ಸಿದ್ದೇಶ್ವರ ಸ್ವಾಮೀಜಿಯವರು ಖಾಲಿ ಜೇಬಿನಲ್ಲಿಯೇ ಸೇವೆ ನಡೆಸಿ ಮಹಾತ್ಯಾಗಿ ಆಗಿದ್ದರು. ಸರ್ಕಾರದ ಅನುದಾನ, ಪದ್ಮಶ್ರೀ ಪ್ರಶಸ್ತಿಯನ್ನೇ ಬೇಡವೆಂದು ತಿರಸ್ಕಾರ ಮಾಡಿದ ಪುಣ್ಯಾತ್ಮರು ಎಂದು ಡಾ.ರಾಮ ಮನೋಹರ ಲೋಹಿಯ ವಿಚಾರವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಡಾ.ಬಿ.ಎಸ್.ಶಿವಣ್ಣ ಬಣ್ಣಿಸಿದರು.
ಮಂಡ್ಯ ನಗರದ ಅಂಬೇಡ್ಕರ್ ಭವನದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ವತಿಯಿಂದ ದಾಸಶ್ರೇಷ್ಟ ಶ್ರೀ ಭಕ್ತ ಕನಕದಾಸರ 535ನೇ ಜಯಂತ್ಯೋತ್ಸವ, ಪ್ರತಿಭಾ ಪುರಸ್ಕಾರ ಹಾಗೂ ಸಮಾಜದ ಸಾಧಕರಿಗೆ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಿದ್ದೇಶ್ವರ ಸ್ವಾಮೀಜಿಯವರು ತಮಗೆ ಕೋಟ್ಯಾಂತರ ಮೌಲ್ಯದ ಕಾರನ್ನು ನೀಡಿದರೂ ಬೇಡ ಎಂದಿದ್ದರು. ಮೂರು ನಾಲ್ಕು ಸರ್ಕಾರಗಳು ಕೋಟಿ ಕೋಟಿ ಅನುದಾನ ನೀಡಿದರೂ ಬೇಡವೆಂದು ಹೇಳಿದರು. ಇಂತಹ ಮಹಾನ್ ಸಂತ ನಮ್ಮೊಡನೆ ಇದ್ದರು ಎಂಬುದು ನಮಗೆಲ್ಲರಿಗೂ ಹೆಮ್ಮೆಯಾಗಿದೆ. ಸಿದ್ದೇಶ್ವರ ಸ್ವಾಮೀಜಿ ಅವರು ನಮ್ಮ ಕಣ್ಣ ಮುಂದೆಯೇ ಇದ್ದಾರೆ. ಅವರು ಕಾಲವಾದಾಗ ಲಕ್ಷಾಂತರ ಜನರು ಆಶೀರ್ವಾದ ಪಡೆದು ಧನ್ಯರಾದರು ಎಂದು ಸ್ಮರಿಸಿದರು.
ಸಿದ್ದರಾಮಯ್ಯ ಅವರು ಸಂತ ಸಿದ್ದೇಶ್ವರ ಅವರ ದಾರಿಯಲ್ಲಿಯೇ ಸಾಗುತ್ತಿದ್ದಾರೆ. ಬೇರೆ ರಾಜಕಾರಣಿಗಳಿಗೆ ಹೋಲಿಸಿಕೊಂಡರೆ ಸಿದ್ದರಾಮಯ್ಯ ಅವರು ಮೇರು ವ್ಯಕ್ತಿಯಾಗಿ, ಒಬ್ಬ ಸಂತನಂತೆ ಕಾಣುತ್ತಾರೆ ಎಂದು ಗುಣಗಾನ ಮಾಡಿದ ಅವರು, ಕನಕದಾಸರ ತತ್ವಗಳನ್ನು ತಿಳಿಸಿದರು.
ಇದೇ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ನಗರದ ಪ್ರಮುಖ ಬೀದಿಗಳಲ್ಲಿ ಕನಕದಾಸರ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಹಾಲುಮತ ಮಹಾಸಭಾ ರಾಜ್ಯ ಸಂಚಾಲಕ ನರೇಶ್ ಬಿ.ಗೌಡ, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಎಂ.ಎಲ್.ಸುರೇಶ್, ಸಂಘದ ನವೀನ್‌ಕುಮಾರ್, ಹುಚ್ಚೇಗೌಡ,ಸಿದ್ದರಾಮಯ್ಯ, ಮರಿಹೆಗಡೆ, ಬಿ.ಎಂ.ನಾಗರಾಜು, ದಿವ್ಯಾ ಆರ್.ಕೆ., ಕೆ.ಸಿ.ಚೆನ್ನೇಗೌಡ, ಮರೀಗೌಡ, ಸೋಮಣ್ಣ, ಎನ್.ಸೋಮಶೇಖರ್ ಸೇರಿದಂತೆ ಇತರರು ಭಾಗವಹಿಸಿದ್ದರು.




