ಕಾರ್ಯನಿರತ ಪತ್ರಕರ್ತರ ಸಂಘ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕು ಘಟಕದ ನೂತನ ಆಡಳಿತ ಮಂಡಳಿ ರಚನೆ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಮದ್ದೂರು ತಾಲೂಕು ಘಟಕದ ಸದಸ್ಯರೆಲ್ಲರ ಒಮ್ಮತದಿಂದಾಗಿ ಎಲ್ಲ ಪದಾಧಿಕಾರಿ ಹುದ್ದೆಗೂ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಶಿವನಂಜಪ್ಪ(ನಂಜಪ್ಪ), ಪ್ರಧಾನ ಕಾರ್ಯದರ್ಶಿಯಾಗಿ ಎಂ.ಆರ್.ಚಕ್ರಪಾಣಿ, ಉಪಾಧ್ಯಕ್ಷರಾಗಿ ಸಿ.ಹರೀಶ್, ಕಾರ್ಯದರ್ಶಿಯಾಗಿ ಎಂ.ಪಿ.ವೆಂಕಟೇಶ್ ಹಾಗೂ ಖಜಾಂಚಿಯಾಗಿ ಪಿ.ನಂದೀಶ್ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿ ಜಿಲ್ಲಾ ಘಟಕದ ಉಪಾಧ್ಯಕ್ಷರಾದ ಲೋಕೇಶ್ ಕರ್ತವ್ಯ ನಿರ್ವಹಿಸಿದರು.
ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಮತ್ತೀಕೆರೆ ಜಯರಾಂ ಮಾತನಾಡಿ, ಈಗಾಗಲೇ ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಘಟಕಕ್ಕೆ ನಿವೇಶನ ಮಂಜೂರಾಗಿದೆ. ಶಿವನಂಜಪ್ಪ ಅವರ ಅವಧಿಯಲ್ಲಿಯೇ ಇಲ್ಲಿ ಕಟ್ಟಡ ನಿರ್ಮಾಣವಾಗಲಿ, ಇದಕ್ಕೆ ಎಲ್ಲಾ ಪತ್ರಕರ್ತರ ಸಹಕಾರವಿರಲಿ ಎಂದು ಹೇಳಿದರು.
ಅಧ್ಯಕ್ಷ ಶಿವನಂಜಪ್ಪ ಮಾತನಾಡಿ, ಈಗಾಗಲೇ 9 ವರ್ಷಗಳಿಂದ ಸಂಘದ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದ್ದೇನೆ. ಈಗ ಮತ್ತೊಂದು ಅವಧಿಗೆ ನನ್ನನ್ನು ಆಯ್ಕೆ ಮಾಡಿದ್ದೀರಿ, ಸಂಘಕ್ಕೆ ಯಾವುದೇ ಚ್ಯುತಿ ಬರದಂತೆ ಕಾರ್ಯ ನಿರ್ವಹಿಸುತ್ತೇನೆ. ಅಲ್ಲದೇ ಕ್ಷೇಮಾಭಿವೃದ್ದಿ ನಿಧಿ ಸ್ಥಾಪನೆ ಕ್ರಮ ಕೈಗೊಳ್ಳುತ್ತೇನೆ. ಅಲ್ಲದೇ ಮದ್ದೂರಿನಲ್ಲಿ ರಾಜ್ಯ ಮಟ್ಟದ ಸಮ್ಮೇಳನವನ್ನು ನಡೆಸಲು ಅನುವು ಮಾಡಿಕೊಟ್ಟರೇ ಯಶಸ್ವಿಯಾಗಿ ನಡೆಸುವುದಾಗಿ ಭರವಸೆ ನೀಡಿದರು.




