ಕರ್ನಾಟಕ ಸಂಘ ನೀಡುವ ಶ್ರೀಮತಿ ಕವಿತಾ ಸ್ಮಾರಕ ಪ್ರಶಸ್ತಿಗೆ ಸಮರ್ಥನ ಮಹಿಳಾ ವೇದಿಕೆ ಅಧ್ಯಕ್ಷೆ ನಾಗರೇವಕ್ಕ ಆಯ್ಕೆಯಾಗಿದ್ದು, ಮೇ.16ರಂದು ಸಂಜೆ 4 ಗಂಟೆಗೆ ನಡೆಯುವ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು ಎಂದು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ .ಬಿ. ಜಯಪ್ರಕಾಶಗೌಡ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು,ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದ ಸಭಾಂಗಣದಲ್ಲಿ ಮೇ.16ರ ಸಂಜೆ 4 ಗಂಟೆಗೆ ನಡೆಯುವ ಶ್ರೀಮತಿ ಕವಿತಾ ಸ್ಮಾರಕ ಉಪನ್ಯಾಸ-೧೩ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೈತನಾಯಕಿ ನಂದಿನಿ ಜಯರಾಮ್ ವಹಿಸಲಿದ್ದಾರೆ.
ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ ಮಾನಸ ರಚಿಸಿರುವ `ಮಹಿಳೆ ಮತ್ತು ಕಾನೂನು’ ಪುಸ್ತಕವನ್ನು ಚಾಮರಾಜನಗರದ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯತ್ರಿ ಬಿಡುಗಡೆ ಮಾಡಿ ಪ್ರಶಸ್ತಿ ಪ್ರದಾನ ಮಾಡುವರು ಎಂದರು.
ಮಂಜುಳಾ ಮಾನಸ ಅವರು ಮಹಿಳೆ ಮತ್ತು ಕಾನೂನು ಕುರಿತಂತೆ ಕವಿತಾ ಸ್ಮಾರಕ ದತ್ತಿ ಉಪನ್ಯಾಸ ನೀಡುವರು. ಮಹಿಳಾ ಸರ್ಕಾರಿ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ.ಕೆಂಪಮ್ಮ ಕಾರ್ಕಹಳ್ಳಿ ಅಭಿನಂದನಾ ಭಾಷಣ ಮಾಡುವರು. ದತ್ತಿ ಪ್ರಶಸ್ತಿ ಸ್ಥಾಪಕರಾದ ಸಾಹಿತಿ ಮೈಸೂರಿನ ಡಾ.ರಾಗೌ ದಂಪತಿ ಭಾಗವಹಿಸುವರು ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಕರ್ನಾಟಕ ಸಂಘದ ಉಪಾಧ್ಯಕ್ಷ ಡಾ. ಎಚ್.ಎಸ್.ಮುದ್ದೇಗೌಡ ಹಾಜರಿದ್ದರು.