ಮದ್ದೂರು ತಮಿಳ್ ಕಾಲೋನಿ ನಿವಾಸಿಗಳಿಗೆ ನಿವೇಶನ ಹಂಚಿಕೆ ಮಾಡಿ, ಹಕ್ಕುಪತ್ರ ನೀಡಲು ಆಗ್ರಹಿಸಿ ಭೂಮಿ ಮತ್ತು ವಸತಿ ಹಕ್ಕು ಹೋರಾಟ ಸಮಿತಿ ನೇತೃತ್ವದಲ್ಲಿ ಮಂಡ್ಯ ಉಪವಿಭಾಗದ ಕೊಳಗೇರಿ ಅಭಿವೃದ್ದಿ ಮಂಡಳಿ ಕಚೇರಿಗೆ ಮುತ್ತಿಗೆ ಶ್ರಮಿಕ ನಿವಾಸಿಗಳು ಸೋಮವಾರ ಪ್ರತಿಭಟನೆ ನಡೆಸಿದರು.
ಮದ್ದೂರು ತಮಿಳ್ ಕಾಲೋನಿ ನಿವಾಸಿಗಳಿಗೆ ಮಂಜೂರಾತಿಯಾಗಿರುವ 3 ಎಕರೆ ಜಾಗದಲ್ಲಿ 20×30 ರಂತೆ ನಿವೇಶನ ಹಂಚಿಕೆ ಮಾಡಿ, 110 ಕುಟುಂಬಗಳಿಗೆ ಹಕ್ಕುಪತ್ರ ನೀಡಲು ಮುಂದಾಗಬೇಕು. ಈ ಜಾಗವನ್ನು ಬಲಾಡ್ಯ ವ್ಯಕ್ತಿಗಳಿಂದ ರಕ್ಷಣೆ ಮಾಡಬೇಕು, ಅಕ್ರಮವಾಗಿ ಉಳುಮೆ ಮಾಡಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಶ್ರಮಿಕ ನಿವಾಸಿಗಳಿಗೆ ನೀಡಿರುವ 3 ಎಕರೆ ಜಾಗದಲ್ಲಿ ಸರ್ಕಾರ ಹಾಗೂ ಸ್ಥಳೀಯ ಶಾಸಕರು ಮತ್ತು ಜಿಲ್ಲಾಡಳಿತ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಅಭಿವೃದ್ಧಿಪಡಿಸಲು ತಕ್ಷಣ ಹಣ ಮಂಜೂರು ಮಾಡಿಸಲು ಮುಂದಾಗಬೇಕು ಹಾಗೂ ವಸತಿ ವಂಚಿತರಾದ ನಮಗೆ ನೂತನವಾಗಿ ವಸತಿ ಯೋಜನೆ ರೂಪಿಸಿ ವಸತಿ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದರು.

ಎಲ್ಲಾ ರಾಜಕೀಯ ಪಕ್ಷಗಳ ಜನಪ್ರತಿನಿಧಿಗಳು, ರಾಜಕಾರಣಿಗಳು ಚುನಾವಣಾ ಸಂದರ್ಭಗಳಲ್ಲಿ ಮತ ಪಡೆಯಲು, ಸುಳ್ಳು ಆಶ್ವಾಸನೆಗಳನ್ನು ನೀಡಿ, ನಮ್ಮನ್ನು ಮತಬ್ಯಾಂಕ್ ಮಾಡಿಕೊಂಡು ಶೋಷಣೆ ಮಾಡುತ್ತಾ ಬಂದಿರುತ್ತಾರೆ. ರಾಜಕಾರಣಿಗಳು ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿದು ತಮ್ಮಗಳ ಹಿತವನ್ನು ಕಾಪಾಡಿಕೊಂಡರೆ ವಿನಃ ನಮ್ಮಂತ ಬಡ ಜನರ ಬದುಕು ಮತ್ತು ಕಷ್ಟಗಳಿಗೆ ಪರಿಹಾರ ನೀಡದೆ, ಹಿಂದಿಗೂ ನಮ್ಮ ಮದ್ದೂರು ತಮಿಳ್ ಕಾಲೋನಿಯ ನಿವಾಸಿಗಳಾದ ನಮ್ಮ ಬಡವರಿಗೆ ಭೂಮಿ ವಸತಿ ನಿವೇಶನ, ಹಕ್ಕುಪತ್ರ, ಮೂಲಭೂತ ಸೌಲಭ್ಯಗಳು ಸಿಗದೇ ವಂಚಿತರಾಗಿದ್ದೇವೆ ಎಂದು ದೂರಿದರು.
2 ವರ್ಷಗಳಿಂದ ಸತತ ಹೋರಾಟದ ಫಲವಾಗಿ ಈಗಿನ ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ್ ಅವರು, ಮದ್ದೂರು ತಮಿಳ್ ಕಾಲೋನಿ ನಿವಾಸಿಗಳಿಗೆ ಹೊಸದಾಗಿ 3 ಎಕರೆ ಜಾಗವನ್ನು ಕುದುರಗುಂಡಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಜಾಗವನ್ನು ಗುರುತಿಸಿ, 3 ಎಕರೆ ಜಾಗ ನೀಡಿದ್ದಾರೆ. ಆದರೆ 2 ವರ್ಷಗಳು ಕಳೆದಿದ್ದರೂ ನಮ್ಮ 110 ಕುಟುಂಬಗಳಿಗೆ ನಿವೇಶನ ಹಂಚಿಕೆ ಮಾಡದೆ, ಹಕ್ಕು ಪತ್ರಗಳನ್ನು ನೀಡದೆ, ಕೊಳಗೇರಿ ಅಭಿವೃದ್ಧಿ ಮಂಡಳಿಯವರು ನಮ್ಮನ್ನು ಬೀದಿಗೆ ತಳ್ಳಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯಾರೋ ಒಬ್ಬ ಬಲಾಢ್ಯ ವ್ಯಕ್ತಿ ನಮಗೆ ನೀಡಿರುವ ಭೂಮಿಯಲ್ಲಿ ಅತಿಕ್ರಮ ಪ್ರವೇಶ ಮಾಡಿ, ಉಳುಮೆ ಮಾಡಲು, ಮುಂದಾಗಿದ್ದು, ಈ ವಿಚಾರವಾಗಿ ಕಳೆದ 6 ತಿಂಗಳಿಂದ ಕೊಳಗೇರಿ ಅಭಿವೃದ್ಧಿ ಮಂಡಳಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಸಹ ಅವರು ಅಕ್ರಮವಾಗಿ ಬಂದ ವ್ಯಕ್ತಿಯ ಮೇಲೆ ಯಾವುದೇ ಕಾನೂನು ಕ್ರಮ ಜರುಗಿಸದೆ, ನಿರ್ಲಕ್ಷ್ಯ ವಹಿಸಿರುವುದು ಅನುಮಾನಕ್ಕೆ ಈಡು ಮಾಡಿದೆ ಎಂದು ಮಂಡ್ಯದ ಕೋಳಗೇರಿ ಅಭಿವೃದ್ದಿ ಮಂಡಳಿಯ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಭೂಮಿ ಮತ್ತು ವಸತಿ ಹಕ್ಕು ಹೋರಾಟ ಸಮಿತಿಯ ರಾಜ್ಯ ಕಾರ್ಯದರ್ಶಿ ಸಿದ್ದರಾಜು, ಕರ್ನಾಟಕ ಜನಶಕ್ತಿ ರಾಜ್ಯ ಕಾರ್ಯದರ್ಶಿ ಪೂರ್ಣಿಮ, ಮಹಿಳಾ ಮನ್ನಡೆಯ ಶಿಲ್ವಾ, ಶ್ರಮಿಕರಾದ ವೈದುನ, ಪೊನ್ನುಸ್ವಾಮಿ, ಆರ್ಮುಗಂ, ಚಂದ್ರ, ರಘು, ಮನಿಯಾಂಡಿ, ರಾಜೇಂದ್ರ, ಶಾಂತ, ರತ್ನಮ್ಮ, ಸಗಾಯಿ, ಸೆಲ್ವಿ, ಮಣಿಕಂಠ, ದೊರೆ ಹಾಗೂ ಪ್ರಕಾಶ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.




