Tuesday, October 22, 2024

ಪ್ರಾಯೋಗಿಕ ಆವೃತ್ತಿ

ಸಾಹಿತ್ಯದ ಸಾರ್ವಭೌಮತ್ವ ಉಳಿಯಲಿ….

ರಂಗನಾಥ ಕಂಟನಕುಂಟೆ

87ನೇ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಇದೇ ವರ್ಶದ ಡಿಸೆಂಬರ್ ತಿಂಗಳಿನಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಈ ಸಮ್ಮೇಳನಕ್ಕೆ ಅಧ್ಯಕ್ಶರನ್ನು ಆಯ್ಕೆ ಮಾಡುವ ವಿಶಯವಾಗಿ ವಿವಾದ ಸೃಶ್ಟಿಯಾಗಿದೆ. ಇದಕ್ಕೆ ಕಾರಣ ಕನ್ನಡ ಸಾಹಿತ್ಯ ಪರಿಶತ್ತಿನ ಈಗಿನ ಅಧ್ಯಕ್ಶರು. ಅವರು ಕಸಾಪ ಅಧ್ಯಕ್ಶರಾದಾಗಿನಿಂದ ಅನೇಕ ಐಲು ತೀರ್ಮಾನಗಳನ್ನು ಕೈಗೊಂಡಿದ್ದಾರೆ. ಅದರಂತೆಯೇ ಈಗಲೂ ಅವರು ಮುಂದಿಡುತ್ತಿರುವ ವಿಚಾರಗಳಿಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಈ ಬಾರಿಯ ಸಾಹಿತ್ಯ ಸಮ್ಮೇಳನಕ್ಕೆ ಸಾಹಿತ್ಯೇತರ ವಲಯದ ಗಣ್ಯರನ್ನು ಸಮ್ಮೇಳನದ ಅಧ್ಯಕ್ಶರನ್ನಾಗಿ ಆರಿಸುವುದಾಗಿ ಹೇಳಿದ್ದಾರೆ. ಇದಕ್ಕೆ ಹಲವಾರು ಶಿಫಾರಸ್ಸುಗಳು ಬಂದಿರುವುದಾಗಿ ಪತ್ರಿಕಾಗೋಶ್ಟಿಯ ಮೂಲಕವೂ ತಿಳಿಸಿದ್ದಾರೆ. ಅಂದರೆ ತಮ್ಮ ಮನದ ಇಂಗಿತಕ್ಕೆ ಬೆಂಬಲವಾಗಿ ಅಗತ್ಯವಿರುವ ಶಿಫಾರಸ್ಸು ಪತ್ರಗಳನ್ನು ತಮಗೆ ಪರಿಚಯವಿರುವ ವಿವಿಧ ಮೂಲಗಳಿಂದ ತರಿಸಿಕೊಂಡಿರುವುದು ಇದರಿಂದ ಸ್ಪಶ್ಟವಾಗುತ್ತದೆ.

ಅಧ್ಯಕ್ಶರ ಈ ತೀರ್ಮಾನಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಸಾಹಿತ್ಯ ವಲಯದ ಹಿರಿಯ ಲೇಖಕರನ್ನೇ ಸಮ್ಮೇಳನದ ಅಧ್ಯಕ್ಶರನ್ನಾಗಿ ಆಯ್ಕೆ ಮಾಡಬೇಕೆಂಬ ಒತ್ತಡ ಹೇರುತ್ತಿದ್ದಾರೆ. ಸಿದ್ದಲಿಂಗ ಪಟ್ಟಣಶೆಟ್ಟಿ, ಎಚ್. ಎಸ್. ಶಿವಪ್ರಕಾಶ್, ಕುಂ. ವೀರಭದ್ರಪ್ಪ, ಕೆ.ವಿ. ನಾರಾಯಣ, ವೈದೇಹಿ, ರಹಮತ್ ತರೀಕೆರೆ ಮುಂತಾದ ಹಿರಿಯ ಲೇಖಕರ ಹೆಸರುಗಳನ್ನೂ ಅಧ್ಯಕ್ಶ ಸ್ಥಾನಕ್ಕೆ ಸೂಚಿಸಿದ್ದಾರೆ. ಹೀಗೆ ಅನ್ಯ ಕ್ಶೇತ್ರಗಳ ಗಣ್ಯರನ್ನು ಸಾಹಿತ್ಯ ಸಮ್ಮೇಳನದ ಅಧ್ಯಕ್ಶರನ್ನಾಗಿ ಆರಿಸಲು ಉತ್ಸುಕರಾಗಿರುವವರು ಮತ್ತು ಅದನ್ನು ವಿರೋಧಿಸುವವರಿಬ್ಬರೂ ಕನ್ನಡ ಸಾಹಿತ್ಯ ಪರಿಶತ್ತಿನ ಮೂಲ ಉದ್ದೇಶವನ್ನೇ ಮರೆತಿದ್ದಾರೆ ಎನ್ನಿಸುತ್ತದೆ. ಅಲ್ಲದೆ ಅಧ್ಯಕ್ಶರ ಧೋರಣೆಗಳನ್ನು ವಿರೋಧಿಸುವವರು ಕನ್ನಡ ಸಾಹಿತ್ಯ ಪರಿಶತ್ತಿನ ಇಂದಿನ ದುರವಸ್ಥೆಯನ್ನು ಮರೆತಂತಿದೆ; ಇಲ್ಲವೇ ಅದನ್ನು ಈಗಿರುವಂತೆಯೇ ಒಪ್ಪಿಕೊಂಡಂತೆಯೂ ಇದೆ. ಯಾಕೆಂದರೆ ಕನ್ನಡ ಸಾಹಿತ್ಯ ಸಮ್ಮೇಶಳನಕ್ಕೋರ್ವ ಅಧ್ಯಕ್ಶರನ್ನು ಆರಿಸಿ ಸಮ್ಮೇಳನ ನಡೆಸುವುದೇ ಕಸಾಪದ ಉದ್ದೇಶವಲ್ಲ. 1915ರಲ್ಲಿ ಅದು ಸ್ಥಾಪನೆಯಾದಾಗ ಅದಕ್ಕೆ ಇದ್ದ ಉದ್ದೇಶವೆಂದರೆ ಕನ್ನಡ ಸಾಹಿತ್ಯದ ಪ್ರಸಾರ, ಪುಸ್ತಕಗಳ ಪ್ರಕಟಣೆ ಮತ್ತು ಮಾರಾಟ, ವಾಚನಾಲಯಗಳನ್ನು ಆರಂಭಿಸುವುದು, ಪತ್ರಿಕೆಗಳನ್ನು ಹೊರತರುವುದು, ಕನ್ನಡಕ್ಕೆ ಅಗತ್ಯವಿರುವ ಸಾಹಿತ್ಯ ಕೃತಿಗಳನ್ನು ಲೇಖಕರಿಂದ ಸಿದ್ದಪಡಿಸಿ ಪ್ರಕಟಿಸುವುದು; ಆಧುನಿಕ ಕಾಲಕ್ಕೆ ತಕ್ಕಂತೆ ಕನ್ನಡವನ್ನು ಸಜ್ಜುಪಡಿಸುವುದು ಮತ್ತು ಏಕೀಕರಣದ ಆಶಯಕ್ಕೆ ಪೂರಕವಾಗಿ ದುಡಿಯುವುದು ಅದರ ಉದ್ದೇಶವಾಗಿತ್ತು. ಕರ್ನಾಟಕದಲ್ಲಿ ಕನ್ನಡದ ಬೇರುಗಳನ್ನು ಗಟ್ಟಿಗೊಳಿಸುವುದು ಅದರ ಪ್ರಮುಖ ಆಶಯವಾಗಿತ್ತು. ಅದು ನೇರವಾಗಿ ಏಕೀಕರಣಕ್ಕೆ ದುಡಿದ ಸಂಸ್ಥೆಯಲ್ಲ. ಬದಲಿಗೆ ಆ ಆಶಯಕ್ಕೆ ಪೂರಕವಾಗಿ ಕೆಲಸ ಮಾಡಿದ ಒಂದು ಸಂಸ್ಥೆಯಾಗಿತ್ತು. ಅಂದರೆ ಬೌದ್ಧಿಕವಾಗಿ ಮತ್ತು ಸಾಂಸ್ಥಿಕವಾಗಿ ಕನ್ನಡವನ್ನು ಗಟ್ಟಿಗೊಳಿಸುವ ಕೆಲಸದಲ್ಲಿ ಅದು ತೊಡಗಿತ್ತು. ಇಂದು ಆ ಕೆಲಸವನ್ನು ಕರ್ನಾಟಕದ ನೂರಾರು ಸಂಸ್ಥೆಗಳು ಮಾಡುತ್ತಿವೆ. ಅದನ್ನು ಪರಿಶತ್ತೇ ಮಾಡಬೇಕೆಂದೇನೂ ಇಲ್ಲ. ಆದರೆ ಅಂದು ಆ ಜಾಗವನ್ನು ತುಂಬುವ ಯಾವ ಸಂಸ್ಥೆಗಳೂ ಇಲ್ಲದ ಕಾರಣ ಕರ್ನಾಟಕ ಸಾಹಿತ್ಯ ಪರಿಶತ್ತನ್ನು ಅಂದು ಬೆಂಗಳೂರಿನಲ್ಲಿ ಸ್ಥಾಪಿಸಲಾಗಿತ್ತು.

ಆದರೆ ಇಂದಿನ ಕಸಾಪ ಅಧ್ಯಕ್ಶರಿಗೆ ಇದರ ಅರಿವೇ ಇದ್ದಂತಿಲ್ಲ. ಬದಲಿಗೆ ತಮ್ಮ ವೈಯಕ್ತಿಕ ರಾಜಕೀಯ ಮಹಾತ್ವಾಕಾಂಕ್ಶೆ, ಹಿತಾಸಕ್ತಿ ಮತ್ತು ಅಸಾಹಿತ್ಯಿಕ ಕೆಲಸಗಳಿಂದ ಕನ್ನಡ ಸಾಹಿತ್ಯ ಪರಿಶತ್ತನ್ನು ನಾಶಪಡಿಸಲು ಮುಂದಾಗಿದ್ದಾರೆ ಎನ್ನಿಸುತ್ತದೆ. ಅಸಾಹಿತ್ಯಿಕ ವ್ಯಕ್ತಿಗಳು ಸಾಹಿತ್ಯ ಪರಿಶತ್ತಿನ ಒಳಕ್ಕೆ ಅಕ್ರಮ ಮಾರ್ಗವಾಗಿ ನುಸುಳಿ ಅದನ್ನು ಹೇಗೆಲ್ಲಾ ಕೆಡಿಸಬಹುದೋ ಹಾಗೆ ಅದೆಲ್ಲವನ್ನು ಮಾಡುತ್ತಿದ್ದಾರೆ. ಅದರ ಭಾಗವಾಗಿಯೇ ಸಾಹಿತ್ಯೇತರ ವಲಯಗಳ ವ್ಯಕ್ತಿಗಳನ್ನು ಸಮ್ಮೇಳನದ ಅಧ್ಯಕ್ಶರನ್ನಾಗಿ ಮಾಡುವ ಅಪ್ರಬುದ್ಧ ಹೇಳಿಕೆ ನೀಡಿ ಸಾಹಿತ್ಯಾಸಕ್ತರನ್ನು ತಮ್ಮ ಟ್ರಾಪಿಗೆ ಕೆಡವಿಕೊಂಡಿದ್ದಾರೆ. ಈ ಟ್ರ್ಯಾಪಿನಲ್ಲಿ ಬಿದ್ದಿರುವ ಸಾಹಿತ್ಯಾಸಕ್ತರು, ಲೇಖಕರು ಅವರನ್ನು ವಿರೋಧಿಸುತ್ತ ಸಾಹಿತ್ಯ ಪರಿಶತ್ತು ಹದಗೆಟ್ಟಿರುವುದನ್ನೇ ಮರೆತಿದ್ದಾರೆ ಮತ್ತು ಇಂದು ನಡೆಯುತ್ತಿರುವ ಸಾಹಿತ್ಯ ಸಮ್ಮೇಳನಗಳ ಸಮಸ್ಯೆಗಳನ್ನೇ ಕಡೆಗಣಿಸಿದಂತೆ ಇದೆ. ಯಾವುದೇ ಹೊಸತನಗಳೇ ಇಲ್ಲದೇ ಮತ್ತು ವಿಶೇಶ ಪರಿಣಾಮಗಳನ್ನು ಉಂಟು ಮಾಡದೇ ಇರುವ ಸಮ್ಮೇಳನಗಳ ಬಗೆಗೆ ಪ್ರಾಥಮಿಕ ಪ್ರಶ್ನೆಗಳನ್ನೇ ಎತ್ತದೆ ಈಗ ಇರುವುದನ್ನು ಒಪ್ಪಿಕೊಂಡು ಅದರೊಳಗೆ ಒಂದಾಗಲು ತಮ್ಮಿಶ್ಟದವÀರ ಹೆಸರುಗಳನ್ನು ತೇಲಿಬಿಟ್ಟು ಚರ್ಚೆಯನ್ನು ಅನಗತ್ಯವಾಗಿ ಜೀವಂತವಾಗಿಟ್ಟಿದ್ದಾರೆ. ಇಂದು ನಡೆಸಬೇಕಿರುವ ನೈಜ ಸಾಹಿತ್ಯಿಕ ವಿಚಾರಗಳಿಗೆ ಬದಲಾಗಿ ಸಾಹಿತ್ಯದ ಹೆಸರಿನಲ್ಲಿ ನಡೆಯುತ್ತಿರುವ ನಕಾರಾತ್ಮಕ ವಿಚಾರಗಳನ್ನೇ ದೊಡ್ಡದಾಗಿ ನೋಡಲಾಗುತ್ತಿದೆ. ಈ ಚರ್ಚೆ ಸಾಹಿತ್ಯ ಪರಿಶತ್ತಿನಲ್ಲಿ ನಡೆಯುತ್ತಿರುವ ಅಸಾಹಿತ್ಯಿಕ ಚಟುವಟಿಕೆಗಳನ್ನೇ ಮಾನ್ಯಮಾಡುವಂತೆಯೂ ಇದೆ. ಹೀಗೆ ಮಾನ್ಯ ಮಾಡುವುದರಿಂದ ಸಾಹಿತ್ಯ ವಲಯದಲ್ಲಿರುವ ಅನೈತಿಕ ದಬ್ಬಾಳಿಕೆಯನ್ನು ಒಪ್ಪಿಕೊಂಡಂತೆಯೂ ಆಗುತ್ತಿದೆ. ಇದನ್ನು ಅರಿಯದೆ ಮಾನ್ಯತೆಯನ್ನೇ ಕಳೆದುಕೊಂಡಿರುವ ಒಂದು ಸಾರ್ವಜನಿಕ ಸಂಸ್ಥೆಯು ನಡೆಸುವ ಸಮ್ಮೇಳನಕ್ಕೆ ತಮ್ಮ ಇಶ್ಟದವರನ್ನು ಸೂಚಿಸುವ ಮೂಲಕ ಎಲ್ಲ ಅಕ್ರಮಗಳಿಗೆ ಸಭ್ಯತೆಯ ಮುಖವಾಡ ತೊಡಿಸಲು ಸಜ್ಜನ ಸಾಹಿತಿಗಳು ಯತ್ನಿಸುತ್ತಿರುವುದು ದೊಡ್ಡ ವ್ಯಂಗ್ಯ.

ಆದ್ದರಿಂದ ಮೊದಲಿಗೆ ಸಾಹಿತ್ಯ ಪರಿಶತ್ತಿನ ಮೂಲಕ ನಡೆಯುತ್ತಿರುವ ಅಸಾಹಿತ್ಯಿಕ ಚಟುವಟಿಕೆಗಳನ್ನು ತಾತ್ವಿಕವಾಗಿ ವಿರೋಧಿಸಬೇಕು. ಸಾಹಿತ್ಯ ಪರಿಶತ್ತನ್ನು ನಾಶಪಡಿಸಲು ರಾಜಕೀಯ ಕುತಂತ್ರಿಗಳು ನಡೆಸಿರುವ ಹುನ್ನಾರವನ್ನು ಬೆತ್ತಲುಗೊಳಿಸಬೇಕು. ಸಾಹಿತ್ಯ ಸಂವೇದನೆಗಳೇ ಇಲ್ಲದವರು ಪರಿಶತ್ತಿನಲ್ಲಿ ತೂರಿಕೊಂಡು ನಾಶಗೊಳಿಸಿರುವುದನ್ನು ವಿರೋಧಿಸಬೇಕು. ಹೀಗಿರುವ ಸನ್ನಿವೇಶದಲ್ಲಿ ಅದನ್ನು ಮರಳಿ ಸರಿದಾರಿಗೆ ತರಲು ಸಾಧ್ಯವೇ? ಎಂಬುದನ್ನೂ ಪರಿಶೀಲಿಸಬೇಕು. ಅದನ್ನು ಬಿಟ್ಟು ಇಡೀ ವರ್ಶ ಸಾಹಿತ್ಯಕ್ಕೆ ಘನತೆಯನ್ನು ತಾರದ ಕೆಲಸಗಳನ್ನು ನಡೆಸುತ್ತಿರುವ ವ್ಯಕ್ತಿಯ ನೇತೃತ್ವದಲ್ಲಿ ನಡೆಯುವ ವಾರ್ಶಿಕ ಸಮ್ಮೇಳನದಲ್ಲಿ ತಮ್ಮಿಶ್ಟದವರನ್ನು ಅಧ್ಯಕ್ಶರನ್ನಾಗಿಸಿ ಸಮ್ಮೇಳನ ನಡೆಸಿದರೆ ಸಾಹಿತ್ಯಕ್ಕೆ ಘನತೆ ಪ್ರಾಪ್ತಿಯಾಗುವುದೇ? ಅಲ್ಲದೆ ತಮ್ಮಿಶ್ಟದವರು ಸಮ್ಮೇಳನದ ಅಧ್ಯಕ್ಶರಾದ ಕೂಡಲೇ ಪರಿಶತ್ತಿನ ಅಧ್ಯಕ್ಶರ ಎಲ್ಲ ಅಸಾಹಿತ್ಯಿಕ ಕೆಲಸಗಳನ್ನು ಮಾಫಿ ಮಾಡಲು ತಯಾರಿದ್ದಾರೆÉಯೇ? ಎಂಬುದರ ಬಗೆಗೆ ಆಲೋಚಿಸಬೇಕು.

ಅಲ್ಲದೆ ಪ್ರತಿ ವರ್ಶವೂ ಬೃಹತ್ ಸಮ್ಮೇಳನವೊಂದನ್ನು ನಡೆಸಿದ ಮಾತ್ರಕ್ಕೆ ಕನ್ನಡಕ್ಕೆ ಎದುರಾಗಿರುವ ಎಲ್ಲ ಕಂಟಕಗಳಿಗೆ ಮುಕ್ತಿ ದೊರೆಯುವುದೇ? ಈಚಿನ ಹಲವು ದಶಕಗಳಲ್ಲಿ ನಡೆದ ಸಾಹಿತ್ಯ ಸಮ್ಮೇಳನಗಳಲ್ಲಿ ಗಂಭೀರವಾಗಿ ಚರ್ಚೆ ನಡೆದು ಹೊಸ ವಿಶಯಗಳು ಮಂಡಿತವಾಗಿ ಹೊಸ ಚರ್ಚೆಯನ್ನು ಹುಟ್ಟಿಹಾಕಿರುವ ಎತ್ತುಗೆಗಳು ಇವೆಯೇ? ಸಮ್ಮೇಳನಗಳಲ್ಲಿ ಕೈಗೊಂಡ ನಿರ್ಣಯಗಳು ಜಾರಿಗೊಂಡಿವೆಯೇ? ಕನ್ನಡಕ್ಕೆ ಸಮಸ್ಯೆಗಳು ಎದುರಾದಾಗ ಆ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಶತ್ತು ದಿಟ್ಟವಾಗಿ ಮತ್ತು ನಿಶ್ಟುರವಾಗಿ ವರ್ತಿಸಿದೆಯೇ? ಇಂತಹ ಯಾವ ಕೆಲಸಗಳನ್ನು ಮಾಡದೇ ಇರುವ ಮಟ್ಟಕ್ಕೆ ಪರಿಶತ್ತು ಬಂದು ಮುಟ್ಟಿದೆಯೆಂದರೆ ಅದು ಜಡತ್ವ ಪಡೆದುಕೊಂಡಿದೆಯೆಂದೇ ಅರ್ಥ. ಅಂತಹ ಜಡಗೊಂಡ ಸಂಸ್ಥೆಗೆ ಸಾಹಿತ್ಯ ಸಂವೇದನೆಯೇ ಇಲ್ಲದ ವ್ಯಕ್ತಿ ಅಧ್ಯಕ್ಶರಾಗಿ ನೇಮಕಗೊಂಡರೆ ಅದನ್ನು ಎಶ್ಟು ಗಬ್ಬೆಬ್ಬಿಸಬಹುದು ಎಂಬುದಕ್ಕೆ ಎತ್ತುಗೆಯಾಗಿದೆ. ಸಾಹಿತ್ಯದ ಚಟುವಟಿಕೆಗಳನ್ನು ಹೊಲಸು ಮಾಡುವ ವ್ಯಕ್ತಿಯ ನೇತೃತ್ವದಲ್ಲಿ ನಡೆಯುವ ಸಮ್ಮೇಳನದಲ್ಲಿ ಪಾಲ್ಗೊಂಡು ಅವರ ಎಲ್ಲ ಹುಚ್ಚುತನಗಳಿಗೆ ಮಾನ್ಯತೆ ತಂದುಕೊಡುವ ಕೆಲಸವನ್ನು ಕನ್ನಡದ ಸಜ್ಜನ ಸಾಹಿತಿಗಳೇ ಮಾಡುತ್ತಿರುವುದು ಇಂದಿನ ಕನ್ನಡದ ದುರಂತಗಳಲ್ಲಿ ಒಂದು.

ಅಂದರೆ ಇಂದಿನ ಸಾಹಿತ್ಯ ಸಮ್ಮೇಳನದ ಅಧ್ಯಕ್ಶರು ಯಾರಾಗಬೇಕು? ಎಂಬುದು ದೊಡ್ಡ ಚರ್ಚೆಯ ವಿಶಯವೇ ಅಲ್ಲ. ಸಾಹಿತ್ಯ ಕ್ಶೇತ್ರದಲ್ಲಿ ಅತ್ಯುನ್ನತವಾದುದನ್ನು ಸಾಧಿಸಿದವರಿಗೆ ಸಮ್ಮೇಳನದ ಗೌರವ ದೊರೆಯಬೇಕು. ಇದರಲ್ಲಿ ಗೊಂದಲಗಳು ಇರಬಾರದು. ಆರಂಭದಲ್ಲಿ ಕಸಾಪ ಕನ್ನಡ ಕಟ್ಟುವ ಕೆಲಸದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿತ್ತು. ಕನ್ನಡದ ಪ್ರಮಾಣೀಕರಣ ಪ್ರಕ್ರಿಯೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸಿತ್ತು. ಕನ್ನಡಕ್ಕೆ ಅಗತ್ಯವಿದ್ದ ನಿಘಂಟು ತಯಾರಿಕೆಯಲ್ಲಿ ಪ್ರಮುಖ ಪಾತ್ರವಹಿಸಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಮಹತ್ವದ ಪ್ರಕಟಣೆಗಳೂ ಇಲ್ಲ. ಪರಿಶತ್ತಿಗಿಂತ ಖಾಸಗಿ ಪ್ರಕಾಶಕರು ಈ ಕಾಲಕ್ಕೆ ಬೇಕಾದ ಅತ್ಯುತ್ತಮ ಸಾಹಿತ್ಯ ಕೃತಿಗಳನ್ನು ಪ್ರಕಟಿಸುತ್ತಿದ್ದಾರೆ ಮತ್ತು ಮಾರಾಟ ಮಾಡುತ್ತಿದ್ದಾರೆ. ನವಕರ್ನಾಟಕ, ಲಡಾಯಿ, ಅಭಿನವ ಮುಂತಾದ ನೂರಾರು ಪ್ರಕಾಶನಗಳು ಇಂದು ಕನ್ನಡ ಸಾಹಿತ್ಯ ಪರಿಚಾರಿಕೆಯ ಕೆಲಸದಲ್ಲಿ ತೊಡಿಕೊಂಡಿವೆ. ಆದ್ದರಿಂದ ಇಂದು ಕನ್ನಡ ಸಾಹಿತ್ಯ ಪರಿಶತ್ತಿನ ಪ್ರಸ್ತುತತೆಯೇನು? ಎಂದು ಪ್ರಶ್ನಿಸಬೇಕಿದೆ. ಆ ಮೂಲಕ ಅದಕ್ಕೆ ಹೊಸ ಕಾಯಕಲ್ಪ ನೀಡಬೇಕಿದೆ. ಇಂದಿನ ಕಸಾಪ ಕೃತಿಗಳ ಮರುಮುದ್ರಣದಲ್ಲಿಯೇ ಹೆಚ್ಚು ತೊಡಗಿಸಿಕೊಂಡಿದೆ. ದತ್ತಿ ಬಹುಮಾನಗಳನ್ನು ನೀಡುವುದೇ ಅದರ ಕೆಲಸವಾಗಿದೆ. ಅಂದರೆ ಇಂದು ಸಾಹಿತ್ಯ ಪರಿಶತ್ತು ಮುದ್ರಣ, ಪ್ರಕಟಣೆ ಮತ್ತು ಪ್ರಸಾರ ಕಾರ್ಯಗಳಲ್ಲೂ ಹಿಂದೆ ಬಿದ್ದಿದೆ. ಅತ್ಯಂತ ಪ್ರಮುಖವಾಗಿ ವಾರ್ಶಿಕ ಸಮ್ಮೇಳನ ನಡೆಸುವುದೇ ಅದರ ದೊಡ್ಡ ಕೆಲಸವಾಗಿದೆ. ಇದು ಕೂಡ ಅನಗತ್ಯ ಕಾರಣಗಳಿಗೆ ಪ್ರತಿ ವರ್ಶ ಒಂದಲ್ಲ ಒಂದು ಕಾರಣಕ್ಕೆ ವಿವಾದಕ್ಕೆ ಗುರಿಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕನ್ನಡದ ಲೇಖಕರು ಅತ್ಯಂತ ನಿಶ್ಟುರವಾಗಿ ವರ್ತಿಸಬೇಕಿರುತ್ತದೆ. ಅದು ಪ್ರಸ್ತುತವಾಗಿ ಉಳಿದುಕೊಳ್ಳಲು ಮಾಡಬೇಕಿರುವ ಕೆಲಸಗಳೇನು? ಎಂಬುದರ ಬಗೆಗೆ ಯೋಚಿಸಬೇಕಿದೆ. ಕನ್ನಡ ಸಾಹಿತ್ಯ ಪರಿಶತ್ತು ಎಲ್ಲ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಬೇಕಿರುವುದು ನಿಜ. ಆದರೆ ಅದು ಎಲ್ಲರ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಬದಲಿಗೆ ಕೆಲವು ಸ್ವಾರ್ಥಿಗಳು, ಜಾತಿವಾದಿ ಗುಂಪುಗಳು ಮತ್ತು ಸಾಹಿತ್ಯ ಸಂವೇದನೆಗಳೇ ಇಲ್ಲದ ಕಪಟಿಗಳಿಂದ ತುಂಬಿಕೊಂಡಿದೆ. ನೈಜ ಬರೆಹಗಾರರು ಅದರಿಂದ ಹೊರಗುಳಿಯುವಂತಾಗಿದೆ. ಆದ್ದರಿಂದ ನಿಜವಾದ ಸಾಹಿತ್ಯ ವಿದ್ಯಾರ್ಥಿಗಳು ಅಧ್ಯಕ್ಶರ ಪೂರ್ವ ನಿರ್ಧಾರಿತ ಉದ್ದೇಶಗಳಿಂದ ಸೃಶ್ಟಿಯಾಗಿರುವ ವಿವಾದದ ಸುಳಿಯಲ್ಲಿ ಸಿಕ್ಕಿಕೊಳ್ಳಬಾರದು. ಮತ್ತು ಸಾಹಿತ್ಯಕ್ಕೆ ಕೆಟ್ಟ ಹೆಸರು ತರುವ ವ್ಯಕ್ತಿಗಳಿಗೆ ಮಾನ್ಯತೆಯನ್ನು ತಂದುಕೊಡಬಾರದು.

ಇನ್ನು ಸಾಹಿತ್ಯ ಸಮ್ಮೇಳನಕ್ಕೆ ರಾಜಕಾರಣಿಯೊಬ್ಬರು ಅಧ್ಯಕ್ಶರಾಗಬಾರದೆಂದೇನು ಇಲ್ಲ. ಆದರೆ ಅವರು ಸಾಹಿತ್ಯದಲ್ಲಿಯೂ ಸಾಕಶ್ಟು ಸಾಧನೆ ಮಾಡಬೇಕಿರುತ್ತದೆ. ಜೊತೆಗೆ ರಾಜಕಾರಣಿಯಾಗಿ ಭ್ರಶ್ಟರಲ್ಲದ ಮತ್ತು ಹೆಸರು ಕೆಡಿಸಿಕೊಳ್ಳದ ಧೀಮಂತ ವ್ಯಕ್ತಿಗಳು ಅಧ್ಯಕ್ಶರಾದರೆ ಸಮಸ್ಯೆಯೇನೂ ಇಲ್ಲ. ಕಸಾಪ ಸ್ಥಾಪನೆಗೊಂಡ ಆರಂಭಿಕ ವರ್ಶಗಳಲ್ಲಿ ಸಾಹಿತ್ಯದ ಆಚೆಗಿನ ವಲಯದಲ್ಲಿ ಅಧಿಕಾರಿಗಳಾಗಿ ದುಡಿದ ಮಹನೀಯರು ಅಧ್ಯಕ್ಶರಾಗಿದ್ದಾರೆ. ಅಂತಹವರು ಕಸಾಪ ಕಟ್ಟಲು ಮತ್ತು ಕನ್ನಡದ ಏಳ್ಗೆಗೆ ಬೇರೆ ಬಗೆಯಲ್ಲಿ ದುಡಿದಿದ್ದರು. ಅವರಿಗೆ ಅಂತಹ ಕನಸುಗಳೂ ಇದ್ದವು. ಆದರೆ ಇಂದು ಅಂತಹ ಧೀಮಂತ ವ್ಯಕ್ತಿತ್ವಗಳು ರಾಜಕೀಯ ಕ್ಶೇತ್ರದಲ್ಲಿ ಇಲ್ಲ. ಸಾಹಿತ್ಯ ಮತ್ತು ಜನರ ರಾಜಕಾರಣಗಳೆರಡನ್ನೂ ಪಾಬ್ಲೋ ನೆರೂಡನಂತೆ ಆತುಕೊಂಡವರಿದ್ದರೆ ಸಮ್ಮೇಳನದ ಅಧ್ಯಕ್ಶರಾಗಿ ಯಾಕೆ ಆಯ್ಕೆಯಾಗಬಾರದು? ಆದರೆ ಅಂತಹ ವ್ಯಕ್ತಿತ್ವಗಳು ಸದ್ಯ ನಮ್ಮಲ್ಲಿ ಇಲ್ಲ. ಇಂದಿನ ರಾಜಕಾರಣ ಸೈದ್ಧಾಂತಿಕವಾಗಿಯೂ ವಿಶಮಯವಾಗಿದೆ. ಈಗ ಒಂದು ಪಕ್ಶದವರನ್ನು ಮಾಡಿದರೆ ಅದನ್ನೇ ಬಳಸಿಕೊಂಡು ನಾಳೆ ಮತ್ತೊಂದು ರಾಜಕೀಯ ಪಕ್ಶದವರನ್ನು ಅಧ್ಯಕ್ಶರಾಗಿ ಮಾಡಲು ಒತ್ತಾಯ ಬರುತ್ತದೆ. ಬಲಪಂಥೀಯ ಚಿಂತನೆಗಳ ಬಗೆಗೆ ಒಲವುಳ್ಳ ಲೇಖಕರು ಅಧ್ಯಕ್ಶರಾದಾಗಲೇ ಸಾಹಿತ್ಯದ ಚರ್ಚೆಗಳು ದಿಕ್ಕೆಟ್ಟು ಹೋಗಿವೆ. ಇದರ ಪರಿಣಾಮ ಸಾಹಿತ್ಯ ಕ್ಶೇತ್ರದಲ್ಲಿ ಇನ್ನಶ್ಟು ರಾಡಿಯೇ ಸೃಶ್ಟಿಯಾಗುತ್ತಿದೆ. ಜನವಿರೋಧಿ ಚಿಂತನೆಗಳಿಗೆ ಮಾನ್ಯತೆ ದೊರೆಯುತ್ತದೆ. ಹಾಗಾಗಿ ಇಂತಹ ಹೊತ್ತಿನಲ್ಲಿ ರಾಜಕೀಯ ವ್ಯಕ್ತಿಗಳನ್ನು ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಶತೆಗೆ ಆಯ್ಕೆ ಮಾಡುವುದರಶ್ಟೂ ನೀಚ ಕೆಲಸ ಮತ್ತೊಂದಿಲ್ಲ. ಸಾಹಿತ್ಯ ಸಮ್ಮೇಳನಗಳ ಮೂಲಕ ಇಡೀ ವ್ಯವಸ್ಥೆಯ ಮರುಮೌಲ್ಯ ಮಾಪನ ಮಾಡಬೇಕಿರುತ್ತದೆ. ನೈತಿಕತೆಯ ಧೀಶಕ್ತಿಗಳಾದ ಸಾಹಿತಿಗಳ ನೇತೃತ್ವದಲ್ಲಿಯೇ ಸಮ್ಮೇಳನ ನಡೆಯಬೇಕಾಗುತ್ತದೆ. ಅದಿಲ್ಲದೆ ರಾಜಕಾರಣಿಗಳನ್ನು ಸಾಹಿತ್ಯ ಸಮ್ಮೇಳನದ ಅಧ್ಯಕ್ಶತೆಗೆ ಆರಿಸಿದರೆ ಅದು ಸಾಹಿತ್ಯ ಸಮ್ಮೇಳನಕ್ಕೆ ಬದಲಾಗಿ ರಾಜಕೀಯ ಸಮ್ಮೇಳನವಾಗುತ್ತದೆ. ಅಲ್ಲಿ ಎಲ್ಲ ಭ್ರಶ್ಟರೂ ಸಮಾವೇಶಗೊಳ್ಳುತ್ತಾರೆ. ಇದರ ಪರಿಣಾಮವಾಗಿ ಸಾಹಿತ್ಯ ಚಿಂತನೆಗಳೇ ಅಪ್ರಸ್ತುತವಾಗುತ್ತವೆ. ಮಠಾಧೀಶರನ್ನು ಆರಿಸಿದಾಗಲೂ ಇದೇ ದುರ್ಗತಿ ಬರುತ್ತದೆ. ಅಂತಹ ದುರ್ಗತಿ ಬರುವಂತೆ ಮಾಡುವುದೇ ಇಂದಿನ ಅಧ್ಯಕ್ಶರ ಉದ್ದೇಶವಿದ್ದಂತೆ ಕಾಣುತ್ತದೆ. ಈ ಉದ್ದೇಶ ಸಾಕಾರಗೊಂಡರೆ ಸಾಹಿತ್ಯದ ಬಗೆಗೆ ಆಲೋಚಿಸಲು ಇರುವ ಒಂದು ಚಿಕ್ಕ ಜಾಗವನ್ನೂ ಬಿಡದೆ ಹಾಳುಗೆಡವಲು ಅಧಿಕಾರಸ್ಥರು ಅದನ್ನು ವಶಪಡಿಸಿಕೊಂಡಂತೆ ಆಗುತ್ತದೆ.

ಹಾಗಾಗಿ ಸೃಜನಶೀಲ ಲೇಖಕರು ಈ ಬಗೆಗೆ ಗಂಭೀರವಾಗಿ ಆಲೋಚಿಸಬೇಕು. ಅಲ್ಲದೆ ಸಾಹಿತ್ಯ ಎಲ್ಲ ಕಾಲಕ್ಕೂ ಪ್ರಭುತ್ವದ ಮತ್ತು ಆಳುವ ವರ್ಗದ ವಿರೋಧಿಯಾಗಿಯೇ ಕೆಲಸ ಮಾಡಬೇಕಿರುತ್ತದೆ. ಈ ಕಾಲದಲ್ಲಿಯಂತೂ ಅದರ ಅಗತ್ಯ ಇನ್ನಶ್ಟು ಹೆಚ್ಚಿದೆ. ಅಂತಹ ಕೆಲಸವನ್ನು ಪ್ರಭುತ್ವದ ಅಡಿಯಾಳಾಗಿ ಮಾಡಲು ಸಾಧ್ಯವೇ ಇಲ್ಲ. ಆಳುವ ವರ್ಗದ ಪ್ರತಿನಿಧಿಗಳನ್ನೇ ಕರೆತಂದು ಅಧ್ಯಕ್ಶ ಪದವಿ ನೀಡಿ ಸಾಹಿತ್ಯದ ಚರ್ಚೆ ನಡೆಸುವುದು ಆತ್ಮವಂಚನೆಯ ಕೆಲಸ. ಅಂತಹ ಕೆಲಸವನ್ನು ಯಾರೂ ಮಾಡಬಾರದು. ಪ್ರಜಾಪ್ರಭುತ್ವದ ಮೌಲ್ಯಗಳ ಸಂಗೋಪನೆಗಾಗಿ ಸಾಹಿತಿಗಳು ದುಡಿಯಬೇಕೆ ಹೊರತು ಜನ ವಿರೋಧಿಗಳನ್ನು ತಲೆಯ ಮೇಲೆ ಹೊತ್ತು ಮೆರೆಸಬಾರದು. ಅಂತಹ ಕೃತ್ಯವನ್ನು ಬೆಂಬಲಿಸಲೂಬಾರದು. ಇಲ್ಲಿಯವರೆಗೂ ಸಾಹಿತ್ಯ ಸಮ್ಮೇಳನಗಳನ್ನು ಕನ್ನಡದ ಅಸ್ಮಿತೆಯ ಸಂಕೇತವಾಗಿ ನಡೆಸುತ್ತಾ ಬರಲಾಗಿದೆ. ಈ ಪರಂಪರೆ ಮುಂದುವರಿಯಬೇಕಿದೆ. ಅದನ್ನು ಬಿಟ್ಟು ರಾಜಕೀಯ ಮಂದಿಗೆ ಸಾಹಿತ್ಯದ ರಾಜಕಾರಣವನ್ನು ಬಲಿಕೊಡಬಾರದು. ಸಾಹಿತ್ಯ ಸಮ್ಮೇಳನಗಳು ರಾಜಕೀಯ ಸಮ್ಮೇಳನಗಳಾಗಿ ಬದಲಾಗಬಾರದು. ಮೇಲೆ ಹೇಳಿದಂತೆ ಸಾಹಿತ್ಯ ಪರಿಶತ್ತಿಗೆ ಕನ್ನಡ ಅಸ್ಮಿತೆಯನ್ನು ಆಧುನಿಕ ಕಾಲಕ್ಕೆ ತಕ್ಕಂತೆ ಕಟ್ಟಿಕೊಳ್ಳುವ ಕನಸಿತ್ತು. ಹಾಗೆ ಕಟ್ಟಿಕೊಳ್ಳುವ ಅಗತ್ಯ ಎಂದಿಗಿಂತ ಇಂದು ಹೆಚ್ಚಾಗಿದೆ. ಜಾಗತೀಕರಣ ಕಾಲಘಟ್ಟದಲ್ಲಿ ಇಂಗ್ಲಿಶ್ ಭಾಶೆಯ ದಾಳಿ ಹೆಚ್ಚಿದೆ. ಇದರಿಂದ ಪ್ರಾಥಮಿಕ ಹಂತದ ಶಿಕ್ಶಣದಿಂದಲೇ ಕನ್ನಡ ದೂರವಾಗುತ್ತಿದೆ. ಇದಕ್ಕೆ ಕಾರಣ ನಮ್ಮ ರಾಜಕೀಯ ಪಕ್ಶಗಳು ಮತ್ತು ಅದರ ನೇತಾರರೇ ಆಗಿದ್ದಾರೆ. ಅಂತಹ ಬೂಟಾಟಿಕೆಯ ಜನರನ್ನು ಕರೆತಂದು ಎಂತಹ ಚರ್ಚೆಗಳನ್ನು ನಡೆಸಬಹುದು? ಅವುಗಳಿಗೆ ಅರ್ಥವಾದರೂ ಇರುವುದೇ?

ಇಲ್ಲಿಯವರೆಗಿನ ವಿದ್ಯಮಾನಗಳನ್ನು ಗಮನಿಸಿದರೆ ಈಗಿನ ಅಧ್ಯಕ್ಶರು ಇಡೀ ಸಾಹಿತ್ಯ ಪರಿಶತ್ತಿನ ಚಟುವಟಿಕೆಗಳನ್ನು ತಮ್ಮ ಆಶಯ ಉದ್ದೇಶಗಳಿಗೆ ತಕ್ಕಂತೆ ಅದನ್ನು ಬದಲಿಸಿಕೊಂಡಿದ್ದಾರೆ. ಅದರ ಭಾಗವಾಗಿಯೇ ಸಾಹಿತ್ಯ ಸಮ್ಮೇಳನಗಳಿಗೆ ಅಧ್ಯಕ್ಶರನ್ನಾಗಿ ರಾಜಕಾರಣಿಗಳು ಮತ್ತು ಮಠಾಧೀಶರನ್ನು ಆರಿಸಲು ಕುತಂತ್ರ ನಡೆಸಿದ್ದಾರೆ. ಈಗಾಗಲೇ ಜಾತಿವಾದಿಗಳ, ಕೋಮುವಾದಿಗಳು ಮತ್ತು ಧಾರ್ಮಿಕ ಮೂಲಭೂತವಾದಿಗಳ ಕುತಂತ್ರಕ್ಕೆ ಸಾಹಿತ್ಯ ಪರಿಶತ್ತು ನಜ್ಜುಗುಜ್ಜಾಗಿದೆ. ಅದರ ಅಂತಿಮ ರೂಪದಂತೆ ಈಗಿನ ಅಧ್ಯಕ್ಶರ ನಡೆಗಳು ಕಾಣಿಸುತ್ತಿವೆ. ಇಂತಹ ಅತಿರೇಕದ ವರ್ತನೆಗಳನ್ನು ಇಂದು ನಿಶ್ಟುರವಾಗಿ ವಿರೋಧಿಸಬೇಕಿದೆ. ಅದನ್ನು ಬಿಟ್ಟು ಇಂತಹ ಅಧ್ವಾನದ ವ್ಯವಸ್ಥೆಯಲ್ಲಿ ತನಗೆ ಮತ್ತು ತಮ್ಮವರಿಗೆ ಯಾವ ಯಾವ ಸ್ಥಾನಗಳು ಇವೆ? ಎಂದು ಅವುಗಳನ್ನು ಹುಡುಕಿಕೊಳ್ಳುವ ಕೆಲಸವನ್ನು ಸಜ್ಜನ ಸಾಹಿತಿಗಳು ಮಾಡಬಾರದು. ಹಾಗಾಗಿ ಕನ್ನಡದ ಹೆಸರಿನಲ್ಲಿ ನಡೆಯುತ್ತಿರುವ ಅಕ್ರಮ ಮತ್ತು ಅಧ್ವಾನದ ಚಟುವಟಿಕೆಗಳನ್ನು ವಿರೋಧಿಸುತ್ತ ಕನ್ನಡವನ್ನು ಇಪ್ಪತ್ತೊಂದನೆಯ ಶತಮಾನಕ್ಕೆ ತಕ್ಕಂತೆ ಕಟ್ಟಿಕೊಳ್ಳಲು ಮಾಡಬೇಕಾದ ಕೆಲಸಗಳ ಬಗೆಗೆ ಚಿಂತಿಸಬೇಕಿದೆ. ಅದಿಲ್ಲದೆ ಕ್ಶುಲ್ಲಕ ಆಸೆಗಳಿಗೆ ಬಿದ್ದು ಸಾಹಿತ್ಯ ಸಂವೇದನೆಗಳೇ ಇಲ್ಲದ ವ್ಯಕ್ತಿಗಳ ಆಟಾಟೋಪಗಳಿಗೆ ಜನಮಾನ್ಯತೆ ತಂದುಕೊಡಬಾರದು. ಸಂವೇದನಾಶೀಲರಾದ ಸಾಹಿತಿಗಳು ಈ ಬಗೆಗೆ ಹೊಣೆಗಾರಿಕೆಯಿಂದ ಚಿಂತಿಸಬೇಕಾದದ್ದು ಇಂದಿನ ಜರೂರು. ಸಾಹಿತ್ಯದ ಸಾರ್ವಭೌಮತ್ವ ಆಳುವವರ ಅಧೀನಕ್ಕೆ ಬಲಿಯಾಗದಿರಲಿ. ಸಾಹಿತ್ಯಕ್ಕೆ ಬದ್ಧವಾದ ಸಾಹಿತಿಗಳು ಕಪಟ ತಂತ್ರಗಳಿಗೆ ಕುರುಡಾಗಿ ಬಲಿಯಾಗದಿರಲಿ.

(ಲೇಖಕರು ಉದ್ದೇಶಪೂರ್ವಕವಾಗಿಯೇ ಸಾಧ್ಯವಾದಷ್ಟು ಕನ್ನಡ ಪದಗಳನ್ನೇ ಬಳಸಿದ್ದಾರೆ, ಅವು ವ್ಯಾಕರಣ ದೋಷವಾಗಿರುವುದಿಲ್ಲ)

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!