Friday, November 20, 2026

ಪ್ರಾಯೋಗಿಕ ಆವೃತ್ತಿ

ಶ್ರಮಿಕರ ಹೋರಾಟಕ್ಕೆ ಸಂದ ಜಯ| ಮದ್ದೂರು ತಮಿಳು ಕಾಲೋನಿ ಸರ್ವೆಗೆ ಜಿಲ್ಲಾಧಿಕಾರಿ ಆದೇಶ

ಮದ್ದೂರು ತಮಿಳು ಕಾಲೋನಿಯನ್ನು ಕೊಳಗೇರಿ ಅಭಿವೃದ್ದಿ ಮಂಡಳಿಗೆ ಹಸ್ತಾಂತರಿಸಿ, ಸರ್ವೆ ನಡೆಸಿ, ಅಲ್ಲಿನ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸುವಂತೆ ಆಗ್ರಹಿಸಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯು 5 ದಿನಗಳ ಕಾಲ ನಿರಂತರವಾಗಿ ನಡೆಸಿದ ಅನಿರ್ಧಿಷ್ಟಾವಧಿ ಧರಣಿಗೆ ಅಂತಿಮವಾಗಿ ಜಯ ಲಭಿಸಿದೆ.

ಹೋರಾಟಗಾರರನ್ನು ಕರೆದು ಮಾತುಕತೆ ನಡೆಸಿದ ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ ಅವರು, ಕೂಡಲೇ ತಮಿಳು ಕಾಲೋನಿಯನ್ನು ಸರ್ವೆ ನಡೆಸಿ, ಕೊಳಗೇರಿ ಅಭಿವೃದ್ದಿ ಮಂಡಳಿಗೆ ಹಸ್ತಾಂತರಿಸಿ, ಅಲ್ಲಿನ ವಾಸ ಮಾಡುತ್ತಿರುವ ನಿವಾಸಿಗಳಿಗೆ ಹಕ್ಕುಪತ್ರಗಳನ್ನು ನೀಡಿ ಎಂದು ಸಂಬಂಧಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಈ ಕುರಿತು ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ರಾಜ್ಯ ಕಾರ್ಯದರ್ಶಿ ಸಿದ್ದರಾಜು, ಕಳೆದ ಐದು ದಿನಗಳ ನಡೆಸಿದ ಅನಿರ್ಧಿಷ್ಟಾದಿ ಧರಣಿಗೆ ಜಯ ಸಿಕ್ಕಿದೆ, ನಮ್ಮ ಹೋರಾಟಕ್ಕೆ ಸ್ಪಂದಿಸಿದ ಜಿಲ್ಲಾಡಳಿತ, ಮಾಧ್ಯಮಗಳು, ಪತ್ರಕರ್ತರಿಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದರು.

ಮದ್ದೂರು ಪಟ್ಟಣದ ಕೆ.ಇ.ಬಿ. ಕಚೇರಿ ಮುಂಭಾಗದಲ್ಲಿರುವ ತಮಿಳು ಕಾಲೋನಿಯಲ್ಲಿ ಸುಮಾರು 70 ವರ್ಷಗಳಿಂದ ಸುಮಾರು 114 ಕುಟುಂಬಗಳು ವಾಸವಿದ್ದು, ಅವರ ಹೆಸರಿನಲ್ಲಿ ಯಾವ ದಾಖಲೆಗಳು ಇರಲಿಲ್ಲ, ಈ ಕಾರಣದಿಂದ ಪಟ್ಟಭದ್ರ ಹಿತಾಸಕ್ತಿಗಳು ಆ ಜಾಗವನ್ನು ಕಬಳಿಸಲು ಸಂಚು ರೂಪಿಸಿದ್ದರು. ಈ ಹಿನ್ನೆಲೆಯಲ್ಲಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ನೇತೃತ್ವದಲ್ಲಿ ಹೋರಾಟ ಹಮ್ಮಿಕೊಂಡಿದ್ದೇವು, ನಮ್ಮ ನ್ಯಾಯಯುತ ಹೋರಾಟಕ್ಕೆ ಜಿಲ್ಲಾಡಳಿತ ಸ್ಪಂದಿಸಿದೆ, ಇದಕ್ಕಾಗಿ ಜಿಲ್ಲಾಧಿಕಾರಿ ಡಾ.ಕುಮಾರ, ಎಡಿಸಿ ಡಾ.ಹೆಚ್.ಎಲ್.ನಾಗರಾಜು ಅವರನ್ನು ಅಭಿನಂದಿಸುತ್ತೇವೆ ಎಂದರು.

ಕರ್ನಾಟಕ ಜನಶಕ್ತಿಯ ರಾಜ್ಯ ಕಾರ್ಯದರ್ಶಿ ಪೂರ್ಣಿಮಾ ಮಾತನಾಡಿ, ಜಿಲ್ಲಾಧಿಕಾರಿ ಸೂಚನೆ ಹಿನ್ನೆಲೆಯಲ್ಲಿ ಕೊಳಗೇರಿ ಅಭಿವೃದ್ದಿ ಮಂಡಳಿ (ಮಂಡ್ಯ ಉಪ ವಿಭಾಗ)ಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಅವರು ಮದ್ದೂರು ತಹಶೀಲ್ದಾರ್ ಅವರಿಗೆ ಪತ್ರ ಬರೆದು ತಮಿಳು ಕಾಲೋನಿಯ ಸರ್ವೆ ಕಾರ್ಯ ನಡೆಸಿ, ನಿವಾಸಿಗಳಿಗೆ ಹಕ್ಕುಪತ್ರ ನೀಡುವಂತೆ ಕೋರಿದ್ದಾರೆ ಎಂದು ವಿವರಿಸಿದರು.

ಸರ್ಕಾರಿ ಜಾಗಗಳಲ್ಲಿ ಘೋಷಣೆಯಾಗಿರುವ ಕೊಳಚೆ ಪ್ರದೇಶಗಳ ಸ್ಥಳಕ್ಕೆ ಆರ್.ಟಿ.ಸಿ. ಬದಲಾವಣೆಯ ಕೆಲಸ ತುರ್ತು ಆಗಬೇಕಿದೆ. ಮಂಡ್ಯ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಕೊಳಚೆ ಪ್ರದೇಶಗಳಿಗೆ ಹಕ್ಕುಪತ್ರ ವಿತರಿಸುವ ಸರ್ವೆ ಕಾರ್ಯ ನಡೆಸಬೇಕೆಂದು ಒತ್ತಾಯಿಸಿದರು.

ವಸತಿ ರಹಿತ ಕುಟುಂಬಗಳು ಮತ್ತು ಕೊಳಚೆ ಪ್ರದೇಶಗಳನ್ನು ಗುರುತಿಸಿ ಜಿಲ್ಲಾದ್ಯಂತ ಎಷ್ಟು ವಸತಿಗಳು ಬೇಕಿದೆ ಎನ್ನುವುದರ ಸಮೀಕ್ಷೆ ಮಾಡಿ ಸರ್ಕಾರಕ್ಕೆ ವರದಿ ನೀಡಿ ಡಿ.ಪಿ.ಆರ್‌. ಮಾಡಿ ಕಳಿಸ ಬೇಕು ವಸತಿ ಸೌಲಭ್ಯವನ್ನು ನೀಡಬೇಕು ಹಾಗೂ ನಗರ ಪ್ರದೇಶಗಳಲ್ಲಿ ಹೆಚ್ಚುವರಿ ಕುಟುಂಬಗಳು ಒಂದೇ ಮನೆಯಲ್ಲಿ ವಾಸ ಮಾಡುತ್ತಿರುವುದನ್ನು ಸಮೀಕ್ಷಿಸಿ ಸರ್ಕಾರಕ್ಕೆ ಮತ್ತು ಜಿಲ್ಲಾಡಳಿತಕ್ಕೆ ವರದಿ ನೀಡಿ ಬೇಕಿರುವ ಭೂಮಿಯನ್ನು ಮಂಜೂರು ಮಾಡಿಸಿ ಹೆಚ್ಚುವರಿ ಕುಟುಂಬಗಳಿಗೆ ನೀಡಬೇಕೆಂದು ಆಗ್ರಹಿಸಿದರು.

ಗೋ‍ಷ್ಠಿಯಲ್ಲಿ ಮುಖಂಡರಾದ ವೈದುನ, ಉಮಾ, ಚಂದ್ರಶೇಖರ್, ರೂಪ, ಲತಾ, ಚಲುವೆ ಮತ್ತಿತರರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ