ವಿರೋಧ ಪಕ್ಷದ ನಾಯಕನನ್ನೇ ಕೊಲೆ ಮಾಡಿ ಎಂದು ಒಬ್ಬ ಸಚಿವ ಕರೆ ಕೊಟ್ಟಿರುವುದು ನಮ್ಮ ಕರ್ನಾಟಕದ ರಾಜಕೀಯದಲ್ಲಿ ಎಂದೂ ನಡೆದಿಲ್ಲ. ಮಂಡ್ಯದ ಒಕ್ಕಲಿಗ ರಾಜಕಾರಣದಲ್ಲಿ ಜಾಗ ಪಡೆದುಕೊಳ್ಳಲು ಈ ಕ್ಷುದ್ರ ರಾಜಕೀಯ ತಂತ್ರಕ್ಕೆ ಬಿಜೆಪಿ ಶರಣಾಗಿದೆ, ಸಂಘ ಪರಿವಾರವು ಇದರ ಹಿಂದೆ ಕುತಂತ್ರ ನಡೆಸಿದೆ ಎಂದು ಪ್ರಗತಿಪರ ವಕೀಲ ಬಿ.ಟಿ. ವಿಶ್ವನಾಥ್ ಕಳವಳ ವ್ಯಕ್ತಪಡಿಸಿದರು.
ಮಂಡ್ಯನಗರದ ಗಾಂಧಿ ಉದ್ಯಾನವನದಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಹಮ್ಮಿಕೊಂಡಿದ್ದ ಸಚಿವ ಅಶ್ವತ್ ನಾರಾಯಣ್ ಅವರ ಪ್ರಚೋದನಕಾರಿಯಾಗಿ ಹೇಳಿಕೆ ಕುರಿತ ಖಂಡನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಂಘ ಪರಿವಾರದ್ದು ಕೊಲ್ಲುವ ಸಂಸ್ಕೃತಿ
ಮಂಡ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವ ಎಂದು ಹೇಳಿಸಿಕೊಳ್ಳುವ, ನಾವು ಆತನನ್ನು ಶಿಕ್ಷಣ ಸಚಿವ ಎಂದು ಕರೆಯಲು ಮುಜುಗರ ಪಟ್ಟುಕೊಳ್ಳಬೇಕಾದ ವ್ಯಕ್ತಿ. ಮಂಡ್ಯಕ್ಕೆ ಬಂದು ಸಾರ್ವಜನಿಕವಾಗಿ ಭಾಷಣದಲ್ಲಿ ವಿರೋಧಪಕ್ಷದ ನಾಯಕಕನ್ನು ಮುಗಿಸಿಬಿಡಿ ಎಂದು ಕರೆಕೊಟ್ಟಿರುವ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದು ಆರ್.ಎಸ್.ಎಸ್, ಸಂಘ ಪರಿವಾರ ಕೊಲ್ಲುವ ಸಂಸ್ಕೃತಿಯನ್ನು ಎತ್ತಿ ತೋರಿಸುತ್ತದೆ ಎಂದು ದೂರಿದರು.
ಜಿಲ್ಲೆಯ ಎಲ್ಲಾ ಜನ ಒಕ್ಕೂರಲಿನಿಂದ ಗಾಂಧಿಯ ಕೊಲೆಯಿಂದ ಆರಂಭದ ಹಿಂಸೆಯ ರಾಜಕೀಯವನ್ನು ಧಿಕ್ಕರಿಸಬೇಕಾಗಿದೆ. ಪ್ರತಿ ಗ್ರಾಮದಿಂದಲೂ ಇಂತಹ ವಿಷವನ್ನು ಹರಡುವ ರಾಜಕೀಯವನ್ನು ಜಿಲ್ಲೆಯಿಂದ ಗಡಿಪಾರು ಮಾಡಬೇಕಿದೆ. ಕೋಮು ಸಾಮರಸ್ಯಕ್ಕೆ ಮಂಡ್ಯ ಜಿಲ್ಲೆ ಹೆಸರಾಂತ ಜಿಲ್ಲೆ. ಮಂಡ್ಯದಲ್ಲಿ ಇಂತಹ ಘಟನೆಗಳಿಗೆ ಅವಕಾಶವಿಲ್ಲ. ಮಂಡ್ಯ ಜಿಲ್ಲೆಯಲ್ಲಿ ವೀರಣ್ಣಗೌಡರು, ಕೆ.ವಿ.ಶಂಕರೇಗೌಡರು, ಜಿ.ಎಸ್, ಬೊಮ್ಮೇಗೌಡರು, ಹೆಚ್.ಡಿ. ಚೌಡಯ್ಯನವರು ಧೀಮಂತ ರಾಜಕಾರಣಿಗಳು ಬಂದು ಹೋಗಿದ್ದಾರೆ. ಅವರು ಕೆಲಸ ಮಾಡದೇ ಇದ್ದಾಗ ಮಂಡ್ಯದ ಜನ ಚುನಾವಣೆಯಲ್ಲಿ ಸೋಲಿಸಿದ್ದಾರೆ ಎಂದರು. ಮಂಡ್ಯ ಜಿಲ್ಲೆಯ ಜನ ಪ್ರಬುದ್ದ ಮತದಾರರು ಎಂದು ತೋರಿಸಿಕೊಂಡಿದ್ದಾರೆ. ಇಂತಹ ರಾಜಕೀಯವನ್ನು ಮಂಡ್ಯದ ಜನ ಯಾರು ಕೂಡ ಸ್ವೀಕರಿಸಬಾರದು ಎಂದು ಕಿವಿಮಾತು ಹೇಳಿದರು.
ಯುವಕರನ್ನು ಹಾದಿ ತಪ್ಪಿಸುತ್ತಿರುವ ಬಿಜೆಪಿ ನಾಯಕರು
ಮಂಡ್ಯ ಜಿಲ್ಲೆಯ ಯುವಕರನ್ನು ಹಾದಿ ತಪ್ಪಿಸುತ್ತಿರುವ ಬಿಜೆಪಿ ನಾಯಕರ ಇಂತಹ ಮಾತುಗಳನ್ನು ಪ್ರಬಲವಾಗಿ ಖಂಡಿಸಬೇಕು. ಅಮಾಯಕ ಯುವಕರನ್ನು ಕೊಲೆಗಡುಕರನ್ನಾಗಿ ಪರಿವರ್ತಿಸುವುದಕ್ಕೆ ಸಂವಿಧಾನಿಕವಾಗಿ ವಚನ ಸ್ವೀಕರಿಸಿದ ಒಬ್ಬ ಮಂತ್ತಿಯೇ ಮುಂದಾದರೆ, ಈ ರಾಜ್ಯವನ್ನು ಕಾಪಾಡುವವರು ಯಾರು ? ಇಂತಹವರಿಂದ ರಾಜ್ಯದ ಅಭಿವೃದ್ದಿ ಹೇಗೆ ಸಾಧ್ಯ ? ಇವೆಲ್ಲವನ್ನು ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಇಂತಹ ರೌಡಿಸಂ ರಾಜಕೀಯವನ್ನು ಬಹಿರಂಗವಾಗಿ ಮಾಡಿದ ಈ ಸಚಿವನ ವಿರುದ್ದ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಆತನ ವಿರುದ್ದ ದೂರು ದಾಖಲಿಸಬೇಕು ಎಂದು ಮಂಡ್ಯ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಯವರಿಗೆ ಒತ್ತಾಯ ಮಾಡಿದರು.
ಬಿಜೆಪಿ ಹಿಂಬಾಗಿಲ ರಾಜಕೀಯ
ದಕ್ಷಿಣ ಭಾರತದ ಯಾವುದೇ ರಾಜ್ಯದಲ್ಲಿ ಬಿಜೆಪಿ ಜಾಗ ಪಡೆದುಕೊಂಡಿಲ್ಲ. ದಕ್ಷಿಣ ಭಾರತ ಕೋಮು ರಾಜಕೀಯಕ್ಕೆ ಬೆನ್ನು ತಿರುಗಿಸಿದೆ. ಆದರೆ ಕರ್ನಾಟಕದಲ್ಲಿ ಮಾತ್ರ ಬಿಜೆಪಿ ಹಿಂಬಾಗಿಲಿನಿಂದ ರಾಜಕೀಯ ಅಧಿಕಾರವನ್ನು ಗಿಟ್ಟಿಸಿಕೊಂಡಿದೆ. ಈ ರೀತಿ ಅಡ್ಡದಾರಿಯಲ್ಲಿ ಗಿಟ್ಟಿಸಿಕೊಂಡ ರಾಜಕೀಯ ಅಧಿಕಾರವನ್ನು ಭದ್ರ ಮಾಡಿಕೊಳ್ಳುವುದಕ್ಕೆ ಈಗಾಗಲೇ ಪ್ರತಿಷ್ಟಾಪಿಸಿದ ಉತ್ತರ ಭಾರತದ ರೌಡಿ ರಾಜಕೀಯವನ್ನು ಕರ್ನಾಟಕದಲ್ಲಿ ಜಾರಿ ಮಾಡುವುದಕ್ಕೆ ಬಿಜೆಪಿ ಪ್ರಯತ್ನ ಮಾಡುತ್ತಿದೆ. ಇಂತಹ ಪ್ರಯತ್ನವನ್ನು ಬಿಜೆಪಿಯೂ ಸಹಸ್ಯಕರವಾಗಿ ಮಾಡುತ್ತಿದೆ ಎಂದು ಕಿಡಿಕಾರಿದರು.
ಹಿಂಸೆ – ಕೊಲೆಗೆ ಪ್ರಚೋದನೆ
ಸಿಐಟಿ ಸಂಘಟನೆಯ ಕುಮಾರಿ ಮಾತನಾಡಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರನ್ನು ಟಿಪ್ಪು ರೀತಿ ಹತ್ಯೆ ಮಾಡಿ ಎಂದು ಹೇಳುವ ಮೂಲಕ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ಹಿಂಸೆಗೆ, ಕೊಲೆಗೆ ಪ್ರಚೋದನೆ ಕೊಟ್ಟಿ ಅತ್ಯುಗ್ರವಾಗಿ ಖಂಡಿಸಿದರು.
ಮಂಡ್ಯ ಜಿಲ್ಲೆ, ಸೌಹಾರ್ದನಾಡು, ಯಾವ ಕೋಮು ಗಲಭೆಗೂ ಅವಕಾಶ ನೀಡದ, ಯಾರನ್ನು ಧರ್ಮದ ಹೆಸರಿನಲ್ಲಿ, ಜಾತಿಯ ಹೆಸರಿನಲ್ಲಿ ಎತ್ತಿಕಟ್ಟುವ ಮನುಷ್ಯ ವಿರೋಧಿ ಚಟುವಟಿಕೆಗಳಿಗೆ ಅವಕಾಶವಿಲ್ಲ ಎಂದು ಸ್ಪಷ್ಟ ಸಂದೇಶ ಹಲವು ಬಾರಿ ಕೊಟ್ಟಾಗಿದೆ. ಗಾಂಧಿಯನ್ನು ಕೊಂದ ಗೋಡ್ಸೆ ರಾಜಕಾರಣವನ್ನು ಮಾಡಲು ಹೊರಟಿರುವ ಸಂಘ ಪರಿವಾರದ ವಿಷ ರಾಜಕಾರಣಕ್ಕೆ ಅವಕಾಶವಿಲ್ಲ ಎಂದು ಮಂಡ್ಯ ಜಿಲ್ಲಾ ಪ್ರಜ್ಞಾವಂತ ನಾಡಿನ ಜನ ಇನ್ನೊಮ್ಮೆ ಸಾಂಘಿಕವಾಗಿ ಎಚ್ಚರಿಗೆ ನೀಡಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಒಕ್ಕಲಿಗರು ಸಮುದಾಯವು ಕೂಡ ಸಿಡಿದೇಳಬೇಕಿದೆ
ಕರ್ನಾಟಕ ಜನಶಕ್ತಿಯ ರಾಜ್ಯ ಸಮಿತಿಯ ಪೂರ್ಣಿಮ ಮಾತನಾಡಿ, ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ಹಿಂಸೆಯ ಪ್ರಚೋದನಕಾರಿ ಹೇಳಿಕೆ ಖಂಡನಾರ್ಹ. ಈ ಮೂಲಕ ಗೌಡರ ಸಂತತಿ ಟಿಪ್ಪು ಕೊಲೆ ಮಾಡಲು ಬ್ರಿಟಿಷರ ಜೊತೆ ಶಾಮೀಲಾಗಿತ್ತು ಎಂದು ಹೇಳುವ ಸಂದೇಶವನ್ನು ಮಂಡ್ಯದ ಜನತೆಗೆ ಸಾರುತ್ತಿರುವುದು ಅವಹೇಳನಾಕಾರಿ. ಒಕ್ಕಲಿಗರು ಯುದ್ದದಲ್ಲಿ ಟಿಪ್ಪುವಿನ ಜೊತೆ ಹೋರಾಟದಲ್ಲಿ ಪಾಲ್ಗೊಂಡು, ಬ್ರಿಟಿಷರನ್ನು ಈ ನೆಲದಿಂದ ಹೊಡೆದೊಡಿಸಲು ಹೋರಾಟ ಮಾಡಿತ ವಿನಃ ಬ್ರಿಟಿಷರ ಜೊತೆ ನಿಂತು ಅವರ ಬೂಟು ನೆಕ್ಕುವ ನಾಯಿಗಳಾಗಿ ನಿಂತಿರಲಿಲ್ಲ. ಇದನ್ನು ದಿಕ್ಕು ತಪ್ಪಿಸುತ್ತಿರುವವರ ವಿರುದ್ದ, ಒಕ್ಕಲಿಗರು ಸಮುದಾಯವು ಕೂಡ ಸಿಡಿದೇಳಬೇಕಿದೆ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಮಹಿಳಾ ಮುನ್ನಡೆಯ ಜ್ಯೋತಿ, ಶಿಲ್ಪ, ವಿದ್ಯಾರ್ಥಿ ಸಂಘಟನೆಯ ನಯನ್ ಕುಮಾರ್, ಆರ್ಮುಗಂ, ವಕೀಲರಾದ ಪಲ್ಲವಿ, ನಟೇಶ್, ಸಿಐಟಿಯುನ ಶಶಿಕಲಾ, ನಾರಾಯಣ್, ಕೇಶವ್ ಸೇರಿದಂತೆ ಮೊದಲಾದವರಿದ್ದರು




