Tuesday, October 22, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಸಾಹಿತ್ಯೇತರರಿಗೆ ಮಣೆ ಹಾಕುವ ಹುನ್ನಾರ ; ಮಹೇಶ್ ಜೋಶಿ ನಡೆಗೆ ಸಾಮೂಹಿಕ ಪ್ರತಿರೋಧ

ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಾಹಿತ್ಯೇತರರನ್ನು ಅಧ್ಯಕ್ಷರನ್ನಾಗಿಸುವ ಹುನ್ನಾರದ ವಿರುದ್ಧ ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಎದುರು ಸಾರ್ವಜನಿಕರು ಮತ್ತು ಸಾಹಿತ್ಯ ವಲಯದ ಹಲವು ಮುಖಂಡರು ಮಂಗಳವಾರ ಸಾಮೂಹಿಕ ಪ್ರತಿರೋಧ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸಾಹಿತಿ ಜಗದೀಶ್ ಕೊಪ್ಪ, ಪ್ರೊ. ಜಿ.ಟಿ.ವೀರಪ್ಪ, ಗುರುಪ್ರಸಾದ್ ಕೆರಗೋಡು,  ಹರವು ದೇವೇಗೌಡ, ಪ್ರೊ.ಹುಲ್ಕೆರೆ ಮಹದೇವು, ಡಾ.ಬೋರೇಗೌಡ ಚಿಕ್ಕಮರಳಿ, ನಾಗಣ್ಣಗೌಡ, ಸಿ.ಕುಮಾರಿ, ಪೂರ್ಣಿಮ, ದೇವರಾಜ್ ಕೊಪ್ಪ, ಸತೀಶ್ ಜವರೇಗೌಡ, ಎಲ್.ಸಂದೇಶ್ ಸೇರಿದಂತೆ ನೂರಾರು ಸಾಹಿತ್ಯಾಸಕ್ತರು ಭಾಗವಹಿಸಿ ಮಹೇಶ್ ಜೋಶಿ ನಡೆಯನ್ನು ಖಂಡಿಸಿದರು.

ಸಾಹಿತ್ಯದ ಪರಿಚಾರಿಕೆಗೆ ಜನ್ಮತಾಳಿದ ಕನ್ನಡ ಸಾಹಿತ್ಯ ಪರಿಷತ್ತನ್ನು ಮುನ್ನಡೆಸಬೇಕಾದವರು ಸಾಹಿತಿಗಳೇ ಹೊರತು ರಾಜಕಾರಣಿಗಳೋ, ಮಠಾಧೀಶರೋ, ಇತರ ಕ್ಷೇತ್ರದ ಸಾಧಕರೋ ಅಲ್ಲ. ಅವರಿಗೆ ಮೀಸಲಾದ ಬೇರೆ ವೇದಿಕೆಗಳಿವೆ. ಇದುವರೆಗೂ ನಡೆದುಕೊಂಡು ಬಂದ ಪರಂಪರೆಗೆ ಬೆನ್ನು ತಿರುಗಿಸಿ ಸಾಹಿತಿಗಳನ್ನೇ ಹೊರಗಿಟ್ಟು ಸಮ್ಮೇಳನ ನಡೆಸುವ ಕೆಟ್ಟ ಸಂಪ್ರದಾಯಕ್ಕೆ ಮುನ್ನುಡಿ ಬರೆಯಲು ನಾವು ಬಿಡುವುದಿಲ್ಲ. ಸಾಹಿತ್ಯಾಸಕ್ತಿಗಳ ಮೇಲೆ ನಡೆಯುತ್ತಿರುವ ಈ ದಬ್ಬಾಳಿಕೆಯ ವಿರುದ್ದ ನಾವೆಲ್ಲರೂ ಒಟ್ಟಾಗಿ‌ ನಿಲ್ಲುತ್ತಿದ್ದೇವೆ ಎಂದು ಸಂದೇಶ ನೀಡಿದರು.

ಸಾಹಿತ್ಯ ವಲಯದ  ಕುವೆಂಪು ಮೆಚ್ಚಿದ, ನಾಲ್ವಡಿ ಹರಸಿದ, ಕೆವಿ ಶಂಕರಗೌಡರು ಕಟ್ಟಿದ ಮಂಡ್ಯದ ನೆಲದಲ್ಲಿ ಈಗಾಗಲೇ ಎರಡು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಘನತೆಯಿಂದ ಜರುಗಿವೆ. 1964ರಲ್ಲಿ ಜಯದೇವಿತಾಯಿ ಲಿಗಾಡೆ, 1994ರಲ್ಲಿ ಚದುರಂಗರ ಅಧ್ಯಕ್ಷತೆಯಲ್ಲಿ ಇಡೀ ನಾಡು ಕೊಂಡಾಡುವಂತೆ ನಮ್ಮ ಮಂಡ್ಯ ಜಿಲ್ಲೆ ಆತಿಥ್ಯ ವಹಿಸಿ, ಸಮ್ಮೇಳನವನ್ನು ಅರ್ಥಪೂರ್ಣವಾಗಿ ನಡೆಸಿಕೊಟ್ಟಿದೆ. ಈಗ ಒಂದೆಡೆ ಸಮ್ಮೇಳನಾಧ್ಯಕ್ಷತೆಗೆ ಸಾಹಿತ್ಯೇತರರನ್ನು ಮುನ್ನೆಲೆಗೆ ತಂದು, ಇನ್ನೊಂದೆಡೆ ನಾಡಿನ ವಿದ್ವಾಂಸರ ಮಾತಿಗೆ ಗೌರವ ಕೊಡದೆ ಅವಮಾನಿಸಲಾಗುತ್ತಿದೆ. ಏಳು ಕೋಟಿ ಕನ್ನಡಿಗರ ಸಾಹಿತ್ಯ ಸಮ್ಮೇಳನವನ್ನು ಏಕಮುಖವಾಗಿ ಕೊಂಡೊಯ್ಯಲಾಗುತ್ತಿದೆ ಎಂದು ಆಕ್ರೋಶ ಹೊರ ಹಾಕಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!