Friday, October 25, 2024

ಪ್ರಾಯೋಗಿಕ ಆವೃತ್ತಿ

ಮಳವಳ್ಳಿ ಪುರಸಭೆ: ಕಾಂಗ್ರೆಸ್-ಜೆಡಿಎಸ್ ಸದಸ್ಯರ ನಡುವೆ ವಾಗ್ವಾದ

ಮಳವಳ್ಳಿ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಸದಸ್ಯ ಗುಂಪುಗಳ ನಡುವೆ ಭಾರೀ ವಾಗ್ವಾದ ನಡೆದು ಕೈ ಕೈ ಮಿಲಾಯಿಸುವ ಸಂದರ್ಭ ಸೃಷ್ಟಿಯಾದ ಹಿನ್ನೆಲೆಯಲ್ಲಿ ಚುನಾವಣೆಯನ್ನು ಮುಂದೂಡಿಕೆ ಮಾಡಲಾಯಿತು.

ಇಂದು ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಅಧ್ಯಕ್ಷೆ ರಾಧಾ ನಾಗರಾಜು ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು. ಮಧ್ಯಾಹ್ನ ನಂತರ ಮುಖ್ಯಾಧಿಕಾರಿ ಪಿ.ಹರಿಪ್ರಸಾದ್ ಅವರು ಸ್ಥಾಯಿ ಸಮಿತಿ ರಚನೆ ಪ್ರಸ್ತಾವನೆ ಮಂಡಿಸಿದರು.

ಸ್ಥಾಯಿ ಸಮಿತಿ ರಚನೆ ವೇಳೆ ಮತದಾನ ಹಕ್ಕು ಹೊಂದಿದ್ದ 21 ಸದಸ್ಯರಲ್ಲಿ ಎರಡು ಬಣಗಳು ಸೃಷ್ಟಿಯಾಗಿ, ಜೆಡಿಎಸ್ ನ ಸಿದ್ದರಾಜು, ನಾಗೇಶ್ ಹಾಗೂ ಕಾಂಗ್ರೆಸ್ ಸದಸ್ಯ ಎಂ.ಆರ್.ರಾಜಶೇಖರ್ ನಡುವೆ ಪೈಪೋಟಿ ನಡೆದು,ಸದಸ್ಯರೊಬ್ಬರ ಸೆಳೆಯಲು ಎರಡೂ ಬಣಗಳು ಮುಂದಾದವು.

ಈ ಸಂದರ್ಭದಲ್ಲಿ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು ಕೈ ಕೈ ಮಿಲಾಯಿಸುವ ಹಂತ ತಲುಪಿತು.

ಶಾಸಕರ ಅಣತಿ
ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ರವಿ ಹಾಗೂ ಪಕ್ಷೇತರ ಸದಸ್ಯ ಎನ್.ಬಸವರಾಜು ನಡುವೆ ಪೈಪೋಟಿ ಉಂಟಾಗಿತ್ತು. 6ನೇ ವಾರ್ಡಿನ ಜೆಡಿಎಸ್ ಸದಸ್ಯ ಕುಮಾರ್ ಅವರ ಹೆಸರು ಎರಡೂ ಗುಂಪುಗಳಲ್ಲಿ ಕಾಣಿಸಿಕೊಂಡ ಹಿನ್ನಲೆಯಲ್ಲಿ ಜೆಡಿಎಸ್ ಸದಸ್ಯರು ಅಧಿಕಾರ ಕೈತಪ್ಪುವ ಭೀತಿಯಿಂದ ಆತಂಕಗೊಂಡು ಚುನಾವಣೆಯನ್ನು ಶಾಸಕ ಅನ್ನದಾನಿಯವರ ಅಣತಿಯಂತೆ ಅಧ್ಯಕ್ಷೆ ರಾಧಾ ನಾಗರಾಜು ಏಕಪಕ್ಷೀಯವಾಗಿ ಮುಂದೂಡಿಕೆ ಮಾಡಿದ್ದಾರೆ ಎಂದು ಪಕ್ಷೇತರ ಸದಸ್ಯ ಎನ್.ಬಸವರಾಜು ಗಂಭೀರ ಆರೋಪ ಮಾಡಿದರು.

ಕಾಂಗ್ರೆಸ್ ಸದಸ್ಯ ಎಂ.ಎಸ್.ಶಿವಸ್ವಾಮಿ ಮಾತನಾಡಿ,74 ಕೋಟಿ ವೆಚ್ಚದ 24*7 ಕುಡಿಯುವ ನೀರಿನ ಯೋಜನೆಯಲ್ಲಿ ಸಾಕಷ್ಟು ಅಕ್ರಮ ನಡೆದಿದ್ದು,ಈ ಹಿನ್ನೆಲೆಯಲ್ಲಿ ಜೆಡಿಎಸ್ ಸದಸ್ಯರು ಸ್ಥಾಯಿ ಸಮಿತಿ ಚುನಾವಣೆಯಲ್ಲಿ ಗೊಂದಲ ಸೃಷ್ಟಿಸಿದ್ದಾರೆ. ಸೋಲುವ ಭೀತಿಯಿಂದ ಜೆಡಿಎಸ್ ನವರು ನಿಯಮಬಾಹಿರವಾಗಿ ಚುನಾವಣೆಯನ್ನು ಮುಂದೂಡಿಕೆ ಮಾಡಿದ್ದಾರೆ ಎಂದು ಆರೋಪಿಸಿದರು.

ವಾರದೊಳಗೆ ಚುನಾವಣೆ
ಅಧ್ಯಕ್ಷೆ ರಾಧಾ ನಾಗರಾಜು ಅವರು ವಾರದೊಳಗೆ ಚುನಾವಣಾ ದಿನಾಂಕ ಘೋಷಣೆ ಮಾಡಬೇಕು. ಇಲ್ಲದಿದ್ದರೆ ಅಹೋರಾತ್ರಿ ಧರಣಿ ನಡೆಸುವುದಾಗಿ ತಿಳಿಸಿ ಕಾಂಗ್ರೆಸ್ ಹಾಗೂ ಪಕ್ಷೇತರ ಸದಸ್ಯರು ಧರಣಿ ಆರಂಭಿಸಿದ್ದಾರೆ.

ಸ್ಥಳಕ್ಕೆ ಬಂದ ಪುರಸಭೆ ಮುಖ್ಯಾಧಿಕಾರಿ ಹರಿಪ್ರಸಾದ್ ಅಹೋರಾತ್ರಿ ಧರಣಿ ಕೈ ಬಿಡುವಂತೆ ಹೇಳಿದರೂ ಸದಸ್ಯರು ಧರಣಿ ಮುಂದುವರೆಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!