ಪೌರ ಕಾರ್ಮಿಕರಿಗೆ ಇ.ಎಸ್.ಐ. ಪಿ.ಎಫ್. ಸಂಬಳ ಸರಿಯಾಗಿ ನೀಡಲಾಗುತ್ತಿದೆಯೇ ಸುರಕ್ಷಿತ ಪರಿಕರಗಳನ್ನು ನೀಡಲಾಗುತ್ತಿದೆಯೇ ಪರಿಶೀಲಿಸಿ. ಪೌರಕಾರ್ಮಿಕರ ಹಿತ ಕಾಯುವುದು ನಗರಸಭೆಯ ಜವಾಬ್ದಾರಿ ಎಂದು ನಗರಸಭೆ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.
ಮಂಡ್ಯ ನಗರಸಭೆಯಲ್ಲಿ ಆಯೋಜಿಸಲಾಗಿದ್ದ ನಗರ ವ್ಯಾಪ್ತಿಯ ಕೆಲಸಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಪೌರಕಾರ್ಮಿಕರು ನಗರಸಭೆ ವತಿಯಿಂದ ನೀಡಲಾದ ಸುರಕ್ಷಿತ ಪರಿಕರಗಳನ್ನು ಉಪಯೋಗಿಸಿ ಕಾರ್ಯ ನಿರ್ವಹಿಸುತ್ತಿದ್ದಾರ ಎಂದು ಪರಿಶೀಲಿಸಿ ಹಾಗೂ ಸುರಕ್ಷತಾ ಪರಿಕರಗಳನ್ನು ಉಪಯೋಗಿಸುವಂತೆ ಅರಿವು ಮೂಡಿಸಿ ಎಂದರು.
ನಗರಸಭೆ ವ್ಯಾಪ್ತಿಯಲ್ಲಿ 314 ಜನ ಪೌರಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ. ಪೌರಕಾರ್ಮಿಕರ ಆರೋಗ್ಯ ವಿವರಗಳನ್ನೊಳಗೊಂಡ ಪಟ್ಟಿಯ ಪ್ರತ್ಯೇಕ ಕಡತವನ್ನು ನಿರ್ವಹಣೆ ಮಾಡಿ, ಚಿಕಿತ್ಸೆ ಅಗತ್ಯವಿರುವ ಪೌರಕಾರ್ಮಿಕರಿಗೆ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸಿ. 25 ಪೌರಕಾರ್ಮಿಕರು ಪೌರಕಾರ್ಮಿಕ ಗೃಹ ಭಾಗ್ಯ ಯೋಜನೆ ಅಡಿ ಅರ್ಹರಿದ್ದಾರೆ ಒಂದು ವಾರದೊಳಗೆ ಪೌರಕಾರ್ಮಿಕ ಗ್ರಹ ಭಾಗ್ಯ ಯೋಜನೆಯನ್ನು ಅರ್ಹರಿಗೆ ತಲುಪಿಸಿ ಎಂದು ಹೇಳಿದರು.
ನಗರದ ಪ್ರಮುಖ ರಸ್ತೆಗಳಲ್ಲಿ ಕಸಗಳು ಹೆಚ್ಚಾಗಿ ಕಾಣುತ್ತಿವೆ, ಕಸಗಳನ್ನು ಸರಿಯಾಗಿ ನಿರ್ವಹಣೆ ಮಾಡಿ. ರಸ್ತೆಗಳಲ್ಲಿ ಕಸವನ್ನು ಹಾಕುವ ಅಂಗಡಿಗಳ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಹಾಗೂ ಟ್ರೇಡ್ ಲೈಸನ್ಸ್ ಅನ್ನು ರದ್ದು ಗೊಳಿಸಿ. ನಗರಸಭೆ ವ್ಯಾಪ್ತಿಯಲ್ಲಿ ಬರುವ 10 ಸಾರ್ವಜನಿಕ ಶೌಚಾಲಯಗಳನ್ನು ಸೂಕ್ತವಾಗಿ ನಿರ್ವಹಿಸಿ ಎಂದು ಹೇಳಿದರು.
ನಗರಸಭೆ ವ್ಯಾಪ್ತಿಯಲ್ಲಿ ಪ್ರತಿ ದಿನ 60 ಟನ್ ಘನ ತ್ಯಾಜ್ಯ ಉತ್ಪಾದನೆಯಾಗುತ್ತಿದೆ. ಘನತ್ಯಾಜ್ಯ ವನ್ನು ಸರಿಯಾದ ರೀತಿಯಲ್ಲಿ ವಿಳೆವಾರಿ ಮಾಡಿ. ತ್ಯಾಜ್ಯ ವಿಲೇವಾರಿಗೆ 10 ಟ್ರ್ಯಾಕ್ಟರ್ ಬಳಸಲಾಗುತ್ತಿದೆ. ನಗರಸಭೆ ಎಲ್ಲಾ ವಾಹನಗಳ ಚಾಲಕರಿಗೆ ಡಿ.ಎಲ್ ಇದೆಯೇ ವಾಹನಗಳಿಗೆ ದಾಖಲೆಗಳು ಸರಿ ಇದೆಯೇ ಪರಿಶೀಲಿಸಿ. ಈಗಾಗಲೇ ನಗರಸಭೆ ಎಲ್ಲಾ ವಾಹನಗಳಿಗೂ ಜಿಪಿಎಸ್ ಟ್ರಾಕರ್ ಅಳವಡಿಸಲಾಗಿದೆ ಎಂದು ತಿಳಿಸಿದರು.
400 ಟನ್ ಸಾವಯವ ಗೊಬ್ಬರ ದಾಸ್ತಾನು
ನಗರಸಭೆ ವ್ಯಾಪ್ತಿಯಲ್ಲಿ ಬರುವ ತ್ಯಾಜ್ಯಗಳಿಂದ 400 ಟನ್ ಸಾವಯವ ಗೊಬ್ಬರ ತಯಾರಿಸಿ ದಾಸ್ತಾನು ಮಾಡಲಾಗಿದೆ. ವಾರಕ್ಕೆ ಎರಡು ಟನ್ ಸಾವಯವ ಗೊಬ್ಬರ ಮಾರಾಟವಾಗುತ್ತಿದ್ದು ಇದರ ಕುರಿತು ಹೆಚ್ಚಾಗಿ ರೈತರಿಗೆ ತಿಳಿಯಬೇಕು. ರೈತರು ಸಾವಯವ ಗೊಬ್ಬರ ಖರೀದಿಸಲು ಹೆಚ್ಚಿನ ಪ್ರಚಾರ ನೀಡಿ. ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಜೊತೆ ಕೈಗೂಡಿ ಸದರಿ ಗೊಬ್ಬರವನ್ನು ಬ್ರಾಂಡಿಂಗ್ ಮಾಡಿ ಮಾರಾಟ ಮಾಡಲು ಸೂಕ್ತ ಕ್ರಮ ವಹಿಸಿ ಎಂದು ಹೇಳಿದರು.
ನಗರಸಭೆಯಲ್ಲಿ ಇ-ಖಾತಾ, ಟ್ರೇಡ್ ಲೈಸೆನ್ಸ್ ಇನ್ನಿತರ ಖಾತೆಗಳನ್ನು ಸೃಜಿಸಲು ತಡವಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿವೆ. ಸಾರ್ವಜನಿಕರಿಗೆ ತೊಂದರೆ ಆಗದಂತೆ ಸೂಕ್ತ ಕಾಲ ಮಿತಿ ಒಳಗೆ ಎಲ್ಲಾ ಖಾತೆಗಳನ್ನು ಪಾರದರ್ಶಕವಾಗಿ ನೀಡಬೇಕು ಎಂದು ತಿಳಿಸಿದರು.
ನಗರಸಭೆ ವ್ಯಾಪ್ತಿಯಲ್ಲಿ ಎರಡು ಇಂದಿರಾ ಕ್ಯಾಂಟೀನ್ ಕಾರ್ಯನಿರ್ವಹಿಸುತ್ತಿದೆ. ಅಧಿಕಾರಿಗಳು ಇಂದಿರಾ ಕ್ಯಾಂಟೀನ್ ಗಳಿಗೆ ಭೇಟಿ ನೀಡಿ ಆಹಾರದ ಗುಣಮಟ್ಟವನ್ನು ಪರಿಶೀಲಿಸಬೇಕು. ನಂದ ಸರ್ಕಲ್ ನಲ್ಲಿರುವ ಇಂದಿರಾ ಕ್ಯಾಂಟೀನ್ ಅನ್ನು ಹೊಳಲು ಸರ್ಕಲ್ ಅಥವಾ ಮಿಮ್ಸ್ ಆಸ್ಪತ್ರೆಯಲ್ಲಿ ವರ್ಗಾವಣೆ ಮಾಡಲು ಅವಕಾಶವಿದ್ದರೆ ವರ್ಗಾವಣೆ ಮಾಡಿ ಮಿಮ್ಸ್ ನಲ್ಲಿ ಸ್ಥಳ ಕೊಡಿಸುತ್ತೇನೆ. ಇದರಿಂದ ಅನೇಕ ಬಡವರಿಗೆ ಸಹಾಯ ಆಗುತ್ತದೆ ಎಂದು ಹೇಳಿದರು.
ಮಹಾವೀರ ವೃತ್ತದ ರೈಲ್ವೆ ಅಂಡರ್ ಪಾಸ್ ಬಳಿ ನೀರು ಸೋರಿಕೆ ಆಗುತ್ತಿರುವ ಕುರಿತು ದೂರು ಕೇಳಿ ಬಂದಿದೆ. ಸಂಬಂಧಪಟ್ಟ ಅಧಿಕಾರಿಗಳು ಶೀಘ್ರವೇ ಅದನ್ನು ಸರಿಪಡಿಸಲು ಕ್ರಮವಹಿಸಿ. ನಗರಸಭೆ ವ್ಯಾಪ್ತಿಯಲ್ಲಿ ಶೇ 78 ರಷ್ಟು ಟ್ಯಾಕ್ಸ್ ಸಂಗ್ರಹಿಸಲಾಗಿದೆ ವರ್ಷ ಕಳೆಯಲು ಒಂದು ತಿಂಗಳು ಬಾಕಿ ಇರುವುದರಿಂದ ಸೀಘ್ರವಾಗಿ ಟ್ಯಾಕ್ಸ್ ಸಂಗ್ರಹಣೆ ಮಾಡಿ ಎಂದು ಸೂಚಿಸಿದರು.
ಪೌರಕಾರ್ಮಿಕರ ವಿವಿಧ ಯೋಜನೆಯಡಿ 900 ಪೌರಕಾರ್ಮಿಕರು ನಿವೇಶನ ಮತ್ತು ವಸತಿ ರೈತರು ಎಂದು ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಸಲ್ಲಿಸಿದ ಅರ್ಜಿದಾರನ ಹಿನ್ನೆಲೆಯನ್ನು ಪರಿಶೀಲಿಸಿ ಅರ್ಹರನ್ನು ಆಯ್ಕೆ ಮಾಡಿ. ಕುಡಿಯುವ ನೀರಿನ ಗುಣಮಟ್ಟ ಕಾಲ ಕಾಲಕ್ಕೆ ಪರಿಶೀಲಿಸಿ ಎಂದು ತಿಳಿಸಿದರು.
ಪರವಾನಿಗೆ ಇಲ್ಲದೆ ರಸ್ತೆಗಳಲ್ಲಿ ಬ್ಯಾನರ್ ಕಟ್ಟುವವರ ವಿರುದ್ಧ ಕ್ರಮ
ರಸ್ತೆಗಳ ಮಧ್ಯೆ ನಗರಸಭೆ ಪರವಾನಿಗೆ ಇಲ್ಲದೆ ಬ್ಯಾನರ್ ಅಳವಡಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಿ.
ರಸ್ತೆಗಳ ಮಧ್ಯ ಬ್ಯಾನರ್ ಕಟ್ಟುವುದರಿಂದ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚು ಇರುತ್ತದೆ. ಜಿಲ್ಲೆಯಲ್ಲಿನ ಬ್ಯಾನರ್ ಪ್ರಿಂಟರ್ ಮಾಲೀಕರ ಜೊತೆ ಸಭೆ ನಡೆಸಿ ಜಾಗೃತಿ ಮೂಡಿಸಿ ಎಂದರು.
ಸಭೆಯಲ್ಲಿ ನಗರಸಭೆ ಪೌರಾಯುಕ್ತರಾದ ಪಂಪಶ್ರೀ, ನಗರಾಭಿವೃದ್ಧಿ ಕೋಶದ ಕಾರ್ಯಪಾಲಕ ಅಭಿಯಂತರ ಪ್ರತಾಪ್, ನಗರಸಭೆ ಪರಿಸರ ಅಭ್ಯಂತರ ರುದ್ರೇಗೌಡ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.




