ಮಂಡ್ಯ ಜಿಲ್ಲೆಯ ಪ್ರತಿಷ್ಟಿತ ಸಹಕಾರಿ ಸಂಸ್ಥೆಗಳಲ್ಲೊಂದಾಗಿರುವ ಮಂಡ್ಯ ಜಿಲ್ಲಾ ಹಾಲು ಒಕ್ಕೂಟ (ಮನ್ ಮುಲ್)ದ ಉಳಿದ ಅವಧಿಯ ಅಧ್ಯಕ್ಷ ಸ್ಥಾನಕ್ಕೆ ಜು.6 ರ (ನಾಳೆ) ಗುರುವಾರದಂದು ಚುನಾವಣೆ ನಿಗದಿಯಾಗಿದೆ.
ಅಧಿಕಾರದ ಗದ್ದುಗೆ ಏರಲು ಆಡಳಿತಾರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷ ಜೆಡಿಎಸ್ ನಡುವೆ ಹಣಾಹಣಿ ಏರ್ಪಟ್ಟಿದೆ. ಯಾವುದೇ ಬೆಂಬಲದಿಂದಾದರೂ ಅಧಿಕಾರವನ್ನು ಪಕ್ಷದ ತೆಕ್ಕೆಗೆ ತೆಗೆದುಕೊಳ್ಳಲು ಉಭಯ ಪಕ್ಷಗಳ ಮುಖಂಡರು ಹಲವು ತಂತ್ರಗಾರಿಕೆಗೆ ಮೊರೆ ಹೋಗಿದ್ದಾರೆ.
ಜಿಲ್ಲಾ ಹಾಲು ಒಕ್ಕೂಟದ ಎರಡು ಅವಧಿಯಲ್ಲಿ ಹಲವು ಭ್ರಷ್ಟಾಚಾರ ಪ್ರಕರಣಗಳು ನಡೆದಿದ್ದು, ಈ ಸಂಬಂಧ ಉನ್ನತ ತನಿಖೆ ನಡೆಸಿ, ತಪ್ಪಿತಸ್ಥರಿಂದ ನಷ್ಟದ ಹಣ ವಸೂಲಿ ಮಾಡಬೇಕು ಹಾಗೂ ತಕ್ಕ ಶಿಕ್ಷೆ ನೀಡಬೇಕೆಂಬ ಕೂಗು ಆಗಾಗ ಕೇಳಿ ಬರುತ್ತಿತ್ತು.
ಈ ವಿಚಾರ ಕಳೆದ ವಿಧಾನಸಭಾ ಚುನಾವಣೆಯಲ್ಲೂ ಪ್ರತಿಧ್ವನಿಸಿತ್ತು. ಪ್ರತಿಪಕ್ಷವಾಗಿದ್ದ ಕಾಂಗ್ರೆಸ್ ಬತ್ತಳಿಕೆಗೆ ಪ್ರಮುಖ ಅಸ್ತ್ರವಾಗಿತ್ತು. ಜಿಲ್ಲೆಯ ಕಾಂಗ್ರೆಸ್ ಮನ್ ಮುಲ್ ಹಗರಣವನ್ನು ಉನ್ನತ ತನಿಖೆಗೆ ವಹಿಸುವ ಮಾತುಗಳನ್ನು ಏರು ದನಿಯಲ್ಲಿ ಪ್ರಸ್ತಾಪಿಸಿದ್ದರು.
ಮೆಗಾ ಡೈರಿ ನಿರ್ಮಾಣ ಸಂಬಂಧ ನಡೆದಿರುವ ನಷ್ಟದ ಪೈಕಿ 72 ಕೋಟಿ ವಸೂಲಿ ಮಾಡುವಂತೆ ಸಹಕಾರ ಇಲಾಖೆಯ ತನಿಖಾ ತಂಡ ಸೂಚಿಸಿತ್ತು. ಇದರೊಟ್ಟಿಗೆ ಹಾಲಿಗೆ ನೀರು ಬೆರೆಸಿದ ಪ್ರಕರಣ ಮತ್ತು ನೇಮಕಾತಿ ಪ್ರಕರಣ ಸಂಬಂಧ ನೂತನ ಸರ್ಕಾರವು ಯಾವುದೇ ತನಿಖೆಗೆ ಮುಂದಾಗದೇ ಅಧ್ಯಕ್ಷರ ಚುನಾವಣೆಗೆ ಸಹಕಾರ ಇಲಾಖೆ ಕಾರ್ಯ ಪ್ರವೃತ್ತವಾಗಲು ಅನುವು ಮಾಡಿಕೊಟ್ಟಿತ್ತು.
ಚುನಾವಣೆಗೆ ಮುನ್ನ ಸದರಿ ಅವ್ಯವಹಾರ ವಿಚಾರವಾಗಿ ಏರು ದನಿಯಲ್ಲಿ ಮಾತನಾಡುತ್ತಿದ್ದ ಕಾಂಗ್ರೆಸಿಗರು ಇತ್ತಿಚೇಗೆ ಮೌನ ವಹಿಸಿದ್ದರು. ಶಾಸ್ತ್ರಕ್ಕೆಂಬಂತೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಹಗರಣವನ್ನು ಸಿಬಿಐಗೆ ವಹಿಸುವಂತೆ ಒತ್ತಾಯಿಸಿದ್ದರು.
ಪ್ರಸ್ತುತ ಅಧ್ಯಕ್ಷ ಚುನಾವಣೆ ನಡೆಯಲಿರುವ ಇಂದಿನ ದಿನ, ಜಿಲ್ಲೆ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್ ನೇತೃತ್ವದಲ್ಲಿ ಪೊಲೀಸ್ ವರಿಷ್ಟಾಧಿಕಾರಿಗಳನ್ನು ಭೇಟಿ ಮಾಡಿ, ಮನ್ ಮುಲ್ ನಲ್ಲಿ ಭ್ರಷ್ಟಾಚಾರ ನಡೆದಿರುವ ಹಿನ್ನೆಲೆಯಲ್ಲಿ ಅಧ್ಯಕ್ಷ ಚುನಾವಣೆ ನಡೆದರೆ ಆಶಾಂತಿ ಉಂಟಾಗುವ ಹಿನ್ನೆಲೆಯಲ್ಲಿ ಚುನಾವಣೆ ಮುಂದೂಡಬೇಕೆಂದು ಮನವಿ ಮಾಡಿರುವ ಹಿನ್ನೆಲೆಯಲ್ಲಿ ರಾಜಕೀಯ ಏರಿಳಿತದ ವಾಸನೆ ಕಂಡು ಬರುತ್ತಿದೆ.
ರಾಜಕೀಯ ವಲಯದ ಮಾಹಿತಿಯೊಂದರ ಪ್ರಕಾರ ಮನ್ ಮುಲ್ ನಲ್ಲಿ 7 ನಿರ್ದೇಶಕ ಸ್ಥಾನ ಹೊಂದಿರುವ ಜೆಡಿಎಸ್ 2 ಸದಸ್ಯ ಬಲ ಹೊಂದಿರುವ ಬಿಜೆಪಿ ಬೆಂಬಲದೊಂದಿಗೆ ಅಧಿಕಾರ ಹಿಡಿಯುವುದು ನಿಶ್ಚಿತವಾಗಿದ್ದು, ಸೋಲಿನ ಮುಖಭಂಗ ತಪ್ಪಿಸಿಕೊಳ್ಳಲು ಕಾಂಗ್ರೆಸ್ ಅಂತಿಮ ಹಂತದಲ್ಲಿ ಅಶಾಂತಿ ಹೆಸರಿನಲ್ಲಿ ಚುನಾವಣೆ ಮುಂದೂಡಲು ಸಂಚು ನಡೆಸುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸರ್ಕಾರ ನಿಚ್ಚಳ ಬಹುಮತದಿಂದ ಅಧಿಕಾರದಲ್ಲಿದ್ದು, ಜಿಲ್ಲೆಯನ್ನು ತಮ್ಮದೇ ಪಕ್ಷದ ಹವಾ ಇರುವ ಸಂದರ್ಭದಲ್ಲಿ ಸೋತು ಸುಣ್ಣವಾಗಿರುವ ಜೆಡಿಎಸ್ ಗೆ ಮನ್ ಮುಲ್ ಆಡಳಿತ ದೊರಕಿದರೆ ಮುಖಭಂಗ ಎದುರಿಸಬೇಕಾಗುತ್ತದೆ ಎಂಬುದನ್ನು ಅರಿತ ಕಾಂಗ್ರೆಸ್ಸಿಗರು ಚುನಾವಣೆ ಮುಂದೂಡಿಕೆ ಅಥವಾ ಸೂಪರ್ ಸೀಡ್ ತಂತ್ರಕ್ಕೆ ಮೊರೆ ಹೋಗುತ್ತಿದ್ದಾರೆ ಎಂಬ ರಾಜಕೀಯ ಚರ್ಚೆಗಳು ಜೋರಾಗಿವೆ.