Saturday, November 21, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ ಲೋಕಸಭಾ ಕ್ಷೇತ್ರ ಯಾವಾಗಲೂ ಕಾಂಗ್ರೆಸ್‌ ಕ್ಷೇತ್ರವೇ: ಅಂಕಿ-ಅಂಶಗಳು ಮಾತಾಡುತ್ತವೆ ನೋಡಿ..!

✍️ ಎನ್.ನಾಗೇಶ್ ಮಂಡ್ಯ

ರಾಜಕಾರಣದಲ್ಲಿ ಮತದಾರರು ಕೆಲವು ವಿಶಿಷ್ಟ ಸಂಗತಿಗಳಿಗೆ ಕಾರಣರಾಗುತ್ತಾರೆ. ಇದನ್ನು ಅರ್ಥ ಮಾಡಿಕೊಳ್ಳಬೇಕೆಂದರೆ ಯಾವಾಗಲೂ ಆಯಾ ಕ್ಷೇತ್ರದ ಇತಿಹಾಸದತ್ತ ದೃಷ್ಟಿ ಹರಿಸಬೇಕಾಗುತ್ತದೆ. ಇದಕ್ಕೆ ಮಂಡ್ಯ ಕ್ಷೇತ್ರಕ್ಕಿಂತ ದೊಡ್ಡ ಉದಾಹರಣೆ ಬೇಕಿಲ್ಲ. 1989ರಿಂದ ಇಲ್ಲಿಯವರೆಗಿನ ಮಂಡ್ಯ ಲೋಕಸಭಾ ಕ್ಷೇತ್ರದ ಇತಿಹಾಸ ನೋಡಿದರೆ ಅದು ಅರಿವಾಗುತ್ತದೆ. ಉದ್ದಕ್ಕೂ ವಿಧಾನಸಭಾ ಚುನಾವಣೆಯಲ್ಲಿ ಎರಡೂ ಕಡೆ (ಕಾಂಗ್ರೆಸ್‌ ಮತ್ತು ಜನತಾ ಪರಿವಾರ) ಮತದಾರರು ಒಲಿದಿದ್ದಾರೆ. ಕೆಲವೊಮ್ಮೆ ಜನತಾದಳದ ಕಡೆಗೆ ಒಂದು ಕೈ ಹೆಚ್ಚೇ ಎಂಬಂತೆಯೂ ಒಲವು ತೋರಿದ್ದಾರೆ. ಆದರೆ, ಲೋಕಸಭಾ ಚುನಾವಣೆಯಲ್ಲಿ ಮಾತ್ರ ಅದು ಯಾವಾಗಲೂ ಕಾಂಗ್ರೆಸ್ಸೇ. ಎಲ್ಲ ಸಾರಿಯೂ ಕಾಂಗ್ರೆಸ್ಸೇ ಗೆದ್ದಿದೆ ಎಂಬುದು ಅದರ ಅರ್ಥವಲ್ಲ. ಆದರೆ, ಜನತಾದಳ ಗೆದ್ದ ಸಂದರ್ಭ ಮತ್ತು ಲೀಡ್‌ ಏನು? ಕಾಂಗ್ರೆಸ್‌ ಗೆದ್ದ ರೀತಿ ಏನು ಎಂದು ನೋಡಿದರೆ, ಲೋಕಸಭೆಯ ವಿಚಾರದಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಒಲವು ಕಾಂಗ್ರೆಸ್ಸಿಗೆ ಇರುವುದು ಸ್ಪಷ್ಟ.
ಇದನ್ನು ಕೂಲಂಕಷವಾಗಿ ಬಿಡಿಸಿ ನೋಡಿದರೆ ಮಾತ್ರ ಅರಿವಾಗುತ್ತದೆ.

ಮಾದೇಗೌಡರ ಗೆಲುವು

1989ರಲ್ಲಿ ಜಿ.ಮಾದೇಗೌಡರು ಮೊದಲ ಸಾರಿ ಸಂಸತ್‌ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಅವರೆದುರಿಗೆ ಜನತಾ ಪಕ್ಷದಿಂದ ಎಚ್‌.ಎಲ್‌.ನಾಗೇಗೌಡರು ಅಭ್ಯರ್ಥಿ. ಬರೋಬ್ಬರಿ ಶೇ.10ರಷ್ಟು ಲೀಡಿಂಗಿನಿಂದ ಮಾದೇಗೌಡರು ಗೆದ್ದುಬಿಟ್ಟಿದ್ದರು. ಅದರ ನಂತರದ ಚುನಾವಣೆ 1991ಕ್ಕೇ ಬಂದಿತು. ಆಗಲೂ ಮಾದೇಗೌಡರೇ ಗೆದ್ದಿದ್ದು. ದೊಡ್ಡ ಲೀಡ್‌ʼನಲ್ಲಿ ಅವರು ಗೆದ್ದಾಗ, ಎರಡನೇ ಸ್ಥಾನದಲ್ಲಿ ಬಿಜೆಪಿಯಿತ್ತು ಮತ್ತು ಮೂರನೇ ಸ್ಥಾನದಲ್ಲಿ ರೈತಸಂಘ. ಜನತಾದಳದ ಅಭ್ಯರ್ಥಿ ನಾಲ್ಕನೇ ಸ್ಥಾನಕ್ಕೆ ಹೋಗಿದ್ದರು. 1996ರಲ್ಲಿ ಮಾತ್ರ ಜನತಾದಳ ತನ್ನದೇ ಸಾಮರ್ಥ್ಯದಿಂದ ಗೆದ್ದಿದ್ದು. ಅದಕ್ಕೆ ಕಾರಣವಿತ್ತು. ಆಗ ಇಡೀ ರಾಜ್ಯದಲ್ಲಿ ಜನತಾದಳದ ಅಲೆಯಿದ್ದು, ಅತ್ಯಂತ ಹೆಚ್ಚು ಅಂದರೆ 16 ಸ್ಥಾನಗಳನ್ನು ಜನತಾದಳ ಗೆದ್ದಿತ್ತು. ಕಾಂಗ್ರೆಸ್‌ ರಾಜ್ಯದಲ್ಲಿ ಧೂಳೀಪಟವಾಗಿತ್ತು. ಆದರೆ, ದೇವೇಗೌಡರು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಆ ಸಂದರ್ಭದಲ್ಲೂ ಜನತಾದಳಕ್ಕೆ ಸಿಕ್ಕ ಲೀಡ್‌ ಕೇವಲ 33,000. ಅದರ ಮರುಚುನಾವಣೆಯಲ್ಲಿ, 1998ರಲ್ಲಿ ಮಾತ್ರವೇ ಜನತಾದಳ ಭಾರೀ ಲೀಡಿನಿಂದ ಗೆದ್ದಿದ್ದು. ಆದರೆ, ಅದಕ್ಕೆ ಕಾರಣ ಜನತಾದಳವಲ್ಲ, ಅಂಬರೀಷ್‌. ಮಂಡ್ಯದ ಗಂಡು ಅಂಬರೀಷ್‌ ರಾಮನಗರದ ವಿಧಾನಸಭಾ ಉಪಚುನಾವಣೆಯಲ್ಲಿ ಜನತಾದಳದಿಂದ ಮೊದಲ ಬಾರಿಗೆ ಸ್ಪರ್ಧಿಸಿ ಸೋಲುಂಡಿದ್ದರು. ಹಾಗಾಗಿ ಆ ಅನುಕಂಪದಿಂದ ಮಂಡ್ಯದವರು ಅಂಬರೀಷ್‌ ಗೆ ಭಾರೀ ಲೀಡ್‌ ಕೊಟ್ಟರು. ಆದರೆ, ಒಂದೇ ವರ್ಷದಲ್ಲಿ ಮಧ್ಯಂತರ ಚುನಾವಣೆ ಬಂದುಬಿಟ್ಟಿತು. ಹಿಂದಿನ ಚುನಾವಣೆಯಲ್ಲಿ ಜನತಾದಳದಿಂದ 1,90,000ದಿಂದ ಗೆದ್ದಿದ್ದ ಅಂಬರೀಷ್‌, ಈ ಸಾರಿ ಕಾಂಗ್ರೆಸ್ಸಿಗೆ ಹೋಗಿ ಸ್ಪರ್ಧಿಸಿದರು. ಅಲ್ಲೂ 1,53,000 ಮತಗಳ ಅಂತರದಿಂದ ಗೆದ್ದರು.

ಅಂಬರೀಶ್ ಗೆಲುವು
2004ರಲ್ಲೂ ಅಂಬರೀಷೇ ಗೆದ್ದರು, ಮತ್ತೆ ದೊಡ್ಡ ಮತಗಳ ಅಂತರದಿಂದ, ಕಾಂಗ್ರೆಸ್ಸಿನಿಂದಲೇ. 2009ರಲ್ಲಿ ಜನತಾದಳದಿಂದ ಚಲುವರಾಯಸ್ವಾಮಿ ಗೆದ್ದರಲ್ಲಾ ಎಂಬ ಪ್ರಶ್ನೆ ಏಳುತ್ತದೆ. ಆದರೆ, ಅದಕ್ಕೆ ಚಲುವರಾಯಸ್ವಾಮಿಯವರಿಗೆ ಇದ್ದ ಸ್ವಂತ ವರ್ಚಸ್ಸಿನ ಜೊತೆಗೆ, ಕೆ.ಎಸ್.‌ಪುಟ್ಟಣ್ಣಯ್ಯನವರು ರೈತಸಂಘದಿಂದ ಸ್ಪರ್ಧಿಸಿ 53,000 ಮತಗಳನ್ನು ಪಡೆದಿದ್ದರಿಂದ, ಕಾಂಗ್ರೆಸ್‌ ಅಭ್ಯರ್ಥಿಗೆ ಕೇವಲ 24,000 ಮತಗಳಿಂದ ಸೋತಿತ್ತು.

2013ರ ಉಪಚುನಾವಣೆಯಲ್ಲಿ ರಮ್ಯಾ ಕಾಂಗ್ರೆಸ್ಸಿನಿಂದ 67,000 ಮತಗಳ ಅಂತರದಿಂದ ಸಿ.ಎಸ್.ಪುಟ್ಟರಾಜು ವಿರುದ್ಧ ಗೆಲ್ಲುತ್ತಾರೆ. 2014ರಲ್ಲಿ ರಮ್ಯಾ ಅದೇ ಪುಟ್ಟರಾಜು ವಿರುದ್ಧ ಸೋತಿದ್ದು 5,518 ಮತಗಳಿಂದ ಮಾತ್ರ. ಅದೂ ಕಾಂಗ್ರೆಸ್ಸಿನ ಅಂದಿನ ದೊಡ್ಡ ನಾಯಕರು ಪ್ರಚಾರಕ್ಕೂ ಬಾರದೇ, ಸರಿಯಾಗಿ ಒಳೇಟು ಕೊಟ್ಟಿದ್ದರಿಂದ.
2018ರ ಉಪಚುನಾವಣೆಯಲ್ಲಿ ನಾಗಮಂಗಲದ ಎಲ್‌.ಆರ್. ಶಿವರಾಮೇಗೌಡ ಲೋಕಸಭೆಗೆ ಸ್ಪರ್ಧಿಸಿ ಜೆಡಿಎಸ್ ಪಕ್ಷದಿಂದ ಗೆದ್ದರು. ಅದರ ಜೊತೆಗೆ ಸರ್ಕಾರ ರಚಿಸಿದ್ದ ಕಾಂಗ್ರೆಸ್‌ ಅಭ್ಯರ್ಥಿಯನ್ನೇ ಹಾಕಿರಲಿಲ್ಲವಾದ್ದರಿಂದ ಗೆದ್ದರು.

ನಿಖಿಲ್ ಕುಮಾರಸ್ವಾಮಿ ಸೋಲು

nudikarntaka.com

ಎಲ್ಲಕ್ಕಿಂತ ಮುಖ್ಯವಾಗಿ 2019ರ ಲೋಕಸಭಾ ಚುನಾವಣೆಯ ಸಂದರ್ಭವನ್ನೂ ಸರಿಯಾಗಿ ಅವಲೋಕಿಸಬೇಕು. ಆಗಂತೂ ಯಾವ ದಿಕ್ಕಿನಿಂದ ನೋಡಿದರೂ ಜನತಾದಳ ಗೆಲ್ಲಬೇಕಿತ್ತು. ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸಿಎಂ ಕುಮಾರಸ್ವಾಮಿ ಮಗ ನಿಖಿಲ್ ಕುಮಾರಸ್ವಾಮಿ ಅಭ್ಯರ್ಥಿ ಆಗಿದ್ದರು. ಎಂಟಕ್ಕೆ ಎಂಟೂ ಎಂಎಲ್‌ ಎಗಳು, ಮೂವರು ಎಂಎಲ್ಸಿಗಳು ಜೆಡಿಎಸ್‌, ಮೂರು ಜನ ಮಂತ್ರಿಗಳು, ರಾಜ್ಯದ ಮುಖ್ಯಮಂತ್ರಿಯೇ ಅಲ್ಲಿ ಮೊಕ್ಕಾಂ ಹೂಡಿದರು. ಹಣದ ಹೊಳೆ ಹರಿಯಿತು. ಸಾಕ್ಷಾತ್‌ ಮಾಜಿ ಪ್ರಧಾನಿ ದೇವೇಗೌಡರೇ ಬಂದು ಮೊಮ್ಮಗನ ಪರ ಪ್ರಚಾರ ಮಾಡಿದರು. ಇನ್ನೂ ಒಂದು ಮಾತು ಹೇಳಬೇಕೆಂದರೆ, ಅವರೆದುರು ನಿಂತ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರಿಗೆ ಪಕ್ಷದ ಚಿಹ್ನೆ ಸಹಾ ಇರಲಿಲ್ಲ.ಆದರೆ ಕಾಂಗ್ರೆಸ್ಸಿನ ಸ್ಥಳೀಯ ನಾಯಕರ ಬೆಂಬಲ ಇತ್ತು ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ.

ದೇವೇಗೌಡರ ಮೊಮ್ಮಗನನ್ನು ಮಂಡ್ಯದ ಜನರು 1,25,876 ಮತಗಳಿಂದ ಸೋಲಿಸಿದರು. ಇದಕ್ಕೆ ಬೇರೆ ಬೇರೆ ಕಾರಣಗಳನ್ನು ಜನರು ಹುಡುಕುತ್ತಾರೆ. ಅಂಬರೀಷ್‌ ಅವರು ನಿಧನರಾದ ಕಾರಣಕ್ಕೆ ಸುಮಲತಾ ಗೆದ್ದರು ಎಂಬುದು ಪೂರ್ಣ ನಿಜವಲ್ಲ. ಅಂಬರೀಷ್‌ ಕುರಿತು ಮಂಡ್ಯದ ಜನರಿಗೆ ತೀರದ ಅಭಿಮಾನ ಇದ್ದುದು ನಿಜ. ಆದರೆ ರಾಜಕಾರಣಿಯಾಗಿ ಆ ಒಲವು ಇಳಿದು ಹೋಗಿತ್ತು. ಸ್ವತಃ ಅಂಬರೀಷ್‌ 2018ರ ವಿಧಾನಸಭಾ ಚುನಾವಣೆಗೆ ನಿಲ್ಲುವ ಧೈರ್ಯ ಮಾಡಿರಲಿಲ್ಲ. ನನಗೆ ಅಭಿಮಾನ ಸಾಕು, ಅಧಿಕಾರ ಬೇಡ ಎಂದು ನಿರ್ಧರಿಸಿದ್ದರು ಅವರು. ಹೀಗಿರುವಾಗ ಸುಮಲತಾರನ್ನು ಜನರು ಆಯ್ಕೆ ಮಾಡಲು ಇದ್ದ ಹಲವು ಕಾರಣಗಳಲ್ಲಿ, ಜೆಡಿಎಸ್ಸಿನ ವಿರುದ್ಧ ಇದ್ದ ಭಾವನೆಯೇ ಕಾರಣವಾಗಿತ್ತು.

ಅದೇ 2023ರ ವಿಧಾನಸಭಾ ಚುನಾವಣೆವರೆಗೂ ಎದ್ದು ಕಂಡಿದೆ. ಎಂಟರಲ್ಲಿ ಒಂದು ಕ್ಷೇತ್ರದಲ್ಲಿ ಮಾತ್ರ ಜೆಡಿಎಸ್‌ ಗೆಲುವು ಸಾಧಿಸಲು ಸಾಧ್ಯವಾಗಿದೆ. ದೇವೇಗೌಡರ ಕಾರಣಕ್ಕೇ ಜೆಡಿಎಸ್‌ ಇಲ್ಲಿ ಗೆದ್ದಿದ್ದು 1996ರಲ್ಲಿ ಮಾತ್ರವಾಗಿತ್ತು. ಉಳಿದಂತೆ ಮಂಡ್ಯದ ಒಕ್ಕಲಿಗರೂ ತಮ್ಮ ನಾಯಕರನ್ನಾಗಿ ಬೇರೆಯವರನ್ನು ಆರಿಸಿಕೊಂಡಾಗಿದೆ. ಜೊತೆಗೆ ವಿಧಾನಸಭೆಯಲ್ಲಿ ಎಂಟಕ್ಕೆ ಎಂಟೂ 2018ರಲ್ಲಿ ಗೆಲ್ಲಿಸಿದಾಗಲೂ, 2019ರಲ್ಲಿ ಲೋಕಸಭೆಯಲ್ಲಿ ಜೆಡಿಎಸ್ಸನ್ನು ಮಂಡ್ಯದ ಮತದಾರರು ಭಾರೀ ಮತಗಳೊಂದಿಗೆ ತಿರಸ್ಕರಿಸಿದರು, ಇದು ವಾಸ್ತವ. ಇದು ಕುಮಾರಸ್ವಾಮಿಯವರಿಗೂ ಗೊತ್ತಿದ್ದರಿಂದಲೇ ಅವರೇ ಅಭ್ಯರ್ಥಿಯಾಗಲು ಅಷ್ಟೊಂದು ಹಿಂಜರಿದಿದ್ದು. ಅಂತಿಮವಾಗಿ ಬಿಜೆಪಿಯ ನಾಯಕರ ಒತ್ತಡಕ್ಕೆ ಮಣಿದು ಸ್ಪರ್ಧೆ ಮಾಡಿದರು. ಜೆಡಿಎಸ್ ಅಥವಾ ಬಿಜೆಪಿ ಚಿಹ್ನೆ ಮೇಲೆ ಸುಮಲತಾರನ್ನೇ ನಿಲ್ಲಿಸೋದು ಬಿಜೆಪಿ ನಾಯಕರ ಪ್ರಸ್ತಾಪವಾಗಿತ್ತು. ಆದರೆ, ಅದನ್ನು ಎಚ್‌.ಡಿ.ಕೆ ಒಪ್ಪುವುದು ಸಾಧ್ಯವಿರಲಿಲ್ಲ. ತಾನೂ ಸ್ಪರ್ಧಿಸಲು ಹಿಂಜರಿಕೆ ಹೊಂದಿದ್ದರು. ಅಂತಿಮವಾಗಿ, ಬಿಜೆಪಿಯವರಿಗೆ ಕುಮಾರಸ್ವಾಮಿಯವರೇ ನಿಲ್ಲಲಿ ಎಂದು ಬಲವಾಗಿ ಅನ್ನಿಸಿತು. ಅವರು ಮಂಡ್ಯ ಅಥವಾ ಹಾಸನದಲ್ಲಿ ಸ್ಪರ್ಧಿಸಲು ಎಂದು ಬಿಜೆಪಿ ನಾಯಕರು ಹೇಳಲು ಕಾರಣವಿದೆ. ಈ ಚುನಾವಣೆಯಲ್ಲಿ ಜೆಡಿಎಸ್ ಸೋಲುವುದು ಎಲ್ಲರಿಗಿಂತ ಹೆಚ್ಚು ಬೇಕಿರುವುದು ಬಿಜೆಪಿಗೆ. ಆಶ್ಚರ್ಯವೆನಿಸಿದರೂ ಇದು ಸತ್ಯ. ಏಕೆಂದರೆ, ದಕ್ಷಿಣ ಕರ್ನಾಟಕದಲ್ಲಿ ಜೆಡಿಎಸ್ ಪಕ್ಷವನ್ನು ನಿರ್ಮೂಲನೆ ಮಾಡಿದರೆ ಮಾತ್ರ ತಾನು ಇಂದಲ್ಲದಿದ್ದರೂ ಮುಂದೊಮ್ಮೆ ಕರ್ನಾಟಕದಲ್ಲಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಬಹುದು ಎಂಬುದು ಅವರ ಉದ್ದೇಶ.

ಅಂತಿಮವಾಗಿ ಹಾಸನದ ಮಗ ಕುಮಾರಸ್ವಾಮಿ ಮತ್ತು ಮಂಡ್ಯದ ಮಗ ಸ್ಟಾರ್‌ ಚಂದ್ರು ನಡುವೆ ಅಥವಾ ಇನ್ನೂ ಹೇಳಬೇಕೆಂದರೆ, ಮಂಡ್ಯದ ಸದ್ಯದ ಪ್ರಭಾವೀ ನಾಯಕ ಚಲುವರಾಯಸ್ವಾಮಿ ಮತ್ತು ಮಂಡ್ಯವನ್ನು ಯಾವಾಗಲೂ ತಮ್ಮ ಪಾಳೇಪಟ್ಟು ಎಂಬಂತೆ ಬಳಸಿಕೊಂಡ ದೇವೇಗೌಡರ ಕುಟುಂಬದ ನಡುವಿನ ಹಣಾಹಣಿ ಇದು. ಇದುವರೆಗಿನ ಇತಿಹಾಸಕ್ಕೆ ತಕ್ಕಂತೆ ಮಂಡ್ಯದ ಜನರು ಲೋಕಸಭೆಯಲ್ಲಿ ಜೆಡಿಎಸ್ ವಿರುದ್ಧವೇ ಮತ ಚಲಾಯಿಸುತ್ತಾರಾ ಇಲ್ಲವಾ ಎಂಬುದನ್ನು ತಿಳಿಯಲು ಜೂನ್‌ ನಾಲ್ಕರವರೆಗೆ ಕಾಯಲೇಬೇಕು, ಕಾಯೋಣ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ