ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಎಸ್.ಸಿ. ಮಧುಚಂದನ್ ಈಗಾಗಲೇ ಮಂಡ್ಯದ ಮತದಾರರ ಮನೆ ಬಾಗಿಲಿಗೆ ಪಾದಯಾತ್ರೆ ಮೂಲಕ ತೆರಳಿ ಆಶೀರ್ವಾದ ಕೋರಿದ್ದಾರೆ.
ಈಗ ತಮ್ಮ ಜನ್ಮದಿನದ ಪ್ರಯುಕ್ತ ಮಂಡ್ಯದ ಮತದಾರರ ಮನ ಗೆಲ್ಲಲು ಮತ್ತೊಂದು ವಿನೂತನ ಕಾರ್ಯತಂತ್ರದ ಮೊರೆ ಹೋಗಿದ್ದಾರೆ. ಬೈಕ್ ರ್ಯಾಲಿಯ ಮೂಲಕ ಮಂಡ್ಯದ ಮತದಾರರ ಆಶೀರ್ವಾದ ಪಡೆಯಲು ಅವರು ಮುಂದಾಗಿದ್ದಾರೆ.
ಈಗಾಗಲೇ ಮಂಡ್ಯ ನಗರದ ಎಲ್ಲಾ ವಾರ್ಡ್ ಗಳಲ್ಲೂ ಪಾದಯಾತ್ರೆಯ ಮೂಲಕ ಜನರ ಮನೆ ಬಾಗಿಲಿಗೆ ಹೋಗಿ ಜನರನ್ನು ಭೇಟಿ ಮಾಡಿ ಅವರ ಆಶೀರ್ವಾದ ಪಡೆದಿರುವ ಮಧುಚಂದನ್ ಅವರು, ನನಗೆ ಜನತೆ ಆಶೀರ್ವಾದ ಮಾಡಿದರೆ, ಮಂಡ್ಯ ಕ್ಷೇತ್ರದ ಅಭಿವೃದ್ಧಿಗೆ ಏನೆಲ್ಲಾ ಯೋಜನೆಗಳನ್ನು ಹಾಕಿಕೊಂಡಿದ್ದೇನೆ ಎಂಬುದನ್ನು ಮತದಾರರಿಗೆ ಮುಟ್ಟಿಸಿದ್ದಾರೆ.
ಅದರಂತೆ ಮಧುಚಂದನ್ ಅವರು ತಮ್ಮ ಜನ್ಮದಿನವಾದ ಇಂದು ಸಂಜೆ 4 ಗಂಟೆಗೆ ಮಂಡ್ಯ ನಗರದ ಅರ್ಕೇಶ್ವರ ದೇವಸ್ಥಾನದಿಂದ ಬೃಹತ್ ಬೈಕ್ ರ್ಯಾಲಿಯ ಮೂಲಕ ಮಂಡ್ಯದ ಮತದಾರರ ಆಶೀರ್ವಾದ ಪಡೆಯಲಿದ್ದಾರೆ.
ಮಂಡ್ಯದ ಗುತ್ತಲು ಬಡಾವಣೆಯ ಅರ್ಕೇಶ್ವರ ದೇವಸ್ಥಾನದಲ್ಲಿ ಬೈಕ್ ರ್ಯಾಲಿಗೆ ಚಾಲನೆ ಸಿಗಲಿದ್ದು, ಫ್ಯಾಕ್ಟರಿ ಸರ್ಕಲ್, ಕಾಳಿಕಾಂಬ ದೇವಸ್ಥಾನ, ಹೊಳಲು ವೃತ್ತ, ಶಂಕರ ಮಠ, ಕಲ್ಲಹಳ್ಳಿ, ವಿ.ವಿ. ನಗರ, ಬನ್ನೂರು ರಸ್ತೆ,ಕರ್ನಾಟಕ ಬಾರ್ ಸರ್ಕಲ್, ಕಿತ್ತೂರು ರಾಣಿ ಚೆನ್ನಮ್ಮ ಸರ್ಕಲ್ ಹೊಸಳ್ಳಿಯ ಬಿಸಿಲು ಮಾರಮ್ಮ ದೇವಸ್ತಾನ ವೃತ್ತ, ವಿ.ವಿ. ರಸ್ತೆ ಮೂಲಕ ಹರಿಶ್ಚಂದ್ರ ಸರ್ಕಲ್ ವರೆಗೆ ಬೈಕ್ ರ್ಯಾಲಿ ನಡೆಯಲಿದೆ.
ಇದೊಂದು ವಿಶಿಷ್ಟವಾದ ಕಾರ್ಯಕ್ರಮವಾಗಿದ್ದು,ಭ್ರಷ್ಟಾಚಾರ ರಹಿತ ಪಾರದರ್ಶಕ ಆಡಳಿತಕ್ಕೆ ನನಗೊಮ್ಮೆ ಅವಕಾಶ ನೀಡಿ ಎಂದು ಮತದಾರರಿಗೆ ಮನವಿ ಮಾಡಲಿದ್ದಾರೆ.




