ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಕಸಾಪ ಬೈಲಾ ತಿದ್ದುಪಡಿ ಮಾಡಲು ಹೊರಟಿರುವ ಕಸಾಪ ರಾಜ್ಯಾಧ್ಯಕ್ಷ ಡಾ. ಮಹೇಶ್ ಜೋಶಿ ನಿರ್ಧಾರದ ವಿರುದ್ಧ ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನ ಕಾರ್ಯಕಾರಿ ಮಂಡಳಿ ಸೇರಿದಂತೆ ವಿವಿಧ ಕನ್ನಡ ಪರ ಸಂಘಟನೆಗಳು ವಿರುದ್ಧ ನ್ಯಾಯಾಲಯಕ್ಕೆ ಮಾಹಿತಿ ನೀಡಲು ನಿರ್ಣಯ ಕೈಗೊಂಡಿವೆ.
ಮಂಡ್ಯನಗರದ ಕರ್ನಾಟಕ ಸಂಘದ ಕೆವಿಎಸ್ ಭವನದಲ್ಲಿ ನಡೆದ ವಿವಿಧ ಸಂಘಟನೆಗಳ ಮುಖಂಡರ ಸಭೆಯಲ್ಲಿ ಮಹೇಶ್ ಜೋಶಿ ವಿರುದ್ಧ ಆಕ್ರೋಶ ವ್ಯಕ್ತವಾಯಿತು. ಸಮ್ಮೇಳನ ಮುಗಿದ ಮಾರನೇ ದಿನ ಪರಿಷತ್ನ ಬೈಲಾ ನಿಯಮ ಉಲ್ಲಂಘಿಸಿ ಕಾರ್ಯಕಾರಿ ಮಂಡಳಿ ರದ್ದುಪಡಿಸಿ ಹೊಸ ಕಾರ್ಯಕಾರಿ ಮಂಡಳಿ ರಚನೆ ಮಾಡಲಾಗಿತ್ತು. ಇದರ ವಿರುದ್ಧ ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿದ್ದವರಿಗೆ ಸದಸ್ಯತ್ವ ರದ್ದುಪಡಿಸುವ ನೋಟಿಸ್ ನೀಡಲಾಗಿದ್ದು, ಅದಕ್ಕೆ ತಕ್ಕ ಉತ್ತರ ನೀಡುವ ಬಗ್ಗೆ ನಿರ್ಧರಿಸಲಾಯಿತು.
ಅಲ್ಲದೆ, ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಬೈಲಾದ 21/1ರಲ್ಲಿರುವಂತೆ ನಿಯಮವನ್ನು ಬಳ್ಳಾರಿ ಯಲ್ಲಿ ನಡೆಯಲಿರುವ ಸರ್ವ ಸದಸ್ಯರ ಸಭೆ ಪಡಿಸಲುಮುಂದಾಗಿರುವುದು ಸರಿಯಲ್ಲ, ನ್ಯಾಯಾಲಯ ದಲ್ಲಿದ್ದಾಗ ಯಾವುದೇ ಬೈಲಾದ ನಿಯಮ ರದ್ದುಪಡಿಸಲು ಬರುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಯಿತು.
ತಜ್ಞರ ಜೊತೆ ಚರ್ಚೆ
ರಾಷ್ಟ್ರಪತಿ ಹಾಗೂ ರಾಜ್ಯಪಾಲರಿಗೆ ಇರುವ ವಿಶೇಷ ಅಧಿಕಾರದ ನಿಯಮವನ್ನು ಕಸಾಪ ಬೈಲಾದಲ್ಲಿ ಸೇರಿಸುವ ಮೂಲಕ ರಾಜ್ಯಾಧ್ಯಕ್ಷರು ಸಹ ಅವರ ಸರಿಸಮಾನ ಎಂದು ಪರಮೋಚ್ಛ ಅಧಿಕಾರ ಪಡೆಯಲು ಮುಂದಾಗಿದ್ದಾರೆ. ಅದರ ಮೂಲಕ ಯಾರನ್ನಾದರೂ ಸದಸ್ಯತ್ವದಿಂದ ತೆಗೆದು ಹಾಕಬಹುದು ಅಥವಾ ಸೇರಿಸಬಹುದು. ಆದರೆ, ಸಂವಿಧಾನ ಪರಿಚ್ಛೇದ 164(1) ಅಡಿಯಲ್ಲಿ ಯಾವುದೇ ಸಂಘ-ಸಂಸ್ಥೆಗಳಿಗೆ ಈ ಅಧಿಕಾರ ಪಡೆಯುವ ಅಧಿಕಾರವಿಲ್ಲ. ಇದರ ಬಗ್ಗೆ ತಜ್ಞರ ಜೊತೆ ಚರ್ಚಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು.
ಮಹೇಶ್ ಜೋಶಿ ವಿರುದ್ದ ಶೀಘ್ರದಲ್ಲಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸುವುದು. ಜೊತೆಗೆ ಜಿಲ್ಲೆಯಲ್ಲಿ ಕನ್ನಡಪರ ಸಂಘಟನೆಗಳೊಡಗೂಡಿ ಪ್ರತಿಭಟನೆ ನಡೆಸುವ ಬಗ್ಗೆ ತೀರ್ಮಾನಿಸಲಾಯಿತು.
ಸಭೆಯಲ್ಲಿ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶ್ ಗೌಡ ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಕಸಾಪ ಮಾಜಿ ಅಧ್ಯಕ್ಷರಾದ ಪ್ರೊ.ಜಿ.ಟಿ.ವೀರಪ್ಪ, ಎಂ.ವಿ.ಧರಣೇಂದ್ರಯ್ಯ, ರೈತ ನಾಯಕಿ ಸುನಂದಜಯರಾಂ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.




