ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಯಾವುದೇ ಗೊಂದಲವಿಲ್ಲದಂತೆ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ.ಆದರೆ ಜೆಡಿಎಸ್ ಪಕ್ಷದ ಅಭ್ಯರ್ಥಿ ಎಂದು ಹಾಲಿ ಶಾಸಕ ಎಂ. ಶ್ರೀನಿವಾಸರವರನ್ನೇ ಜೆಡಿಎಸ್ ವರಿಷ್ಠರು ಘೋಷಣೆ ಮಾಡಿದ್ದರೂ ಕೂಡ, ಉಂಟಾಗಿರುವ ಗೊಂದಲ
ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ತಳಮಳ ಸೃಷ್ಟಿಸಿದೆ.
ಶಾಸಕ ಎಂ.ಶ್ರೀನಿವಾಸರವರ ವಯಸ್ಸಿನ ಕಾರಣದಿಂದ ಜೆಡಿಎಸ್ ಟಿಕೆಟ್ ಅಂತಿಮ ಹಂತದಲ್ಲಿ ಬದಲಾಗಲಿದೆ ಎಂಬ ಮಾತು ಅವರಿಗೆ ಟಿಕೆಟ್ ಘೋಷಣೆಯಾದ ದಿನದಿಂದಲೇ ಕ್ಷೇತ್ರದಲ್ಲಿ ಪ್ರಚಲಿತವಾಗಿತ್ತು.
ಕೊನೆ ಹಂತದಲ್ಲಿ ಟಿಕೆಟ್ ಬದಲಾವಣೆ ಆಗಲಿದೆ ಎಂಬ ಆಶಾಭಾವನೆಯಿಂದ ಉಳಿದ ಆಕಾಂಕ್ಷಿಗಳಾದ ಮನ್ಮುಲ್ ಅಧ್ಯಕ್ಷ ಬಿ. ಆರ್. ರಾಮಚಂದ್ರು, ಪಿಇಟಿ ಅಧ್ಯಕ್ಷ ವಿಜಯ್ ಆನಂದ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹೆಚ್.ಎನ್. ಯೋಗೇಶ್ ಆಸೆಗಣ್ಣಿನಿಂದ ಕಾಯುತ್ತಿದ್ದರು.ಇತ್ತೀಚಿಗೆ ಕೆಲ ದಿನಗಳ ಹಿಂದೆ ಜೆಡಿಎಸ್ ಆಕಾಂಕ್ಷಿಗಳ ಪಟ್ಟಿಗೆ ನಗರಸಭೆ ಅಧ್ಯಕ್ಷ ಎಚ್.ಎಸ್. ಮಂಜು ಹೆಸರು ನೂತನವಾಗಿ ಸೇರ್ಪಡೆಯಾಗಿರುವುದು ಯಾವ ತಂತ್ರಗಾರಿಕೆ ಭಾಗವೋ ಅವರೇ ಹೇಳಬೇಕು.
ಈಗಾಗಲೇ ಮಂಡ್ಯ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಗಣಿಗ ರವಿಕುಮಾರ್, ಬಿಜೆಪಿ ಅಭ್ಯರ್ಥಿಯಾಗಿ ಅಶೋಕ್ ಜಯರಾಮ್ ಹಾಗೂ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿಯಾಗಿ ಎಚ್.ಎಸ್. ಮಧುಚಂದನ್ ಹೆಸರು ಘೋಷಣೆಯಾಗಿದೆ. ಜೆಡಿಎಸ್ ಪಕ್ಷದಿಂದ ಹಾಲಿ ಶಾಸಕ ಎಂ.ಶ್ರೀನಿವಾಸ್ ಹೆಸರು ಘೋಷಣೆಯಾಗಿದ್ದರೂ ಕೂಡ ನಾಮಪತ್ರ ಸಲ್ಲಿಕೆ ಆರಂಭವಾದ ನಂತರವೂ ಕಗ್ಗಂಟು ಬಗೆಹರಿಯದಿರುವುದು ಜೆಡಿಎಸ್ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ.
ಮಂಡ್ಯ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್ ಕಗ್ಗಂಟಾಗಿರುವ ಹಿನ್ನೆಲೆಯಲ್ಲಿ ಇಂದು ಮಂಡ್ಯದ ಕರ್ನಾಟಕ ಸಂಘದಲ್ಲಿ ಶಾಸಕ ಎಂ. ಶ್ರೀನಿವಾಸ್ ನೇತೃತ್ವದಲ್ಲಿ ಮಂಡ್ಯ ನಗರಸಭಾ ಸದಸ್ಯರ ಹಾಗೂ ಅವರ ಬೆಂಬಲಿಗರ ಸಭೆ ನಡೆಯಿತು. ಈ ಸಭೆಯಲ್ಲಿ ಅವರ ಬೆಂಬಲಿಗರು ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಎಂ. ಶ್ರೀನಿವಾಸ್ ರವರೇ ಸ್ಪರ್ಧಿಸಬೇಕು. ಒಂದು ವೇಳೆ ಅವರು ಸ್ಪರ್ಧಿಸದಿದ್ದರೆ, ಅವರ ಅಳಿಯ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹೆಚ್.ಎನ್. ಯೋಗೇಶ್ ಅವರಿಗೆ ಬಿ. ಫಾರಂ ಕೊಡಿಸುವಂತೆ ಒತ್ತಾಯ ಮಾಡಿದ್ದಾರೆ.
ಏ. 17 ಅಥವಾ 19ರಂದು ಎಂ. ಶ್ರೀನಿವಾಸ್ ರವರೊಂದಿಗೆ ಎಚ್.ಎನ್. ಯೋಗೇಶ್ ಕೂಡ ನಾಮಪತ್ರ ಸಲ್ಲಿಸುವಂತೆ ಸಭೆಯಲ್ಲಿದ್ದ ಬೆಂಬಲಿಗರು ಆಗ್ರಹಿಸಿದರು.ಅದರಂತೆ ಎಂ.ಶ್ರೀನಿವಾಸ್ ಹಾಗೂ ಹೆಚ್.ಎನ್.ಯೋಗೇಶ್ ಇಬ್ಬರೂ ಪ್ರತ್ಯೇಕವಾಗಿ ನಾಮಪತ್ರ ಸಲ್ಲಿಸಲು ಸಭೆಯಲ್ಲಿ ತೀರ್ಮಾನವಾಗಿದೆ.
ಇತ್ತೀಚಿಗೆ ಬಿಡದಿಯ ತೋಟದ ಮನೆಯಲ್ಲಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದ ಸಂದರ್ಭದಲ್ಲಿ ಅವರು ಮಂಡ್ಯ ಕ್ಷೇತ್ರದ ವಿಚಾರದಲ್ಲಿ ಸಂಪೂರ್ಣ ಅಧಿಕಾರ ನಿಮಗೆ ನೀಡಿದ್ದೇನೆ. ನಿಮಗೆ ನಿಲ್ಲಬೇಕು ಎಂದು ಆಸೆ ಇದ್ದರೆ ನೀವೇ ನಿಂತುಕೊಳ್ಳಿ, ಇಲ್ಲ ನೀವು ಯಾರಿಗೆ ಟಿಕೆಟ್ ಕೊಡಿ ಎಂದು ಹೇಳುತ್ತೀರೋ ನಿಮ್ಮ ಕೈಲೇ ಬಿ.ಫಾರಂ ಕೊಡುತ್ತೇವೆ. ನೀವು ಅವರನ್ನು ಗೆಲ್ಲಿಸಿಕೊಂಡು ಬನ್ನಿ ಎಂದು ಹೇಳಿದ್ದಾರೆ.
ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ, ನಮ್ಮ ಪಕ್ಷದಿಂದ ಮನ್ಮುಲ್ ರಾಮಚಂದ್ರು, ಹೆಚ್.ಎನ್.ಯೋಗೇಶ್, ವಿಜಯಾನಂದ್, ಎಚ್.ಎಸ್. ಮಂಜು ಅವರು ಆಕಾಂಕ್ಷಿತರಾಗಿದ್ದಾರೆ. ಶ್ರೀನಿವಾಸ್ ರವರು ಅವರೇ ನಿಲ್ಲುತ್ತಾರೋ, ಇಲ್ಲಾ ಅವರು ಬೇರೆ ಯಾರನ್ನಾದರೂ ನಿಲ್ಲಿಸುತ್ತಾರೋ,ಅವರ ಪರ ನಾವೆಲ್ಲಾ ಒಂದುಗೂಡಿ ಜೆಡಿಎಸ್ ಅಭ್ಯರ್ಥಿಯನ್ನು ಭಾರೀ ಅಂತರದಿಂದ ಗೆಲ್ಲಿಸುವುದಾಗಿ ಸಭೆ ನಿರ್ಣಯ ತೆಗೆದುಕೊಂಡಿದೆ.
ನಾಳೆ ಬೆಂಗಳೂರಿಗೆ ಬರುವಂತೆ ಶಾಸಕ ಶ್ರೀನಿವಾಸ್ ಅವರಿಗೆ ಜೆಡಿಎಸ್ ವರಿಷ್ಠ ಎಚ್.ಡಿ. ಕುಮಾರಸ್ವಾಮಿ ಸೂಚಿಸಿದ್ದು, ಅದರಂತೆ ಅವರು ನಾಳೆ ಬೆಂಗಳೂರಿಗೆ ತೆರಳಿ ಭೇಟಿ ಮಾಡಲಿದ್ದಾರೆ. ನಾಳೆ ನಡೆಯುವ ಅಂತಿಮ ಮಾತುಕತೆಯಲ್ಲಿ ಮಂಡ್ಯ ಕ್ಷೇತ್ರದ ಟಿಕೆಟ್ ಕಗ್ಗಂಟು ಬಗೆಹರಿಯಲಿದೆ ಎಂದು ಜೆಡಿಎಸ್ ಕಾರ್ಯಕರ್ತರು ಹೇಳಿದರು.
ಅಂತಿಮವಾಗಿ ಬಿ.ಫಾರಂ ಎಂಬ ಚೆಂಡು ಶಾಸಕ ಎಂ.ಶ್ರೀನಿವಾಸ್ ಅವರ ಅಂಗಳದಲ್ಲಿದ್ದು,ಅವರೇ ನಿಲ್ಲುತ್ತಾರೋ,ಇಲ್ಲಾ ಅವರ ಅಳಿಯ ಸೇರಿದಂತೆ ಇನ್ನಿತರ ಆಕಾಂಕ್ಷಿಗಳ ಪೈಕಿ ಯಾರಿಗೆ ಕೊಡುತ್ತಾರೋ ಎಂಬುದು ಯಕ್ಷ ಪ್ರಶ್ನೆಯಾಗಿದೆ.




