✍️ ಸಿದ್ಧರಾಜು. ಜಿಲ್ಲಾ ಕಾರ್ಯದರ್ಶಿ ಕರ್ನಾಟಕ ಜನಶಕ್ತಿ, ಮಂಡ್ಯ
ಗೌರವಾಧ್ಯಕ್ಷರು, ಮಂಡ್ಯ ಜಿಲ್ಲಾ ಶ್ರಮಿಕ ನಿವಾಸಿಗಳ ಒಕ್ಕೂಟ.
-
ಮಂಡ್ಯ ನಗರದ ಸ್ಲಂಜನರನ್ನು ನಿರ್ಲಕ್ಷ್ಯ ಮಾಡುತ್ತಿರುವ ಸ್ಮಂ ಬೋರ್ಡ್ ಅಧಿಕಾರಿಗಳು
- 2000 ಇಸವಿ ಯಿಂದ ಬಂದ ಜಿಲ್ಲಾಧಿಕಾರಿಗಳ ಸಭೆಗಳ ನಡವಳಿಗಳನ್ನು ತೆಗೆದು ನೋಡಲಿ
- ಯಾವ ಪಟ್ಟಭದ್ರ ಹಿತಾಸಕ್ತಿಗಳನ್ನು ಜಿಲ್ಲಾಡಳಿತ ಕಾಪಾಡಲು ಹೊರಟಿದೆ?
- ಅಧಿಕಾರಿಗಳು ಸ್ಲಂ ವಾಸ್ತವ್ಯ ಮಾಡಿ ನೋಡಲಿ, ಸಮಸ್ಯೆಗಳನ್ನು ಅರ್ಥೈಸಿಕೊಳ್ಳಲಿ
ಮಂಡ್ಯ ನಗರದಲ್ಲಿ ಹಲವು ದಶಕಗಳಿಂದ ಸ್ಲಂ ಹೋರಾಟಗಳನ್ನು ಶ್ರಮಿಕ ನಿವಾಸಿಗಳ ಹೋರಾಟ ಒಕ್ಕೂಟವು ಸ್ಮಂ ನಿವಾಸಿಗಳ ವಸತಿ ಹಕ್ಕಿಗಾಗಿ, ಮೂಲಭೂತ ಸೌಕರ್ಯಗಳಿಗಾಗಿ ಹೋರಾಟ ಮಾಡಿಕೊಂಡು ಬರುತ್ತಿರುವುದನ್ನು ಮಂಡ್ಯ ನಾಗರೀಕರು ಗಮನಿಸಿರಬಹುದು.

ಜಿಲ್ಲಾಡಳಿತ ಮತ್ತು ಕೊಳಚೆ ಅಭಿವೃದ್ಧಿ ಮಂಡಳಿ ಮತ್ತು ಇದಕ್ಕೆ ಸಂಬಂಧಪಡುವ ಇಲಾಖೆಗಳಿಗೆ ಹೋರಾಟ, ಸತ್ಯಾಗ್ರಹ, ಕಾಲ್ನಡಿಗೆ ಜಾಥ, ಹಲವು ಸಭೆಗಳ ಮೂಲಕ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟರೂ ಸಹ ಇದರ ಪ್ರಾಮುಖ್ಯತೆಯನ್ನು, ಅಗತ್ಯತೆಯನ್ನು ಇವರು ಪರಿಗಣನೆಗೆ ತೆಗೆದುಕೊಳ್ಳದೆ ಎಲ್ಲಾ ಅರ್ಜಿಗಳನ್ನು ತಮ್ಮ ಖುರ್ಚಿಯ ಕೆಳಗೆ ಹಾಕಿಕೊಂಡು ಕುಳಿತಿದ್ದಾರೆ.
ಇನ್ನೇನೂ ಸ್ಲಂ ನಿವಾಸಿಗಳ ಸಮಸ್ಯೆಗಳು ಬಗೆಹರಿದೆ ಬಿಟ್ಟಿತ್ತು ಅನ್ನುವಷ್ಟರಲ್ಲಿ ಜಿಲ್ಲಾಧಿಕಾರಿ, ಇತರ ಅಧಿಕಾರಿಗಳು ವರ್ಗಾವಣೆಯಾಗಿ, ಈ ಅಧಿಕಾರಿಗಳಿಗೆ ಪುನಃ ಮೊದಲಿನಿಂದ ಸ್ಲಂ ಚಿತ್ರಣವನ್ನು ಬಿಡಿಸಿ ಹೇಳಿ ಹೇಳಿ ಸಾಕಾಗಿ ಹೋಗಿದೆ.

ಈ ಸಮಸ್ಯೆಗಳ ಬಗೆಹರಿಯುವುದಕ್ಕೆ ಎಷ್ಟು ತಲೆಮಾರುಗಳು ಬೇಕು ? ಇದಕ್ಕೆಲ್ಲಾ ಅಂತ್ಯ ಎಂದು? ಮಾನವೀಯತೆ ಎನ್ನುವುದು ಇಲ್ಲವೇ ? ಇದು ತಮ್ಮ ಕಾಯಕ ಎನ್ನುವುದು ಈ ಜಿಲ್ಲಾಡಳಿತಕ್ಕೆ ಗೊತ್ತಾಗುತ್ತಿಲ್ಲವೇ? ಜಾಣ ಕುರುಡಾಗಿದೆಯೇ ? ನಿದ್ರೆ ಮಾಡಿದಂತೆ ನಟಿಸುತ್ತಿದ್ದಾರೆಯೇ? ಇನ್ನಾವುದೇ ಪದಗಳಲ್ಲಿ ಇವರನ್ನು ಟೀಕಿಸಿದರೂ ಸಾಲದು. ಮಂಡ್ಯದ ಜಿಲ್ಲಾಡಳಿತ ಸ್ಲಂ ನಿವಾಸಿಗಳ ವಿಚಾರದಲ್ಲಿ ನಡೆದುಕೊಳ್ಳುವ ಪರಿ ಇದು.
ಮಂಡ್ಯ ನಗರದಲ್ಲಿ 24 ನಾಲ್ಕು ಸ್ಲಂಗಳು ಇವೆ. ಸುಮಾರು 40 ಸಾವಿರ ಮತದಾರರು ಇದ್ದಾರೆ. ಮಂಡ್ಯ ನಗರದ ಪ್ರತಿ ಸ್ಲಂಗಳಲ್ಲಿ ಒಂದಲ್ಲ ಹತ್ತಾರು ಸಮಸ್ಯೆಗಳು ತಾಂಡವವಾಡುತ್ತಿದೆ. ಮಳೆ ಬಂದಾಗಲಂತೂ ಸಮಸ್ಯೆಗಳನ್ನು ಹೇಳಿಕೊಳ್ಳಲಾಗದಷ್ಟು ಉಸಿರುಗಟ್ಟುವ ವಾತಾವರಣ. ಒಂದು ವಾರ ಬಂದು ನಿವಾಸಿಗಳ ಮನೆಗಳಲ್ಲಿ ಅಧಿಕಾರಿಗಳು ಸ್ಮಂ ವಾಸ್ತವ್ಯ ಮಾಡಿ ನೋಡಲಿ, ಸಮಸ್ಯೆಗಳನ್ನು ಅವರ ಅರಿವಿಗೆ ಬರಬಹುದು.

ಕಂಪರ್ಟ್ ಜೋನಿನಲ್ಲಿ ಇದ್ದುಕೊಂಡು, ಎಸಿ ರೂಂಗಳಲ್ಲಿ ಕುಳಿತುಕೊಂಡು ಇರುವವರಿಗೆ ಎಲ್ಲಿ ಅರ್ಥವಾಗಬೇಕು ಸ್ಲಂ ನಿವಾಸಿಗಳ ನೋವುಗಳ ಆಕ್ರಂದನ. ಥೂ… ಇದು ಜಿಲ್ಲಾಡಳಿತಕ್ಕೆ ನಾಚಿಕೆಗೇಡಿನ ವಿಚಾರ, ನಾಗರೀಕರ ಹಕ್ಕುಗಳು ಎಲ್ಲಿ ಹೋದವು? ಮಹಿಳೆಯರು ಬಹಿರ್ದೆಸೆಗೆ ಎಲ್ಲಿಗ್ರಿ ಹೋಗಬೇಕು, ವಾಸಿಸಲು ಕುಡಿಯುವ ನೀರಿನ ಸೌಲಭ್ಯ, ವಿದ್ಯುತ್, ಓಡಾಡಲು ರಸ್ತೆ, ಸುತ್ತಲಿನ ವಾತಾವರಣದ ನೈರ್ಮಲ್ಯ ಇವೆಲ್ಲವೂ ಬೇಡವೆ ಸ್ಲಂ ನಿವಾಸಿಗಳಿಗೆ.
ಒಮ್ಮೆ ನೆನಸಿಕೊಳ್ಳಿ ನೀವು ಇಂತಹ ವಾತಾವರಣದಲ್ಲಿ ಬದುಕುತ್ತಿದ್ದೀರಾ? ನಗರವನ್ನು ಸ್ವಚ್ಚ ಮಾಡುವ, ನಿಮ್ಮ ಬಂಗಲೆಗಳನ್ನು ಕಟ್ಟುವ, ಕೂಲಿ ನಾಲಿ ಮಾಡುವ, ದಿನದ ಕೂಲಿಯನ್ನು ನಂಬಿಕೊಂಡು ಸ್ವಾಭಿಮಾನದಿಂದ ಬದುಕನ್ನು ಮಾಡುತ್ತಿರುವ ಸಮುದಾಯ ಕಣಪ್ರ ನಾವು ? ಒಮ್ಮೆ ನಿಮ್ಮ ಕಡತಗಳನ್ನು, ಅಹವಾಲುಗಳನ್ನು ತೆಗೆದು ನೋಡಿ… ಎಷ್ಟು ಸಭೆಗಳು, ಎಷ್ಟು ಧರಣಿಗಳು, ಎಷ್ಟು ಮನವಿಗಳು, ಎಷ್ಟು ಪ್ರತಿಭಟನೆಗಳು… ನೆನಪಿನಲ್ಲಿಡಿ ಇವೆಲ್ಲವು ದಿನದ ಕೂಲಿಗಳನ್ನು ಬಿಟ್ಟು, ಯಾರ ಬಳಿಯೂ ಬಕೆಟ್ ಹಿಡಿಯದೆ, ತಮ್ಮ ಬೆವರಿನಲ್ಲಿ ದುಡಿದ ಹಣದಿಂದ ಮಾಡಿದ ಹೋರಾಟಗಳು.
ಶಾಸಕರು ಸೇರಿದಂತೆ, ಇದಕ್ಕೆ ಸಂಬಂಧಪಟ್ಟ ಎಲ್ಲಾ ಇಲಾಖೆಗಳಿಗೆ ನಮ್ಮ ಅಹವಾಲುಗಳನ್ನು ಹೇಳಿದ್ದಾಗಿದೆ… ಜಿಲ್ಲಾಡಳಿತ ಸತ್ತು ಹೊಗಿದೆಯೇ ? ಅಥವಾ ಅಧಿಕಾರಿಗಳೆಲ್ಲಾ ಸೂತ್ರದ ಗೂಂಬೆಗಳೇ ? ನಿಸ್ಸಾಹಯಕರಾಗಿದ್ದಾರಾ? ಇದನ್ನಾದರೂ ಬಾಯಿ ಬಿಟ್ಟು ಹೇಳ್ರಪ್ಪ…

ಮಂಡ್ಯ ಸ್ಲಂ ಬೋರ್ಡ್ ಇಂಜಿನಿಯರ್ ಗಳು, ಮೈಸೂರು ವಿಭಾಗದ ಅಧಿಕಾರಿಗಳು, ಟೆಕ್ನಿಕಲ್ ಡೈರೆಕ್ಟರ್, ಇದೆಲ್ಲದರ ಮುಖ್ಯ ತಲೆ ಎಂಬಂತೆ ಕೊಳಚೆ ಅಭಿವೃದ್ದಿ ಮಂಡಳಿ, ಇವರೆಲ್ಲಾ ಏನೋ ಸ್ಲಂ ಅಭಿವೃದ್ದಿ ಮಾಡುತ್ತೇವೆ ಎಂದು, ಸ್ಲಂ ನ್ನು ಉದ್ದಾರ ಮಾಡುವ ದೇವಧೂತರಂತೆ ಬಂದು ಇಲಾಖೆಗಳಲ್ಲಿ ಒಕ್ಕರಿಸಿಕೊಂಡಿದ್ದಾರೆ. ಸ್ಲಂ ಅಭಿವೃದ್ಧಿ ಆಗದಿದ್ರೂ ಪರವಾಗಿಲ್ಲ, ತಿಂಗಳ ವೇತನ ತಮ್ಮ ಕಿಸೆಗೆ ಬಂದರಾಯಿತು. ಜುಂ..ಜುಂ ಅಂತಾ ಕಾರಿನಲ್ಲಿ ಓಡಾಡಿಕೊಂಡು, ಶುದ್ದ ಐರನ್ ಮಾಡಿ ವಸ್ತ್ರಗಳನ್ನು ಧರಿಸಿ ಪೋಸ್ ಕೊಡುವುದೇ ಆಯಿತು. ‘ಬಂದ ಪುಟ್ಟ ಹೋದ ಪುಟ್ಟ, ಪುಟ್ಟನೆಜ್ಜೆ ಕಂಡೊರಿಲ್ಲ ಅಂದಾ ಹಾಗೆ’… ಮಂಡ್ಯ ನಗರದ ಸ್ಲಂ ಸಮಸ್ಯೆಗಳನ್ನು ಕಿಸಿದು ದಬ್ಬಾಕಿರೋದು ಅಷ್ಟರಲ್ಲೇ ಇದೆ ನೀವು.
ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ, ಅವರ ಅದೇಶಗಳನ್ನು, ಪಾಲನೆ ಮಾಡದೇ, ಉಲ್ಲಂಘನೆ ಮಾಡುವುದೇ ಇವರ ಕಾರ್ಯವೈಖರಿಗಳು. 2000ನೇ ಇಸವಿ ಯಿಂದ ಬಂದ ಜಿಲ್ಲಾಧಿಕಾರಿಗಳ ಸಭೆಗಳ ನಡವಳಿಗಳನ್ನು ತೆಗೆದು ನೋಡಲಿ. ಎಷ್ಟು ಎಷ್ಟು ಸಮಸ್ಯೆಗಳನ್ನು ಬಗೆಹರಿಸಿದ್ದಾರೆಂದು ತಿಳಿಯುತ್ತದೆ. ಈ ಅಧಿಕಾರಿಗಳು ಸಮಸ್ಯೆಗಳನ್ನು ಬಗೆಹರಿಸುವ ಬದಲು, ಶ್ರಮಿಕ ನಿವಾಸಿಗಳ ಹೋರಾಟದ ಒಕ್ಕೂಟವನ್ನುದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ.
ತಮ್ಮ ಇಲಾಖೆಯಿಂದಲೇ ಮಾಡಬಹುದಾದ, ಕೆಲಸಗಳನ್ನು, ಟಿಕ್ನಿಕಲ್ ಮತ್ತು ಕಾನೂನು ಸಮಸ್ಯೆಗಳನ್ನು ಬಗೆಹರಿಸದೆ, ಕೊಳಚೆ ಅಭಿವೃದ್ಧಿ ಮಂಡಳಿಯ ಅಧಿಕಾರಿಗಳೇ ನಿವಾಸಿಗಳಿಗೆ ಹೆಚ್ಚು ಸಮಸ್ಯೆಗಳಾಗಿದ್ದಾರೆ. ತಮ್ಮ ಕೆಲಸಗಳನ್ನು ಮಾಡದೇ, ಪುಗಸಟ್ಟೆ ಸಲಹೆಗಳನ್ನು ಕೊಟ್ಟು, ತಮ್ಮ ಕೈಯಲ್ಲಿ ಮಾಡಬಹುದಾಗಿದನ್ನು ಬದಿಗಿಟ್ಟು ನಿವಾಸಿಗಳನ್ನು ದಿಕ್ಕು ತಪ್ಪಿಸುತ್ತಿದ್ದಾರೆ.
ಮಂಡ್ಯದಲ್ಲಿ ಸ್ಲಂ ಮತ್ತು ಭೂಮಿ ವಿಚಾರಕ್ಕೆ ಸಂಬಂಧಿಸಿದಂತೆ, ಅನುಭವ ಇಲ್ಲದ, ಇದರ ಕಾನೂನು ಅರಿವಿಲ್ಲದ ಅಧಿಕಾರಿಗಳನ್ನು ನೇಮಿಸುವುದರಿಂದ, ಸಂಬಂಧಪಡದ ಇಲಾಖೆಯ ಅಧಿಕಾರಿಗಳನ್ನು ನೇಮಿಸುವುದರಿಂದ ಈ ಸಮಸ್ಯೆಗಳು ಹೆಚ್ಚಾಗುತ್ತಿದೆ.
ಸ್ಲಂ ಜನರ ಹಕ್ಕುಗಳಿಗಾಗಿ ಹೋರಾಡುವ ಪ್ರಾಮಾಣಿಕವಾಗಿ ಕೆಲಸ ಮಾಡುವ ಸಂಘಟನೆಗಳನ್ನು ಕಡೆಗಣಿಸುವುದು ಹಾಗೂ ತುರ್ತು ಸಂದರ್ಭದಲ್ಲಿ ಪೋನ್ ಮೂಲಕ ಸಂಪರ್ಕ ಮಾಡಿದರೆ ಲಭ್ಯವಿಲ್ಲದೆ ಇರುವುದು, ಮೊಬೈಲ್ ಗಳನ್ನು ನಾಟ್ ರಿಚೇಬಲ್ ಮಾಡಿಕೊಳ್ಳುವುದು, ಪೋನ್ ಮಾಡಿದರೂ ಮತ್ತೆ ಮಾಡದೇ ಇರುವುದು, ಇವರ ಸಂಪರ್ಕಕ್ಕಾಗಿ, ಭೇಟಿಗಾಗಿ ಕಛೇರಿಯಲ್ಲಿ ಕಾದು ಕಾದು ಸುಸ್ತಾಗಿ ಬಂದ ದಾರಿಗೆ ಸುಂಕವಿಲ್ಲ ಎಂದು ಬೈದುಕೊಂಡು ಹೋಗಬೇಕಾದ ಪರಿಸ್ಥಿತಿ ಬಂದೊಗಿದೆ. ಕೊಳಚೆ ಅಭಿವೃದ್ಧಿ ಮಂಡಳಿ ನಮಗೆ ಬೇಡ, ಯಾವ ಕೆಲಸಕ್ಕೂ ಪ್ರಯೋಜನಕ್ಕೂ ಈ ಇಲಾಖೆ ಬರುವುದಿಲ್ಲ ಎನ್ನುವುದು ಬಹುಜನರ ಆಭಿಪ್ರಾಯವಾಗಿದೆ.
ಇಷ್ಟು ವರ್ಷಗಳಾದರೂ ಮೊಕದ್ದಮೆ ಎದುರುಸುತ್ತಿರುವ ಹಲವು ಸ್ಲಂಗಳಿಗೆ ಪರಿಹಾರ ಕಂಡುಕೊಂಡು ಬಗೆ ಹರಿಸುವ ಯಾವ ಸೂಚೆನೆಗಳನ್ನು ನೀಡದಿರುವುದು ಸ್ಲಂ ಜನರಿಗೆ ಮಾಡಿದ ದ್ರೋಹವಲ್ಲದೇ ಮತ್ತೇನು?
ಸರ್ಕಾರಿ ಜಾಗಗಳಲ್ಲಿ ವಾಸಿಸುವ ಸ್ಲಂ ಜನರಿಗೆ ಸರ್ಕಾರದ ಸುತ್ತೊಲೆ ಹೊರಡಿಸಿ 3 ವರ್ಷಗಳು ಕಳೆದರೂ ಸರ್ಕಾರಿ ಜಾಗದಲ್ಲಿರುವ ಸ್ಲಂಗಳನ್ನು, ಸ್ಲಂ ಬೋರ್ಡ್ ಅಕ್ಟ್ ಪ್ರಕಾರ ಸುಪರ್ದಿಗೆ ತೆಗೆದುಕೊಳ್ಳದೆ, ವಿಳಂಬ ಮಾಡುತ್ತಿರುವುದು ಮತ್ತು ಹಕ್ಕುಪತ್ರ ನೀಡದಿರುವುದು, ಇವರು ಸರಿಯಾದ ಪಾಲೋಪ್ ಇಲ್ಲದೆ ಬರೀ ಪೇಪರ್ ಮೂಲಕವೇ ಎಲ್ಲವು ನಡೆಯುತ್ತಿದೆ, ಇದು ಸಹ ವಿಳಂಬಕ್ಕೆ ಕಾರಣವಾಗಿದೆ.
ಖುದ್ದು ತಹಸೀಲ್ದಾರ್ ಅವರನ್ನು ಅಥವಾ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಮಾಡಿ ಸರ್ಕಾರದ ಜಾಗಗಳಲ್ಲಿ ವಾಸ ಮಾಡುವ ಸ್ಲಂಗಳನ್ನು ವಶಕ್ಕೆ ಪಡೆದು ಹಕ್ಕುಪತ್ರ ನೀಡಲು ಮುಂದಾಗಬೇಕೆಂದು ಮನವಿ ಮಾಡಿದರೂ, ಹಿಂದು ಮುಂದು ನೋಡುತ್ತಿರುವುದು ಸಹ ಸ್ಲಂಬೋರ್ಡ್ ದೌರ್ಬಲ್ಯವನ್ನು ಎತ್ತಿ ತೋರಿಸುತ್ತದೆ ? ಅಥವಾ ಯಾವ ಪಟ್ಟಭದ್ರ ಹಿತಾಸಕ್ತಿಗಳನ್ನು ಜಿಲ್ಲಾಡಳಿತ ಕಾಪಾಡಲು ಹೊರಟಿದೆ? ಇವೆಲ್ಲವೂ ನಮ್ಮ ಮುಂದಿರುವ ಪ್ರಶ್ನೆಯಾಗಿಯೇ ಉಳಿದಿವೆ.




