ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಶಿಂಷಾ ನದಿ ಪಾತ್ರದಲ್ಲಿಅಕ್ರಮವಾಗಿ ಶೇಖರಣೆ ಮಾಡಿದ ಮರಳನ್ನು ಗಣಿ ಮತ್ತು ಭೂ ವಿಜ್ಞಾನ, ಕಂದಾಯ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡಿರುವ ಘಟನೆ ಕೆಸ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮದ್ದೂರು ತಾಲೂಕಿನ ಶಿಂಷಾ ನದಿ ಪಾತ್ರದ ತೂಬಿನಕೆರೆ, ತೊರೆ ಶೆಟ್ಟಿಹಳ್ಳಿ ಹಾಗೂ ಬೆಸಗರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ನಿಲುವಾಗಿಲು ಗ್ರಾಮಗಳಲ್ಲಿಅಕ್ರಮವಾಗಿ ಮರಳು ಶೇಖರಣೆ ಮಾಡಿರುವ ಖಚಿತ ಮಾಹಿತಿ ಮೇರೆಗೆ ನಾನಾ ಇಲಾಖೆ ಅಧಿಕಾರಿಗಳ ನೇತೃತ್ವದ ತಂಡ ದಾಳಿ ನಡೆಸಿತು.
ಈ ಸಂದರ್ಭದಲ್ಲಿ ಅಕ್ರಮವಾಗಿ ಶೇಖರಣೆ ಮಾಡಿದ್ದ ಸುಮಾರು 320 ಮೆಟ್ರಿಕ್ ಟನ್ ಮರಳನ್ನು ವಶಕ್ಕೆ ಪಡೆದಿದ್ದು, ಅಕ್ರಮ ಮರಳು ಗಣಿಗಾರಿಕೆಯಲ್ಲಿ ತೊಡಗಿದ್ದವರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ ಎಂದು ಭೂ ವಿಜ್ಞಾನ ಇಲಾಖೆಯ ಮಹೇಶ್ ತಿಳಿಸಿದ್ದಾರೆ.
ಮದ್ದೂರು ತಾಲ್ಲೂಕಿನ ಶಿಂಷಾ ನದಿ ಪಾತ್ರದಲ್ಲಿಅಕ್ರಮ ಮರಳು ಗಣಿಗಾರಿಕೆ ನಡೆಸದಂತೆ ತಾಲೂಕು ಆಡಳಿತ 144 ಸಕ್ಷನ್ ಜಾರಿಗೊಳಿಸಿದ್ದರೂ ಕೆಲವರು ಮರಳು ಗಣಿಗಾರಿಕೆಯಲ್ಲಿ ನಿರತರಾಗಿದ್ದು, ಅಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಚ್ಚರಿಕೆ ನೀಡಿದರು.
ಕಾರ್ಯಾಚರಣೆ ವೇಳೆ ಕೆಸ್ತೂರು ಪಿಎಸ್‌ಐಗಳಾದ ನರೇಶ್, ಪ್ರಕಾಶ, ಕಂದಾಯ ರಾಜಸ್ವ ನಿರೀಕ್ಷಕರಾದ ಗೋವರ್ಧನ, ಮುರಳೀಧರ ಇತರರು ಹಾಜರಿದ್ದರು.




