ಮಾಹಿತಿ ತಂತ್ರಜ್ಞಾನ ನಿಯಮಾವಳಿಗಳಲ್ಲಿ ಕೇಂದ್ರ ಸರ್ಕಾರ ತಿದ್ದುಪಡಿ ತರಲು ಮುಂದಾಗಿರುವ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಭಾರತೀಯ ಸಂಪಾದಕರ ಒಕ್ಕೂಟ, “ಮಾಧ್ಯಮ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ ಎಂದು ಅಭಿಪ್ರಾಯ ಪಟ್ಟಿದೆ. ಕೇಂದ್ರ ಸರ್ಕಾರ ತಂತ್ರಜ್ಞಾನ ನಿಯಮಗಳಿಗೆ ಕರಡು ತಿದ್ದುಪಡಿ ತರಲು ಹೊರಟಿದೆ. ಸರ್ಕಾರದ ಈ ನಿರ್ಧಾರಕ್ಕೆ ʼಇಜಿಐʼ (ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ) ಕಳವಳ ವ್ಯಕ್ತಪಡಿಸಿದೆ.
ಮಾಹಿತಿ ತಂತ್ರಜ್ಞಾನದ ಹೊಸ ನಿಯಮಗಳು ಮಾಧ್ಯಮ ಸ್ವಾತಂತ್ರ್ಯವನ್ನು ದುರ್ಬಲಗೊಳಿಸದಂತೆ ಮುನ್ನೆಚ್ಚರಿಕೆ ವಹಿಸಲು ಮಾಧ್ಯಮ ಸಂಸ್ಥೆಗಳ ಜೊತೆಗೆ ಸಚಿವಾಲಯವು ಸಮಾಲೋಚನೆ ನಡೆಸಬೇಕು ಎಂದು ಸಂಪಾದಕರ ಒಕ್ಕೂಟ ಒತ್ತಾಯಿಸಿದೆ.
“ಸಚಿವಾಲಯದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿರುವ ಕರಡು ನಿಯಮದ ಪ್ರಕಾರ, ಸುದ್ದಿ ವರದಿಗಳ ಸತ್ಯಾಸತ್ಯತೆ ನಿರ್ಧರಿಸುವ ಅಧಿಕಾರವನ್ನು ಪತ್ರಿಕಾ ಮಾಹಿತಿ ಬ್ಯೂರೋ (ಪಿಐಬಿ) ಮತ್ತು ಕೇಂದ್ರ ಸರ್ಕಾರ ನಿಯೋಜಿಸಿದ ಸಂಸ್ಥೆಗಳಿಗೆ ನೀಡಲಾಗುತ್ತದೆ. ಕೇಂದ್ರ ಸೂಚಿಸಿದ ಅಧೀನ ಸಂಸ್ಥೆಗಳು ಯಾವುದೇ ಸುದ್ದಿಯನ್ನಾದರೂ ಅಂತರ್ಜಾಲ ತಾಣಗಳಿಂದ ತೆಗೆದು ಹಾಕುವ ಅಧಿಕಾರ ಹೊಂದಿರುತ್ತವೆ. ಯಾವುದಾದರೂ ಅಂತರ್ಜಾಲ ಮಾಧ್ಯಮದ ವರದಿಯಿಂದ ತನಗೆ ತೊಂದರೆಯಾಗುತ್ತಿದೆ ಎಂದು ಸರ್ಕಾರ ಭಾವಿಸುವ ಸುದ್ದಿಗಳನ್ನು ಯಾವುದೇ ಅಡೆ ತಡೆಗಳಿಲ್ಲದೆ ಅಂತರ್ಜಾಲದಿಂದ ತೆಗೆದು ಹಾಕುವ ಅಧಿಕಾರ ಈ ಸಂಸ್ಥೆಗಳಿಗೆ ದೊರೆಯುತ್ತದೆ” ಎಂದು ಸಂಪಾಕರ ಒಕ್ಕೂಟ ಕಳವಳ ವ್ಯಕ್ತಪಡಿಸಿದೆ.
“ಸುಳ್ಳು ಸುದ್ದಿಗಳನ್ನು ನಿಯಂತ್ರಿಸುವ ಅಧಿಕಾರ ಕೇವಲ ಕೇಂದ್ರ ಸರ್ಕಾರದ ಕೈಯಲ್ಲಿ ಇರಬಾರದು. ಆದರೆ, ಸಚಿವಾಲಯದ ತಿದ್ದುಪಡಿ ನಿಯಮಗಳು ಮಾಧ್ಯಮಗಳ ಸೆನ್ಸಾರ್‌ಶಿಪ್‌ಗೆ ಕಾರಣವಾಗುತ್ತವೆ ಮತ್ತು ಮಾಧ್ಯಮಗಳನ್ನು ಹತ್ತಿಕ್ಕಲು ಸರ್ಕಾರಕ್ಕೆ ನೆರವಾಗುತ್ತವೆ” ಎಂದು ಒಕ್ಕೂಟ ಅಸಮಾಧಾನ ಹೊರಹಾಕಿದೆ.
“ಸುಳ್ಳು ಸುದ್ದಿಗಳಿಗೆ ಸಂಬಂಧಿಸಿದಂತೆ ಈಗಾಗಲೇ ಅನೇಕ ಕಾನೂನುಗಳು ಜಾರಿಯಲ್ಲಿವೆ. ಆದರೂ ಸರ್ಕಾರದ ಹೊಸ ತಿದ್ದುಪಡಿ ಮಾಧ್ಯಮ ಸ್ವಾತಂತ್ರ್ಯಕ್ಕೆ ಧಕ್ಕೆ ತರಲಿದೆ” ಎಂದು ಹೇಳಿದೆ. “ಕರಡು ತಿದ್ದುಪಡಿ ನಿಯಮಗಳಲ್ಲಿ ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದ ಎಲ್ಲ ವ್ಯವಹಾರಗಳೆಂದು ಉಲ್ಲೇಖಿಸಲಾಗಿದೆ. ಕೇಂದ್ರ ತನ್ನ ವ್ಯವಹಾರಗಳಿಗೆ ಸಂಬಂಧಿಸಿದ ಸುದ್ದಿಗಳಲ್ಲಿ ಸತ್ಯ ಅಥವಾ ಸುಳ್ಳು ವರದಿ ಯಾವುದು ಎಂಬುವುದನ್ನು ನಿರ್ಧರಿಸುವ ಪೂರ್ಣ ಹಕ್ಕು ತನ್ನಲ್ಲಿಯೇ ಇರಿಸಿಕೊಳ್ಳಲು ಈ ಅಂಶವನ್ನು ಸೇರಿಸಿಲಾಗಿದೆ ಎಂಬುದು ಮೇಲ್ನೋಟಕ್ಕೆ ಕಾಣುತ್ತಿದೆ. ಸರ್ಕಾರದ ವಿರುದ್ಧ ಮಾಧ್ಯಮಗಳ ಕಾನೂನುಬದ್ಧ ಟೀಕೆಗೆ ಈ ತಿದ್ದುಪಡಿ ಅಡ್ಡಿಯಾಗಲಿದೆ” ಎಂದು ಹೇಳಿದೆ.
ಸಚಿವಾಲಯದ ಕರಡು ತಿದ್ದುಪಡಿಯನ್ನು ಮೊದಲ ಬಾರಿಗೆ 2021ರ ಮಾರ್ಚ್ ತಿಂಗಳಲ್ಲಿ ಪ್ರಕಟಿಸಲಾಗಿತ್ತು. ದೇಶದ ಯಾವುದೇ ಭಾಗದಲ್ಲಿ ಪ್ರಕಟವಾಗುವ ಸುದ್ದಿಗಳನ್ನು ಪರಿಶೀಲನೆಗೆ ಒಳಪಡಿಸದೆಯೇ ಅಂತರ್ಜಾಲದಿಂದ ತೆಗೆದುಹಾಕುವ, ಸುದ್ದಿ ಪ್ರಸಾರ ತಡೆಯುವ ಹಾಗೂ ಮಾರ್ಪಡಿಸುವ ಅಧಿಕಾರವನ್ನು ತನ್ನಲ್ಲಿಯೇ ಉಳಿಸಿಕೊಳ್ಳುವ ರೀತಿಯಲ್ಲಿ ಈ ಕರಡು ತಿದ್ದುಪಡಿಯನ್ನು ಸಿದ್ಧಪಡಿಸಲಾಗಿತ್ತು. ಆಗಲೂ ಸರ್ಕಾರದ ನಡೆಗೆ ಆಕ್ಷೇಪ ವ್ಯಕ್ತ ಪಡಿಸಿದ್ದ ಸಂಪಾದಕರ ಒಕ್ಕೂಟ “ಮಾಧ್ಯಮಗಳ ಮೇಲೆ ವಿನಾ ಕಾರಣ ನಿರ್ಬಂಧ ಹೇರುವ ಪ್ರಯತ್ನ ನಡೆಯುತ್ತಿದೆ” ಎಂದಿತ್ತು.




