ಮಂಡ್ಯ ತಾಲ್ಲೂಕಿನ ತುಂಬಕೆರೆ ಗ್ರಾಮದ ನಿರಾಶ್ರಿತರ ಕಾಲೋನಿಯಲ್ಲಿ ಮಾರ್ಗದರ್ಶಿ ಟ್ರಸ್ಟ್ ಆಶ್ರಯದಲ್ಲಿ ಶುಕ್ರವಾರ ಅಂತಾರಾಷ್ಟ್ರೀಯ ಮಹಿಳಾ ದಿನ ಆಚರಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಮಿಮ್ಸ್ ಗ್ರಂಥಪಾಲಕಿ ಪ್ರಮಿಳಾ ನರಸಿಂಹ ಮೂರ್ತಿ ಮಾತನಾಡಿ, ಮಹಿಳೆಯರು ಇಂದೇನಾದರೂ ವಿದ್ಯಾವಂತರಾಗಿ ಅವರಿಗೆ ದುಡಿಯುವ ಶಕ್ತಿ ಬಂದಿದ್ದರೆ ಅದಕ್ಕೆ ಅಂಬೇಡ್ಕರ್, ಸಾವಿತ್ರಿ ಬಾಯಿಫುಲೆ ಕಾರಣ, ಅವರು ಅಂದು ವಿದ್ಯೆ, ಮೀಸಲಾತಿ ನೀಡದಿದ್ದರೆ ನನ್ನಂತ ಮಹಿಳೆಯರು ನಾಲ್ಕು ಗೋಡೆ ಮಧ್ಯದಲ್ಲಿರಬೇಕಾಗುತ್ತಿತ್ತು ಎಂದರು.
ಪ್ರಜಾಸತ್ಯ ಪತ್ರಿಕೆ ಸಂಪಾದಕ ಚಂದ್ರಶೇಖರ ದ.ಕೋ.ಹಳ್ಳಿ ಆಶಯ ನುಡಿಗಳನ್ನಾಡಿ, ನಿರಾಶ್ರಿತರ ಕಾಲೋನಿಯಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನ ಆಚರಿಸುತ್ತಿರುವುದು ಅರ್ಥಪೂರ್ಣ. ನಿರಾಶ್ರಿತ ಮಕ್ಕಳಿಗೆ ಆತ್ಮಬಲ ತುಂಬುವ ಕಾರ್ಯಕ್ರಮ ಇದಾಗಿದ್ದು, ನಿರಾಶ್ರಿತರು ಎಲ್ಲರಂತೆ ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ ಸಮಾಜದ ಮುನ್ನೆಲೆಗೆ ತರಬೇಕೆಂದರು.
ಶಿಕ್ಷಣಕ್ಕೆ ದತ್ತು, ಧನ ಸಹಾಯ
ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿದ ಖ್ಯಾತ ಗಾಯಕಿ ಶ್ರೀಮತಿ ಮಂಜುಳ ಆಲದಹಳ್ಳಿ ಅವರು ನಿರಾಶ್ರಿತರ ಮಕ್ಕಳ ಕಲ್ಯಾಣಕ್ಕಾಗಿ 10,000 ರೂ. ದೇಣಿಗೆ ನೀಡುವುದಾಗಿ ಘೋಷಿಸಿದರೆ, ಮಿಮ್ಸ್ ಗ್ರಂಥಪಾಲಕಿ ಪ್ರಮಿಳಾ ನರಸಿಂಹ ಮೂರ್ತಿ ಅವರು ನಿರಾಶ್ರಿತರ ಮಕ್ಕಳಲ್ಲಿ ಒಬ್ಬರನ್ನು ದತ್ತು ಪಡೆದು ವಿದ್ಯಾಭ್ಯಾಸ ನೀಡುವುದಾಗಿ ಘೋಷಿಸಿದರು.
ಕುಟುಂಬದಲ್ಲಿ ಹಾಗೂ ಸಾಮಾಜಿಕವಾಗಿ ಮಹಿಳೆಗೆ ನ್ಯಾಯಸಮ್ಮತ ಹಾಗೂ ಘನತೆ ನೆಲೆಯಲ್ಲಿ ಸೂಕ್ತ ಸ್ಥಾನಮಾನ ಮತ್ತು ಗೌರವ ನೀಡುತ್ತಿದ್ದೇವೆಯೇ ಎಂಬುದು ಪ್ರಶ್ನೆಯಾಗಿದ್ದು, ಈ ನಿಟ್ಟಿನಲ್ಲಿ ಆತ್ಮಾವಲೋಕನ ಮಾಡಿಕೊಳ್ಳಬೇಕು. ಆಗ ಸಮಾಜ ಪರಿಪೂರ್ಣವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತ ಕಾರಸವಾಡಿ ಮಹದೇವು ಮಾತನಾಡಿ, ಇಲ್ಲಿನ ನಿರಾಶ್ರಿತರು ಮೂಲ ಸೌಕರ್ಯಗಳಿಲ್ಲದೇ ಬದುಕುತ್ತಿದ್ದಾರೆ. ಜಿಲ್ಲಾ ಆಡಳಿತ ಇತ್ತ ಗಮನಹರಿಸಿ ಇವರಿಗೆ ಎಲ್ಲಾ ಬಗೆಯ ಸವಲತ್ತು ದೊರಕಿಸಿಕೊಡುವ ಔದಾರ್ಯತೆ ತೋರಬೇಕೆಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪರಸ್ಪರ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಡಿ.ದೇವರಾಜ್ ಕೊಪ್ಪ ಮಾತನಾಡಿ ಭೂಮಿ ಮತ್ತು ಹೆಣ್ಣಿಗೆ ಸೃಷ್ಟಿಸುವ ಶಕ್ತಿಯಿದೆ. ಜಗತ್ತಿನ ಯಾವುದೇ ವಸ್ತು ಭೂಮಿಯ ಸೃಷ್ಟಿಯ ಹೊರತಾಗಿಲ್ಲ. ಆದ್ದರಿಂದಲೇ ಭೂಮಿ ಮತ್ತು ಹೆಣ್ಣನ್ನು ತಾಯಿಗೆ ಹೋಲಿಕೆ ಮಾಡುತ್ತಾರೆ ಎಂದರು.
ಸಾಧಕರಿಗೆ ಸನ್ಮಾನ
ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದೆ ಆಲದಹಳ್ಳಿ ಮಂಜುಳ, ಕಿರಿಯ ಕ್ರೀಡಾ ಸಾಧಕಿ ಕು|| ಮಾನ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಹುರುಗಲವಾಡಿ ರಾಮಯ್ಯ, ಹನಿಯಂಬಾಡಿ ಶೇಖರ್, ವೈರಮುಡಿ ಇತರರು ಪರಿವರ್ತನಾ ಗೀತೆಗಳನ್ನು ಹಾಡಿದರು.
ಕಾರ್ಯಕ್ರಮದಲ್ಲಿ ಬೆಂಗಳೂರು ವಿವಿ ಅಧ್ಯಾಪಕ ಡಾ.ಕುಮಾರಸ್ವಾಮಿ ಸಾಕ್ಯ, ಕರ್ನಾಟಕ ಸಮ ಸಮಾಜ ರಾಜ್ಯಾಧ್ಯಕ್ಷ ಎಚ್.ಎನ್ ನರಸಿಂಹ ಮೂರ್ತಿ, ಮಂಡ್ಯ ವಿವಿ ಅಧ್ಯಾಪಕ ಡಾ.ಗಣೇಶ್, ಮಾರ್ಗದರ್ಶಿ ಟ್ರಸ್ಟ್ ಅಧ್ಯಕ್ಷ ಕೆ.ಸಿ ಲೋಕೇಶ್, ವಿಕಾಸ ಟ್ರಸ್ಟ್ ನಿರ್ದೇಶಕ ನಾ. ಲೋಕೇಶ ಸ್ಥಪತಿ, ಅರುವಿ ಟ್ರಸ್ಟ್ ಅಧ್ಯಕ್ಷೆ ಅರುಣಾ ಈಶ್ವರ್, ಸರಸ್ವತಿ ಲೋಕೇಶ್, ಸಿ.ಶಶಿಕಲಾ, ಎನ್.ಕೆ ಸೌಮ್ಯ, ಕಾಳಪ್ಪ ಇತರರು ಇದ್ದರು.




