜೊತೆಗೆ ಗ್ರಾಮೀಣ ಪ್ರದೇಶದಲ್ಲಿ ಬಹುತೇಕ ರೈತರಿಗೆ ಭತ್ತವನ್ನು ಸುರಕ್ಷತೆಯಿಂದ ಇಟ್ಟಿಕೊಳ್ಳಲು ಸ್ಥಳದ ಅಭಾವದಿಂದಾಗಿ ಭತ್ತವನ್ನು ಮಾರಾಟ ಮಾಡುತ್ತಿದ್ದಾರೆ.
ದಲ್ಲಾಳಿಗಳಿಗೆ ಅನುಕೂಲವಾಗುವಂತೆ ರೈತರು ಭತ್ತ ಮಾರಾಟ ಮಾಡಿದ ಮೇಲೆ ಭತ್ತ ಖರೀದಿ ಕೇಂದ್ರವನ್ನು ಆರಂಭಿಸಿದರೇ ಯಾವುದೇ ಪ್ರಯೋಜನ ವಾಗುವುದಿಲ್ಲ, ಮಂಡ್ಯ ಜಿಲ್ಲೆಯಲ್ಲಿ ಎಚ್ಚೆತ್ತವಾಗಿ ಭತ್ತ ಬೆಳೆಯುತ್ತಿರು ವುದರಿಂದ ಜಿಲ್ಲಾಢಳಿತ ಮತ್ತು ಮಂಡ್ಯ ಜಿಲ್ಲೆಯ ಏಳು ಶಾಸಕರು ಭತ್ತ ಖರೀದಿ ಆರಂಭಿಸಲು ಸರ್ಕಾರದ ಗಮನ ಸೆಳೆಯಬೇಕು, ತಾಲ್ಲೂಕು ಆಢಳಿತವು ಕೂಡ ನಮಗೂ ಅದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಮೈ ಮರೆಯದೇ ಸರ್ಕಾರಕ್ಕೆ ಪತ್ರ ಬರೆದು ಭತ್ತ ಖರೀದಿ ಆರಂಭಿಲು ಒತ್ತಾಯಿಸಬೇಕು, ತಕ್ಷಣದಲ್ಲಿಯೇ ಭತ್ತ ಖರೀದಿ ಕೇಂದ್ರವನ್ನು ಆರಂಭಿಸದಿದ್ದರೇ ತಾಲ್ಲೂಕು ಕಚೇರಿ ಮುಂದೆ ಸಾವಿರಾರು ರೈತರು ಪ್ರತಿಭಟನೆಯನ್ನು ಹಮ್ಮಿ ಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.




