ಸಕ್ಕರೆ ನಾಡು ಮಂಡ್ಯದಲ್ಲಿ ನಡೆದ 87ನೇ ಸಾಹಿತ್ಯ ಸಮ್ಮೇಳನ ಯಶಸ್ವಿಗೆ ಕಾರಣರಾದ ಎಲ್ಲರಿಗೂ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೃತಜ್ಞತೆ ಸಲ್ಲಿಸಿದರು.
ಮಂಡ್ಯದ ಜಿಲ್ಲಾ ಪಂಚಾಯತಿಯ ಕಾವೇರಿ ಸಭಾಂಗಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,
ಕೃಷ್ಣರಾಜಸಾಗರ ಅಣೆಕಟ್ಟು ನಿರ್ಮಾಣ, ಮೈಷುಗರ್ ಸಕ್ಕರೆ ಕಾರ್ಖಾನೆ ನಿರ್ಮಾಣದ ಜೊತೆ ಈ ಜಿಲ್ಲೆಯ ರೈತರ ಬದುಕಿಗೆ ದಾರಿದೀಪವಾಗಿದ್ದ ನಾಲ್ವಡಿ ಅವರು ಕಟ್ಟಿದ ಕನ್ನಡ ಸಾಹಿತ್ಯ ಪರಿಷತ್ತು ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ಸದಾ ಕನ್ನಡ ಕಟ್ಟುವ ಕೆಲಸದಲ್ಲಿ ನಿರತವಾಗಿರುವ ಸಾಹಿತ್ಯ ಪರಿಷತ್ತು 87ನೇ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ಮಾಡಿದೆ.
ಈ ಸಮ್ಮೇಳನ ಕೇವಲ ಸಾಹಿತ್ಯ ಕೂಟವಾಗಿರಲಿಲ್ಲ; ಇದು ಕನ್ನಡಿಗರ ಒಗ್ಗಟ್ಟಿಗೆ ಸಾಕ್ಷಿಯಾಗಿತ್ತು. ಉದ್ಘಾಟನಾ ಮೆರವಣಿಗೆಯಿಂದ ಸಮಾರೋಪ ಸಮಾರಂಭದವರೆಗೆ, ಸಮಾಜದ ಎಲ್ಲಾ ವರ್ಗದ ಜನರ ಅಗಾಧ ಭಾಗವಹಿಸುವಿಕೆ ನಮ್ಮ ನಾಡು ನುಡಿಯ ಬಗ್ಗೆ ಇರುವ ಆಳವಾದ ಪ್ರೀತಿ ಮತ್ತು ಗೌರವವನ್ನು ಪ್ರತಿಧ್ವನಿಸಿತ್ತು. ಸಾಹಿತ್ಯದ ಕುರಿತಾದ ಚರ್ಚೆಯ ಜೊತೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು, ಪುಸ್ತಕ ಪ್ರದರ್ಶನಗಳನ್ನು ಸುಮಾರು ಆರು ಲಕ್ಷಕ್ಕೂ ಅಧಿಕ ಜನರು ಪ್ರತ್ಯಕ್ಷವಾಗಿ ಕಣ್ಮುಂಬಿಕೊಂಡರೆ ಸಾಮಾಜಿಕ ಜಾಲತಾಣಗಳ ನೇರಪ್ರಸಾರವನ್ನು ದೇಶ ವಿದೇಶದಲ್ಲಿರುವ ಕೋಟ್ಯಂತರ ಕನ್ನಡಿಗರು ವೀಕ್ಷಿಸಿದ್ದಾರೆ ಎಂದರು.
1973ರಲ್ಲಿ ನಮ್ಮ ರಾಜ್ಯ ಮರು ನಾಮಕರಣಗೊಂಡು ಕರ್ನಾಟಕ ಎಂದು ಬದಲಾದ ಬಳಿಕ 1974ರಲ್ಲಿ ನಮ್ಮ ಮಂಡ್ಯದಲ್ಲಿ ಮೊದಲ ಬಾರಿಗೆ 48ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಿತ್ತು. 1994ರಲ್ಲಿ ಎರಡನೇ ಬಾರಿ ನಡೆದಾಗ ನಾನು ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದೆ. ಇದೀಗ 30 ವರ್ಷಗಳ ಬಳಿಕ ಮತ್ತೊಮ್ಮೆ ನಮ್ಮ ಜಿಲ್ಲೆಯಲ್ಲಿ ಜರುಗಿದ ಕನ್ನಡ ಹಬ್ಬವನ್ನು ಯಶಸ್ವಿಯಾಗಿ ಮುನ್ನಡೆಸುವ ಜವಾಬ್ದಾರಿ ನನಗೆ ಸಿಕ್ಕಿತು.
ಸಿಎಂ, ಡಿಸಿಎಂ ಅವರಿಗೆ ವಿಶೇಷ ಧನ್ಯವಾದ
ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿಗಳ ದಿವ್ಯ ಮಾರ್ಗದರ್ಶನದಲ್ಲಿ ಸುಸೂತ್ರವಾಗಿ ನಡೆದ ಸಮ್ಮೇಳನಕ್ಕೆ ಸರ್ಕಾರದಿಂದ ಸಂಪೂರ್ಣ ಸಹಕಾರ ಸಿಗಲು ಕಾರಣರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ, ಡಿ.ಕೆ. ಶಿವಕುಮಾರ್ ಅವರಿಗೆ ನಮ್ಮ ಮಂಡ್ಯ ಜನತೆಯ ಪರವಾಗಿ ವಿಶೇಷ ಧನ್ಯವಾದ ತಿಳಿಸುತ್ತಿದ್ದೇನೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮಹೇಶ್ ಜೋಶಿ, ಜಿಲ್ಲಾ ಸಂಚಾಲಕರಾದ ಡಾ. ಮೀರಾ ಶಿವಲಿಂಗಯ್ಯ ಅವರ ಪರಿಶ್ರಮವನ್ನು ಮರೆಯುವಂತಿಲ್ಲ. ವಿಧಾನ ಸಭೆ ಹಾಗೂ ಪರಿಷತ್ತಿನ ಸದಸ್ಯರು, ಮಾಜಿ ಶಾಸಕರು,ಜಿಲ್ಲಾಧಿಕಾರಿಗಳು,ಎಸ್ಪಿ,ಜಿ.ಪಂ.ಸಿಇಒ,ಅಧಿಕಾರಿಗಳು,ಹಿರಿಯ ಸಾಹಿತಿಗಳು, ಸಾಹಿತ್ಯಾಸಕ್ತರು, ಜನಪ್ರತಿನಿಧಿಗಳು, ಪೌರ ಕಾರ್ಮಿಕರು, ಪೋಲಿಸರು, ವಿವಿಧ ಸಂಘಟನೆಗಳು ಸೇರಿದಂತೆ ಸಮ್ಮೇಳನದ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ ಎಂದರು.
ಅಧಿಕಾರಿಗಳು ಹಗಲಿರುಳೆನ್ನದೆ ಶ್ರಮಿಸಿದ್ದಾರೆ
ಸಮ್ಮೇಳನ ಸುಸೂತ್ರವಾಗಿ ನಡೆಯಲು 28 ವಿವಿಧ ಸಮಿತಿಗಳನ್ನು ರಚಿಸಲಾಗಿತ್ತು.ಶಾಸಕರು,ವಿಧಾನ ಪರಿಷತ್ ಸದಸ್ಯರು, ಮಾಜಿ ಶಾಸಕರು, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿ.ಪಂ. ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿ ಸೇರಿದಂತೆ ಎಲ್ಲಾ ಅಧಿಕಾರಿಗಳು ಹಗಲಿರುಳೆನ್ನದೆ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಗೆ ಕಾರಣರಾಗಿದ್ದಾರೆ. ಸಮ್ಮೇಳನದ ಸರ್ವಾಧ್ಯಕ್ಷ ಡಾ. ಗೊ.ರು. ಚನ್ನಬಸಪ್ಪ ಅವರು ಮಂಡಿಸಿದ ಹಕ್ಕೊತ್ತಾಯಗಳು ಕನ್ನಡ ನಾಡು- ನುಡಿಯ ಉಳಿವು ಬೆಳವಿಗೆ ತುರ್ತಾಗಿ ಅಗತ್ಯವಿರುವ ಮಹತ್ವದ ಅಂಶಗಳಾಗಿವೆ. ಕಡ್ಡಾಯ ಕನ್ನಡ ಶಿಕ್ಷಣ, ಆಯವ್ಯಯದಲ್ಲಿ ಶಿಕ್ಷಣಕ್ಕೆ ಅನುದಾನ ಮೀಸಲಿಡುವುದು, ಸಾರ್ವಜನಿಕ ಹಾಗೂ ಖಾಸಗಿ ವಲಯದ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಮೀಸಲು, ಸರ್ಕಾರಿ ಹಾಗೂ ಖಾಸಗಿ ಕಚೇರಿಗಳ ನಾಮಫಲಕವನ್ನು ಕನ್ನಡದಲ್ಲಿ ಅಳವಡಿಸುವುದು,ಗ್ರಂಥಾಲಯಗಳ ಪೋಷಣೆ, ಜಿಲ್ಲಾಡಳಿತದಲ್ಲಿ ಕನ್ನಡ ಬಳಕೆ ಜೊತೆ ಇನ್ನೂ ಅನೇಕ ಸಂಗತಿಗಳ ಬಗ್ಗೆ ಗೊರುಚ ರವರು ಬೆಳಕು ಚೆಲ್ಲಿದ್ದಾರೆ.ಈ ಎಲ್ಲಾ ಹಕ್ಕೊತ್ತಾಯಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಲಿದೆ ಎಂದರು.
ಜನಸಾಗರ
ಮೂರು ದಿನಗಳ ಕಾಲ ನಡೆದ ಸಾಹಿತ್ಯ ಸಮ್ಮೇಳನಕ್ಕೆ ಜನರು ಸಾಗರೋಪಾದಿಯಲ್ಲಿ ಬಂದು ಯಶಸ್ವಿಗೊಳಿಸಿದರು. ಹಲವು ಗೋಷ್ಟಿಗಳಲ್ಲಿ ಉತ್ತಮ ಚರ್ಚೆ ನಡೆಯಿತು. ಮಹಿಳೆಯರು, ರೈತ ಸಮುದಾಯ,ಶಿಕ್ಷಣ, ಸಾಹಿತ್ಯ ಸೇರಿದಂತೆ ನಡೆದ ಎಲ್ಲಾ ವಿಚಾರಗೋಷ್ಠಿಗಳು ಯಶಸ್ವಿಯಾಗಿ ನಡೆದಿದೆ.ಶಾಸಕರಾದ ಪಿ.ಎಂ.ನರೇಂದ್ರ ಸ್ವಾಮಿ ಅವರು ಸಮ್ಮೇಳನದ ವೇದಿಕೆ ಸಮಿತಿ ವಹಿಸಿಕೊಂಡು ಮೈಸೂರಿನ ಷರೀಫ್ ಹಾಗೂ ತಿಬ್ಬಾದೇವಿ ಟೆಂಟ್ ಹೌಸ್ ಅವರಿಂದ ಉತ್ತಮ ಕೆಲಸ ಮಾಡಿಸಿದ್ದಾರೆ. ರಮೇಶ್ ಬಾಬು ಅವರು ತುಂಬಾ ಅಚ್ಚುಕಟ್ಟಾಗಿ ಊಟದ ವ್ಯವಸ್ಥೆ ಮಾಡಿದ್ದರು. ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಅವರು ಸ್ಥಳೀಯ ಕಲಾವಿದರಿಗೆ ಮೊದಲ ಆದ್ಯತೆ ನೀಡಿ ಅವಕಾಶ ಕಲ್ಪಿಸಿದರು. ಮೆರವಣಿಗೆ ಸಮಿತಿಯ ಮಧು ಮಾದೇಗೌಡ ಸಾಕಷ್ಟು ಶ್ರಮವಹಿಸಿ ಕೆಲಸ ಮಾಡಿದ್ದಾರೆ.ಶಾಸಕರಾದ ದರ್ಶನ್ ಪುಟ್ಟಣ್ಣಯ್ಯ,ಉದಯ್,ಎಂಎಲ್ಸಿ ವಿವೇಕಾನಂದ ಅವರು ತಮ್ಮ ಜವಾಬ್ದಾರಿ ಯಶಸ್ವಿಯಾಗಿ ನಿಭಾಯಿಸಿದ್ದಾರೆ ಎಂದರು.
ಶಾಸಕ ರವಿಕುಮಾರ್ ಹೆಚ್ಚು ಶ್ರಮ ಹಾಕಿದ್ದಾರೆ
ಯಶಸ್ವಿ ಕನ್ನಡ ಮ್ಯಾರಥಾನ್ ಶಾಸಕ ಗಣಿಗ ರವಿ ಕುಮಾರ್ ಕನ್ನಡ ಮ್ಯಾರಥಾನ್ ಆಯೋಜಿಸಿ ಸಾಹಿತ್ಯ ಸಮ್ಮೇಳನಕ್ಕೆ ಅಗತ್ಯವಾದ ಪ್ರಚಾರ ನೀಡಿದರು. ಕನ್ನಡ ಮ್ಯಾರಥಾನ್ ಯಶಸ್ವಿಗೆ ಗಣಿಗ ರವಿಕುಮಾರ್ ಹೆಚ್ಚು ಶ್ರಮ ಹಾಕಿದ್ದಾರೆ. ನಾನು ಕೂಡ ಅಷ್ಟೊಂದು ಜನ ಮ್ಯಾರಥಾನ್ ನಲ್ಲಿ ಭಾಗವಹಿಸುತ್ತಾರೆ ಎಂದು ತಿಳಿದಿರಲಿಲ್ಲ.ಅಂದು ಸರ್ ಎಂ ವಿ ಕ್ರೀಡಾಂಗಣ ಸಂಪೂರ್ಣವಾಗಿ ತುಂಬಿತ್ತು.ಕ್ರೀಡಾಂಗಣದಿಂದ ಸಮ್ಮೇಳನದವರೆಗೂ ವಿದ್ಯಾರ್ಥಿಗಳು, ಸಾರ್ವಜನಿಕರು ಓಡುವ ಮೂಲಕ ಮ್ಯಾರಥಾನ್ ಯಶಸ್ವಿಯಾಗಲು ಕಾರಣರಾದರು. ಶಾಸಕ ರವಿಯವರ ಜೊತೆ ಸಹಕರಿಸಿದ ಜಿಲ್ಲಾಧಿಕಾರಿ ಡಾ. ಕುಮಾರ, ಸಿಇಒ ತನ್ವೀರ್ ಆಸಿಫ್ ಹಾಗೂ ಎಸ್ ಪಿ ಮಲ್ಲಿಕಾರ್ಜುನ ಬಾಲದಂಡೆ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದರು.
ಸಾಹಿತ್ಯ ಸಮ್ಮೇಳನದಲ್ಲಿ ಹಲವು ಸಮಸ್ಯೆಗಳು, ನ್ಯೂನ್ಯತೆಗಳು ಕೂಡ ಇತ್ತು. ಆದರೆ ಅದೆಲ್ಲವನ್ನು ಮೀರಿ ಸಮ್ಮೇಳನವನ್ನು ಯಶಸ್ವಿ ಮಾಡಿದ್ದೇವೆ. ಮುಂದಿನ ವರ್ಷ ಬಳ್ಳಾರಿಯಲ್ಲಿ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಅಲ್ಲಿ ಮಂಡ್ಯಗಿಂತಲೂ ಚೆನ್ನಾಗಿ ಆಯೋಜನೆ ಮಾಡಲಿ ಎಂದು ಆಶಿಸುತ್ತೇನೆ ಎಂದು ತಿಳಿಸಿದರು.
ಮೈಸೂರು ಸಕ್ಕರೆ ಕಾರ್ಖಾನೆ, ಮನ್ ಮುಲ್, ಡಿಸಿಸಿ ಬ್ಯಾಂಕ್, ನಗರಸಭೆ ಸೇರಿದಂತೆ ಹಲವು ಸಂಸ್ಥೆಗಳು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ನೆರವು ನೀಡಿವೆ. ಜಿಲ್ಲೆಯ ಸರ್ಕಾರಿ ನೌಕರರು ಸಮ್ಮೇಳನಕ್ಕಾಗಿ ಒಂದು ದಿನದ ವೇತನ ನೀಡಿದ್ದು, ಅವರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಸಾರ್ವಜನಿಕರಿಗೆ ಬಸ್ ವ್ಯವಸ್ಥೆ ಮಾಡಿಕೊಟ್ಟ ಕೆಎಸ್ಆರ್ ಟಿಸಿ ಅಧಿಕಾರಿಗಳಿಗೆ ಹಾಗೂ ಅನೇಕ ದಾನಿಗಳು ಧನಸಹಾಯ ನೀಡಿದ್ದು, ಅವರೆಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸುಮಾರು 18 ದೇಶಗಳ 250 ಮಂದಿ ಭಾಗವಹಿಸಿ ಸನ್ಮಾನ ಸ್ವೀಕರಿಸಿದರು. ಮಂಡ್ಯ ಜಿಲ್ಲೆಯ 35- 40 ಮಂದಿಗೆ ಸನ್ಮಾನಿಸಲಾಯಿತು. ಸಮ್ಮೇಳನಕ್ಕೆ ಆಗಿರುವ ಖರ್ಚು ವೆಚ್ಚದ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ನೀಡುವುದಾಗಿ ತಿಳಿಸಿದರು.
ಕನ್ನಡ ಭವನ
ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಮಂಡ್ಯದಲ್ಲಿ ಕನ್ನಡ ಭವನ ನಿರ್ಮಿಸಲು ತೀರ್ಮಾನಿಸಿದ್ದು, ಇದಕ್ಕಾಗಿ ಸ್ಥಳ ಗುರುತಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನಮ್ಮ ಸರ್ಕಾರದ ಅವಧಿಯಲ್ಲಿಯೇ ಕನ್ನಡ ಭವನ ನಿರ್ಮಾಣವಾಗಲಿದೆ ಎಂದರು.
ಗೋಷ್ಠಿಯಲ್ಲಿ ಶಾಸಕರಾದ ಗಣಿಗ ರವಿಕುಮಾರ್, ರಮೇಶ್ ಬಾಬು ಬಂಡಿಸಿದ್ದೇಗೌಡ, ಜಿಲ್ಲಾಧಿಕಾರಿ ಡಾ. ಕುಮಾರ, ಜಿ.ಪಂ. ಸಿಇಒ ಶೇಕ್ ತನ್ವೀರ್ ಆಸಿಫ್, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಕಸಾಪ ಜಿಲ್ಲಾ ಸಂಚಾಲಕರಾದ ಡಾ.ಮೀರಾ ಶಿವಲಿಂಗಯ್ಯ, ಪಣ್ಣೇದೊಡ್ಡಿ ಹರ್ಷ,ವಾರ್ತಾಧಿಕಾರಿ ನಿರ್ಮಲ, ಮೈಷುಗರ್ ಅಧ್ಯಕ್ಷ ಸಿ.ಡಿ. ಗಂಗಾಧರ್, ಮುಡಾ ಅಧ್ಯಕ್ಷ ನಯೀಂ ಉಪಸ್ಥಿತರಿದ್ದರು.




